ಸುಳ್ಯ: ಒಂದು ಎಕ್ರೆ ಸ್ಥಳದಲ್ಲಿ ಬೆಳೆದು ನಿಂತು ಹಸಿರು ಸೂಸಿ ತಂಪನ್ನೆರೆಯುವ ವಿವಿಧ ಜಾತಿಯ ಮರಗಳು, ಮನಮೋಹಕ ತಾವರೆ ಕೊಳ, ಅಪರೂಪದ ಬಿದಿರು ಮನೆ, ಉಯ್ಯಾಲೆ. ಬೆಂಕಿಯಲ್ಲಿ ಕಾದ ಕಾವಲಿಯಂತೆ ಉರಿಯುತ್ತಿರುವ ಡಾಂಬರು ರಸ್ತೆ ಬದಿಯಲ್ಲಿ ತಂಪಾದ ಗಾಳಿಯನ್ನೂ, ಹಿತವಾದ ವಾತಾವರಣವನ್ನೂ ಜೊತೆಗೆ ಒಂದಿಷ್ಟು ಸೊಬಗನ್ನೂ ನೀಡುವ ಈ ಹಸಿರ ತಾಣ ಯಾವುದೋ ರೆಸಾರ್ಟ್‍ನ ವರ್ಣನೆಯಲ್ಲ. ಇದು ಸುಳ್ಯ-ಸುಬ್ರಹ್ಮಣ್ಯ ರಸ್ತೆಯ ಬದಿಯಲ್ಲಿ ತಳೂರಿನಲ್ಲಿ ಕಂಡು ಬರುವ ಚಿಕ್ಕದೊಂದು ಕಬ್ಬಿನ ಜ್ಯೂಸ್ ಅಂಗಡಿಯ ಸುತ್ತಲ ಪರಿಸರ.
ಸುಳ್ಯ-ಸುಬ್ರಹ್ಮಣ್ಯ ರಸ್ತೆಯಲ್ಲಿ ಪ್ರಯಾಣಿಸುವವರನ್ನು ಕೈಬೀಸಿ ಕರೆಯುವ ಈ ತಾಣದಲ್ಲಿ ಗಾಡಿ ಇಳಿದರೆ ಒಂದು ಕಬ್ಬಿನ ಜ್ಯೂಸ್ ಕುಡಿಯುವುದರ ಜೊತೆಗೆ ಕಡು ಬೇಸಿಗೆಯ ಉರಿ ಸೆಕೆಯಿಂದ ಮುಕ್ತಿಯನ್ನೂ ಪಡೆಯಬಹುದು. ಕಬ್ಬಿನ ಜ್ಯೂಸ್‍ನ ಸಿಹಿ ಸವಿಯುವುದರ ಜೊತೆಗೆ ಪ್ರಕೃತಿಯ ಸೊಬಗಿನ ಸವಿ ಉಚಿತ ಎಂಬುದು ಇಲ್ಲಿನ ವಿಶೇಷತೆ.
