ಮಳೆಯೊಂದಿಗೆ ಮಾತುಕತೆ..!. ಈ ಮಾತುಕತೆಯಲ್ಲಿ ನಾವೆಲ್ಲರೂ ಮೊನ್ನೆ ಮೊನ್ನೆ ಭಾಗಿಯಾಗಿದ್ದೆವು.ಈಗ ಮತ್ತೆ ಮಳೆಯ ಜೊತೆಗಿನ ಮಾತುಕತೆಯ ಸಾರಾಂಶವನ್ನು ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ. ಮಳೆ, ಪ್ರಕೃತಿಯ ಜೊತೆ ಮಾತನಾಡುವುದು ಎಂದರೆ ಅದೊಂದು ಸೂಕ್ಷ್ಮ ಸಂವೇದನೆ. ಪಿ ಜಿ ಎಸ್ ಎನ್ ಪ್ರಸಾದ್ ಜೊತೆ ಹಲವಾರು ಮಂದಿ ಈಗ ಸೇರಿಕೊಂಡಿದ್ದಾರೆ. ಪ್ರತಿದಿನವೂ ಮಳೆಯ ಬಗ್ಗೆ ಲೆಕ್ಕ ಬರೆಯುತ್ತಾರೆ, ಪರಿಸರವನ್ನು ವಾಚ್ ಮಾಡುತ್ತಾರೆ. ಮಳೆ ಲೆಕ್ಕ ಅಂತಹೇ ಒಂದು ಗ್ರೂಪ್ ಇದೆ. ಇಲ್ಲೆಲ್ಲಾ ಮಳೆಯದ್ದೇ ಮಾತುಕತೆ ಇರುತ್ತದೆ. ಸಾಯಿಶೇಖರ್ ಕರಿಕಳ ಅವರು ಮಳೆ ಯಾವಾಗ ಬರುತ್ತದೆ ಎಂದರೆ ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಳೆಯ ಜೊತೆ ಮಾತಾಡಿ ನಮಗೆ ವಿವರ ನೀಡುತ್ತಾರೆ. ಹೀಗಾಗಿ ಈ ಬಾರಿಯ ಆಶ್ಲೇಷ ನಕ್ಷತ್ರವನ್ನು ಬೆಂಬೆತ್ತಿ ಮಾತನಾಡಿದಾಗ ಜನರ ನಿರೀಕ್ಷೆ ತಲೆಕೆಳಗಾದ ಬಗ್ಗೆ, ಸೋಲು-ಗೆಲುವಿನ ಬಗ್ಗೆ ಅವರು ತಿಳಿಸಿದ್ದಾರೆ, ಈ ಕಡೆಗೆ ನಮ್ಮ ಇಂದಿನ ಬೆಳಕು….
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅದಕಭ್ಯಂಗ ಎರಿತಾವನ್ನೋ ಹಂಗ
ಕೂಡ್ಯಾವ ಮೋಡ ಸುತ್ತಲೂ ನೋಡ ನೋಡ
…. ವರಕವಿ ದ.ರಾ.ಬೇಂದ್ರೆ
ಈಗ ಕರಾವಳಿ, ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯನ್ನು ಕಣ್ತುಂಬಿಕೊಂಡು ನೋಡಲೂ ನಾವು ಭಯಪಡುವಂತಿದೆ.ಅನಾದಿ ಕಾಲದಲ್ಲಿ ಮಳೆ ಹೇಗಿತ್ತೋ ನಮ್ಮ ಊಹೆಗೂ ನಿಲುಕದು. ಮೊನ್ನೆ ಮೊನ್ನೆವರೆಗೂ ಇನ್ನೇನು ಮಳೆಗಾಲದ ವೈಭವ ಇನ್ನಿಲ್ಲ ಅಂದುಕೊಂಡಿದ್ದೆವು. ಯಾವಾಗ ಆಶ್ಲೇಷನ ಪಾದಾರ್ಪಣೆ ಆಯಿತೋ ಚಿತ್ರಣವೇ ಬದಲಾಯಿತು.
