‘ದಾನ’ದ ಪರಿಕಲ್ಪನೆ ಸನಾತನವಾದುದು. ಇದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ-ಮಾನ. ವಿಶ್ವದ ಹಲವು ಧರ್ಮಗಳು ದಾನಕ್ಕೆ ಮಹತ್ವ ನೀಡುತ್ತಿವೆ. ಪೂಜಾದಿ ಕಾರ್ಯಗಳಲ್ಲಿ, ಶುಭ ಸಮಾರಂಭಗಳಲ್ಲಿ, ಅಪರ ಕ್ರಿಯೆಗಳಲ್ಲಿ ವಸ್ತುಗಳನ್ನು ದಾನ ನೀಡುವುದು ಪರಂಪರೆ. ಕೊಡುವವನ ಸಾಮಥ್ರ್ಯಕ್ಕೆ ಹೊಂದಿಕೊಂಡು ದಾನದ ಪ್ರಮಾಣ ಮತ್ತು ಮೌಲ್ಯ ನಿರ್ಧಾರವಾಗುತ್ತದೆ. ಕೊಡುವ ವಸ್ತುವಿಗಿಂತಲೂ, ಕೊಡುವವನ ಮನಸ್ಸಿನ ಭಾವಗಳು ಶುದ್ಧವಾಗಿದ್ದರೆ ದಾನ ಸ್ವೀಕರಿಸಿದವನಿಗೆ ಕೃತಾರ್ಥತೆ.
ದಾನದ ವಿಚಾರ ಮಾತನಾಡುವಾಗ ಮಹಾಭಾರತದ ‘ಕರ್ಣ’ನ ಪಾತ್ರವು ನೆನಪಾಗುತ್ತದೆ. ದಾನದ ಪ್ರಮಾಣ ಚಿಕ್ಕದರಲಿ, ದೊಡ್ಡದಿರಲಿ; ಅಂತಹ ದಾನಿಯನ್ನು ‘ದಾನಶೂರ ಕರ್ಣ’ನೆಂದು ನುಡಿಹಾರಗಳಿಂದ ಅಲಂಕರಿಸಿದಾಗ ಆಗುವ ಖುಷಿ ಅನುಪಮ. ಹೆಸರು, ಕೀರ್ತಿಗಾಗಿ ಅಲ್ಲದಿದ್ದರೂ ಸಮಾಜವು ಹೊಗಳಿದಾಗ ಆತ್ಮತೃಪ್ತಿಯಾಗುತ್ತದೆ. ಆತ್ಮಾರ್ಥದ ದಾನಿಗಳಿಗೆ ಹೊಗಳಿಕೆಯು ಹೊನ್ನಶೂಲವಾಗದೆ, ಅದು ಸ್ಫೂರ್ತಿ ತುಂಬುವ ಕ್ಯಾಪ್ಸೂಲ್ ಆಗುತ್ತದೆ.
ಕೋವಿಡ್ ಪರ್ವದಲ್ಲಿ ಕನ್ನಾಡಿನಾದ್ಯಂತ ‘ದಾನಿಗಳು’ ಕಂಡು ಬಂದರು. ಚಿಕ್ಕ ಚಿಕ್ಕ ಗುಂಪುಗಳಲ್ಲಿ ‘ಬ್ಯಾನರ್ ಇಲ್ಲದೆ’ ತೊಡಗಿಸಿಕೊಂಡಿದ್ದರು. ಬಡವರು, ನಿರ್ಗತಿಕರು ಹಸಿವಿನಿಂದ ತತ್ತರಿಸದಂತೆ ಎಚ್ಚರ ವಹಿಸಿದ್ದರು. ವೈಯಕ್ತಿಕವಾಗಿ, ಇನ್ನೂ ಕೆಲವರು ಬೇರೆ ದಾನಿಗಳ ನೆರವಿನಿಂದ ದಾನದಲ್ಲಿ ತೊಡಗಿರುವುದನ್ನು ಕಂಡಿದ್ದೇವೆ. ಇವರಿಗೆ ಸೆಲ್ಫಿ ಕ್ಲಿಕ್ಕಿಸಿ ವಾಟ್ಸಪ್ಪಿಗೆ ಏರಿಸಬೇಕು, ಫೇಸ್‍ಬುಕ್ಕಿನಲ್ಲಿ ಹರಿಯಬಿಡಬೇಕು, ಪತ್ರಿಕೆಯಲ್ಲಿ ಪಟ ಬರಬೇಕೆನ್ನುವ ವಾಂಛೆ ಇದ್ದಿರಲಿಲ್ಲ. ಬದ್ಧತೆಯಿಂದ ಕೆಲಸ ಮಾಡಿದ್ದಾರೆ.
