ಸವಣೂರು: ಈ ಸರಕಾರಿ ಶಾಲೆ ಯಾವತ್ತೂ ಗಮನ ಸಳೆಯುತ್ತದೆ. ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಸೆಳೆಯುತ್ತದೆ. ಶಾಲೆಗೆ ಪೋಷಕರು ಮಾತ್ರವಲ್ಲ ಊರಿನ ಮಂದಿಯೂ ಬರುವಂತೆ ಮಾಡುತ್ತದೆ. ಈ ಬಾರಿಯ ದೀಪಾವಳಿಯೂ ಅದೇ ಮಾದರಿಯಲ್ಲಿ ನಡೆಯಿತು. ಇದು ದೀಪದೃಶ್ಯ.
ಆ ಮುಸ್ಸಂಜೆಯ ಹೊತ್ತಲ್ಲಿ ನೂರಾರು ಮಕ್ಕಳ ಸಂಭ್ರಮದ ಓಡಾಟ…! ಹಾರಾಡುತ್ತಿದ್ದ ಹತ್ತಾರು ಗೂಡು ದೀಪಗಳು…. ಇದರ ನಡುವೆಯೇ ಪರ್ವತದಾಕಾರದ ಏರುತಗ್ಗು ಗಳಲ್ಲಿ ಝಗಮಗಿಸುತ್ತಿದ್ದ ಸಹಸ್ರಸಂಖ್ಯೆಯ ಹಣತೆಗಳು…! ಈ ಹಣತೆಗಳ ಹಂದರದಲ್ಲಿ ನಲಿದಾಡುತ್ತಿದ್ದ ನೂರಾರು ಮಕ್ಕಳು….ಪೋಷಕರು..! . ಇದು ಇಡೀ ಕಾರ್ಯಕ್ರಮದ ಸ್ಥೂಲ ರೂಪವಷ್ಟೇ. ಇಷ್ಟು ಮಾತ್ರವಲ್ಲ ಮತ್ತೊಂದು ಕಡೆಯಿಂದ ಚೆಂಡೆ, ಮದ್ದಳೆ,ಭಾಗವತಿಕೆಯ ಅಬ್ಬರ…! ಅರ್ಥಗಾರಿಕೆಯ ವ್ಯಾಖ್ಯಾನ. ಇದೆಲ್ಲಾ ಸರಕಾರಿ ಶಾಲೆಯಲ್ಲಿ ಮಾಡಬಹುದಾ ಅಂತ ಅಚ್ಚರಿ ಪಡಬೇಡಿ. ಇದು ನಡೆದಿದೆ. ಬಹುಶ: ಎಲ್ಲಾ ಶಾಲೆಗಳಿಗೂ ಇದು ಮಾದರಿ. ಇಂತಹದ್ದು ನಡೆದದ್ದು ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ. ಸವಣೂರು ಬಳಿಯ ಪುಣ್ಚಪ್ಪಾಡಿ ಸರಕಾರಿ ಶಾಲೆಯಲ್ಲಿ.
ಶಾಲೆಯ ಮಕ್ಕಳ ದೀಪಾವಳಿ ಸಂಭ್ರಮದ ಹೆಸರು ದೀಪದೃಶ್ಯ . ಕಾರ್ಯಕ್ರಮದಲ್ಲಿ ಸವಣೂರು ಗ್ರಾಮಪಂಚಾಯತ್ಅ ಧ್ಯಕ್ಷರಾದ ಇಂದಿರಾ ಬಿಕೆ, ತಾಲೂಕು ಪಂಚಾಯತ್ ಸದಸ್ಯೆ ರಾಜೇಶ್ವರಿ, ಗ್ರಾಮ ಪಂಚಾಯತ್ ಸದಸ್ ನಾಗೇಶ್ಓಡಂತರ್ಯ, ಹಿರಿಯರಾದ ಗಂಗಾಧರ ರೈ, ಯುವಸನ್ಮಾನ ಪ್ರಶಸ್ತಿಪುರಸ್ಕೃತರಾದ ಸುರೇಶ್ ಸೂಡಿಮುಳ್ಳು, ಮುಂತಾದ ಗಣ್ಯರು ಮಕ್ಕಳ ಜೊತೆ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ವಿಷ್ಣು ಭಟ್ ದೀಪವನ್ನು ಪ್ರಜ್ವಲಿಸಿದರು. ದೀಪ ಚಿಂತನವನ್ನು ಮಾಡಿದ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇಲ್ಲಿಯ ಮುಖ್ಯಗುರುಗಳಾದ ಗಿರಿಶಂಕರ ಸುಲಾಯ ಮಾತನಾಡಿ ದೀಪಾವಳಿ ಕೇವಲ ಒಂದು ಧಾರ್ಮಿಕತೆಯ ಹಬ್ಬ ಮಾತ್ರವಲ್ಲ ಅದು ಪ್ರಾಕೃತಿಕವೂ ಸಾರ್ವತ್ರಿಕವೂ ಆದಹಬ್ಬ. ಇದಕ್ಕೆ ಸದ್ಭಾವನೆಯ ಹಾಗೂ ವೈಜ್ಞಾನಿಕತೆಯ ಹಂದರವಿದೆ ದೀಪಭಾವ ಹಾಗೂ ದೀಪ ನೀಡುವ ಸಾದೃಶ್ಯ ಸಂಕೇತಗಳು ಮನುಜಜೀವಕ್ಕೆ ಬೇಕಾದ ಅತಿಮುಖ್ಯವಾದ ಸಂಗತಿಗಳಾಗಿವೆ. ತಾನು ಉರಿಯದೆ ಬೆಳಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನುನೀಡುವ ದೀಪದಂತಾಗೋಣ ಎಂದರು.
