ಬಂಟ್ವಾಳ ತಾಲೂಕಿನ ಕುದ್ದುಪದವು ಸನಿಹದ ಮುಳಿಯ ಶಾಲೆಯಲ್ಲಿ ಮೇ 21 ರಂದು ರಾಧಾ ಮುಳಿಯ-ವರಲಕ್ಷ್ಮೀ ಇವರು ಹಸೆಮಣೆ ಏರಿದ ಖುಷಿಗಾಗಿ ‘ಆಪ್ತ ಭೋಜನ’. ಸಾವಿರಕ್ಕೂ ಮಿಕ್ಕಿ ಆಪ್ತೇಷ್ಟರು ಭಾಗಿ. ಬೆಳಗ್ಗಿನ ಉಪಾಹಾರದಿಂದ ಮಧ್ಯಾಹ್ನದ ಭೋಜನ ತನಕ ಖಾದ್ಯಗಳ ರಿಂಗಣ. ‘ಸರಳ ಉಡುಗೆ’ಯ ಮದುಮಕ್ಕಳಿಂದ ಸ್ವಾಗತ. ಬಂಧುಗಳು ಉಂಡು ತೇಗಿದರೆ ಅದುವೇ ಆಶೀರ್ವಾದ!
ಮೇ 19, 20ರಂದು ವಿವಾಹದ ಧಾರ್ಮಿಕ ವಿಧಿವಿಧಾನಗಳು. ಪಾರಂಪರಿಕ ಆಚರಣೆಯ ವಿವಾಹ ಮಹೋತ್ಸವ. ಮುಳಿಯ ಶಾಲೆಯ ಭೋಜನ ಕೂಟದಲ್ಲಿ ಯಾವುದೇ ಕಾರ್ಯಕ್ರಮವಿದ್ದಿರಲಿಲ್ಲ. ಮದುಮಕ್ಕಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ವೇದಿಕೆಯಿದ್ದಿರಲಿಲ್ಲ. ಮೈಕಾಸುರ ಇದ್ದಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮವಿದ್ದಿರಲಿಲ್ಲ. ಹೊಟ್ಟೆ ತಂಪು ಮಾಡುವಲ್ಲಿ ಎಲ್ಲರ ಲಕ್ಷ್ಯ.
ಸಾಂಸ್ಕೃತಿಕ ಕಾರ್ಯಕ್ರಮ ಅಂದಾಗ ನೆನಪಾಗುತ್ತದೆ. ಮದುವೆ, ಉಪನಯನ, ಗೃಹಪ್ರವೇಶಗಳಂದು ತಾಳಮದ್ದಳೆ, ಸಂಗೀತ, ಆರ್ಕೆಸ್ಟ್ರಾ, ನೃತ್ಯ.. ಏರ್ಪಡಿಸುತ್ತಾರೆ. ಜನರ ಗೌಜಿ, ಗದ್ದಲಗಳ ಮಧ್ಯೆ ಈ ಕಾರ್ಯಕ್ರಮಗಳು ನರಳುತ್ತಾ ಇರುತ್ತವೆ. ಪ್ರೇಕ್ಷಕರಾಗಿ ಶ್ರದ್ಧೆಯಿಂದ ಕೇಳುವವರು ಸಂಖ್ಯೆ ತೀರಾ ತೀರಾ ವಿರಳ. ಯಾರಿಗೂ ಬೇಡದ, ನೋಡದ, ಮನನಿಸದ ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯರ್ಥ. ಬರಿಗುಲ್ಲು-ನಿದ್ದೆಗೇಡು. ಕಲಾವಿದರಿಗೆ ಮಾಡುವ ಅವಮಾನ.