ಇದಕ್ಕೆ ತದ್ವಿರುದ್ಧವಾದ ವಿದ್ಯಮಾನಗಳು ನಡೆದುಹೋಗುತ್ತದೆ. ಒಂದೋ ಬುದ್ಧಿಪೂರ್ವಕ ಯಾ ಪ್ರಮಾದದಿಂದ. ದಾನಿಗಳಿಗೆ ಸಮಾಜದ ಮುಂದೆ ಸ್ವತಃ ಕಾಣಿಸಿಕೊಳ್ಳಬೇಕೆನ್ನುವ ಇರಾದೆಯಿರುವುದಿಲ್ಲ. ಆಗವರು ವ್ಯಕ್ತಿ ಅಥವಾ ಒಂದು ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ತಲಪಿಸುವ ವ್ಯವಸ್ಥೆ ಮಾಡಿರುತ್ತಾರೆ. ಆಗ ಸಹಜವಾಗಿ ಯಾರು ವ್ಯವಸ್ಥೆಯ ಹೊಣೆ ಹೊರುತ್ತಾರೋ, ಅವರನ್ನು ಸಮಾಜವು ದಾನಿಯೆಂದು ಗುರುತಿಸುತ್ತದೆ. ಮೂಲ ದಾನಿಯ ಹೆಸರು ಮುಂಗಡೆಗೆ ಬರುವುದಿಲ್ಲ. ಕೆಲವೊಮ್ಮೆ ‘ತಾವೇ ನೀಡಿರುವ ದಾನ’ವೆಂದು ಬಿಂಬಿಸಿದರೂ ಆಶ್ಚಯವಿಲ್ಲ! ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ನಿಜಕ್ಕೂ ಅವರು ಪ್ರಚಾರವನ್ನು ಬಯಸಿದವರಲ್ಲ. ಒಟ್ಟಿನಲ್ಲಿ ಇದರಿಂದ ಮೂಲ ದಾನಿಗೆ ಮುಜುಗರವಾಗುತ್ತದೆ. ಈ ಗೊಂದಲಗಳಿಂದಾಗಿ ಎಷ್ಟೋ ಮಂದಿಗೆ ಕೊಡುವ ಮನಸ್ಸಿದ್ದರೂ ‘ಇದೆಲ್ಲಾ ಬೇಡಪ್ಪಾ’ ಎಂದು ಸುಮ್ಮನಾಗಿಬಿಡುತ್ತಾರೆ.
ಒಂದು ಊರಿನಲ್ಲಿ, ಗ್ರಾಮದಲ್ಲಿ ದಾನಪ್ರವೃತ್ತಿಯನ್ನು ರೂಢಿಸಿಕೊಂಡ ಮನಸಿಗರಿರುತ್ತಾರೆ. ಬ್ರಹ್ಮಕಲಶ, ಜಾತ್ರೆ, ನೇಮ, ಭಜನೆ, ಸ್ಕೂಲ್‍ಡೇ, ಸ್ಪೋಟ್ರ್ಸ್ ಕ್ಲಬ್, ಊರಿನ ಅಭಿವೃದ್ಧಿ.. ಹೀಗೆ ನಾನಾ ವಿಚಾರಗಳಿಗೆ ಸಹಕಾರ ನೀಡುತ್ತಿರುತ್ತಾರೆ. ಕೆಲವೊಮ್ಮೆ ಇವರಿಗೆ ‘ಮೊದಲ ರಶೀದಿ’ಯನ್ನು ಬರೆಯುವ ಯೋಗ ಬಂದು ಬಿಡುತ್ತದೆ. ತಮ್ಮ ಸ್ವಂತ ಶ್ರಮದಲ್ಲಿ ಚಿಕ್ಕ ಪಾಲನ್ನು ಸಮಾಜಕ್ಕೆ ವಿನಿಯೋಗಿಸುವುದು ಸಂಸ್ಕಾರದ ಒಂದು ಭಾಗ ಎಂದು ನಂಬಿದವರು. ಮನೆಯ ಮುಂದೆ ದೇಹಿ ಅಂದವರನ್ನು ಬರಿಗೈಯಲ್ಲಿ ಕಳುಹಿಸುವುದು ಅವರ ಜಾಯಮಾನವಲ್ಲ.
