ಮೈ ಕೈ ನೋವು, ಗಂಟು ನೋವು, ಸೊಂಟ ನೋವು, ಕುತ್ತಿಗೆ ನೋವು ಇತ್ಯಾದಿ ನೋವುಗಳಿಂದ ನಾನಾ ಬಗೆಯಲ್ಲಿ ಜನರು ಹಲುಬುವುದನ್ನು ಕೇಳಿದ್ದೇವೆ. ಆದರೆ ಇವೆಲ್ಲವುಗಳ ಹಿಂದೆ ಅವರ ಎಲುಬುಗಳು ಸಂಕಟ ಪಡುತ್ತಿವೆ ಎಂದು ಅವರು ತಿಳಿದಿರುವುದಿಲ್ಲ.
ಬದುಕಿನ ಎಲ್ಲಾ ಹಂತಗಳಲ್ಲೂ ಮೂಳೆಗಳ ಆರೋಗ್ಯವು ಪ್ರತಿಯೊಬ್ಬನಿಗೂ ಪ್ರಾಮುಖ್ಯವಾದದ್ದು. ಮೂಳೆಗಳು ಸವೆದು ಲಕ್ಷಣಗಳು ಕಾಣಿಸಿಕೊಳ್ಳುವ ವರೆಗೂ ಎಲ್ಲರೂ ತಮ್ಮ ಎಲುಬುಗಳು ಬಹು ಗಟ್ಟಿಯಾಗಿವೆ ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ. ಆದರೆ ಎಲುಬುಗಳನ್ನು ದೃಢವಾಗಿ ಇರಿಸಿಕೊಳ್ಳುವುದಕ್ಕೆ ಆಹಾರ ಹಾಗೂ ಜೀವನ ಪದ್ಧತಿಗೆ ಸಂಬಂಧಿಸಿದ ಹಲವಾರು ವಿಧಾನಗಳು ಇವೆ.
ಮೂಳೆಗಳು ದೇಹದ ಒಳಗಿನ ಅಂಗಾಂಗಗಳನ್ನು ರಕ್ಷಿಸುತ್ತವೆ:
ಮಾಂಸಖಂಡಗಳನ್ನು ತಮ್ಮಲ್ಲಿ ಅಂಟಿಸಿಕೊಳ್ಳುತ್ತವೆ: ಕ್ಯಾಲ್ಸಿಯಂ ಮತ್ತು ಇತರ ಲವಣಾಂಶಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುತ್ತದೆ. ಕ್ಯಾಲ್ಸಿಯಂ ಮತ್ತು ಲವಣಾಂಶಗಳು ಹಾಗೂ ವಿಟಮಿನ್ ಡಿ3 ಇರುವ ಆಹಾರ ವಸ್ತುಗಳ ಸೇವನೆ , ನಿಯಮಿತವಾದ ವ್ಯಾಯಾಮ, ಆರೋಗ್ಯಕರ ದಿನಚರಿ ಹಾಗೂ ಹವ್ಯಾಸಗಳು ನಮ್ಮ ಎಲುಬುಗಳನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತವೆ. ಸರಿಯಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದಿದ್ದರೆ, ವ್ಯಾಯಾಮ ಇರದಿದ್ದರೆ ನಮ್ಮ ಎಲುಬುಗಳು ದುರ್ಬಲ ಹಾಗೂ ಬಹುಬೇಗನೆ ಮುರಿತಕ್ಕೆ ಒಳಗಾಗುತ್ತವೆ. ಮೂಳೆಮುರಿತ ಗಳು ನೋವಿನಿಂದ ಕೂಡಿರುತ್ತವೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಅಷ್ಟೇ ಅಲ್ಲ, ಜೀವನಪೂರ್ತಿ ಉಳಿದುಕೊಳ್ಳುವಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಮಾಂಸಖಂಡಗಳ ದುರ್ಬಲತೆ ಯೊಂದಿಗೆ ಬೆನ್ನೆಲುಬಿನ ಬಾಗುವಿಕೆ ಯಂತಹ ವಿಕೃತಿಗಳು ಹಾಗೂ ಮೂಳೆಗಳಲ್ಲಿ ಉಂಟಾಗುವ ರಂದ್ರಗಳು ( ಓಸ್ಟಿಯೋಪೋರೋಸಿಸ್)ದೊಡ್ಡದಾದ ಸಮಸ್ಯೆಯನ್ನು ಹುಟ್ಟುಹಾಕುತ್ತವೆ. ಸಂಧಿಗಳು ದುರ್ಬಲಗೊಂಡು , ಬಹುಬೇಗನೆ ಸಂಧಿವಾತದಂತಹ ನಿರಂತರ ತೊಂದರೆ ಕೊಡುವ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಅತ್ಯಂತ ಸಾಮಾನ್ಯವಾದ ಓಸ್ಟಿಯೋಪೋರೋಸಿಸ್ ತೊಂದರೆಯಿಂದ ಎಲುಬುಗಳು ಶೀಘ್ರವಾಗಿ ಮುರಿತಕ್ಕೆ ಒಳಗಾಗುತ್ತವೆ. ಮಣಿಗಂಟು, ಬೆನ್ನೆಲುಬು ಹಾಗೂ ಸೊಂಟದಲ್ಲಿ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.
ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವರ್ಗದ ಜನರಲ್ಲಿ ಇದು ಸಾಮಾನ್ಯ. ಇವರಲ ಪೌಷ್ಟಿಕ ಅಂಶಗಳ ಕೊರತೆಯಿಂದ ಮೂಳೆಗಳು ಸಪೂರಗೊಳ್ಳುವುದು, ಮೂಳೆಗಳಲ್ಲಿ ರಂದ್ರಗಳು ಉಂಟಾಗುವುದು. ಪುರುಷರಿಗಿಂತಲೂ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಕೆಳ ಬಡವರ್ಗದ ಮಹಿಳೆಯರು ಕ್ಯಾಲ್ಶಿಯಂ ಮತ್ತು ಪ್ರೋಟೀನ್ ಗಳು ಕಡಿಮೆಯಾಗಿರುವ ಆಹಾರವಸ್ತುಗಳನ್ನು ಸೇವಿಸುತ್ತಾರೆ. ಆಸ್ಪತ್ರೆಗಳ ವರದಿಗಳ ಪ್ರಕಾರ ಇಂತಹ ಮಹಿಳೆಯರು ಸಣ್ಣ ಪ್ರಾಯದಲ್ಲಿ ಸೊಂಟದ ಎಲುಬಿನ ಮುರಿತಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಾರೆ. ಮೂವತ್ತರಿಂದ ಅರುವತ್ತು ವರ್ಷದವರೆಗಿನ ಮಹಿಳೆಯರು ಇದೇ ರೀತಿಯ ತೊಂದರೆಗೆ ಹೆಚ್ಚಾಗಿ ಸಿಲುಕುತ್ತಾರೆ. ಕಡಿಮೆ ಕ್ಯಾಲ್ಸಿಯಂ ಸೇವನೆಯ ಜೊತೆಗೆ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸೆಗಳು, ಸ್ಟಿರಾಯ್ಡ್ ನಂತಹ ಔಷಧಗಳ ಸೇವನೆ ಕೂಡಾ ಈ ಸಮಸ್ಯೆಗಳನ್ನು ಉಂಟುಮಾಡಬಹುದು.
ವಿಟಮಿನ್ ಡಿ ಕ್ಯಾಲ್ಸಿಯಂನ್ನು ಜೀರ್ಣಾಂಗವ್ಯೂಹ ದಲ್ಲಿ ರಕ್ತಗತ ಗಳಿಸುವುದನ್ನು ಮಾಡುತ್ತದೆ. ಆದುದರಿಂದ ವಿಟಮಿನ್ ಡಿ ಕೊರತೆಯು ಎಲುಬುಗಳನ್ನು ದುರ್ಬಲಗೊಳಿಸುತ್ತದೆ. ಆದಕಾರಣ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ವಿಟಮಿನ್ ಡಿ ಎಲುಬುಗಳ ಆರೋಗ್ಯಕ್ಕೆ ಸಹಕಾರಿ. ಇವುಗಳೇ ಅಲ್ಲದೆ, ರಕ್ತನಾಳಗಳ ಪೆಡಸುಗಟ್ಟುವಿಕೆ, ಹೃದಯದ ರೋಗಗಳು, ಪಕ್ಷಾಘಾತ, ಬೊಜ್ಜು, ಸಕ್ಕರೆ ಕಾಯಿಲೆ, ರುಮಟಾಯ್ಡ್ ಆರ್ಥ್ರೈಟಿಸ್, ಕರುಳಿನ ರೋಗಗಳು ಎಲುಬುಗಳನ್ನು ದುರ್ಬಲಗೊಳಿಸುವುದಕ್ಕೆ ಕಾರಣವಾಗಬಹುದು.
