ಶಾಸಕ ಸುರೇಶ್ ಕುಮಾರ್ ಜನಪರವಾಗಿ ಗುರುತಿಸಿಕೊಂಡವರು. ಹಲವಾರು ಸಂಗತಿಗಳನ್ನು ನೇರವಾಗಿ ಹೇಳಿದವರು, ಹೇಳುವವರು. ಈ ಬಾರಿ ಮಾಧ್ಯಮ ಕ್ಷೇತ್ರದ ಕತೆಯನ್ನು ಅವರ ಪೇಸ್ ಬುಕ್ ಗೋಡೆಯಲ್ಲಿ ಬರೆದಿದ್ದಾರೆ. ವಾಸ್ತವ ಸಂಗತಿ ಅದು.
ಶಾಸಕ ಸುರೇಶ್ ಕುಮಾರ್ ಅವರು ಪೇಸ್ ಬುಕ್ ಗೋಡೆಯಲ್ಲಿ ಬರೆದ ಪೂರ್ಣ ಬರಹ ಹೀಗಿದೆ…..
Electronic media ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವರದಿಗಾರರು/ಕ್ಯಾಮರಾಮ್ಯಾನ್ ಗಳ ಪರಿಸ್ಥಿತಿ ಇಂದು ನನ್ನ ಮುಂದೆ ಅನಾವರಣಗೊಂಡಿತು.
ವಿಧಾನಸಭೆಯ ಇಂದಿನ ಕಲಾಪಗಳಲ್ಲಿ ಭಾಗವಹಿಸಲು ಇಂದು ಸ್ವಲ್ಪ ಮುಂಚಿತವಾಗಿಯೇ ತಲುಪಿದ್ದೆ. ವಿಧಾನಸಭೆಯ ಪಡಸಾಲೆಯಲ್ಲಿ (Lounge) ಆಗ ಭೇಟಿಯಾಗಿದ್ದು ಎಲೆಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿ ಸ್ನೇಹಿತರು.
ಸರಿ. ಉಭಯ ಕುಶಲೋಪರಿಯನಂತರ ಅವರ ವೃತ್ತಿ ಜೀವನದ ಬಗ್ಗೆ ಕೇಳಿದೆ!
ಆಗ ಆ ಮಾಧ್ಯಮ ಸ್ನೇಹಿತರು ತಮ್ಮ ವೃತ್ತಿಜೀವನದ ಕಷ್ಠಗಳನ್ನು ಬಿಚ್ಚಿಡುತ್ತಾ ಹೊರಟರು. .
ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರಿಗೆ ಕಳೆದ 1ತಿಂಗಳಿನಿಂದ ಒಂದು ದಿನವೂ ರಜೆಯನ್ನೇ ಕೊಟ್ಟಿಲ್ಲವೆಂದು ನೊಂದುಕೊಂಡೇ ತಿಳಿಸಿದರು. ಮತ್ತು ಈ ರೀತಿಯ ಪರಿಸ್ಥಿತಿ ಪ್ರತಿ ಎರಡು-ಮೂರು ತಿಂಗಳಿಗೆ ಬರುತ್ತಲೇ ಇರುತ್ತದೆ.
,ಮಾಧ್ಯಮಗಳಲ್ಲಿ ರೋಚಕ ಮತ್ತು ಬ್ರೇಕಿಂಗ್ ನ್ಯೂಸ್ ಕೊಡುವ ಸ್ಪರ್ಧೆಯ ಬಗ್ಗೆ ಹೇಳುತ್ತಾ ಹೊರಟಾಗ ಒಂದು ದಿನ ಅವರಿಗೆ ಮೈ ಸುಡುವ ಜ್ಚರ ಇದ್ದರೂ ರಜೆ ತೆಗೆದುಕೊಳ್ಳುವಂತಿರಲಿಲ್ಲ. ಕಾರಣ, ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಮಂಡಿಸಿದ್ದ ವಿಶ್ವಾಸಮತದ ಮೇಲಿನ ಚರ್ಚೆ. ಜ್ವರವಿದ್ದರೂ ಇಡೀ ದಿನ ಕಲಾಪದ ವರದಿ ಮಾಡಿದರವರು. ತಾಪದ ಮಧ್ಯದಲ್ಲೇ ತಡರಾತ್ರಿಯವರೆಗೆ ಸುದ್ದಿಮಾಡುವ ಅನಿವಾರ್ಯತೆ ಒತ್ತಡಗಳ ಬಗ್ಗೆ ಹೇಳುವಾಗ ಅವರು ಅತೀವ ವೇದನೆ ಅನುಭವಿಸಿದ ಬಗ್ಗೆ ಅರಿವಾಯಿತು.