ಈ ಜ್ಯೂಸ್ ಅಂಗಡಿಯ ಮಾಲಕ ಸತ್ಯ ತಳೂರು ಒಬ್ಬ ಅಪ್ಪಟ ಪರಿಸರ ಪ್ರೇಮಿ. ಎಲ್ಲೆಡೆ ಹಸಿರನ್ನೂ, ಮರಗಳನ್ನೂ ಕಡಿದುರುಳಿಸುವ ಇಂದಿನ ದಿನಗಳಲ್ಲಿ ಹಸಿರಿನ ಉಸಿರಿಲ್ಲದೆ ಎಲ್ಲೆಡೆ ಜನರು ಬೇಸಿಗೆಯ ಬೇಗುದಿಯಲ್ಲಿ ಬೆಂದು ಹೋಗುತ್ತಿರುವ ಸಂದರ್ಭದಲ್ಲಿ ಸತ್ಯ ಮಾತ್ರ ತನ್ನೆಲ್ಲಾ ಪರಿಸರ ಪ್ರೇಮವನ್ನೂ ತನ್ನ ಅಂಗಡಿಯ ಸುತ್ತ ಧಾರೆಯೆರೆದು ಹಸಿರಿನ ಲೋಕವನ್ನು ಸೃಷ್ಠಿಸಿದ್ದಾರೆ. ಒಂದು ಎಕ್ರೆ ಸ್ಥಳದಲ್ಲಿ ಪೂರ್ತಿಯಾಗಿ ವೈವಿಧ್ಯ ತಳಿಯ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಇಲ್ಲಿ 40 ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದ್ದು ಒಂದೊಂದು ಮರದ ಹೆಸರನ್ನೂ ಅದರಲ್ಲಿ ಬರೆದಿಡಲಾಗಿದೆ. ಅಪರೂಪದ ಮರಗಳೇ ಅಧಿಕ. ಜೊತೆಗೆ ಔಷಧೀಯ ಸಸ್ಯಗಳನ್ನೂ, ಹಣ್ಣಿನ ಮರಗಳನ್ನೂ ಬೆಳೆಯಲಾಗಿದೆ. ಈ ಮರಗಳ ಮಧ್ಯೆ ಅಲ್ಲಲ್ಲಿ ತಾವರೆ ಕೊಳಗಳನ್ನು ನಿರ್ಮಿಸಲಾಗಿದ್ದು ಕಡು ಬೇಸಿಗೆಯಲ್ಲೂ ಸೊಂಪಾಗಿ ಅರಳಿರುವ ತಾವರೆ ನಳ ನಳಿಸುತಿದೆ. ಇಲ್ಲಿನ ಆಕರ್ಷಕ ಬಿದಿರಿನ ಮನೆ ಇನ್ನೊಂದು ಹೈಲೈಟ್ಸ್. ಬೆಳೆದಿರುವ ಹಳದಿ ಬಿದಿರಿನ ಮೇಲೆಯೇ ಮನೆಯೊಂದನ್ನು ನಿರ್ಮಿಸಿದ್ದಾರೆ. ಅದಕ್ಕೆ ಏರಲು ಏಣಿಯನ್ನೂ ನಿರ್ಮಿಸಿದ್ದಾರೆ. ಮಕ್ಕಳು, ದೊಡ್ಡವರೂ ಬಿದಿರ ಮನೆಯನ್ನು ಹತ್ತಿ ಇಳಿದು ಹೋಗುತ್ತಾರೆ. ತೂಗುಯ್ಯಾಲೆಯನ್ನು ಏರಿಯೂ ಪ್ರವಾಸಿಗರು ತಲೆದೂಗುತ್ತಾರೆ. ಅಲ್ಲದೆ ಮರದ ಬಿದಿರಿನ ವಿವಿಧ ಶಿಲ್ಪಗಳು, ಹಳೆಯ ಕಾಲದ ವಸ್ತುಗಳು, ಪರಿಸರ ಸಂರಕ್ಷಣೆಯ ಸಂದೇಶ ನೀಡುವ ಚಿತ್ರಗಳು ಅಲ್ಲಲ್ಲಿ ಸ್ಥಾಪಿಸಲಾಗಿದೆ. ಒಟ್ಟಿನಲ್ಲಿ ಸತ್ಯ ತಳೂರು ಅವರ `ಶಿಲ್ಪಂ ಡೇ ಸ್ಪಾಟ್’ ಯಾವ ಮ್ಯೂಸಿಯಂ ಗೂ ಕಮ್ಮಿಯಿಲ್ಲ ಎಂಬಂತೆ ತಲೆ ಎತ್ತಿ ನಿಂತಿದೆ.
ಪ್ರತಿ ದಿನ ಬೆಳಗ್ಗಿನಿಂದ ಸಂಜೆಯವರೆಗೂ 250 ಕ್ಕೂ ಹೆಚ್ಚು ಮಂದಿ ಇಲ್ಲಿಗೆ ಬರುತ್ತಾರೆ. ರಸ್ತೆಯಲ್ಲಿ ಪ್ರಯಾಣಿಸುವ ಪ್ರವಾಸಿಗರು, ಸ್ಥಳೀಯರೂ ಇಲ್ಲೊಂದು ಬ್ರೇಕ್ ಹಾಕದೇ ಹೋಗುವುದಿಲ್ಲ, ಕಬ್ಬಿನ ಜ್ಯೂಸ್ ಸವಿಯುವುದರ ಜೊತೆಗೆ ಗಂಟೆ ಗಟ್ಟಲೆ ಇಲ್ಲಿಯ ತಂಪು ಪರಿಸರದಲ್ಲಿ ಕಾಲ ಕಳೆದು ರಿಫ್ರೆಶ್ ಆಗಿ ಹಿಂತಿರುತ್ತಾರೆ.
