ಅದು ಬೇಸಿಗೆ ರಜಾ ಸಮಯ. ದೊಡ್ಡ ರಜೆ ಅಂದ ಮೇಲೆ ತಾಯಿ ಮನೆಯಲ್ಲಿ ಸ್ವಲ್ಪ ಹೆಚ್ಚು ದಿನ ಜಂಡಾ ಹೂಡುವುದು ವಾಡಿಕೆ. ಅದರಂತೆ ನಾನು, ಅಕ್ಕ ತಾಯಿ ಮನೆಯಲ್ಲಿ ರಜಾ ಮಜಾದಲ್ಲಿದ್ದೆವು. ಮನೆ ತುಂಬಾ ಗಲಗಲ ಮಾಡುತ್ತಿದ್ದ ಮೊಮ್ಮಕ್ಕಳೊಡನೆ ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ಪುಟ್ಟು ನಾಯಿ ಮರಿ ಬರಲಿದೆ ಎಂದರು ನಮ್ಮಅಮ್ಮ…..
ಮಕ್ಕಳೋ ಹುರ್ರೇ ಎಂದು ಖುಷಿಯಿಂದ ಹಾರಿದರು. ಅವುಗಳೊಡನೆ ಆಡೋ ಉತ್ಸಾಹ ಅವರಿಗೆ. ಕೂಸು ಹುಟ್ಟೋ ಮೊದಲೇ ಕುಲಾವಿ ಅಂತಾರಲ್ಲಾ ಹಾಗೇ.. ಮಕ್ಕಳೆಲ್ಲಾ ನಾಯಿ ಮರಿಗಳನ್ನು ಸ್ನಾನ ಮಾಡಿಸುವುದು ಯಾರು?ವಾಕಿಂಗ್ ಕರೆದುಕೊಂಡು ಹೋಗುವುದು ಯಾರು? ಆಟ ಆಡಿಸುವ ಸಮಯ ಯಾವುದೆಂದು ಅದಾಗಲೇ ತೀರ್ಮಾನ ಕೈಗೊಂಡಾಗಿತ್ತು.
ಇದಾಗಿ ಎರಡು ದಿನಗಳಾಗಿರಬಹುದು. ಅದೊಂದು ದಿನ ಬೆಳ್ಳಂಬೆಳಗ್ಗೆ ಮನೆ ತುಂಬಾ ಗಡಿಬಿಡಿಯ ವಾತಾವರಣ. ಇನ್ನೇನು ಬ್ರಷ್ ಮಾಡ್ಬೇಕು ಎಂದು ಕೈಯಲ್ಲಿ ಬ್ರಷ್ ಹಿಡಿದು ಕರಿಯನ್ನು(ಹಲ್ಲುಹುಡಿ) ಅಂಗೈಗೆ ಹಾಕಿದ್ದೆಅಷ್ಟರಲ್ಲಿಅಮ್ಮ “ತುಂಬಿದ ಗರ್ಭಿಣಿ ರಂಗಿ ಕಾಣಿಸ್ತಾಇಲ್ವೇ… ಎಲ್ಲಿಗೆ ಹೋಗಿದ್ದಾಳೋ ತಿಳಿಯುತ್ತಿಲ್ಲ” ಎಂದಳು ಗಾಬರಿಯಿಂದ.
“ರಂಗಿಎಲ್ಲಿ ಹೋಗಿರ್ತಾಳೆ ?. ಇಲ್ಲೇಎಲ್ಲೋರೌಂಡ್ ಹೊಡ್ಕೊಂಡು ಬರ್ಲಿಕ್ಕೆ ಹೋಗಿರಬಹುದು.ಹಸಿವಾದಾಗ ತಾನಾಗಿಯೇ ಬರ್ತಾಳೆ ಬಿಡು” ಅಂದೆ ತುಸು ಅಸಡ್ಡೆಯಿಂದ.
“ನೀನು ಸಾಕಿದ್ದಾದರೆ ಹೀಗೆ ಹೇಳುತ್ತಿದ್ದೆಯಾ..?” ಅಮ್ಮನ ಪ್ರಶ್ನೆಗೆ ನಿರುತ್ತರಳಾದೆ.