ಇದೇ ಊರಲ್ಲಿ – ಮನೆಯ ಮುಂದೆ ನಾಲ್ಕೈದು ಕಾರುಗಳನ್ನು, ಅಷ್ಟೇ ದ್ವಿಚಕ್ರಿಗಳನ್ನು ನಿಲ್ಲಿಸಿದ, ಕೊರಳಲ್ಲಿ-ಕೈಯಲ್ಲಿ ಚಿನ್ನದ ಮಾಲೆ, ಕಡಗವನ್ನು 24 x 7 ಧರಿಸುವ ಧನಿಕನಿಗೆ ಊರಿನ ವರ್ತಮಾನವನ್ನು ತಲಪಿಸುವ ದೂತರಿರುತ್ತಾರೆ. ಅವರಿಂದ ನಿರಂತರ ಸುದ್ದಿ ತಲಪುತ್ತದೆ. ಹೀಗೆ ಸುದ್ದಿ ತಲಪಿಸುವವರು ಮೂಲ ಸುದ್ದಿ ಏನಿದೆಯೋ ಅದಕ್ಕೆ ತಮ್ಮದೂ ಒಂದಷ್ಟು ಕೊಡುಗೆ ಸೇರಿಸಿರುತ್ತಾರೆ. ಆ ಧನಿಕ “ನಾನೇನು ಕಡಿಮೆಯೋ.. ಅವನೇನು ದಾನಶೂರ ಕರ್ಣನೋ,” ವ್ಯಂಗ್ಯವಾಡುತ್ತಾರೆ. ಇವರಲ್ಲಿಗೆ ಯಾರಾದರೂ ಹೋದರೆ ಸಾಕು, ಬಂದ ಉದ್ದೇಶವನ್ನು ಮರೆಯುವಷ್ಟು ಕಿವಿ ಕಚ್ಚುತ್ತಾರೆ! ಹಣ ಬಿಡಿ, ಒಂದು ಲೋಟ ಪಾನೀಯ ಸಿಕ್ಕರೆ ಪುಣ್ಯ! ಬಾಯಲ್ಲೇ ದಾನಶೂರರು. ಒಂದು ವೇಳೆ ಸಂಸ್ಥೆಗಳಿಗೆ, ಸಾಮಾಜಿಕ ವ್ಯವಸ್ಥೆಗಳಿಗೆ ಸಹಾಯ ಹಸ್ತ ಚಾಚಿದರೆನ್ನಿ. ಬ್ಯಾನರ್, ಪ್ಲೆಕ್ಸಿಗಳು, ಜಾಹೀರಾತುಗಳ ಅಬ್ಬರ ಹೇಳತೀರದು. ಪತ್ರಿಕೆಗಳಲ್ಲಂತೂ ಪೂರ್ಣ ಪುಟದ ಜಾಹೀರಾತು ಪ್ರಕಟವಾಗುತ್ತದೆ.
