ಸುಳ್ಯನ್ಯೂಸ್.ಕಾಂ ನ ಈ ವಾರದ ವ್ಯಕ್ತಿ ಬಾಳಿಲದ ಪಿಜಿಎಸ್‍ಎನ್ ಪ್ರಸಾದ್. 1976 ನೇ ಇಸವಿಯಿಂದ ಮಳೆ ಲೆಕ್ಕ ಇವರಲ್ಲಿದೆ. ಯಾವುದೇ ಕೆಲಸ ಕಾರ್ಯದಲ್ಲಿ ಅನುಭವವೇ ಮುಖ್ಯವಾಗುತ್ತದೆ. ಪರಿಸರದ ಬಗ್ಗೆಯೂ ಇವರಲ್ಲಿ ಅನುಭವದ ಲೆಕ್ಕ ಇದೆ. ಅಪರೂಪದ ಲೆಕ್ಕವನ್ನು ದಾಖಲು ಮಾಡುವ ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಾದರಿಯಾಗಿದ್ದಾರೆ.
ಸಾಕಷ್ಟು ಮಳೆ ಸುರಿದು ನೀರು ಹರಿದರೂ ಎಷ್ಟು ಮಳೆ ಸುರಿಯಿತು, ಎಷ್ಟು ನೀರು ಹರಿಯಿತು ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬರು ಕೃಷಿಕರು ಸುರಿಯುವ ಪ್ರತಿ ಇಂಚು ಮಳೆಯ ಲೆಕ್ಕವನ್ನೂ ಇರಿಸಿ, ಅದನ್ನು ದಾಖಲಿಸಿ ಗಮನ ಸೆಳೆಯುತ್ತಾರೆ. ತಮ್ಮ ಮನೆಯಲ್ಲಿ ಕಳೆದ 43 ವರ್ಷದ ಮಳೆಯನ್ನು ಅಳತೆ ಮಾಡಿ ಅದನ್ನು ದಾಖಲಿಸಿ ಮಾಡಿ ಎಷ್ಟು ಮಳೆ ಬಂತು ಎಂದು ನಿಖರವಾಗಿ ಮಳೆಯ ಲೆಕ್ಕ ಹೇಳಬಲ್ಲವರು ಬಾಳಿಲದ ಪಿಜಿಎಸ್‍ಎನ್ ಪ್ರಸಾದ್.
1976 ನೇ ಇಸವಿಯಿಂದ ಪ್ರಸಾದರು ಮಳೆ ಮಾಪನದ ಮೂಲಕ ಮಳೆಯ ಪ್ರಮಾಣವನ್ನು ಅಳೆದು ಅದನ್ನು ದಾಖಲಿಸುವುದನ್ನು ಆರಂಭಿಸಿದ್ದರು. ಈಗಲೂ ಪ್ರತಿ ದಿನ ದಾಖಲಿಸುತ್ತಾರೆ. ಪಾಟಾಜೆ ಗೋವಿಂದಯ್ಯ ಸತ್ಯನಾರಾಯಣ ಪ್ರಸಾದ್ ಎಂಬ ಪಿಜಿಎಸ್‍ಎನ್ ಪ್ರಸಾದ್ ಹವ್ಯಾಸಕ್ಕಾಗಿ ಬಾಳಿಲದ ತಮ್ಮ ಮನೆಯಲ್ಲಿ ಆರಂಭಿಸಿದ ಈ ಪ್ರಯೋಗ ಹೊಸ ತಲೆಮಾರಿಗೊಂದು ಅಪೂರ್ವ ದಾಖಲೆಯನ್ನು ಒದಗಿಸುತಿದೆ.
ಮಳೆಯ ದಾಖಲೆ:
ಪ್ರಸಾದರು ತಯಾರಿಸಿದ ಮಳೆಯ ದಾಖಲೆಯು ಅಪೂರ್ವವಾದ ಮತ್ತು ಅದ್ಭುತ ಮಾಹಿತಿಯನ್ನು ಒದಗಿಸುತ್ತಿದೆ. ಕೆಲವೊಂದು ವಿಸ್ಮಯಕಾರಿ ಚಿತ್ರಣವನ್ನೂ ತೆರೆದಿಡುತ್ತದೆ. 1976-2018 ರ 43 ವರ್ಷದ ಅವಧಿಯಲ್ಲಿ 4,456 ಮಿ.ಮೀ ವಾರ್ಷಿಕ ಸರಾಸರಿ ಮಳೆ ಸುರಿದಿದೆ. 1976ರಿಂದ-2000 ಅವಧಿಯಲ್ಲಿ 4611 ಮಿ.ಮಿ. ಇದ್ದ ಮಳೆ 2001-2018 ಅವಧಿಯಲ್ಲಿ ಸರಾಸರಿ 4240 ಮಿ.ಮಿ.ಗೆ ಕುಸಿದಿದೆ. 1976-2018ರ ಅವಧಿಯಲ್ಲಿ ಗರಿಷ್ಠ ಮಳೆ 1980ರಲ್ಲಿ ದಾಖಲಾಗಿತ್ತು(6443 ಮಿ.ಮಿ)ಕನಿಷ್ಠ ಮಳೆ 1987ರಲ್ಲಿ ದಾಖಲಾಗಿತ್ತು(2732 ಮಿ.ಮಿ).
