ಸರಕಾರವು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಇದು ತಲಪುವುದು ಕಡಿಮೆಯಾಗುತ್ತದೆ. ಅದರಲ್ಲೂ ಮೆಸ್ಕಾಂ ಕೆಲಸದ ಬಗ್ಗೆ ಪ್ರತೀ ಬಾರಿ ಎಲ್ಲಾ ಕಡೆ ಅತೃಪ್ತಿಯೇ ಹೆಚ್ಚಿರುತ್ತದೆ. ಅಂತಹದ್ದರಲ್ಲಿ ಸುಳ್ಯ ತಾಲೂಕಿನಲ್ಲಿ ಮೆಸ್ಕಾಂನ ಈ ಕಾರ್ಯ ಗಮನಸೆಳೆದಿದೆ. ಇದೇನು? ಸರಕಾರದ ಯೋಜನೆ ಸರಿಯಾಗಿ ಜಾರಿಯಾಗಿದೆ. ವಿದ್ಯುತ್ ತಂತಿ ಹಾದುಹೋಗದ ಮನೆಗಳಿಗೆ ಮೆಸ್ಕಾಂ ವತಿಯಿಂದ ಸೋಲಾರ್ ಬೆಳಕು ಹರಿಸಲಾಗಿದೆ. ಇಂತಹದ್ದೊಂದು ಯೋಜನೆ ಇದೆ ಎಂದು ಹಲವರಿಗೆ ಮಾಹಿತಿಯೇ ಇರಲಿಲ್ಲ..!. ಈ ಬಗ್ಗೆ ನಮ್ಮ ಇಂದಿನ ಬೆಳಕು….
ಸುಳ್ಯ: ಸುತ್ತಲೂ ಅರಣ್ಯ ಸುತ್ತುವರಿದು ವಿದ್ಯುತ್ ಲೈನ್ ಎಳೆಯಲು ಸಾಧ್ಯವಿಲ್ಲದ ಗಡಿ ಗ್ರಾಮಗಳ ಮನೆಗಳಿಗೆ ಸೋಲಾರ್ ದೀಪವನ್ನು ಅಳವಡಿಸಿದ ಮೆಸ್ಕಾಂ ಹತ್ತಾರು ಮಂದಿಯ ಬಾಳಿಗೆ ಸೌಭಾಗ್ಯದ ಬೆಳಕು ಹರಿಸಿದೆ.
ಸುತ್ತಲೂ ಅರಣ್ಯ ಆವರಿಸಿರುವ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಅತಂತ್ರವಾಗಿರುವ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಮಾಣಿಮರ್ದು, ಬಟ್ಟಂಗಾಯ, ದೇವಕಜೆ, ಚೆರ್ನೂರು ಮತ್ತು ಕೊಚ್ಚಿಯ ಮನೆಗಳಿಗೆ ಕೇಂದ್ರ ಸರಕರದ “ಸೌಭಾಗ್ಯ ಯೋಜನೆ”ಯಡಿ ಸೌರ ವಿದ್ಯುತ್ ಒದಗಿಸಿ ಈ ಪ್ರದೇಶದ ಹಲವಾರು ವರುಷದ ಬೇಡಿಕೆಗೆ ಸ್ಪಂದಿಸಿದೆ.ಈ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಅನುಷ್ಠಾನವಾಗಿದ್ದು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ 20 ಮನೆಗಳಿಗೆ ಸೌಭಾಗ್ಯ ಒದಗಿ ಬಂದಿದೆ.
ಏನಿದು ಸೌಭಾಗ್ಯ ಯೋಜನೆ:
ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಜನರ ಬಾಳಿಗೆ ಬೆಳಕು ನೀಡಲು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ನಗರ ಪ್ರದೇಶದ ವಿತರಣಾ ಜಾಲದ ಅಭಿವೃದ್ಧಿಗೆ ಐಪಿಡಿಎಸ್ ಯೋಜನೆ ಇದೆ. ಅದರಂತೆ ಸಾಂಪ್ರದಾಯಿಕ ರೀತಿಯಲ್ಲಿ ಲೈನ್ ಎಳೆದು ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲದ ಕಡೆಗಳಲ್ಲಿ ಸೋಲಾರ್ ವಿದ್ಯುತ್ ಒದಗಿಸುವ ಯೋಜನೆ `ಸೌಭಾಗ್ಯ ಯೋಜನೆ’.
