ಮಡಿಕೇರಿ : ಮಳೆಗೆ ಮಂಜಿನ ನಗರಿ ಸೊಗಸಾಗಿದೆ. ಮಂಜು ಓಡುತ್ತಾ ಬರುತ್ತಿದೆ… ಹಾಗೆಯೇ ಸುತ್ತಿಕೊಳ್ಳುತ್ತಿದೆ…. ಕೊಂಚ ಹೊತ್ತಲ್ಲಿ ಮರೆಯಾಗುತ್ತಿದೆ.. ಈ ದೃಶ್ಯ ವೈಭವ ಕಾಣುವುದು ಮಡಿಕೇರಿಯ ರಾಜಾಸೀಟಿನಲ್ಲಿ. ಇದೀಗ ಈ ಅಂದಕ್ಕೆ ಮತ್ತಷ್ಟು ಆಕರ್ಷಣೆ ನೀಡಲು ಆನೆಯೂ ಬಂದಿದೆ..!.
ಮಡಿಕೇರಿ ನಗರದ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನ ಈಗ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಂಡಿದೆ. ವನ್ಯಜೀವಿಗಳ ಬೃಹತ್ ಕಲಾಕೃತಿಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಎತ್ತರದ ಆನೆ ಕಲಾಕೃತಿ ಹೆಚ್ಚು ಗಮನ ಸೆಳೆಯುತ್ತಿದೆ. ಜಿಲ್ಲಾಡಳಿತದ ಆಸಕ್ತಿಯಿಂದಾಗಿ ರಾಜಾಸೀಟಿಗೆ ಹೆಚ್ಚು ಮೆರುಗು ಬಂದಿದೆ ಎಂದು ಸ್ಥಳೀಯ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಾರು 18 ಲಕ್ಷ ರೂ. ವೆಚ್ಚದ ಕಲಾಕೃತಿಗಳನ್ನು ಪುಣೆಯಿಂದ ತರಲಾಗಿದ್ದು, ನವಿಲು, ಜಿಂಕೆ, ಮೊಲ, ಹುಲಿ, ಜಿರಾಫೆ, ಆನೆ ಹಾಗೂ ಇನ್ನಿತರ ಕಲಾಕೃತಿಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಪ್ರವಾಸಿಗರು ಕುಳಿತುಕೊಳ್ಳಲು ಆಕರ್ಷಕ ಕಲ್ಲುಬೆಂಚು ಅಳವಡಿಸಲಾಗುವುದು ಮತ್ತು ವೀಕ್ಷಣಾ ಗೋಪುರವನ್ನು ಮತ್ತಷ್ಟು ಅಂದಗಾಣಿಸಲಾಗುತ್ತಿದೆ.
ಇದೀಗ ಮಳೆಯೂ ಹೆಚ್ಚಾಗಿದ್ದು ಮಂಜಿನ ಓಟದ ದೃಶ್ಯವು ಮನ ತಣಿಸುತ್ತದೆ.