ಧೂಮಪಾನ, ಮಧ್ಯಪಾನ, ಮಾದಕ ದ್ರವ್ಯ ವ್ಯಸನ, ಔಷಧಗಳ ದುರ್ಬಳಕೆ ಗಳಿಂದ ಕೂಡಾ ಮೂಳೆಗಳು ಸತ್ವಹೀನ ವಾಗಬಹುದು. ಎಕ್ಸ್ ರೇ , ಎಲುಬಿನ ಲವಣಾಂಶಗಳ ಪರೀಕ್ಷೆ ( ಬೋನ್ ಮಿನರಲ್ ಡೆನ್ಸಿಟಿ ಟೆಸ್ಟ್) ಇತ್ಯಾದಿ ತಪಾಸಣೆಗಳ ಮೂಲಕ ಎಲುಬಿನ ಸ್ಥಿತಿ ಗತಿಗಳನ್ನು ಅವಲೋಕಿಸಬಹುದು. ರಕ್ತ ಪರೀಕ್ಷೆಯ ಮೂಲಕ ರಕ್ತದಲ್ಲಿನ ಕ್ಯಾಲ್ಸಿಯಂ, ವಿಟಮಿನ್ ಡಿ, ಆಲ್ಕಲೈನ್ ಫಾಸ್ಪೇಟೇಸ್ ಅಂಶಗಳ ಪ್ರಮಾಣಗಳನ್ನು ಅಳೆದು, ರೋಗಿ ಪರೀಕ್ಷೆ ಯೊಂದಿಗೆ ತುಲನೆ ಮಾಡುವುದರ ಮೂಲಕ ತೊಂದರೆಗಳನ್ನು, ಅವುಗಳ ಕಾರಣಗಳನ್ನು ಪತ್ತೆಹಚ್ಚಬಹುದು. ಬೇರೆ ಕಾಯಿಲೆಗಳ ಕಾರಣದಿಂದ ಎಲುಬಿನ ತೊಂದರೆಗಳು ಕಾಣಿಸಿಕೊಂಡಿವೆಯೇ ಅಥವಾ ಯಾವುದಾದರೂ ಔಷಧಗಳು ಈ ರೀತಿಯ ಪರಿಣಾಮವನ್ನು ಬೀರಿವೆಯೇ ಎಂಬುದನ್ನು ಪರಿಶೀಲಿಸುವುದಕ್ಕೆ ಆದಷ್ಟು ಬೇಗನೆ ವೈದ್ಯರ ಬಳಿ ತೆರಳಬೇಕು.
ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು, ಹಣ್ಣು-ತರಕಾರಿಗಳನ್ನು ದಿನನಿತ್ಯ ಪ್ರಮಾಣದಲ್ಲಿ ಸೇವಿಸುವ ಆಹಾರಪದ್ಧತಿಯನ್ನು ರೂಡಿಸಿಕೊಳ್ಳಬೇಕು. ಆದರೆ ಆಹಾರದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಹಾಗೂ ಇತರ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಶರೀರಕ್ಕೆ ಪೂರೈಕೆ ಆಗದಿದ್ದಾಗ ಅವುಗಳನ್ನು ಗುಳಿಗೆಗಳ ಮೂಲಕ ಪೂರೈಸಬೇಕಾಗಬಹುದು.
ಕೆಲವೊಬ್ಬರು ವ್ಯಕ್ತಿಗಳಲ್ಲಿ ಹಾಲು ಕುಡಿದರೆ ಕಫ ಉಂಟಾಗುತ್ತದೆ, ಉಬ್ಬಸ ಉಲ್ಬಣಗೊಳ್ಳುತ್ತದೆ ಎಂಬ ತಪ್ಪು ಅಭಿಪ್ರಾಯಗಳು ಇರುವುದರಿಂದ ಹಾಲನ್ನು ಸೇವಿಸುವುದಿಲ್ಲ. ಅಂತಹ ವ್ಯಕ್ತಿಗಳಿಗೆ ಹಾಲಿನಿಂದ ಅಂತಹ ತೊಂದರೆ ಉಂಟಾಗುವುದಿಲ್ಲ ಎಂಬ ತಿಳುವಳಿಕೆಯನ್ನು ನೀಡಿ ಹಾಲನ್ನು ಸೇವಿಸುವಂತೆ ಪ್ರೇರೇಪಣೆ ಕೊಡಬಹುದು. ಇತ್ತೀಚೆಗೆ ಶಾಲೆಯೊಂದಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳು ಹಾಲನ್ನು ಕುಡಿಯುವುದೇ ಇಲ್ಲವೆಂದು ಹೇಳಿದರು. ಕಾರಣ ಮಕ್ಕಳ ಮನೆಯವರು ಹಾಲನ್ನು ಕುಡಿಯುವುದು ಬೇಡವೆಂದು ಸೂಚಿಸಿದ್ದರು. ಮಾಹಿತಿ ನೀಡಿದ ನಂತರ ವಿದ್ಯಾರ್ಥಿಗಳೆಲ್ಲರೂ ಹಾಲನ್ನು ಕುಡಿಯಲು ಆರಂಭಿಸಿದರು. ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಕಾಲು ನೋವು, ಗಂಟು ನೋವು ಇತ್ಯಾದಿಗಳು ಮಾಯವಾದವು. ಹಳ್ಳಿಯಿಂದ ಬರುವ ರೋಗಿಗಳ ಮೀನಖಂಡಗಳ ಸೆಳೆತ, ಬೆರಳುಗಳ ಮುದುಡುವಿಕೆ , ಸೊಂಟ ನೋವು, ಕುತ್ತಿಗೆ ನೋವು ಇತ್ಯಾದಿಗಳು ಅವರೆಲ್ಲರಿಗೂ ಹಾಲನ್ನು ಸೇವಿಸಲು ಹೇಳಿದ ನಂತರ ಇಲ್ಲವಾದವು. ಏಕೆಂದರೆ ಆ ಎಲ್ಲಾ ಲಕ್ಷಣಗಳು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗಿದ್ದವು. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೇರಳವಾಗಿರುವುದರಿಂದ ಎಲುಬುಗಳನ್ನು ಗಟ್ಟಿಗೊಳಿಸಲು ಅದು ನೆರವಾಯಿತು.