ಇದರಂತೆ ಆಲೆಟ್ಟಿ ಗ್ರಾಮದ ಬಟ್ಟಂಗಾಯದಲ್ಲಿ ಆರು, ಮಾಣಿಮರ್ದುವಿನಲ್ಲಿ ಆರು, ಚೆರ್ನೂರುವಿನಲ್ಲಿ ಮೂರು, ದೇವಕಜೆಯಲ್ಲಿ ಒಂದು ಮತ್ತು ಕೊಚ್ಚಿಯಲ್ಲಿ ನಾಲ್ಕು ಸೇರಿ ಒಟ್ಟು 20 ಮನೆಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗಿದೆ. ಈ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬುದು ಹಲವಾರು ದಶಕಗಳ ಬೇಡಿಕೆಯಾಗಿತ್ತು. ಆದರೆ ಮೀಸಲು ಅರಣ್ಯದ ಮೂಲಕ ಲೈನ್ ಹಾದು ಹೋಗಬೇಕು ಮತ್ತಿತರ ಹಲವು ಸಮಸ್ಯೆಗಳಿಂದ ಇಲ್ಲಿಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಲೈನ್ ಎಳೆಯಲು ಕಷ್ಟ ಸಾಧ್ಯವಾಗಿರುವ ಪ್ರದೇಶ ಎಂದು ಪರಿಗಣಿಸಿ ಇಲ್ಲಿಗೆ ಸೌಭಾಗ್ಯ ಯೋಜನೆಯಲ್ಲಿ ಸೋಲಾರ್ ವಿದ್ಯುತ್ ಒದಗಿಸಲಾಗಿದೆ ಎನ್ನುತ್ತಾರೆ ಸುಳ್ಯ ಮೆಸ್ಕಾಂ ಇಂಜಿನಿಯರ್.
ಉಚಿತ ಸಂಪರ್ಕ:
ಸೌಭಾಗ್ಯ ಯೋಜನೆಯಲ್ಲಿ ಪ್ರತಿ ಮನೆಗೆ 40,800 ರೂ ಮೊತ್ತದ ಸೋಲಾರ್ ಉಪಕರಣಗಳನ್ನು ಉಚಿತವಾಗಿ ಅಳವಡಿಸಲಾಗಿದೆ. ಎರಡು ಸೋಲಾರ್ ಪ್ಯಾನಲ್, 75 ಎಎಚ್‍ನ ಬ್ಯಾಟರಿ, ತಲಾ ಏಳು ವ್ಯಾಟ್ಸ್ ನ ಎರಡು ಬಲ್ಬ್ ಗಳು, 20 ವ್ಯಾಟ್ಸ್ ನ ಡಿಸಿ ಫ್ಯಾನ್ ಅವಡಿಸಲಾಗಿದೆ. ಸೋಲಾರ್ ಚಾರ್ಜ್ ಕಂಟ್ರೋಲರ್, ಜಂಕ್ಷನ್ ಬಾಕ್ಸ್, ವಯರಿಂಗ್ ಉಪಕರಣಗಳು ಹೀಗೆ ಎಲ್ಲವನ್ನೂ ಉಚಿತವಾಗಿ ಅಳವಡಿಸಲಾಗಿದೆ. ಒಟ್ಟು 20 ಮನೆಗಳಿಗೆ 8.16 ಲಕ್ಷ ರೂ ವೆಚ್ಚದಲ್ಲಿ ಯೋಜನೆ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂಬುದು ನಮ್ಮ ದಶಕಗಳ ಬೇಡಿಕೆ, ಅದಕ್ಕಾಗಿನ ಪ್ರಯತ್ನವನ್ನು ಮುಂದುವರಿಸುತ್ತೇವೆ. ಇದೀಗ ಸೋಲಾರ್ ಮೂಲಕ ಮನೆಗಳಿಗೆ ಬೆಳಕು ಕೊಟ್ಟಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಈ ಪ್ರದೇಶದ ಜನರು.
486 ಮನೆಗಳಿಗೆ ವಿದ್ಯುತ್ ಸಂಪರ್ಕ:
ಗ್ರಾಮ ಪಂಚಾಯತ್ ಗಳು ಸಮೀಕ್ಷೆ ನಡೆಸಿ ನೀಡಿದ ಪಟ್ಟಿಯ ಪ್ರಕಾರ ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದ 486 ಮನೆಗಳಿಗೆ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಪ್ರಕಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಲು ಆಗದ 20 ಮನೆಗಳಿಗೆ ಸೌಭಾಗ್ಯ ಯೋಜನೆಯಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದರಿಂದ ಪಂಚಾಯಿತಿಗಳು ನೀಡಿದ ಪಟ್ಟಿಯಲ್ಲಿನ ಎಲ್ಲಾ ಮನೆಗಳಿಗೂ ಸಂಪರ್ಕ ಒದಗಿಸಿದಂತಾಗಿದೆ.
ಸಾಂಪ್ರದಾಯಿಕವಾಗಿ ವಿದ್ಯುತ್ ನೀಡಲು ಸಾಧ್ಯವಾಗದ ತೀರಾ ಗ್ರಾಮೀಣ ಪ್ರದೇಶವಾದ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ 20 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಬೇರೆ ಬೇರೆ ಯೋಜನೆಯಿಂದ ಸುಳ್ಯ ತಾಲೂಕಿನ ಎಲ್ಲಾ ಮನೆಗಳಿಗೂ ಬೆಳಕು ನೀಡಲು ಸಾಧ್ಯವಾಗಿದೆ. ಪಂಚಾಯತ್ ಗಳು ನೀಡಿದ ಪಟ್ಟಿಯಲ್ಲಿದ್ದ ಎಲ್ಲಾ ಮನೆಗಳಿಗೂ ವಿದ್ಯುದೀಕರಣ ಪೂರ್ತಿಯಾಗಿದೆ.
Advertisementಹರೀಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ ಉಪವಿಭಾಗ ಸುಳ್ಯ.
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…