“ಛೇ.. ಎಲ್ಲೀ ಅಂತ ಹುಡುಕಲಿ. ಪಾಪ ತುಂಬು ಗರ್ಭಿಣಿ ಬೇರೆ. ರಾತ್ರೆಯೇ ಗೂಡಿನೊಳಗೆ ಹಾಕಿ ಬಿಡುತ್ತಿದ್ದರೆ ಈ ಪಚೀತಿ ಆಗುತ್ತಿರಲಿಲ್ಲ”. ಅಮ್ಮ ಚಡಪಡಿಕೆ ಮುಂದುವರೆದಿತ್ತು. ಅಂದ ಹಾಗೇ ಈ ತುಂಬು ಗರ್ಭಿಣಿ ಬೇರೆ ಯಾರೂ ಅಲ್ಲ.. ಅಮ್ಮ ಪ್ರೀತಿಯಿಂದ ಸಾಕಿದ ನಾಯಿ ರಂಗಿ.
ರಾತ್ರೆಯ ಹಿತವಾದ ನಿದ್ದೆಯಿಂದ ಎದ್ದ ಮಗಳು ಏನಾಯಿತೆಂದು ಹಾಸಿಗೆಯಲ್ಲಿ ಚುರುಟುತ್ತಾ ಮೆಲ್ಲಗೆ ಕೇಳಿದಳು. “ರಂಗಿ ಕಾಣಿಸ್ತಾ ಇಲ್ಲ ಕಣೆ” ಎಂದೆ. ನಾನು ಹಾಗೆ ಹೇಳಿದ್ದೇ ತಡ ಆಗಷ್ಟೇ ನಿದ್ದೆಯಿಂದ ಎಚ್ಚರಗೊಳ್ಳುತ್ತಿದ್ದ ಮಕ್ಕಳೆಲ್ಲರೂ ರಾಗ ಎಳೆಯಲು ಪ್ರಾರಂಬಿಸಿದರು.
ನಾಯಿ ಮರಿಯ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಇದೊಂದು ದೊಡ್ಡ ಶಾಕ್ ಆಗಿತ್ತು. ಅಮ್ಮನೇ ಕಾಣಿಸ್ತಾ ಇಲ್ಲಇನ್ನು ಮರಿ ಎಲ್ಲಿಂದ? ನಾವು ಆಡೋದು ಯಾರ ಜೊತೆ ತರ್ಕ ಬದ್ದವಾದ ಪ್ರಶ್ನೆಯೇ. ಅವರನ್ನು ಸಮಾಧಾನ ಪಡಿಸೋದಾ ಅಲ್ಲಾ ನಾಯಿ ಹುಡುಕೋದಾ. ಅಂತು ಮಕ್ಕಳನ್ನು ಪುಸಲಾಯಿಸಿ ನಾಯಿ ಹುಡುಕಲು ಪ್ರಾರಂಭ ಮಾಡಿದೆವು.
ಇವೆಲ್ಲದರ ಪರಿವೇ ಇಲ್ಲದೆ ಗೂಡಿನೊಳಗಿದ್ದ ರಾಜು, ತನ್ನ ಬಟ್ಟಲಿನ ಊಟ ಖಾಲಿ ಮಾಡಿ ರಂಗಿಯ ಊಟವನ್ನೂ ಮುಗಿಸಿ ಸಂತಸದಿಂದ ನಿದ್ದೆಗೆ ಜಾರಿತು. “ಅಯ್ಯೋ ಪಾಪಿ ನಿನಗೆ ನಿನ್ನ ಹೊಟ್ಟೆಯದ್ದೇ ಚಿಂತೆ” ಎನ್ನುತ್ತಾ ಅಮ್ಮ ಹಿಡಿ ಶಾಪ ಹಾಕಿದರು. ಅಂತು ಮನೆ ಸುತ್ತಮುತ್ತ, ತೋಟ ಎಲ್ಲಿ ಹೋಗಿ ಹುಡುಕಿದರೂ, ದುವೋ…. ದುವೋ ಎಂದುಕರೆದರೂ ರಂಗಿಯ ಪತ್ತೆಇರಲಿಲ್ಲ. ಮುಖ್ಯರಸ್ತೆಗೆ ಮನೆ ಹತ್ತಿರವಾದ್ದರಿಂದ ಎಲ್ಲೋ ಬಸ್/ಲಾರಿ ಚಕ್ರದ ಅಡಿಗೆ ಬಿದ್ದಿದ್ದರೆ. ರಾಮಾ… ಹಾಗಾಗದಿರಲಿ ಅಂದಿತು ಮನ.