21ನೇ ಶತಮಾನದ ಗರಿಷ್ಠ ಮಳೆಗೆ 2018 ಸಾಕ್ಷಿಯಾಯಿತು. ಕಳೆದ ವರ್ಷ 4862 ಮಿ.ಮಿ. ಮಳೆ ಬಂದರೆ 2006ರಲ್ಲಿ 4955 ಮಿ.ಮಿ.ಮಳೆಯಾಗಿತ್ತು. ಶತಮಾನದ ಕನಿಷ್ಠ ಮಳೆ 2002ರಲ್ಲಿ(3323 ಮಿ.ಮಿ)ರಲ್ಲಿ ದಾಖಲಾಗಿತ್ತು.
2017ರಲ್ಲಿ 3476 ಮಿ.ಮಿ, 2016ರಲ್ಲಿ 3592 ಮಿ.ಮಿ , 2015ರಲ್ಲಿ 3869, 2014ರಲ್ಲಿ 4450 ಮಿ.ಮಿ, 2013ರಲ್ಲಿ 4875ಮಿ.ಮಿ., 2012ರಲ್ಲಿ 4314 ಮಿ.ಮಿ., 2011ರಲ್ಲಿ 4727, 2010ರಲ್ಲಿ 4737 ಮಿ.ಮಿ.ಮಳೆಯಾಗಿತ್ತು. 2019 ಮೇ.31ರವರೆಗೆ 113 ಮಿ.ಮಿ. ಮಳೆ ಬಂದಿದೆ.
ಒಂದು ತಿಂಗಳ ಗರಿಷ್ಠ ಮಳೆ 2013ರ ಜುಲೈನಲ್ಲಿ ದಾಖಲಾಗಿತ್ತು. 1999ರಲ್ಲಿ ಬಹಳ ಬೇಗ ಮಳೆ ಆರಂಭವಾಗಿತ್ತು. ಮೇ.20 ರಿಂದ ಮುಂಗಾರು ಪ್ರವೇಶ ಪಡೆದಿದ್ದರೆ, 1983 ರಲ್ಲಿ ತಡವಾಗಿ ಅಂದರೆ ಜು.16 ರಂದು ಮುಂಗಾರು ಆರಂಭವಾಗಿದೆ. 48 ಘಂಟೆಯಲ್ಲಿ ದಾಖಲಾದ ಅಧಿಕ ಮಳೆ 1982 ರಲ್ಲಿ ದಾಖಲಾಗಿದೆ. 1-8-1982ರ ಬೆಳಿಗ್ಗಿನಿಂದ 3-81982ರ ಬೆಳಿಗ್ಗೆ ಎಂಟರವರೆಗೆ 510 ಮಿ.ಮೀ. ಮಳೆ ಬಂದಿತ್ತು. 1991, 94, 98, 99 ವರ್ಷಗಳಲ್ಲಿ ಐದು ಸಾವಿರ ಮಿ.ಮೀ.ಗಳಿಗಿಂತ ಹೆಚ್ಚು ಮಳೆ ಸುರಿದರೆ 1987(2732 ಮೀ.ಮೀ.) ಮತ್ತು 1988(2991.ಮೀ.ಮೀ.)ರಲ್ಲಿ ಮಳೆಯ ಪ್ರಮಾಣ ಮೂರು ಸಾವಿರ ಮಿ.ಮೀ.ಗಿಂತ ಕೆಳಗೆ ಕುಸಿದಿತ್ತು.
