ಸುಬ್ರಹ್ಮಣ್ಯ : ಸುಬ್ರಹ್ಮಣ್ಯ -ಮಂಜೇಶ್ವರ ಹೆದ್ದಾರಿಯ ಅರಂಪಾಡಿ ತಿರುವಿನಲ್ಲಿ ಕಾರು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಗೆ ಗುದ್ದಿ ಪರಾರಿಯಾಗಲು ಯತ್ನಿಸಿದ ಕಾರನ್ನು ಸ್ಥಳೀಯರು ಬೆನ್ನಟ್ಟಿ ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು ಮೂಲದ ಯುವಕರಿದ್ದ ಕಾರು ಮಂಜೇಶ್ವರ-ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತಿತ್ತು. ಅರಂಪಾಡಿ ಬಳಿ ತಲುಪಿದಾಗ ಎದುರಿನಿಂದ ಬೈಕ್ ನಲ್ಲಿ ತೆರಳುತಿದ್ದ ಯೇನೆಕಲ್ಲು ನಿವಾಸಿ ರಾಮಚಂದ್ರ ಮಾದನ ಮನೆ ಎಂಬವರ ಬೈಕಿಗೆ ಕಾರು ಡಿಕ್ಕಿ ಹೊಡೆದಿದೆ.ಈ ವೇಳೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಳಗಾದರು. ಈ ಸಂದರ್ಭ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳಿಯ ಯುವಕರು ವಾಹನಗಳಲ್ಲಿ ಕಾರನ್ನು ಬೆನ್ನಟ್ಟಿದ್ದು ಕುಲ್ಕುಂದ ಬಳಿ ತಡೆದು ನಿಲ್ಲಿಸಿ ಕರೆತಂದು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಿದರು. ಬೈಕು ಸವಾರ ಗಾಯಳುವನ್ನು ಸುಬ್ರಹ್ಮಣ್ಯ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳೀಯರು ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ 108 ಅಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗಿದೆ.
ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಪೊಲೀಸರು ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.