ಮಳೆಗಾಲದಲ್ಲಿ ಆಗಸದಲ್ಲಿ ಮಿನುಗುವ ಬೆಳ್ಳಿ ಚುಕ್ಕಿಗಳಿಗೆ ಕಾರ್ಮೋಡದ ಪರದೆ.ಇದೇ ಸಮಯದಲ್ಲಿಗದ್ದೆ, ತೋಟ, ಕಾಡುಒಟ್ಟಾರೆ ಹೇಳುವುದರಾದರೆ ಪ್ರಕೃತಿಯ ಮಡಿಲಿನ ಕಡೆಗೆ ಹೋದರೆ ಕಾರ್ಮೋಡವನ್ನು ಸೀಳಿ ಧರೆಯತ್ತ ನಕ್ಷತ್ರಗಳು ಧಾವಿಸಿ ಬಂದಿವೆಯೋ ಏನೋ ಎಂದು ಭಾಸವಾಗುವುದು ನಿಜ. ಇದಕ್ಕೆಕಾರಣ ಹೊಳೆಯುವ ಬೆಳಕನ್ನು ಚೆಲ್ಲುತ್ತಾ ಹಾರುವ ಬೀಟಲ್‍ಜಾತಿಗೆ ಸೇರಿದ ಮಿಂಚುಹುಳಗಳು.
ಪ್ರಕೃತಿಯ ಚಮತ್ಕಾರಗಳಲ್ಲೊಂದಾದ ಈ ಕೀಟದ ಸುಂದರತೆಯನ್ನುಆಹ್ಲಾದಿಸುವ ಮನಸ್ಸಿದ್ದರೆ ಕತ್ತಲಲ್ಲಿ ಕಾಣುವ ಮಿಂಚುಹುಳದ ಈ ಬೆಳಕಿನಾಟ ಮನಕ್ಕೆ ತಂಪೆರೆಯವುದಂತು ನಿಜ. ಮಾನವಜಗತ್ತು ಎಷ್ಟೇ ವಿನೂತನ ಆವಿಷ್ಕಾರ ಮಾಡಿದರೂ ಪ್ರಕೃತಿಯ ಮಡಿಲಿನಲ್ಲಿರುವಇಂತಹಜೀವ ಸಂಕುಲಗಳಿಂದಾಗಿ ದೇವರ ಸೃಷ್ಟಿಗೆತಲೆಬಾಗಲೇ ಬೇಕು.
ಮಿಂಚುಹುಳಗಳ ದೇಹದ ಹಿಂಭಾಗದಲ್ಲಿರುವ ವಿಶಿಷ್ಟ ಕೋಶಗಳಲ್ಲಿರುವ ಪ್ರೋಟೀನ್ ಹಾಗು ಅಣುಗಳಿಂದಾಗಿ ಅಪರೂಪದ ಬೆಳಕು ಉತ್ಪತ್ತಿಯಾಗುತ್ತವೆ. ತಮ್ಮ ಶರೀರದಲ್ಲಿ ಬಿಡುಗಡೆಯಾಗುವ ಈ ಬೆಳಕಿನ ಮೂಲಕವೇ ತಮ್ಮ ಸಂಗಾತಿಯನ್ನು ಸೆಳೆಯುತ್ತವೆ. ತನ್ನ ವಾಸಸ್ಥಳಗಳನ್ನು ಗುರುತಿಸಲು ಹಾಗು ಬೇಟೆಯನ್ನು ಹಿಡಿಯಲು ಮಿಂಚುಹುಳಗಳು ತಮ್ಮಿಂದ ಹೊರಸೂಸುವ ಈ ಬೆಳಕನ್ನು ಬಳಸುತ್ತವೆ.
ಸೂರ್ಯಕಿರಣದ ಬೆಳಕು, ಉರಿಯುವ ಕಟ್ಟಿಗೆ ಅಥವಾ ಮಾನವಜಗತ್ತು ಆವಿಷ್ಕರಿಸಿದ ವಿಧ್ಯುತ್‍ಆಧಾರಿತ ಬೆಳಕು ಎಂದರೆ ನಮ್ಮ ಮನಸ್ಸಿಗೆ ಮೊದಲು ನೆನಪಾಗುವುದು ಶಾಖ.ಆದರೆ ವಿಚಿತ್ರಎಂದರೆ ಮಿಂಚು ಹುಳಗಳು ಮಾತ್ರತಮ್ಮ ಈ ಬೆಳಕಲ್ಲಿ ಶೂನ್ಯ ಶಾಖವನ್ನುಅಂದರೆ ಬಿಸಿಯಿಲ್ಲದ ಬೆಳಕನ್ನು ಹೊರಸೂಸುತ್ತವೆ. ಇದಕ್ಕೆತಣ್ಣನೆಯ ಬೆಳಕು ಎಂದುಕರೆಯುತ್ತಾರೆ.ಅಂದ ಹಾಗೆ ಮಿಂಚು ಹುಳಗಳು ತಮಗೆಅತೀ ಹೆಚ್ಚು ಆಹಾರ ಸಿಗುವಂತಹ ಗಿಡಮರಗಳಿಂದ ಕೂಡಿದತಂಪಾದ ವಾತಾವರಣದಲ್ಲಿಕಂಡುಬರುತ್ತವೆ.
ಜಗತ್ತಿನ ಯಾವುದೇ ಜೀವಿಯ ಜೀವನಕ್ರಮವನ್ನುಆಸಕ್ತಿಯಿಂದ ಗಮನಿಸಿದರೆ ಹಲವಾರು ಅಚ್ಚರಿಗಳು ಅದರಲ್ಲಿಅಡಗಿರುತ್ತವೆ. ಸಂಶೋಧಿಸಿದಷ್ಟೂ ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. ಮಾನವನೇ ಬುದ್ದಿವಂತಜೀವಿ ಎಂದು ಅಹಂನಿಂದ ಬದುಕದೇ ಮನಸ್ಸಿಗೆ ಮುದ ನೀಡುವ ಇಂತಹಜೀವ ಸಂಕುಲಗಳನ್ನೂ ಸ್ವಚ್ಛಂದವಾಗಿದೇವರ ಸೃಷ್ಟಿಯ ಈ ವಿಶ್ವದಲ್ಲಿ ಅವುಗಳಿಷ್ಟದಂತೆ ಬದುಕಲು ಅವಕಾಶ ಕೊಡುವುದುಎಲ್ಲಾಧೃಷ್ಟಿಕೋನದಿಂದಲೂ ಒಳ್ಳೆಯದು. ಏನಂತೀರಿ..?
# ವಂದನಾರವಿ ಕೆ.ವೈ. ವೇಣೂರು.