ಎಷ್ಟೋ ಕಡೆಗಳಲ್ಲಿ ಗಮನಿಸಿದ್ದೇನೆ. ಕೊಡುವ ಕೈಗಳು ಸುದೃಢವಾಗಿದ್ದಾಗ ದಾನ ಸುದ್ದಿಯಾಗುತ್ತದೆ! ಸುದ್ದಿ ಮಾಡುತ್ತಾರೆ. ಹತ್ತಾರು ಮಂದಿ ‘ಕತೆಕಟ್ಟಿ’ ದಾನಿಯನ್ನು ಎತ್ತರಕ್ಕೇರಿಸುತ್ತಾರೆ! ಇಲ್ಲಿ ‘ದಾನ ಭಾವ’ಕ್ಕಿಂತಲೂ ಪ್ರಚಾರ ಭಾವ ಮುಖ್ಯವಾಗುತ್ತದೆ. ಕೆಲವೊಂದು ಅಪರ ಕಾರ್ಯಗಳ ದಾನ ಪ್ರಕ್ರಿಯೆಗಳನ್ನು ನೋಡಿದಾಗ ‘ಇಷ್ಟೆಲ್ಲಾ ಶಾಸ್ತ್ರಗಳಲ್ಲಿ ಇದೆಯಾ’ ಎನ್ನುವಷ್ಟು ಜಿಜ್ಞಾಸೆ ಮೂಡುತ್ತಿದೆ. ಇಲ್ಲಿ ಕೊಡುವ ದಾನವನ್ನು ಪಡೆಯುವ ವ್ಯಕ್ತಿಗೆ ನಿಜಕ್ಕೂ ಅರ್ಹತೆ ಇದೆಯಾ? ನನ್ನ ಅಪ್ಪ ಹೇಳುತ್ತಿದ್ದರು, “ಹೋಮ, ಹವನ, ಅಪರಕರ್ಮಗಳಲ್ಲಿ ದಾನ ತೆಕ್ಕೊಂಡರೆ ಕನಿಷ್ಠ ಒಂದು ಸಾವಿರವಾದರೂ ಗಾಯತ್ರೀ ಜಪ ಮಾಡಬೇಕು.” ಬಹುಶಃ ಈ ಮಾತನ್ನು ವರ್ತಮಾನದಲ್ಲಿ ಸ್ವಲ್ಪ ಗಟ್ಟಿ ಸ್ವರದಲ್ಲಿ ಹೇಳಿದರೆ, ‘ತಟ್ಟೆಕಾಸು ಬ್ರಾಹ್ಮಣನ ಮಾತು’ ಎನ್ನುವ ಮೂದಲಿಕೆ ಬಾರದಿರದು.
ಇನ್ನು ಜ್ಯೋತಿಷ್ಯ ವಿಭಾಗಕ್ಕೆ ಬಂದಾಗ, ಬಹುತೇಕ ಎಲ್ಲರ ಜಾತಕಗಳನ್ನು ಪರಿಶೀಲಿಸಿದರೆ ಒಂದಲ್ಲ ಒಂದು ಗೃಹ ದೋಷಗಳು ಇರುತ್ತವೆ. ಇಂತಹ ದೋಷಕ್ಕೆ ಇಂತಿಂತಿಹ ವಸ್ತುಗಳನ್ನು ದಾನ ಮಾಡಿ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಓದಿದ ಪಂಡಿತರು ಹೇಳುವ ಪರಿಹಾರಗಳು ಎಂದೆಂದಿಗೂ ಸರಳ, ಸುಲಭವಾಗಿರುತ್ತವೆ. ರಾಹು, ಕೇತು, ಶನಿ ಗ್ರಹಗಳು ತಂದೀಯುವ (ನಂಬಿದರೆ ಮಾತ್ರ) ದೋಷಗಳಿಗೆ ಕೆಲವೊಂದು ದಾನ ಧರ್ಮಗಳನ್ನು ಸೂಚಿಸುತ್ತಾರೆ.