“ಇಲ್ಲೇ ಹತ್ತಿರ ಇದ್ದಿದ್ದರೆ ಇಷ್ಟರಲ್ಲೇ ಬರಬೇಕಿತ್ತು”ಎನ್ನುತ್ತಾಅಪ್ಪ ಅಲ್ಲೇ ಇದ್ದ ರಸ್ಕ್ ತುಂಬಿದ ಡಬ್ಬಿಯನ್ನೊಮ್ಮೆ ಕಟಕಟ ಎಂದು ಆಡಿಸಿ ರಂಗಿ ಬರಬಹುದೇನೋ ಎನ್ನುತ್ತಾ ಆ ಕಡೆ ಈ ಕಡೆ ದೃಷ್ಟಿ ಹಾಯಿಸಿದರು.
ನಾನು ಕಣ್ಣೆದುರೇ ಇದ್ದರೂ ನನಗೆ ಕೊಡದೇ, ಆ ರಂಗಿಗೆ ರಸ್ಕ್ ನೀಡಲು ಕರೆಯುತ್ತಿದ್ದಾರಲ್ಲಾಎಂದು ಗೂಡಲ್ಲಿ ಬಂದಿಯಾಗಿದ್ದ ರಾಜುಗುರ್ ಎನ್ನುತ್ತಾ ತನಗೆ ನೀಡಿ ಎನ್ನುವಂತೆ ನಾಲಗೆ ಹೊರ ಹಾಕಿ ಕುಯ್‍ಕುಯ್‍ಎಂದಿತು.
ಇಷ್ಟೆಲ್ಲಾಆದಾಗ ಗಂಟೆ ಹನ್ನೆರಡಾಗಿತ್ತು. ಎಪ್ರಿಲ್ ತಿಂಗಳ ಬಿಸಿಲು ಅಂದರೆ ಕೇಳಬೇಕೇ? ಮಟ ಮಟ ಮಧ್ಯಾಹ್ನ ಬೇರೆ. ಇನ್ನು ಹುಡುಕಿ ಪ್ರಯೋಜನವಿಲ್ಲ. ಬಂದರೆ ಬಂದೀತು .ಇಲ್ಲದೇಇದ್ದರೆ ನಾಯಿಯನ್ನು ಕಳೆದುಕೊಂಡಂತೆ ಅಂದುಕೊಂಡೆವು ಮನೆಮಂದಿ ಎಲ್ಲಾ.
ಅಷ್ಟರಲ್ಲಿ ಕೆಲಸದ ನಿಮಿತ್ತ ಹೊರ ಹೋಗಿದ್ದಅಣ್ಣ – ಅತ್ತಿಗೆ ಮನೆಗೆ ಬಂದರು. ಮಾವನನ್ನುಕಂಡಿದ್ದೇ ತಡ ನಾಯಿ ಹುಡುಕಿಕೊಡು ಮಾವ ಎನ್ನುತ್ತಾ ಮಕ್ಕಳೆಲ್ಲಾ ದುಂಬಾಲು ಬಿದ್ದರು.ಸ್ವಲ್ಪ ಸಾವರಿಸಿಕೊಳ್ಳುತ್ತೇನೆ ಮತ್ತೆ ಹುಡುಕೋಣವಂತೆ ಎಂದ ಅಣ್ಣನನ್ನುಒಂದು ಕ್ಷಣ ಕುಳಿತುಕೊಳ್ಳಲೂ ಬಿಡದೆ “ಇವತ್ತು ರಂಗಿಯನ್ನು ನಾವು ಹುಡುಕಲೇ ಬೇಕು ಇಲ್ಲದಿದ್ದರೆ ಊಟ, ತಿಂಡಿ, ನಿದ್ದೆ ಏನೂ ಮಾಡುವುದಿಲ್ಲ” ಎನ್ನುತ್ತಾ ಮಕ್ಕಳಿಂದ ಮುಷ್ಕರ ಪ್ರಾರಂಭವಾಯಿತು.