ಕಾರ್ಯಕ್ರಮದಲ್ಲಿ ಶ್ರವಣ ರಂಗ ಸವಣೂರು ಇದರ ಸಾರಥ್ಯದಲ್ಲಿ ಕಲಾವಿದರಾದ ತಾರಾನಾಥ ಸವಣೂರು ಇವರ ಸಂಯೋಜನೆಯಲ್ಲಿ ನಡೆದ ನರಕಚತುರ್ದಶಿಯ ಮಹತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ನಾ.ಕಾರಂತ ಪೆರಾಜೆ, ಗುಡ್ಡಪ್ಪಬಲ್ಯ, ರಮೇಶ್ ಉಳಯ, ಪ್ರಸಾದ್ಆರೆಲ್ತಡಿ ಮುಮ್ಮೇಳದಲ್ಲಿ ಭಾಗವಹಿಸಿದರೆ ಯುವಭಾಗವತರಾದ ಆನಂದ ಇಡ್ಯಾಡಿ , ಬಾಲಕೃಷ್ಣ ಬೊಮ್ಮಾರು ಇವರು ಹಿಮ್ಮೇಳದಲ್ಲಿ ಭಾಗವಹಿಸಿದರು. ನೂರಾರು ಪೋಷಕರ ಮಧ್ಯದಲ್ಲಿ ಶಾಲಾ ಮಕ್ಕಳು ಸಹಸ್ರಾರು ದೀಪಗಳು ಹತ್ತಾರು ಗೂಡುದೀಪಗಳು ಚಿಂತನೆಯ ಮೂಲಕ ದೀಪಾವಳಿಯ ಮಹತ್ವ ಸಹಸೇವನೆಯ ಸಿಹಿ..!
ಶಾಲಾಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಉಮಾಶಂಕರ ಗೌಡ ಹಾಗೂ ಮುಖ್ಯಗುರು ರಶ್ಮಿತಾ ನರಿಮೊಗರು ಇವರ ನೇತೃತ್ವದಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸವಣೂರು ವಲಯ ಇದರ ಅಧ್ಯಕ್ಷರಾದ ಮಹೇಶ್ ಕೆ ಸವಣೂರು, ಸವಣೂರು ಯುವಕ ಮಂಡಲ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನಿತ್ ಕುಮಾರ್, ಶಿಕ್ಷಕರಾದ ಸುಜಯಾ, ವಸಂತಿಕೆ, ಗೀತಾ ದೇವರಮನೆ, ಅಂಗನವಾಡಿ ಕಾರ್ಯಕರ್ತೆ ಸೇಸಮ್ಮ, ಎಸ್.ಡಿ.ಎಮ್.ಸಿ.ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು,ಊರವರು ಸಾಕ್ಷಿಗಳಾದರು. ಯುವಚೇತನ ಸೇವಾಸಂಘ ಪುಣ್ಚಪ್ಪಾಡಿ, ಜನಜಾಗೃತಿವೇದಿಕೆ ಸವಣೂರು ವಲಯ, ರಾಜ್ಯಪ್ರ ಶಸ್ತಿಪುರಸ್ಕೃತ ಯುವಕಮಂಡಲ ಸವಣೂರು ಸಹಕರಿಸಿದರು.
ಶಾಲೆಯೊಂದರಲ್ಲಿ ಸಾಮೂಹಿಕ ದೀಪಾವಳಿ ಆಚರಿಸುವ ಸಂಭ್ರಮವನ್ನು ಆರಂಭಿಸಿದ್ದೇವೆ .ಈ ವರ್ಷ ಯಕ್ಷಗಾನ ತಾಳಮದ್ದಳೆಯ ವೈಭವವನ್ನುಸೇರಿಸಿದ್ದೇವೆ ಹತ್ತಾರು ಜನರನ್ನು ಸೇರಿಸುವ ಈ ಸಂಭ್ರಮ ಖುಷಿ ಎನಿಸಿದೆ.- ಗಂಗಾಧರ ರೈ, ದೇವಸ್ಯ
ನಾನು ನೋಡಿದ ಅತ್ಯಪೂರ್ವ ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮವು ಒಂದು. ಸಂಸ್ಕಾರ ಎನ್ನುವುದು ಹೇಳಿಕೊಳ್ಳುವುದಿಲ್ಲ ಮಾಡಿತೋರಿಸುವುದು ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಈ ವಿಶಿಷ್ಟ ದೀಪಾವಳಿಯ ಮೂಲಕ ಮಾಡಿ ತೋರಿಸಿದ್ದಾರೆ. – ನಾ.ಕಾರಂತ ಪೆರಾಜೆ , ಪತ್ರಕರ್ತರು, ಹಿರಿಯ ಯಕ್ಷಗಾನ ಕಲಾವಿದರು
Advertisement
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…