ಮಳೆ ಲೆಕ್ಕ ಹಾಕುವುದು ಹೇಗೆ ?: ಮಳೆ ಲೆಕ್ಕ ಮಾಡಲು ಇವರಲ್ಲಿ ಮಾಪನ ಇದೆ. ಮನೆ ಸಮೀಪ ಅಳತೆ ಇರುವ ಸಮಾನಾದ ಸುತ್ತಳತೆ ಇರುವ ಗಾಜಿನ ಜಾರ್‍ನ್ನು ಇಟ್ಟು ಅದರಲ್ಲಿ ಮಳೆ ನೀರು ಸಂಗ್ರಹಿಸಲಾಗುವುದು. ಪ್ರತಿ ದಿನ ಬೆಳಿಗ್ಗೆ ಎಂಟು ಗಂಟೆಗೆ ಅದನ್ನು ನೋಡಿ ದಾಖಲೆ ಪುಸ್ತಕದಲ್ಲಿ ಬರೆದಿಡುತ್ತಾರೆ. ಮಳೆಯ ಲೆಕ್ಕ ಮಾತ್ರವಲ್ಲದೆ ಆ ದಿನ ಮಳೆಯು ಯಾವ ರೀತಿ ಇತ್ತು ಎಂಬುದನ್ನೂ ಬರೆದಿಡುತ್ತಾರೆ. ಪ್ರಸಾದರು ಮನೆಯಲ್ಲಿ ಇಲ್ಲದ ದಿವಸ ಅವರ ಪತ್ನಿ ಮಾಲಿನಿ ಅಥವಾ ಪುತ್ರ ವಿಜೇತಕೃಷ್ಣ ಮಳೆಯ ಲೆಕ್ಕವನ್ನು ದಾಖಲಿಸಿಡುತ್ತಾರೆ.
ತಂದೆಯಿಂದ ಮಗನಿಗೆ : ಪ್ರಸಾದರ ತಂದೆ ಪಾಟಾಜೆ ಗೋವಿಂದಯ್ಯನವರಿಗೆ ಮಳೆ ಸುರಿಯುವುದರ ಮತ್ತು ಅದರ ಲೆಕ್ಕಾಚಾರದ ಬಗ್ಗೆ ಆಸಕ್ತಿಯಿತ್ತು. ಮಳೆಯ ಬಗ್ಗೆ ಅವರು ದಿನಚರಿಯಲ್ಲಿ ಬರೆದಿಡುತ್ತಿದ್ದರು. ಅದು ನೋಡಿ ಪ್ರಸಾದರಿಗೆ ಮಳೆಯನ್ನು ಲೆಕ್ಕ ಹಾಕಬೇಕೆಂಬ ಆಸಕ್ತಿ ಉಂಟಾಯಿತು. ಅದರಂತೆ ಮಳೆ ಲೆಕ್ಕ ಆರಂಭಿಸಿದರು. ಪ್ರದೇಶದಿಂದ ಪ್ರದೇಶಕ್ಕೆ ಮಳೆ ಸುರಿಯುವ ಪ್ರಮಾಣ ವ್ಯತ್ಯಾಸವಿದ್ದರೂ, ತನ್ನ ಲೆಕ್ಕ ಮತ್ತು ತಾಲೂಕಿನ ಸರಾಸರಿ ಮಳೆಯ ಲೆಕ್ಕಕ್ಕೆ ಸಾಮ್ಯತೆ ಇರುತ್ತದೆ ಎಂದು ಪ್ರಸಾದ್ ಹೇಳುತ್ತಾರೆ. ಮಳೆ ನಕ್ಷತ್ರ ಸಮಯದಲ್ಲಿ ಮಳೆ ಜಾಸ್ತಿ ಎಂಬ ನಂಬಿಕೆ ಇದೆ. ಇದಕ್ಕನುಗುಣವಾಗಿ ಆ ಸಮಯದ ಮಳೆಯ ಲೆಕ್ಕ ತೆಗೆದು ಚಾರ್ಟನನ್ನು ತಯಾರು ಮಾಡಿದ್ದಾರೆ. ಮಳೆಯ ಬಗ್ಗೆ ಅಂದಾಜಿಸುವ ಇವರು ಇಂಟರ್‍ನೆಟ್, ಪತ್ರಿಕೆಗಳಲ್ಲಿ ನೀಡುವ ಮೋಡದ ಚಿತ್ರಣವನ್ನೂ ಗಮನಿಸಿ ಅಧ್ಯಯನ ನಡೆಸುತ್ತಾರೆ. ಪ್ರಗತಿಪರ ಕೃಷಿಕರಾದ ಪಿಜಿಎಸ್‍ಎನ್ ಪ್ರಸಾದ್ ತನ್ನ ಮಳೆಯ ಲೆಕ್ಕವನ್ನು ಚಾರ್ಟ್ ಮಾಡಿ ಅದನ್ನು ಲ್ಯಾಮಿನೇಟ್ ಮಾಡಿ ದಾಖಲೆ ಮಾಡಿ ಇಡುತ್ತಾರೆ.