ಇದೊಳ್ಳೆ ಪಚೀತಿ ಆಯಿತಲ್ಲಾ.. ಅಂದುಕೊಂಡು ರಂಗಿಗಾಗಿ ಹುಡುಕಾಡಿದ ವಿವರವನ್ನು ಮಕ್ಕಳಿಂದ ಪಡೆದುಕೊಂಡಅಣ್ಣ. “ನೀವೇನೂ ಮಂಡೆಬಿಸಿ ಮಾಡ್ಕೋಬೇಡಿ ರಂಗಿ ಹುಡುಕುವ ಜವಾಬ್ದಾರಿ ನನ್ನದು”ಎನ್ನುವ ಆಶ್ವಾಸನೆ ಮಾವನಿಂದ ಬರಲು ಮಕ್ಕಳಲ್ಲಿ ತುಸು ಹುಮ್ಮಸ್ಸು ಮೂಡಿತು.ಮಾವನ ಹಿಂದೆ ಹೊರಟಿತು ಮಕ್ಕಳ ಸೈನ್ಯ.
ತೆಂಗಿನಗಿಡ ನೆಟ್ಟಿದ್ದಗುಂಡಿಯ ಅಕ್ಕ ಪಕ್ಕ ರಂಗಿ ಸುಳಿಯುತ್ತಿದ್ದನ್ನು ಗಮನಿಸಿದ್ದ ಅಣ್ಣ, “ಬನ್ನಿ ನಾವೆಲ್ಲಾಅಲ್ಲಿ ಹೋಗಿ ನೋಡೋಣ “ಎಂದ. ಕೂಡಲೇ ಮಕ್ಕಳೆಲ್ಲಾ ಹೋ ಎನ್ನುತ್ತಾ ಮಾವನ ಹಿಂದೆ ಓಡಿದರು.ಅಂತು ಮಕ್ಕಳ ಕಿರಿಕಿರಿ ನಮ್ಮಿಂದ ಅಣ್ಣನಿಗೆ ವರ್ಗಾಯಿಸಿ ನಾವು ನೆಮ್ಮದಿಯಿಂದ ಒಳ ನಡೆದೆವು. ಇದಾಗಿ ಸ್ವಲ್ಪ ಹೊತ್ತಿಗೆ ಮಕ್ಕಳೆಲ್ಲಾ ಖುಷಿಯಿಂದ ಬೊಬ್ಬೆ ಹಾಕುತ್ತ ನಮ್ಮ ರಂಗಿಗೆ ಪುಟಾಣಿ ಪಾಪುಗಳು ಹುಟ್ಟಿವೆ ಎನ್ನುತ್ತಾ ಕಿರುಚಾಡ ತೊಡಗಿದರು. ಅಮ್ಮನ ಮುಖ ಅರಳಿತ್ತು.
ನಾಯಿ ಮರಿಗಳನ್ನು ತೋರಿಸುವ ಉತ್ಸಾಹದಲ್ಲಿ ಮಕ್ಕಳೆಲ್ಲಾ ನಮ್ಮನ್ನು ಕರೆದುಕೊಂಡು ತೆಂಗಿನ ಗಿಡವಿದ್ದ ಜಾಗಕ್ಕೆ ಬಂದರು. “ಅಯ್ಯೋ ಈ ಉರಿ ಬಿಸಿಲಲ್ಲಿ ಇಲ್ಲಿಗೇಕೆ ಮಕ್ಕಳೆ ?”ಎಂದರು ಅಮ್ಮ. “ಅಜ್ಜಿರಂಗಿ ಮರಿ ಇಟ್ಟಿರೋದೇ ಇಲ್ಲಿ”ಎನ್ನುತ್ತಾ ತೋರಿಸಿದಳು ಅಕ್ಕನ ಹಿರಿಮಗಳು. ಎಲ್ಲಿಎಲ್ಲಿಎಂದು ನಾವೆಲ್ಲಾ ಕುತ್ತಿಗೆ ಉದ್ದ ಮಾಡಿ ನೋಡಿದ್ದೇ ನೋಡಿದ್ದು.
ಅಲ್ಲಿ ಕಾಣಿಸ್ತಾ ಇದೆಯಲ್ಲಾ… ದೊಡ್ಡದಾದ ಗುಹೆ ಯೊಳಗೆ ನಮ್ಮ ರಂಗಿ ಇದ್ದಾಳೆ ಎಂದರು ಮಕ್ಕಳು. ಸರಿಯಾಗಿ ಗಮನಿಸಿ ನೋಡಿದಾಗ ರಂಗಿ ತನ್ನೆರಡು ಮರಿಗಳನ್ನು ಅವುಚಿಕೊಂಡು ಮಲಗಿದ್ದುಕಂಡಿತು. ನಮ್ಮನ್ನೆಲ್ಲಾ ಕಾಣುತ್ತಲೇ ತಾನು ತಾಯಿಯಾಗಿದ್ದೇನೆ ಎನ್ನುವ ಹರುಷವನ್ನು ಕಣ್ಣುಗಳೆರಡನ್ನೂ ಪಿಳಿಪಿಳಿ ಮಾಡುತ್ತಾ ತೋರ್ಪಡಿಸಿತು ಆ ಮೂಖ ಪ್ರಾಣಿ.