ವಿವಾಹ ಸಮಾರಂಭದ ಭೋಜನ ಅಂದರೆ ಸಾಮಾನ್ಯವಾಗಿ ‘ಮೆನು’ ಮೊದಲೇ ಊಹಿಸಬಹುದಾಗುತ್ತದೆ. ‘ಕ್ಯಾಬೇಜ್ ಪಲ್ಯ, ಟೊಮೆಟೋ ಸಾರು, ಕ್ಯಾಪ್ಸಿಕಮ್ ಹುಳಿ, ಸಾಂಬಾರು, ಮೆಣಸ್ಕಾಯಿ, ಬೋಳು ಹುಳಿ, ಎರಡೋ ಮೂರೋ ಬಗೆ ಪಾಯಸ, ಹೋಳಿಗೆ…” ಇತ್ಯಾದಿ. ಉಣ್ಣುವಾಗ ಅನೇಕ ಮಂದಿ ಗೊಣಗಾಡುವುದನ್ನೂ ನೋಡಿದ್ದೇನೆ. ಈ ಮೆನುವಿಗಿಂತ ಭಿನ್ನವಾಗಿ ಅತಿಥಿಗಳಿಗೆ ಹೇಗೆ ಬಡಿಸಬೇಕೆನ್ನುವುದನ್ನು ಮದುಮಗನ ತಂದೆ ವೆಂಕಟಕೃಷ್ಣ ಶರ್ಮ ಮುಳಿಯ ಯೋಚಿಸಿದ್ದರು. ಯೋಚನೆಯನ್ನು ಅನುಷ್ಠಾನ ಮಾಡಿದ್ದರು ಕೂಡಾ.
“ಅಕ್ಕಿ ರೊಟ್ಟಿ, ಹಲಸಿನ ಹಪ್ಪಳ, ಹಲಸಿನ ಪಲ್ಯ, ಕಾಡು ಮಾವಿನ ಗೊಜ್ಜು, ಉಪ್ಪಿನಕಾಯಿ, ಕುಚ್ಚಲು ಮತ್ತು ಬೆಳ್ತಿಗೆ ಅನ್ನ, ಹಲಸಿನ ಬೇಳೆ ಸಾರು, ಮಿಕ್ಸ್ ಸಾಂಬಾರು, ಸೌತೆ-ಕಾನಕಲ್ಲಟೆ ಮೇಲಾರ, ಬಾಳೆಹಣ್ಣು ಪಾಯಸ, ಕೇಸರಿಬಾತ್, ಡ್ರೈ ಜಾಮೂನು, ಪಕೋಡ, ಗಂಜಿ, ಕುಂಡಿಗೆ ಚಟ್ನಿ, ಮಜ್ಜಿಗೆ ಮೆಣಸು ಮತ್ತು ಕಾಡುಮಾವಿನ ಐಸ್‍ಕ್ಯಾಂಡಿ..” ಅಂದಿನ ಮುಖ್ಯ ಮೆನು. ಬಹುತೇಕ ಖಾದ್ಯಗಳ ಒಳಸುರಿಗಳನ್ನು ಅಂಗಡಿಯಿಂದ ತಂದಿಲ್ಲ!