‘ಹೀಗೊಬ್ಬ ಆಧುನಿಕ ದಾನಶೂರ ಕರ್ಣ,’ ವಾಹಿನಿಯೊಂದು ಕಾರ್ಯಕ್ರಮ ಬಿತ್ತರಿಸಿತ್ತು. (ನಾಲ್ಕೈದು ವರುಷದ ಹಿಂದೆ) ಅವರು ಉಡುಪಿ ಜಿಲ್ಲೆಯ ಅಂಬಲಪಾಡಿಯ ಕೃಷ್ಣ. ಮರ ಕಡಿಯುವ ಬೆವರಿನ ವೃತ್ತಿ. ಶ್ರಮಪಟ್ಟು ಗಳಿಸಿ ಉಳಿಸಿದ ಎಪ್ಪತ್ತು ಸಾವಿರ ರೂಪಾಯಿಗಳಿಂದ ದಿನಸಿ ಹಂಚಿದ್ದಾರೆ! ಕೋವಿಡ್ ತಂದ ಸಂಕಷ್ಟಗಳಿಗೆ ಒಳಗಾದ ಐದಾರು ಗ್ರಾಮದ ಆಯ್ದ ಎಪ್ಪತ್ತು ಕುಟುಂಬಗಳಿಗೆ ದಿನಸಿ ಕಿಟ್ ತಯಾರಿಸಿ ನೀಡಿರುವುದು ಸಹೃದಯತೆಗೆ ಸಾಕ್ಷಿ. ಹಾಗೆಂದು ಕೃಷ್ಣ ಶ್ರೀಮಂತರಲ್ಲ. ದುಡಿದರೆ ಮಾತ್ರ ಕುಟುಂಬದ ಹೊಟ್ಟೆ ತಂಪಾಗುತ್ತದೆ. ಅವರ ಮಾನವೀಯ ತುಡಿತವು ಸ್ವಂತಕ್ಕೆಂದು ತೆಗೆದಿರಿಸಿದ ಹಣವನ್ನು ಸಮಾಜಕ್ಕೆ ವಿನಿಯೋಗಿಸುವಂತೆ ಮಾಡಿತು. ವಾಹಿನಿಯು ನೀಡಿದ ಶೀರ್ಷಿಕೆಯು ಕೃಷ್ಣರಿಗೆ ಅರ್ಥಪೂರ್ಣವಾಗಿ ಒಪ್ಪುತ್ತದೆ.
ಕಾಸರಗೋಡು ಜಿಲ್ಲೆಯ ಬೇಳ ಕಿಳಿಂಗಾರು ಗೋಪಾಲಕೃಷ್ಣ ಭಟ್ಟರು ‘ಸಾಯಿರಾಂ ಭಟ್ಟ’ರೆಂದೇ ಪ್ರಸಿದ್ಧರು. ಬಡವರಿಗೆ ವಸತಿಯನ್ನು ನೀಡಿದ ದಾನಿ. 1996ರಿಂದ ಆರಂಭವಾದ ಅವರ ಕಾಯಕದಲ್ಲಿ ಏನಿಲ್ಲವೆಂದರೂ ಇನ್ನೂರೈವತ್ತಕ್ಕೂ ಮಿಕ್ಕಿ ಮನೆಗಳನ್ನು ನಿರ್ಮಿಸಿ ನೀಡಿದ್ದಾರೆ. ವೈದ್ಯಕೀಯ ಶಿಬಿರ, ಕುಡಿಯುವ ನೀರು, ಸಾಮೂಹಿಕ ವಿವಾಹಗಳನ್ನು ವ್ಯವಸ್ಥೆಗೊಳಿಸಿ ಬಡವರ ಪಾಲಿಗೆ ‘ಮಹಾದಾನಿ’ಯಾಗಿದ್ದರು. ಯುವಕ-ಯುವತಿಯರಿಗೆ ಜೀವನ ಮಾರ್ಗವನ್ನು ತೋರಿದ್ದರು. ಇವರು ಪ್ರಚಾರಕ್ಕಾಗಿ, ಪ್ರತಿಷ್ಠೆಗಾಗಿ ಮಾಡದೆ ಕೇವಲ ಆತ್ಮತೃಪ್ತಿಗಾಗಿ ಮಾಡಿದ್ದರಿಂದ ‘ದಾನ’ ಪದಕ್ಕೆ ಮಾನ ಬಂದಿದೆ.