ತಾನೇ ಸಿದ್ದ ಪಡಿಸಿದ ದೊಡ್ಡ ಗುಹೆಯೊಳಗೆ ಮರಿ ಇಟ್ಟಿದೆಯಲ್ಲಾ ರಂಗಿ.. ಅಚ್ಚರಿಯಾಯಿತು. ನಾವು ಏನೂ ತಿಳಿಯದ ಪ್ರಾಣಿ ಎಂದುಕೊಂಡರೆ, ತಾನು ಮರಿ ಇಡುವ ಕೆಲವು ದಿನಗಳ ಮೊದಲೇ ರಂಗಿ ತನಗಾಗಿ ಬಾಣಂತಿ ರೂಮ್ ತಯಾರು ಮಾಡಿತ್ತು. ಕರುಳ ಕುಡಿಯ ಮೇಲಿನ ಮಮಕಾರ ಜಗತ್ತಿನ ಪ್ರತಿ ಜೀವರಾಶಿಯಲ್ಲೂ ಜಾಗೃತವಾಗಿರುವುದು ಒಂದು ಅದ್ಭುತ ಸತ್ಯವೇ ಸರಿ.
ಅಂತು ರಂಗಿ ಮರಿಯೊಡನೆ ಸಿಕ್ಕಿದ ಖುಷಿ ಮನೆಮಂದಿಗೆಲ್ಲಾ. ಮಕ್ಕಳೂ ತಮ್ಮ ಮುಷ್ಕರ ಅಂತ್ಯ ಗೊಳಿಸಿ ಹೊಟ್ಟೆ ತುಂಬಾ ಊಟ ಮಾಡಿ ಆಟ ಆಡಲು ಪ್ರಾರಂಬಿಸಿದರು. ದಿನವಿಡೀ ತನ್ನ ಮರಿಗಳಿಗೆ ಹಾಲುಣಿಸುತ್ತಾ ಅವುಗಳ ಆರೈಕೆಯಲ್ಲಿ ತೊಡಗಿತು ರಂಗಿ. ಕೆಲವು ದಿನಗಳ ನಂತರ ರಂಗಿ ತನ್ನ ಒಂದು ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಗೂಡಿನೊಳಗೆ ಸೇರಿತು. ಯಾಕೋ ಉಲ್ಲಾಸದಿಂದ ಇದ್ದಂತಿರಲಿಲ್ಲ ಅದರ ಮುಖ. ನೋಡಿದರೆ ಇನ್ನೊಂದು ಮರಿ ಕಾಣಿಸಲಿಲ್ಲ. ಬಹುಷ: ಪೆರ್ಗುಡೆಗೆ (ಹೆಗ್ಗಣ) ಆಹಾರವಾಗಿರಬೇಕು ಎಂದರು ಅಮ್ಮ ಬೇಸರದಲ್ಲಿ.
ಛೇ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ತನ್ನಒಂದು ಮರಿ ಕಳೆದುಕೊಂಡಿತಲ್ಲಾ ರಂಗಿ ಎಂದು ಮರುಕವಾಯಿತು. ಮಕ್ಕಳೂ ನೆನಪಾದಾಗಲೆಲ್ಲಾ ಇನ್ನೊಂದು ಮರಿಯೂ ಬದುಕಿದ್ದರೆ ಒಳ್ಳೆದಿತ್ತು ಎನ್ನುತ್ತಾ ತಮ್ಮಅನುಕಂಪವನ್ನು ತೋರಿಸಿದರು. ಒಂದೆರಡು ದಿನಗಳಲ್ಲಿ ರಂಗಿಯೂ ಎಲ್ಲವನ್ನೂ ಮರೆತು ಸಹಜ ಸ್ಥಿತಿಗೆ ಮರಳಿತು. ಎಲ್ಲರಂತೆ….
# ವಂದನಾರವಿ.ಕೆ.ವೈ.ವೇಣೂರು