ವಿವಾಹ ಸಮಾರಂಭಕ್ಕೆ ಸಾವಿರಾರು ಮಂದಿಯನ್ನು ಆಹ್ವಾನಿಸುತ್ತೇವೆ. ಮದುಮಕ್ಕಳು, ಮನೆಯ ಯಜಮಾನ, ಸಂಬಂಧಿಕರು ಎಲ್ಲರೂ ವೇದಿಕೆಯಲ್ಲಿ ನಡೆಯುವ ವಿವಾಹ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಪ್ರವೇಶ ದ್ವಾರದಲ್ಲಿ ಸ್ವಾಗತಕ್ಕೆ ಯಾರೂ ಇರುವುದಿಲ್ಲ! ನಮ್ಮಷ್ಟಕ್ಕೆ ‘ಶರ್ಬತ್’ ಕುಡಿದು, ಊಟ ಮಾಡಿ ‘ಹಾಯ್’ ಎನ್ನುತ್ತಾ ಮರಳುತ್ತೇವೆ. ಯಾವುದೇ ಭಾವ ಸಂಬಂಧವಾದ ಮಾತುಕತೆಗಳಿರುವುದಿಲ್ಲ. ವೀಡಿಯೋ ಇದ್ದರೆ ಮುಖ ತೋರಿಸುವ ಅನಿವಾರ್ಯ. ಮತ್ತಾದರೂ ಅವರು ನೋಡಿಯಾರೆನ್ನುವ ನಂಬುಗೆ! ಅವಕಾಶ ಸಿಕ್ಕರೆ ಯಜಮಾನರನ್ನು ಕಂಡು ಮಾತನಾಡಿದರೆ ಪುಣ್ಯ! ಎಷ್ಟೋ ಸಮಾರಂಭಗಳಲ್ಲಿ ಇಂತಹ ಒದ್ದಾಟದ ಅನುಭವಗಳು ಸರ್ವತ್ರ.
ಸರಿ, ಮುಹೂರ್ತ ತಡ ಆದಾಗ ಸಹಜವಾಗಿ ಭೋಜನದ ಸಮಯವೂ ಮೀರುತ್ತದೆ. ಆಗ ಪುರೋಹಿತರ ಕುರಿತು, ಯಜಮಾನನ ಕುರಿತು ಗೊಣಗಾಟಗಳ ಮಾಲೆ! ಹಗುರವಾಗಿ ಮಾತನಾಡುವ ಚಾಳಿ. ‘ಬಫೆ’ ವ್ಯವಸ್ಥೆ ಇಲ್ಲದ್ದರಂತೂ ಗೊಣಗಾಟವು ಮುಖದಲ್ಲಿ ನೆರಿಗೆಗಳನ್ನು ಸೃಷ್ಟಿಸುತ್ತವೆ. ‘ಇಷ್ಟು ಒತ್ತಡದಲ್ಲಿ ಮದುವೆಗೆ ಯಾಕಾಗಿ ಬರಬೇಕು? ಇನ್ನೊಂದಿನ ಅವರ ಮನೆಗೆ ಹೋದರಾಯಿತು’ ಎಂದು ಆಪ್ತರೊಬ್ಬರಲ್ಲಿ ಆಪ್ತತೆಯಿಂದ ಹೇಳಿದಾಗ ನಂತರ ಅವರು ಮಾತನ್ನೇ ಬಿಟ್ಟುಬಿಟ್ಟರು!
ಮುಳಿಯದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈ ಅನುಭವಗಳೆಲ್ಲಾ ನೆನಪಿನಲ್ಲಿ ಹಾದು ಹೋದುವು. ವಿದ್ಯುಕ್ತವಾಗಿ ಧಾರ್ಮಿಕ ಪ್ರಕ್ರಿಯೆಯಲ್ಲಿ ಹಿಂದಿನ ದಿವಸಗಳಲ್ಲಿ ಮುಗಿಸಿ, ಅಂದು ‘ಗೃಹಪ್ರವೇಶ’ವನ್ನು ಭೋಜನಕ್ಕೆ ಸೀಮಿತಗೊಳಿಸಿದ ಶರ್ಮರ ಯೋಚನೆಯ ದಿಕ್ಕು ನಿಜಕ್ಕೂ ಒಂದು ಮಾದರಿ.