ಒಂದು ಸೋಮವಾರ ತಡರಾತ್ರಿ ಸದನದ ಕಲಾಪದ ವರದಿ ಕಳಿಸಿ ಹೊರಬಂದಾಗ ವಾಹನ ಸೌಕರ್ಯವಿಲ್ಲದ ಸ್ಥಿತಿಯಲ್ಲಿ,ಸುರಿವ ಮಳೆಯ ಮಧ್ಯೆ ನಗರದ ದೂರವಿರುವ ಹೊರಪ್ರದೇಶದಲ್ಲಿನ ಅವರ ಮನೆ ತಲುಪಿದ ಬಗ್ಗೆ ತಿಳಿಸಿದರು.
ಅವರಿಗೆ ಬರುವ ಸಂಬಳದಲ್ಲಿ ನಗರದ ಮಧ್ಯದಲ್ಲಿ ಮನೆಮಾಡಲೂ ಸಾಧ್ಯವಿಲ್ಲದ ಸ್ಥಿತಿ, ಮನೆಯಲ್ಲಿ ಚಿಕ್ಕ ಮಗು… ಹೀಗೆ ಹೇಳುವಾಗ ಅವರು ಗದ್ಗದಿತರಾಗುವ ಸ್ಥಿತಿ ತಲುಪಿದ್ದುದು ತುಂಬಾ ನೋವುಂಟುಮಾಡುವಂತಿತ್ತು.
10-15 ವರ್ಷ ಇದೇ ವೃತ್ತಿಯಲ್ಲಿರುವುದರಿಂದ ಬೇರೆ ವೃತ್ತಿಗೆ ಹೋಗಲೂ ಸಾಧ್ಯವಾಗದ ಅವರ ಅಸಹಾಯಕ ಸ್ಥಿತಿಯನ್ನು ವಿಷಾದದಿಂದಲೇ ವಿವರಿಸಿದರು.
ರೋಚಕ ಸುದ್ದಿ ಬಿತ್ತರಿಸುವ ಮಾಧ್ಯಮಗಳು, ತೀವ್ರ ಒತ್ತಡಗಳ ನಡುವೆಯೇ ಕೆಲಸಮಾಡಬೇಕಾದ ಸ್ಥಿತಿಯಲ್ಲಿ ತಮ್ಮ ವರದಿಗಾರ ಮತ್ತು ಛಾಯಾಗ್ರಾಹಕ ಸಿಬ್ಬಂದಿಗಳು ವಾಸ್ತವವಾಗಿ ಅನುಭವಿಸುತ್ತಿರುವ ಕಷ್ಠಗಳ ಬಗ್ಗೆ ನಿರ್ಲಕ್ಷಿಸಿದರೆ ಅವರ ಆರೋಗ್ಯ ಮತ್ತು ಕೌಟುಂಬಿಕ ಜೀವನದ ಮಧ್ಯದಲ್ಲೇ ಅವರ ಮಾನಸಿಕ ಒತ್ತಡಗಳನ್ನೂ ನಿರ್ವಹಿಸುವಲ್ಲಿ ವಿಫಲವಾದರೆ ಅದರ ಪರಿಣಾಮಗಳು ಮಾಧ್ಯಮದ ಮೇಲೆಯೇ ಆಗುತ್ತದೆ ಎಂಬುದು ಗಮನಿಸಬೇಕಾದ ಅಂಶವಲ್ಲವೇ?
