ಸಂಪಾಜೆ : ಜೋಡುಪಾಲ, ಮೊಣ್ಣಂಗೇರಿ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಜಲಪ್ರಳಯದ ನಂತರ ಜನರ ಬದುಕಿನ ಸ್ಥಿತಿ ಹಾಗೂ ಅಲ್ಲಿನ ಸ್ಥಿತಿಗತಿಗಳ ಬಗ್ಗೆ “ಸುಳ್ಯನ್ಯೂಸ್.ಕಾಂ” ತಂಡ ಕಳೆದ ಒಂದು ವಾರದಿಂದ ನಿರಂತರವಾಗಿ ವರದಿ ಮಾಡಿತು. ವಾಸ್ತವ ಸ್ಥಿತಿಯನ್ನು ವಿಡಿಯೋ ಸಹಿತ ತೆರೆದಿಡುವುದು ನಮ್ಮ ಉದ್ದೇಶವಾಗಿತ್ತು.
ಈಗಲೂ ಮೊಣ್ಣಂಗೇರಿ ಪ್ರದೇಶದಿಂದ ಜನರು ವಲಸೆ ಹೋಗುತ್ತಿದ್ದಾರೆ. ಮಳೆಗಾಲದ ಮುನ್ನ ಭಯ ಮುಕ್ತ ಬದುಕಿಗಾಗಿ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ. ವಾಹನಗಳಲ್ಲಿ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಕೃಷಿ ಭೂಮಿಯನ್ನು ಹಾಗೆಯೇ ಬಿಡುತ್ತಿದ್ದಾರೆ. ಇಲಾಖೆಗಳಿಂದ ಇಲ್ಲಿನ ಮನೆಗಳಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ, ಮಳೆಗಾಲದ ಮುನ್ನ ಸ್ಥಳಾಂತರವಾಗಿ ಎಂಬ ಮುನ್ಸೂಚನೆ ನೀಡಿದ್ದಾರೆ. ಈ ಬಾರಿಯ ಮಳೆಗಾಲವೂ ಅಪಾಯವಾಗುವ ಸಾಧ್ಯತೆ ಇರುವುದರಿಂದ ಸ್ಥಳಾಂತರ ಆಗಬೇಕು ಎಂದು ಮನವೊಲಿಕೆ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಕೊಡಗು ಜಿಲ್ಲಾಡಳಿತವೇ ಖುದ್ದಾಗಿ ವೀಕ್ಷಣೆ ಮಾಡಿದೆ. ಜಿಲ್ಲಾಧಿಕಾರಿಗಳ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಹಾರ ಧನ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
35 ಕೋಟಿ ಪರಿಹಾರ ವಿತರಣೆ – ಸ್ಪಷ್ಟನೆ :
ಮಳೆಹಾನಿ, ಬೆಳೆಹಾನಿ ಹಾಗೂ ಭೂಕುಸಿತದಿಂದ ಹಾನಿಗೊಳಗಾದವರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಕೊಡಗು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಕಾಫಿ ಹಾಗೂ ಸಾಂಬಾರ ಬೆಳೆಗಳ ಹಾನಿಗೆ ಹೆಕ್ಟೇರ್ ಗೆ 18 ಸಾವಿರದಂತೆ 2 ಹೆಕ್ಟೇರ್ ವರೆಗೆ ಪರಿಹಾರ , ಕೃಷಿ ಭೂಮಿಗೆ 12 ಸಾವಿರದಂತೆ 2 ಹೆಕ್ಟೇರ್ ವರೆಗೆ ಪರಿಹಾರ, ಭೂಮಿ ಕಳಕೊಂಡವರಿಗೆ ಹೆಕ್ಟೇರ್ ಗೆ 37500 ರಂತೆ 2 ಹೆಕ್ಟೇರ್ ವರೆಗೆ ಪರಿಹಾರ ಧನ ನೀಡಲಾಗಿದೆ. ಇಂದಿನವರೆಗೆ 35 ಕೋಟಿ ರೂಪಾಯಿ ಪರಿಹಾರ ಧನ ವಿತರಣೆ ಆಗಿದೆ. 34000 ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆಯಾಗಿದೆ. ಇನ್ನು 3000 ಮಂದಿಗೆ ಅರ್ಧದಷ್ಟು ವಿತರಣೆಯಾಗಿದ್ದು ಉಳಿದ ಹಣ ರವಾನೆಯಾಗಲಿದೆ. ಪರಿಹಾರ ಸಿಗದೇ ಇರುವವರು ಜಿಲ್ಲಾಡಳಿತವನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.