ವರ್ತಮಾನದಲ್ಲಿ ‘ದಾನ’ದ ಅರ್ಥ, ದಾನಶೂರರ ಅಸ್ತಿತ್ವದ ನೆಲೆಗಳು ಬದಲಾಗುತ್ತಿವೆ. ‘ನೀವು ಇಂತಿಷ್ಟು ದೇಣಿಗೆ ನೀಡಬೇಕು,’ ರಶೀದಿ ಹಿಡಿದು ಬಲವಂತದಿಂದ ಹಣವನ್ನು ಪಡೆಯುವುದು. “ನಿಮ್ಮನ್ನೇ ನಂಬಿದ್ದೇವೆ.. ಈ ಕಾರ್ಯಕ್ರಮಕ್ಕೆ ನೀವು ಇಂತಿಷ್ಟು ಕೊಡಲೇಬೇಕು,” ಒತ್ತಾಯಿಸಿ ಪಡೆಯುವುದು, ಸಭೆಯಲ್ಲಿ ‘ಮಹನೀಯರಿಂದ ದೊಡ್ಡ ಮೊತ್ತವನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಮುಜುಗರಕ್ಕೆ ಒಳಪಡಿಸಿ ದೇಣಿಗೆ ಪಡೆಯುವುದು. ನಂತರ ನೆನಪು ಸಂಚಿಕೆಯಲ್ಲಿ ‘ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಮಹಾದಾನಿಗಳು’ ಎಂದು ಹೆಸರು ಪ್ರಕಟವಾಗುತ್ತದೆ. ಇಲ್ಲಿ ದೇಣಿಗೆ ನೀಡಿದವರು ನಿಜಕ್ಕೂ ಆತ್ಮಾರ್ಥವಾಗಿ ಕೊಟ್ಟಿರಲಾರದು. ನಾಳೆ ಎದುರಾಗಬಹುದಾದ ಸಮಸ್ಯೆಗಳಿಗೆ ಅಂಜಿ ಹಣಕ್ಕೆ ಸ್ಪಂದಿಸಿದ್ದಾರಷ್ಟೇ. ಇಂತಹುಗಳನ್ನು ‘ದಾನ’ ಎನ್ನಲೋ, ‘ಸುಲಿಗೆ’ ಎನ್ನಲೋ?
‘ಅಂಗಾಂಗ ದಾನ’ ನೀಡುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಅಪಘಾತ ಮೊದಲಾದ ಕಾರಣಗಳಿಂದ ಮೃತ ಪಟ್ಟವರ ಅಂಗಾಂಗಗಳನ್ನು ಅವರ ಸಂಬಂಧಿಗಳ ಒಪ್ಪಿಗೆಯೊಂದಿಗೆ ಪಡೆಯುವುದು ಕೂಡಾ ದಾನ. ಒಬ್ಬ ವ್ಯಕ್ತಿಯ ಅಂಗಗಳನ್ನು ದಾನ ಮಾಡಿದರೆ ಕನಿಷ್ಠ ಎಂಟು ಜೀವಗಳನ್ನು ಉಳಿಸಬಹುದಂತೆ. ಅಂಗಗಳು ಆರೋಗ್ಯಕರವಾಗಿದ್ದರೆ ಮುಖ್ಯವಾಗಿ ಹೃದಯ, ಯಕೃತ್ತು, ಮೂತ್ರಪಿಂಡಗಳು, ಮೇದೋಜ್ಜೀರಕ ಗ್ರಂಥಿ, ಕರುಳು..ಗಳನ್ನು ದಾನ ಮಾಡಬಹುದು. ನಿಜಾರ್ಥದಲ್ಲಿ ಇದು ‘ಮಹಾದಾನ’. ಪ್ರತಿ ವರುಷ ಆಗಸ್ಟ್ 13ರಂದು ‘ವಿಶ್ವ ಅಂಗ ದಾನ ದಿನ’ ಆಚರಿಸಲಾಗುತ್ತದೆ.