ಸ್ವಾತಿ ಮಳೆಯ ಕುಸಿತ- ನೀರಿನ ಅಭಾವಕ್ಕೆ ಕಾರಣ:
ಇತ್ತೀಚಿನ ವರುಷಗಳಲ್ಲಿ ಮಳೆಗಾಲದಲ್ಲಿ ಎಷ್ಟೇ ಮಳೆ ಸುರಿದರೂ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುತಿದೆ. 2018ರಲ್ಲಿ ಶತಮಾನದ ಅತೀ ಹೆಚ್ಚು ಮಳೆ ಬಂದಿದ್ದರೂ ಈ ವರ್ಷ ಜನವರಿಯಿಂದಲೇ ನೀರಿನ ಅಭಾವ ಉಂಟಾಗಿ ತೀವ್ರ ಬರಗಾಲ ಎದುರಾಗಿದೆ. ಕಳೆದ ಕೆಲವು ವರುಷಗಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಸ್ವಾತಿ ನಕ್ಷತ್ರದ ಸಂದರ್ಭದ ಮಹಾ ಮಳೆ ಕಡಿಮೆಯಾಗುವ ಕಾರಣ ಈ ರೀತಿ ಉಂಟಾಗುತಿದೆ ಎಂಬುದನ್ನು ಪ್ರಸಾದರ ಮಳೆ ಲೆಕ್ಕ ಪುಷ್ಟೀಕರಿಸುತ್ತದೆ. 1976-2000ನೇ ವರ್ಷದ ಅವಧಿಯಲ್ಲಿ 147 ಮಿ.ಮಿ. ಸರಾಸರಿ ಇದ್ದ ಸ್ವಾತಿ ಮಳೆ 2001-2018ರ ಅವಧಿಯಲ್ಲಿ 86 ಮಿ.ಮಿ.ಗೆ ಕುಸಿದಿದೆ. 43 ವರ್ಷಗಳಲ್ಲಿ ಸರಾಸರಿ 122 ಮಿ.ಮಿ ಬರಬೇಕಾದರೂ ಕಳೆದ ವರ್ಷಗಳಲ್ಲಿ ಸ್ವಾತಿ ಮಳೆ ಪಸಂದಾಗಿ ಲಭಿಸಿಲ್ಲ. ಕಳೆದ ವರ್ಷ ಕೇವಲ ಆರು ಮಿ.ಮಿ. ಲಭಿಸಿದರೆ 2017ರಲ್ಲಿ 13, 2016ರಲ್ಲಿ 75 ಮಿ.ಮಿ. ಮಾತ್ರ ಮಳೆ ಲಭಿಸಿತ್ತು. ಆದುದರಿಂದ ಈ ವರುಷ ಸೇರಿ ಈ ಎಲ್ಲಾ ವರುಷಗಳಲ್ಲಿ ನೀರಿನ ಅಭಾವ ಕಾಡಿದೆ. ಇನ್ನು ವರ್ಷದಲ್ಲಿ 165 ಮಳೆ ದಿನಗಳು ಸಿಗುತ್ತದೆ. ಆದರೆ ಅದರಲ್ಲೂ ಈಗ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. 1982 ಡಿಸೆಂಬರ್‍ನಿಂದ 1983 ಮೇ.ನಾಲ್ಕರವರೆಗೆ ಹನಿ ಮಳೆಯೂ ಸುರಿದಿಲ್ಲ… ಹೀಗೆ ಪ್ರಸಾದರ ಮಳೆ ದಾಖಲೆಗಳ ಪುಟ ತಿರುವುತ್ತಾ ಹೋದಂತೆ ಮಳೆಯ ಕುರಿತಾದ ನೂರಾರು ಕುತೂಹಲಕಾರಿ ಅಂಶಗಳು ತೆರೆದುಕೊಳ್ಳುತ್ತದೆ.
ಕೃಷಿಕರಾದ ನಮಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಮಳೆ, ಬಿಸಿಲಿನ ಪ್ರಮಾಣ ಮತ್ತು ವಾತಾವರಣದ ಅಂದಾಜು ಬೇಕಾಗುತ್ತದೆ. ಮಳೆಯ ಲೆಕ್ಕಾಚಾರ ಹಾಕಬೇಕು ಎಂಬ ಆಸಕ್ತಿಯಿಂದ ಆರಂಭಿಸಿದ್ದೆ. ಈಗ ಅದೊಂದು ಜೀವನದ ಭಾಗವಾಗಿ ಬಿಟ್ಟಿದೆ. ಆಸಕ್ತಿ ಒಂದು ರೀತಿಯ ತೃಪ್ತಿ ಮತ್ತು ಆನಂದವನ್ನುಂಟು ಮಾಡುತ್ತಿದೆ. ಇದು ಅತ್ಯಂತ ಸರಳವಾಗಿದ್ದು ಯಾರಿಗೂ ಮಾಡಬಹುದಾಗಿದೆ ಎನ್ನುತ್ತಾರೆ ಪಿಜಿಎಸ್‍ಎನ್ ಪ್ರಸಾದ್.