ಸಹೋದರರೆಂದೇ ಮಲೆನಾಡಿನಲ್ಲಿ ಗುರುತಿಸಲ್ಪಟ್ಟಿರುವ ಪುನರ್ವಸು, ಪುಷ್ಯ ನಕ್ಷತ್ರಗಳದ್ದು ಯಾವತ್ತೂ ಭರ್ಜರಿ ಆಟ.ಪುನರ್ವಸು ಹಿಂದೆ ಬೀಳದಿದ್ದರೂ,ಯಾಕೋ ಪುಷ್ಯ ಕಳೆದೈದು ವರ್ಷದಿಂದ ತನ್ನ ವೈಭವವನ್ನು ಕಳೆದುಕೊಂಡದ್ದನ್ನು ನಾವು ಗಮನಿಸುತ್ತಿದ್ದೇವೆ. ಆದರೆ ಕಳೆದೆರಡು ವರ್ಷದಿಂದ ಆಶ್ಲೇಷನ ( ಆಗಸ್ಟ್ 3 ರಿಂದ 16) ಆಟದ ವೈಖರಿಗೆ ನಾಡಿನ ಜನ ಕಂಗಾಲು!
ಕಳೆದ ವರ್ಷ ಗರಿಷ್ಟ ಪ್ರಮಾಣದ ಮಳೆ ಸತತ 5 ದಿನ 100 ಮಿ.ಮೀ.ಗಳಿಂದಲೂ ಹೆಚ್ಚು ಸುರಿಯುವ ಮೂಲಕ ಒಟ್ಟಾರೆ 958 ಮಿ.ಮೀ.ನಷ್ಟು ದಾಖಲಾಯಿತು.ಅದು ( 933 ಮಿ.ಮೀ..1982 ರಲ್ಲಿ ) ಆ ವರೆಗಿನ ಅತ್ಯಧಿಕ ಮಳೆಯಾಗಿ ಇತಿಹಾಸದ ಪುಟ ಸೇರಿತ್ತು.
ಈ ಸಲ ಹಿಂದಿನೆಲ್ಲ ದಾಖಲೆಗಳನ್ನು ಮುರಿಯಲೇ ಬೇಕೆಂದು ಹಠ ತೊಟ್ಟಂತಿದ್ದಾನೆ ಆಶ್ಲೇಷ. ಸತತ ಆರು ಶತಕಗಳು,ಮೂರು ಅರ್ಧ ಶತಕಗಳು. ಯಾವುದೇ ಒಂದು ಮಹಾ/ಮಳೆ ನಕ್ಷತ್ರದ ಅವಧಿಯಲ್ಲಿ ದಾಖಲಾದ ಗರಿಷ್ಟ ಮಳೆ ತನ್ನ ಹೆಸರಿಗೆ ಬರೆಯಿಸಿಕೊಳ್ಳಲು ಈತನಿಗೆ ಇನ್ನು ಬಾಕಿಯಿರುವುದು 1998 ರ ಆರ್ದ್ರಾ ನಕ್ಷತ್ರದ (ಜೂನ್ 22 ರಿಂದ ಜುಲೈ 5) 1319 ಮಿ.ಮೀ. ಮಾತ್ರ. ಕಾದು ನೋಡೋಣ ಇವನಾಟ…
ನಮ್ಮ ಪೂರ್ವಜರು ಪ್ರಕೃತಿಯನ್ನು ಆರಾಧಿಸುತ್ತಿದ್ದರು.ಆದರೆ ನಾವು….? ಈಗ ಯೋಚಿಸಿ ಪ್ರಕೃತಿಯ ಈ ಆಟದಲ್ಲಿ ಗೆದ್ದವರಾರು ? ಸೋತವರಾರು ?
ನೆಲ ಜಲ ಕಾಡಿನ ಸಂಬಂಧ
ಬಿಟ್ಟರೂ ಬಿಡಲಾಗದ ಬಂಧ
ನೀರಿದ್ದರೆ ಮಣ್ಣಿನ ಗಂಧ
ಹಸುರಿನ ಹೊದಿಕೆಯ ಆ ಚೆಂದ
… ಸುಬ್ರಾಯ ಚೊಕ್ಕಾಡಿ
( ಅಂಕಿ ಅಂಶಗಳು ….ಸುಳ್ಯ ತಾಲೂಕಿನ ಬಾಳಿಲದಲ್ಲಿ ದಾಖಲಾದ ಮಳೆಯದ್ದು.)
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…