ಈ ವರ್ಷದ ಬೇಸಿಗೆಯಲ್ಲಿ ನೆಲ ನೀರಿನಂಶವನ್ನು ಕಳೆದುಕೊಂಡು ಬರಡಾಗುತ್ತಿದೆ. ಆಧುನಿಕತೆ ಮತ್ತು ಕಾಲಕಾಲಕ್ಕೆ ಸೌಕರ್ಯಗಳಿಗಾಗಿ ನಮ್ಮ ಸುತ್ತ ಮುತ್ತ ಇದ್ದ ಹಸಿರು ಅಳಿದು ಕಾಂಕ್ರೀಟ್ ಕಾಡುಗಳು ಮೇಲೇಳಲು ಸರ್ವ ಪ್ರಯತ್ನಗಳನ್ನೂ ಮಾಡಿದ್ದೇವೆ.
ಮಣ್ಣಿನ ತುಂಬ ಕಾಂಕ್ರೀಟ್ ಮತ್ತು ಪ್ಲಾಸ್ಟಿಕ್ ಬೆಸೆದು ನೆಲದಾಳಕ್ಕೆ ನೀರಿಳಿಯುವ ಒಟ್ಟು ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ನಮಗೆ ನಮ್ಮ ಸೌಕರ್ಯಗಳು ನೆಮ್ಮದಿಯನ್ನು, ಸುಖವನ್ನು ಮೊಗೆ ಮೊಗೆದು ಕೊಡುತ್ತವೆ ಎಂಬ ಭ್ರಮೆ. ಅದಕ್ಕಾಗಿ ನಾವು ಪ್ರಕೃತಿಯ ಮೇಲೆ ಎಂಥಹ ಹೇಯ ಅನಾಚಾರಕ್ಕೂ ಹೇಸದೆ ಅದರಿಂದ ಬರುವ ಆದಾಯದ ಸುಖಕ್ಕೆ ಮಣೆ ಹಾಕಿದ್ದೇವೆ. ಈ ಹಂತದಲ್ಲಿ ಯಾರ ಕಿವಿಮಾತುಗಳೂ ನಮಗೆ ಪಥ್ಯವಾಗುವುದು ಕಡಿಮೆಯೇ . ವರ್ಷ ವರ್ಷವೂ ವನಮಹೋತ್ಸವವನ್ನು ಕಾಟಾಚಾರಕ್ಕೆ ಆಚರಿಸಿ ಒಂದಷ್ಟು ಗಿಡಗಳನ್ನು ನೆಲದಲ್ಲಿ ನಟ್ಟು ಬೀಗುವ ನಾವು ಅದರತ್ತ ಮತ್ತೆ ತಿರುಗುವುದಿಲ್ಲ. ನೆಟ್ಟ ಗಿಡಗಳ ಪರಿಸ್ಥಿತಿ ಹೇಗಿದೆ ಎಂಬುದನ್ನೆಲ್ಲ ಯಾರೂ ಯೋಚಿಸುವ ಗೊಡವೆಗೇ ಹೋಗುವುದಿಲ್ಲ. ಈ ಕಾಟಾಚಾರದ ವನಮಹೋತ್ಸವ, ಪ್ರಚಾರದ ದೃಷ್ಟಿಯಲ್ಲಿ ಆಯೋಜಿಸುವ ಗಿಡನಡುವ ನಾಟಕಗಳಿಗಿಂತ ಹೊರತಾಗಿ ನಾವು ನಮ್ಮದೇ ಪರಿಸರದಲ್ಲಿ ಹಣ್ಣು ಹಂಪಲು ಮರಗಳ ಗಿಡಗಳನ್ನು ನಟ್ಟು ಬೆಳೆಸಿದರೆ ಹೇಗೆ? ಪ್ರಚಾರವಿಲ್ಲದೆ, ಹಂಗಿಲ್ಲದೆ ನಮ್ಮಷ್ಟಕ್ಕೆ ನಾವು ಗಿಡಗಳನ್ನು ಮಾಡಿ ಸರಿಯಾಗಿ ಮಳೆ ಬಂದ ಮೇಲೆ ನಟ್ಟುಬಿಡಬಹುದಲ್ಲ. ಇದು ಕಷ್ಟವ?.