ಪರಿಸರ ಸಂರಕ್ಷಣೆಯ ಪಾಠ:
ತನ್ನ ವೃತ್ತಿ ಜೀವನದ ಜೊತೆಗೆ ಒಂದಿಷ್ಟು ಪರಿಸರ ಪ್ರೇಮವನ್ನೂ ತೋರ್ಪಡಿಸುವ ಪುಟ್ಟ ಪ್ರಯತ್ನ ಇವರದ್ದು. ಪರಿಸರವನ್ನು ಹೇಗೆ ರಕ್ಷಿಸಬಹುದು ಮತ್ತು ಪರಿಸರದ ಜೊತೆಯಲ್ಲಿ ನಾವು ಹೇಗೆ ಸಂತೋಷವಾಗಿರಬಹುದು ಎಂಬ ಸಂದೇಶವನ್ನು ಮತ್ತು ನಿಶ್ಯಬ್ದ ಪಾಠವನ್ನೂ ಇಲ್ಲಿಗೆ ಬರುವ ಮಕ್ಕಳು ಸಾರ್ವಜನಿಕರು ಕಲಿತು ಹೋಗುತ್ತಾರೆ. ಮಳೆಗಾಲದಲ್ಲಿ ತನ್ನ ಜಾಗದಲ್ಲಿ ಕಟ್ಟಗಳನ್ನೂ, ಹೊಂಡಗಳನ್ನೂ ನಿರ್ಮಿಸಿ ಇವರು ನೀರಿಂಗಿಸುವ ಯೋಜನೆಯನ್ನು ಮಾಡುತ್ತಾರೆ. ನೀರಿಂಗಿಸಲು ಪ್ರಾರಂಭ ಮಾಡಿದ ಮೇಲೆ ತನ್ನ ಜಾಗದಲ್ಲಿ ಕಡು ಬೇಸಿಗೆಯಲ್ಲೂ ನೀರಿನ ಅಭಾವ ಕಂಡು ಬಂದಿಲ್ಲ ಎಂಬುದು ಸತ್ಯ ಅವರ ಅನುಭವದ ಮಾತು. ಮಕ್ಕಳಿಗೆ ಪರಿಸರದ ಪಾಠ ತಿಳಿಸಲು ಶಿಬಿರವನ್ನೂ ಇವರು ಹಮ್ಮಿಕೊಳ್ಳುತ್ತಾರೆ.
ತನ್ನ ಈ ಕಾರ್ಯದ ಬಗ್ಗೆ ಮಾತನಾಡುದ ಸತ್ಯ ತಳೂರು, “ಒಂದು ಹವ್ಯಾಸಕ್ಕಾಗಿ ತನ್ನ ಜ್ಯೂಸ್ ಅಂಗಡಿ ಸುತ್ತ ಮರ ಗಿಡಗಳನ್ನು ನೆಟ್ಟು ಬೆಳೆಸಲು ಆರಂಭಿಸಿದ್ದು. ಇಲ್ಲಿಗೆ ಬರುವವರು ಈ ಪರಿಸರವನ್ನು ಬಹಳ ಚೆನ್ನಾಗಿ ಆಸ್ವಾದಿಸಿ ಖುಷಿ ಪಡುತ್ತಾರೆ. ಮಕ್ಕಳಂತೂ ನಕ್ಕು ನಲಿದು ಹೋಗುತ್ತಾರೆ. ಇದನ್ನು ನೋಡುವುದೇ ಒಂದು ದೊಡ್ಡ ಖುಷಿ” ಎಂದು ಹೇಳುತ್ತಾರೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…