ತನ್ನ ಕರ್ಣಕುಂಡಲ, ಕವಚಗಳನ್ನು ದಾನ ಮಾಡಿದ ಮಹಾಭಾರತದ ‘ಕರ್ಣ’ನು ಜೀವನಪೂರ್ತಿ ದಾನ ಮಾಡುತ್ತಾ ‘ದಾನಶೂರ’ನಾದ. ಸ್ವಲ್ಪ ಅವನನ್ನು ತಿಳಿಯೋಣ.
ಕರ್ಣ : ಕುಂತಿಭೋಜನ ಸಾಕು ಮಗಳು ‘ಕುಂತಿ’ಯು ದೂರ್ವಾಸ ಮಹರ್ಷಿಗಳನ್ನು ಭಕ್ತಿಯಿಂದ ಪೂಜಿಸಿದಳು. ಸೇವೆಯಿಂದ ಪ್ರಸನ್ನರಾಗಿ “ನೀನು ಯಾವ ದೇವನನ್ನು ಮಂತ್ರಪೂರಿತವಾಗಿ ಆಹ್ವಾನಿಸುತ್ತಿಯೋ ಆಯಾ ದೇವತೆಯಿಂದ ಪುತ್ರರು ಜನಿಸುವರು,” ವರವನ್ನಿತ್ತರು, ಮಂತ್ರವನ್ನು ಉಪದೇಶಿಸಿದರು.
ಇನ್ನೂ ಕನ್ಯಾವಸ್ಥೆಯಲ್ಲಿರುವ ಕುಂತಿಗೆ ಬಾಲಬುದ್ಧಿ ಜಾಗೃತವಾಯಿತು. ಮಂತ್ರವನ್ನು ಉಚ್ಚರಿಸಿ ಸೂರ್ಯನನ್ನು ಸಂಕಲ್ಪಿಸಿದಳು. ಸೂರ್ಯದೇವ ಪ್ರತ್ಯಕ್ಷನಾದ! ಕುಂತಿಗೆ ದಿಗಿಲಾಯಿತು. ಸೂರ್ಯನಿಂದ ಪುತ್ರನನ್ನು ಪಡೆದಳು. ಭಯದಿಂದ ಶಿಶುವನ್ನು ಪೆಟ್ಟಿಗೆಯೊಳಗಿರಿಸಿ ನದಿಯಲ್ಲಿ ತೇಲಿಬಿಟ್ಟಳು.
ತೇಲಿ ಬಂದ ಪೆಟ್ಟಿಗೆಯು ಸೂತನಾದ ಅಧಿರಥನಿಗೆ ವಶವಾಯಿತು. ಈತನ ಮಡದಿ ರಾಧೆ. ಕರ್ಣಕುಂಡಲ, ಕವಚದಿಂದ ಶೋಭಿಸುತ್ತಿದ್ದ ಶಿಶುವಿಗೆ ‘ವಸುಷೇಣ’ನೆಂದು, ರಾಧೆಯಿಂದ ಪಾಲಿತನಾದುದರಿಂದ ‘ರಾಧೇಯ’ನೆಂದು ಹೆಸರಾಯಿತು. ಮುಂದೆ ಪರಶುರಾಮರಲ್ಲಿ ಬ್ರಾಹ್ಮಣನೆಂದು ಸುಳ್ಳು ಹೇಳಿ ವಿದ್ಯೆ ಕಲಿತುದರಿಂದ ಶಾಪಗ್ರಸ್ತನಾದ.