ಮರಗಳು ಅಳಿದು ಬಿಸಿಲೇರಿತು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಡಿಕೆ ತೋಟ ಇರದವರು ಕಡಿಮೆ. ಅದರ ಬದಿಗಳಲ್ಲಿ ಹಲಸು, ಮಾವಿನ ಮರಗಳು ಹಿಂದೆ ಸಾಮಾನ್ಯ. ಈಗ ಕಾಲ ಬದಲಾಗಿದೆ. ನೂರಾರು ವರ್ಷಗಳಿಂದ ತೋಟದ ಬದಿಯಲ್ಲಿದ್ದ ಮರಗಳಿಂದು ವ್ಯಾಪಾರದ ದೃಷ್ಟಿಯಿಂದ ಕಡಿದುರುಳಿಸಿಯಾಗಿದೆ. ಹತ್ತಿರದ ಗುಡ್ಡಗಳಿಗೂ ಕೊಡಲಿ ಹೋಗಿದೆ. ಸ್ವಾರ್ಥಕ್ಕಾಗಿ ಹಸಿರೊಸರಿನ ಮೂಲಕ್ಕೆ ಕೈಹಾಕಿ ಹೊಸಕಿದ ಪಾಪಿಗಳು ಮನುಜರು. ಪೆಟ್ಟಿಗೆಯೊಳಗೆ ಬಂಧಿಯಂತೆ ಇದ್ದ ನಮ್ಮ ಹಸಿರು ತೋಟಗಳು ಸುತ್ತಲಿನ ಮರಗಳನ್ನು ಮಾರಾಟಮಾಡಿದ್ದರಿಂದ ಅಥವ ನಮ್ಮ ಮನೆಗೇ ಮೋಪಿಗಾಗಿ ಕಡಿದಿದ್ದರಿಂದ ಇಂದು ಪೂರ್ತಿ ತೆರೆದುಕೊಂಡಿವೆ. ಸರಿಯಾಗಿ ಗಾಳಿಬೆಳಕು ಬೀಳುತ್ತಿವೆ. ಆದರೆ ನೀರಿನ ಕೊರತೆ ಎದುರಿಸುತ್ತಿರುವ ತೋಟಗಳ ಮೇಲೆ ಇದು ಸರಿಯಾಗಿ ದುಷ್ಪರಿಣಾಮ ಬೀರುತ್ತಿವೆ. ಸುತ್ತಲಿನ ಮರಗಳು ಅಳಿದ ನಂತರ ಅಡಿಕೆ ತೋಟದೊಳಗೆ ಗಾಳಿಯೂ ಸರಾಗವಾಗಿ ನುಗ್ಗಿದ್ದರಿಂದ ಫಸಲಿಗೂ ಖುಷಿಯಾಯಿತು. ಆದರೆ ಗಾಳಿ ನುಗ್ಗಿ ಅಡಿಕೆ ಮರಗಳು ಸಾಲಾಗಿ ಉರುಳಿ ನಷ್ಟವೂ ಜೊತೆಗೆ ಬಂತು ಎಂಬುದು ಬೇರೆ ವಿಚಾರ. ಆದರೆ ಅದಕ್ಕಿಂತ ಅಪಾಯಕಾರಿಯಾದ ಸಂಗತಿ ಅಂದರೆ ಮರ ಕಡಿದ ನಂತರ ತೋಟದ ತೇವಾಂಶದಲ್ಲಿ ಏರುಪೇರಾಯಿತು. ಜುಳು ಜುಳು ನೀರಿನ ಸೆಲೆಗಳು ಅಳಿದು ನೆಲ ಬಿಸಿಲಿನ ತಾಪಕ್ಕೆ ಕಂಗಾಲಾಗತೊಡಗಿತು. ಅಡಿಕೆ ಫಸಲಿನ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿತು. ನೀರಿಗಾಗಿ ಕೊಳವೆ ಬಾವಿ ಯುಗ ಆರಂಭವಾಗಲು ಮೂಲ ಕಾರಣವೂ ಆಯಿತು.
ಇನ್ನಾದರೂ ಸರಿಯಾಗಲಿ.