‘ಸಮಾರಂಭಗಳ ಊಟದ ಮೆನುವನ್ನು ಬದಲಿಸಲಾಗದು’ – ಎನ್ನುವ ಮೈಂಡ್‍ಸೆಟ್ ನಮ್ಮಲ್ಲಿದೆ. ‘ಅದು ಸಾಧ್ಯ’ ಎನ್ನುವುದನ್ನು ಶರ್ಮರು ಮಾಡಿ ತೋರಿಸಿದ್ದಾರೆ. “ಈ ಎಲ್ಲಾ ಮೆನುವನ್ನು ಸಿದ್ಧಪಡಿಸಲು ತುಂಬಾ ಸಾಹಸ ಪಡಬೇಕು. ಒಳ್ಳೆಯ ಭೋಜನ ನೀಡಿದ್ದಾರೆ. ಭಿನ್ನವಾಗಿ ಯೋಚಿಸಿದ್ದಾರೆ.” ಎಂದು ಕೋಂಗೋಟ್ ರಾಧಾಕೃಷ್ಣರು ಖುಷಿ ಹಂಚಿಕೊಂಡರು.
ಶರ್ಮರ ಈ ‘ಮನೆ ಭೋಜನ’ದ ಹಿಂದಿನ ಮನಸ್ಥಿತಿಗಳಿಗೆ ದಶಕ ಮೀರಿತು. ‘ಹಲಸು ಸ್ನೇಹಿ ಕೂಟ’ದ ಮೂಲಕ ಅನ್ಯಾನ್ಯ ಕಾರ್ಯಕ್ರಮಗಳನ್ನು ಸುಮನಸಿಗರೊಂದಿಗೆ ಮಾಡಿದ್ದರ ಫಲಶ್ರುತಿ. ಕೂಟದ ವ್ಯಾಪ್ತಿಗೆ ಬಂದ ಎಲ್ಲಾ ಸದಸ್ಯರ ಯೋಚನೆ, ಯೋಜನೆಗಳು ಇದೇ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದು ಗಮನಾರ್ಹ.
ಶರ್ಮರು ತನ್ನ ಹಿರಿಯ ಪುತ್ರ ರವಿಶಂಕರ್ ಅವರ ಆಮಂತ್ರಣ ಪತ್ರವನ್ನು ಹಲಸಿನ ವಿನ್ಯಾಸದಲ್ಲಿ ಮಾಡಿದ್ದರು. ಈಗ ರಾಧಾಕೃಷ್ಣರ ವಿವಾಹದ ಆಮಂತ್ರಣವನ್ನು ‘ಕುಂಡಿಗೆ’ಯಾಕಾರದಲ್ಲಿ ವಿನ್ಯಾಸಿಸಿದ್ದಾರೆ. ಹೀಗೆ ಊಟದಲ್ಲಿ, ಆಮಂತ್ರಣ ಪತ್ರಿಕೆಯಲ್ಲಿ, ಮಾತುಕತೆಗಳಲ್ಲಿ ಸರಳತೆಯನ್ನು ಮತ್ತು ಬದ್ಧತೆಯನ್ನು ಮೆರೆದ ಶರ್ಮರಿಗೆ ಆಭಿನಂದನೆ. ನೂತನ ವಧೂವರರಾದ ರಾಧಾಕೃಷ್ಣ – ವರಲಕ್ಷ್ಮೀ ಇವರಿಗೆ ಶುಭಾಶಯಗಳು.
ಒಂದು ಆಂದೋಳನವು ಬದುಕಿನಲ್ಲಿ ಮಿಳಿತವಾದಾಗ ಅದು ಕಟ್ಟಿಕೊಡುವ ಸಂಪನ್ನತೆ ಹೇಗಿರುತ್ತದೆ ಎನ್ನುವುದಕ್ಕೆ ಈ ಸಮಾರಂಭ ಸಾಕ್ಷಿ.
( ಫೋಟೊ : ಚೇತನ್ ಬಲ್ನಾಡು )
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…
ಪಂಚಾಯತು ವಿಧಿಸುವ ವಿವಿಧ ಕರಗಳ ಬಗ್ಗೆ ನಿಮಗೆ ಅರಿವಿದೆಯೆ? ನಿಮ್ಮ ಪಂಚಾಯತುಗಳಿಗೆ ಸರಕಾರದಿಂದ…