ಬಲದಲ್ಲಿ ಸಿಂಹಸದೃಶ, ವೀರ್ಯದಲ್ಲಿ ವೃಷಭ, ಪರಾಕ್ರಮದಲ್ಲಿ ಗಜೇಂದ್ರ, ಪ್ರಕಾಶದಲ್ಲಿ ಸೂರ್ಯ, ಕಾಂತಿಯಲ್ಲಿ ಚಂದ್ರ, ತೇಜಸ್ಸಿನಲ್ಲಿ ಅಗ್ನಿ, ಸಿಂಹದಂತಹ ಶರೀರ, ಸಕಲ ಗುಣ ಸಂಪನ್ನ.. ಆತನ ಗುಣಗಳು ಅಪಾರ. ಸೂರ್ಯಾರಾಧನೆ ಮತ್ತು ಬ್ರಾಹ್ಮಣರಿಗೆ ದಾನ ಕೊಡುವ ಗುಣವು ಹುಟ್ಟುಗುಣ. ದೇವೇಂದ್ರನು ಆತನ ಕವಚವನ್ನು ದಾನವಾಗಿ ಬೇಡಿದ. ಆಡಿದ ಮಾತಿನಂತೆ ದೇಹಕ್ಕೆ ಆತುಕೊಂಡಿದ್ದ ಕವಚ, ಕುಂಡಲಗಳನ್ನು ಕತ್ತರಿಸಿ ನೀಡಿ ‘ಕರ್ಣ’ನಾಗಿ ಜನಾನುರಾಗಿಯಾದ.
ಪಾಂಡವರು, ಕೌರವರ ವಿದ್ಯಾಭ್ಯಾಸ ಮುಗಿತದ ಸಂದರ್ಭದಲ್ಲಿ ಏರ್ಪಟ್ಟ ಪರೀಕ್ಷಾ ರಂಗಕ್ಕೆ ವಸುಷೇಣನ ಪ್ರವೇಶವಾಯಿತು. ’ಧನುರ್ವಿದ್ಯೆಯಲ್ಲಿ ಅರ್ಜುನನನ್ನು ಸೋಲಿಸುತ್ತೇನೆ’ ಎಂದಾಗ ಕೃಪಾಚಾರ್ಯರು ‘ನಿನ್ನ ಜಾತಿ ಯಾವುದು, ವಂಶ ಯಾವುದು, ಹೆತ್ತವರು ಯಾರು,’ ಪ್ರಶ್ನಿಸಿದರು. ವಸುಷೇಣನ ದೀನಸ್ಥಿತಿಯನ್ನು ನೋಡಿದ ಸುಯೋಧನನು ಅವನ ವ್ಯಕ್ತಿತ್ವಕ್ಕೆ ಮಾರು ಹೋಗಿ ಸ್ನೇಹಿತನನ್ನಾಗಿ ಸ್ವೀಕರಿಸಿದ. ಅಂಗರಾಜ್ಯಕ್ಕೆ ಅಧಿಪತಿಯನ್ನಾಗಿ ಘೋಷಿಸಿದ.
‘ನಿನ್ನ ಉಪಕಾರಕ್ಕೆ ಹೇಗೆ ಪ್ರತ್ಯುಪಕಾರ ಮಾಡಲಿ’ ಕರ್ಣನ ಕೃತಜ್ಞತಾ ನುಡಿಗೆ ಸುಯೋಧನನು ‘ನಿನ್ನೊಂದಿಗೆ ಅಚಲವಾದ, ಪವಿತ್ರವಾದ ಸಖ್ಯವಿರಬೇಕು.’ ಎಂದನು. ಅಲ್ಲಿಂದೀಚೆಗೆ ಅವರಿಬ್ಬರದು ಅಚಲ ಬಾಂಧವ್ಯ. ಸುಯೋಧನನ ಕಾರ್ಯ/ಅಕಾರ್ಯಗಳಿಗೆ ಬೆಂಬಲ ನೀಡಿದ. ಶಕುನಿಯ ಸಹವಾಸ ದೊರಕಿತು. ಪಾಂಡವರ ದ್ವೇಷವೇ ಬದುಕಿನ ಉಸಿರಾಯಿತು. ಮಹಾಭಾರತ ಯುದ್ಧದಲ್ಲಿ ಹೋರಾಡಿದ. ಅಧರ್ಮದ ಪಕ್ಷಪಾತಿಯಾಗಿದ್ದ ಕರ್ಣನು, ತನ್ನ ಬದುಕಿನ ಕೊನೆಯ ವರೆಗೂ ದಾನ-ಧರ್ಮಗಳನ್ನು ಮಾಡಿದ್ದರಿಂದ ‘ದಾನಶೂರ’ನೆಂಬ ನೆಗಳ್ತೆಗೆ ಪಾತ್ರನಾದ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel