ಮಡಿಕೇರಿ : ದಿನದಿಂದ ದಿನಕ್ಕೆ ಗ್ರಾಹಕರಿಂದ ದೂರವಾಗುತ್ತಿರುವ ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ವಿರುದ್ಧ ಮರಗೋಡು ಗ್ರಾಮಸ್ಥರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬಿಎಸ್‍ಎನ್‍ಎಲ್ ಕೇಂದ್ರದ ಜನರೇಟರ್ ಗಾಗಿ ಮರಗೋಡು ಗ್ರಾಮಸ್ಥರೆ ಭಿಕ್ಷೆ ಬೇಡಿ ಬಂದ ಹಣದಿಂದ ಡೀಸೆಲ್ ಖರೀದಿಸಿ ನೀಡಿದ್ದಾರೆ.
ಮರಗೋಡು ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಬಿಎಸ್‍ಎನ್‍ಎಲ್ ಕೇಂದ್ರವು ವಿದ್ಯುತ್ ಕೈಕೊಟ್ಟಾಗಲೆಲ್ಲಾ ತನ್ನ ಸೇವೆ ಸ್ಥಗಿತಗೊಳಿಸುತ್ತದೆ. ಈ ಸಂದರ್ಭ ಪರ್ಯಾಯ ವ್ಯವಸ್ಥೆಯಾಗಿ ಜನರೇಟರ್ ಇದ್ದರೂ ಸಹ ಇದಕ್ಕೆ ಡೀಸೆಲ್ ಪೂರೈಸಲು ಅಧಿಕಾರಿಗಳಿಂದ ಹಣ ದೊರಕುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತವೆ.
ಮರಗೋಡು ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಕೈಕೊಟ್ಟಿದ್ದು ಬಿಎಸ್‍ಎನ್‍ಎಲ್ ಸೇವೆ ಆಗಿಂದಾಗ್ಗೆ ಸ್ಥಗಿತವಾಗುತ್ತಿದೆ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಇಂದು ಬೆಳಗ್ಗೆ ಗ್ರಾಮ ಕೇಂದ್ರದಲ್ಲಿ ಸೇರಿ ಸಾರ್ವಜನಿಕರಿಂದ, ವಾಹನ ಚಾಲಕರಿಂದ ಮತ್ತು ಅಂಗಡಿ ಮಳಿಗೆಗಳಿಂದ ಭಿಕ್ಷೆ ಎತ್ತಿದ್ದಾರೆ. ಸಂಗ್ರಹವಾದ 2800 ರೂಪಾಯಿಗಳಿಗೆ 35 ಲೀಟರ್ ಡೀಸೆಲ್ ಖರೀದಿಸಿ ಗ್ರಾಮಸ್ಥರು ಬಿಎಸ್‍ಎನ್‍ಎಲ್ ಕೇಂದ್ರಕ್ಕೆ ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ತಮ್ಮುಣಿ, ಮರಗೋಡಿನಲ್ಲಿ 30 ಆಟೋ ರಿಕ್ಷಾಗಳಿದ್ದು ತುರ್ತು ಸಂದರ್ಭದಲ್ಲಿ ಗ್ರಾಹಕರು ಕರೆ ಮಾಡಿದರೂ ತಮಗೆ ಸಂಪರ್ಕ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭ ಮಾತನಾಡಿದ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ, ನಮ್ಮಿಂದ ದುಬಾರಿ ದರ ಪಡೆಯುವ ಬಿಎಸ್‍ಎನ್‍ಎಲ್ ಅದೇ ಮಟ್ಟದ ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ ಎಂದು ದೂರಿದರು.
ಮಾಜಿ ಸೈನಿಕ ಚಂದ್ರ ಮಾತನಾಡಿ ಇದೀಗ ಮಳೆಗಾಲ ಆರಂಭವಾಗಿದ್ದು ಹಲವು ವಿಪತ್ತುಗಳು ಸಂಭವಿಸುವ ಸಂಭವವಿದೆ. ಮರಗೋಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದಲೂ ಬಿಎಸ್‍ಎನ್‍ಎಲ್ ಬಳಕೆದಾರರೇ ಹೆಚ್ಚಾಗಿದ್ದು, ಇದೀಗ ಅಗತ್ಯ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಮರಗೋಡು ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ವೈಷ್ಣವಿ, ಫುಟ್ಬಾಲ್ ಕ್ಲಬ್‍ನ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾಫಿ ಬೆಳಗಾರ ಮಂಡೇಪಂಡ ಗಣಪತಿ, ಕಲಾವಿದ ಐಮಂಡ ರೂಪೇಶ್ ನಾಣಯ್ಯ, ಸ್ಪೋರ್ಟ್ ಆಂಡ್ ರಿಕ್ರಿಯೇಷನ್ ಕ್ಲಬ್ ಕಾರ್ಯದರ್ಶಿ ಕೋಚನ ಅನೂಪ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…