ಇದಕ್ಕೆ ಪರಿಹಾರವೆಂದರೆ ಪ್ರಾಯಶ್ಚಿತ. ಮರ ಕಡಿದ ತಪ್ಪಿಗೆ ಅದರ ಮೂರ ಪಟ್ಟು ಮರಗಳನ್ನು ನಟ್ಟು ಬೆಳೆಸುತ್ತೇವೆ ಎಂಬ ಶಪಥ ಮಾಡಿಕೊಳ್ಳಬೇಕು. ಹಳ್ಳಿ ಜನರಿಗೆ ಗಿಡಗಳನ್ನು ಪೇಟೆಯಿಂದ ತರಬೇಕೆಂದಿಲ್ಲ. ಅವರ ಪರಿಸರದಲ್ಲಿಯೇ ಯಥೇಚ್ಛ ಹಣ್ಣು ಹಂಪಲಿನ ಗಿಡ ಮರಗಳಿರುತ್ತವೆ. ಅದರ ಬೀಜಗಳನ್ನು ಜೋಪಾನ ಮಾಡಿ ಮೇ ತಿಂಗಳಿನಲ್ಲಿಯೇ ಲಕೋಟೆಗಳಲ್ಲಿ ಮಣ್ಣು ತುಂಬಿ ಬಿತ್ತಿದರೆ ಮಳೆ ಬಂದಾಗ ಬೀಜ ಮೊಳಕೆಯೊಡೆದು ತಯಾರಾಗುತ್ತದೆ. ಪ್ರತಿ ಮನೆಯಲ್ಲಿ ಇಂತಹ ಕಾರ್ಯ ಮಾಡಲು ಕಷ್ಟವಾಗದು. ಕಾಲಕಾಲಕ್ಕೆ ಮಳೆ ಬರುವುದು, ಪ್ರಾಕೃತಿಕ ವಿಕೋಪಗಳಾಗದಿರುವುದು ಪ್ರತಿಯೊಬ್ಬ ಬಯಸುವ ಕ್ರಮಗಳು. ಅಂತಹ ದಿನಗಳನ್ನು ನಾವು ಮತ್ತು ಮುಂದಿನ ಯುವ ಜನಾಂಗ ಕಾಣಬೇಡವೆ? ಅದರ ಸುಖಗಳನ್ನು ಸವಿಯಬೇಡವೆ? ಅದಕ್ಕಾಗಿ ಮಳೆಗಾಲ ಬಂದೊಡನೆ ನಡಲು ಸಿಗುವಂತೆ ಈಗಲೇ ಪೂರ್ವ ತಯಾರಿ ಮಾಡಿಕೊಂಡು ಗಿಡ ಬೆಳೆಸೋಣ. ವೈವಿಧ್ಯಮಯ ಕಾಡು ಮಾವು, ಹಲಸು, ಪೇರಳೆ, ನೇರಳೆ ಗಿಡಗಳನ್ನಾದರೂ ಬೀಜ ಬಿತ್ತಿ ಬೆಳೆಯುವುದು ಕಷ್ಟವಲ್ಲ. ಅದಕ್ಕೆ ಬೇಕಾದಂತಹ ಮನಸ್ಸುಗಳನ್ನು ಜೋಡಿಸುವ ಕೆಲಸವಾದಾಗ ಹಸಿರಳಿದು ಬಿಸಿಲೇರಿದ ಹವೆ ಹೋಗಿ ಹಸಿರೊಸರು ಉಕ್ಕುಕ್ಕಿ ಬಂದು ಮತ್ತೆ ನಮ್ಮ ನೆಲ ಹಸಿರಾಗಿ ನಳನಳಿಸಬಹುದಲ್ಲವೆ? ಅಂತಹ ದಿನಗಳನ್ನು ನಮ್ಮ ಹಿರಿಯರು ಅನುಭವಿಸಿದ್ದರು. ನಾವು ಅದರಿಂದ ವಂಚಿತರಾದೆವು. ಇನ್ನು ನಮ್ಮಿಂದ ನಮ್ಮ ಮುಂದಿನ ಪೀಳಿಗೆ ಹಸಿರಿನ ನೆಮ್ಮದಿಯನ್ನು ಹಿಗ್ಗಿಗ್ಗಿ ಅನುಭವಿಸುವಂತೆ ಮಾಡುವುದು ನಮ್ಮ ಕರ್ತವ್ಯ.
ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ರೈತರ ನೋಂದಣಿ ಕಾರ್ಯವನ್ನು ಶೀಘ್ರವೇ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ 30 ರಿಂದ ಡಿಸೆಂಬರ್ 3 ರವರೆಗೆ ಸಾಧಾರಣ…
ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ಮೈಕೊರೆವ ಚಳಿ ಶುರುವಾಗಿದೆ. ಮತ್ತೊಂದೆಡೆ ಚಂಡ ಮಾರುತದ…
29.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…