ಬಳ್ಪ: ಕಳೆದ 5 ವರ್ಷಗಳಿಂದ ಆದರ್ಶ ಗ್ರಾಮದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಬಳ್ಪ ಗ್ರಾಮದಲ್ಲಿ ಇದೀಗ ನಿಜವಾದ ಆದರ್ಶ ವ್ಯಕ್ತಿ ಕಂಡುಬಂದಿದ್ದಾರೆ. ಅವರು ಬೀದಿಗುಡ್ಡೆ ಕಾಂಜಿ ಪ್ರದೇಶದ ಕಿಟ್ಟಣ್ಣ ಪೂಜಾರಿ.
ಬಳ್ಪ ಆದರ್ಶ ಗ್ರಾಮದಲ್ಲಿ ರಸ್ತೆಯ ಸಮಸ್ಯೆಯಿಂದ ರೋಗಿಯೊಬ್ಬರನ್ನು ಹೊತ್ತೊಯ್ದು ದು:ಖದ ಸಂಗತಿ ನಡೆದಿತ್ತು. ಜಿಲ್ಲೆಯಲ್ಲೂ ಇಂತಹ ಸ್ಥಿತಿ ಇದೆಯೇ ಎಂಬ ಪ್ರಶ್ನೆ ಮೂಡಿತ್ತು. ಅದರಲ್ಲೂ ಆದರ್ಶ ಗ್ರಾಮದಲ್ಲಿ ರಸ್ತೆ ಸರಿ ಇಲ್ಲ ಎನ್ನುವ ಸುದ್ದಿ ಸದಾ ಹರಿದಾಡುತ್ತಿತ್ತು. ಆದರೆ ಆರಂಭದಲ್ಲಿ ಆದರ್ಶ ಗ್ರಾಮದ ಪರಿಕಲ್ಪನೆ ರಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆ ಅಲ್ಲ, ಜನರ ಜೀವನಮಟ್ಟ ಸುಧಾರಣೆ ಎಂಬ ಸಂಗತಿ ಹೇಳಿರಲಿಲ್ಲ. ಹೀಗಾಗಿ ಜನರೆಲ್ಲಾ ಬಳ್ಪ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ 5 ವರ್ಷದ ಬಳಿಕವೂ ಸಮಗ್ರ ಅಭಿವೃದ್ಧಿಯಾಗದೇ ಇದ್ದಾಗ ಟೀಕೆಗಳು, ಅಸಹನೆಗಳು ಬರಲಾರಂಭಿಸಿದವು. ಅದು ರಾಜಕೀಯವಾಗಿಯೂ ಕಂಡಿತು. ಕೆಲವರು ಅಭಿವೃದ್ಧಿಯಾಗಿದೆ ಎಂದರೆ ಇನ್ನೂ ಕೆಲವರು ಆಗಿಲ್ಲ ಎಂದರು. ಹೀಗೇ ಚರ್ಚೆಯಾಗುತ್ತಿರುವಾಗ ರೋಗಿಯೊಬ್ಬರನ್ನು ಹೊತ್ತು ಅಂಬೆಲೆನ್ಸ್ ಗೆ ಕರೆತಂದ ಸಂಗತಿ ಭಾರೀ ಚರ್ಚೆಗೆ ಕಾರಣವಾಯಿತು. ಅದಕ್ಕೆ ಪ್ರಮುಖ ಕಾರಣ ರಸ್ತೆ ಸಮಸ್ಯೆ. ಇಲ್ಲಿ ರಸ್ತೆ ಸಮಸ್ಯೆ ನಿವಾರಣೆ ಹೇಗೆ ಎಂಬ ಚರ್ಚೆ ನಡೆಯುತ್ತಿತ್ತು.
ಇಲ್ಲಿ ಬೀದಿಗುಡ್ಡೆಯಿಂದ ತ್ರಿಶೂಲಿನೀ ದೇವಸ್ಥಾನದ ತನಕ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ಪಡ್ಕಿಲ್ಲಾಯ- ಪಾನ-ಕಾಂಜಿ ಪ್ರದೇಶಕ್ಕೆ ರಸ್ತೆ ಇಲ್ಲ. ಮುಂದಕ್ಕೆ ರಸ್ತೆ ನಿರ್ಮಿಸಲು ಖಾಸಗಿ ಜಾಗ ಬರುತ್ತದೆ ಹೀಗಾಗಿ ಸಮಸ್ಯೆ ಇತ್ತು. ಇದೀಗ ಪಟ್ಟಾ ಜಾಗದ ವ್ಯಕ್ತಿ ಕಿಟ್ಟಣ್ಣ ಎಂಬವರು ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ. 40 ಸೆಂಟ್ಸ್ ಜಾಗ ಇರುವ ಕಿಟ್ಟಣ್ಣ ಅವರು ಮಾನವೀಯ ನೆಲೆಯಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ತಮ್ಮ ತೋಟದ ಕಂಗು ಕಡಿದು ಸಹಕರಿಸಲು ಅವರು ಮುಂದಾಗಿದ್ದಾರೆ. ಈ ಮೂಲಕ ನಿಜವಾದ ಆದರ್ಶ ವ್ಯಕ್ತಿಯಾಗಿದ್ದಾರೆ.
ಮುಂದೆ ಗ್ರಾಮದ ಪ್ರಮುಖರು ಕಿಟ್ಟಣ್ಣ ಪೂಜಾರಿ ಅವರ ಸಮ್ಮುಖದಲ್ಲಿ ಮುಂದಿನ ಕಾರ್ಯಯೋಜನೆ, ಪರಿಹಾರ ಮೊತ್ತ ಇತ್ಯಾದಿ ಕುರಿತು ಸಮಾಲೋಚನಾ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ಆದರ್ಶ ಗ್ರಾಮದ ಆದರ್ಶ ವ್ಯಕ್ತಿಯಾಗಿ ಕಂಡಿದ್ದಾರೆ ಕಿಟ್ಟಣ್ಣ .