ಇದರೊಂದಿಗೆ ಯಾವುದಾದರೂ ಒಂದು ಚಾನೆಲ್ ನಲ್ಲಿ ವಿಶೇಷ ಸುದ್ದಿ ಬಂದು ಬಿಟ್ಟರೆ ಬೇರೆ ಚಾನೆಲ್ ಗಳ ವರದಿಗಾರರಿಗೆ “ಈ ಸುದ್ದಿ ನಮಗೇಕೆ ಸಿಗಲಿಲ್ಲ” ಎಂದು ಒಂದು ರೀತಿ ಬೆಂಡ್ ಎತ್ತುವುದು ಬೇರೆ. ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಯಾರಿಗೂ ಒಳಹೋಗಲು ಅವಕಾಶವಿಲ್ಲದಿದ್ದರೂ, ಒಳಗೆ ಏನು ನಡೆಯುತ್ತಿದೆ ಎಂದು ಪದೇ ಪದೇ ಪ್ರಶ್ನೆಗಳನ್ನು ಈ ವರದಿಗಾರರು ಎದುರಿಸಬೇಕಾಗುತ್ತದೆ. ಏನಾದರೂ ಸುದ್ದಿ ಕೊಡಲೇಬೇಕಾದ ಅನಿವಾರ್ಯತೆಯಲ್ಲಿ ಸತ್ಯಕ್ಕೆ ಅಪಚಾರವಾಗುವುದು ಸಹಜ.
ಇವರ ವೇತನಗಳೂ ತುಂಬಾ ಆಕರ್ಷಣೀಯವೇನಲ್ಲ. ಆ ವರದಿಗಾರರು “ಸರ್. ನಮ್ಮ ಬಟ್ಟೆ ನೋಡಿದರೆ, ನೀವು ನಮ್ಮ ಸಂಬಳ ಭಾರಿ ಇದೆ ಅಂದುಕೊಳ್ಳಬಹುದು. ಈ ಪ್ಯಾಂಟ್ ಮತ್ತು ಈ ಷರ್ಟ್ ಫ್ಯಾಕ್ಟರಿ ಔಟ್ ಲೆಟ್ ನಲ್ಲಿ ಕಡಿಮೆ ದರದಲ್ಲಿ ಕೊಂಡು ಧರಿಸಿರುವೆ” ಎಂದು ಸಂಕೋಚದಿಂದಲೇ ಹೇಳಿದರು.
ಹೊರಗಡೆಯಿಂದ ಗ್ಲಾಮರಸ್ ಆಗಿ ಕಾಣುವ ಈ ಕ್ಷೇತ್ರದಲ್ಲಿ ಒಂದು ಸುದ್ದಿಗಾಗಿ, ಒಂದು byte ಗಾಗಿ, ಒಂದು exclusive story ಗಾಗಿ ಅವರು ಪಡುವ ಧಾವಂತ, ಪರದಾಟ….ನಿಜಕ್ಕೂ ಅಯ್ಯೋ ಎನಿಸುತ್ತದೆ.
ಕೆಲಸದ ಒತ್ತಡದಲ್ಲಿ ರಜೆಯೂ ಇಲ್ಲದೇ, ಮನೆಯವರೊಂದಿಗೆ ಸಮಯ ಕಳೆಯಲು ಅವಕಾಶವೂ ಇಲ್ಲದೆ, ದಿನೇ ದಿನೇ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತರಾಗುತ್ತಿದ್ದೇವೆ ಎಂದವರು ಹೇಳಿದಾಗ ನನ್ನ ಮನಸ್ಸು ಎಲ್ಲಾ ಮಾಧ್ಯಮ ಸ್ನೇಹಿತರ ಕುರಿತು ಮರುಗಿತು.