ಪುತ್ತೂರು: ಪ್ರಸ್ತುತ ಕೃಷಿಕರು ಸಾಲಮನ್ನದಂತಹ ಯೋಜನೆಗಳಿಗೆ ನೆಚ್ಚಿಕೊಳ್ಳುವುದರ ಬದಲಾಗಿ ಕೃಷಿಗೆ ಸರಕಾರದಿಂದ ದೊರಕಬಹುದಾದ ಯೋಜನೆಗಳಿಗೆ ಗಮನಹರಿಸುತ್ತಿದ್ದರೆ ಇಂದು ಕೆಎಂಎಫ್ ಮಾದರಿಯಲ್ಲಿ ಟೊಮೆಟೋ, ಮೆಣಸುಗಳಂತಹ ಬೆಳೆಗಳಿಗೂ ಶಾಶ್ವತವಾದ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಅವಶ್ಯಕತೆ ಇದೆ. ಹಾಗೆಯೇ ಮಣ್ಣಿನ ಜೊತೆಗೆ ಬದುಕುವ ಕಲೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕಾಗಿದೆ ಎಂದು ಮುಖ್ಯ ಅತಿಥಿಯಾದ ಮೀನುಗಾರಿಕೆ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಶ್ರಯದಲ್ಲಿ ಕರ್ನಾಟಕ ಲಘು ಉದ್ಯೋಗ ಭಾರತಿಯ ಸಹಯೋಗದಲ್ಲಿ ಕ್ಯಾಂಪ್ಕೋ ಸಹಕಾರದೊಂದಿಗೆ ನಡೆಯಲಿರುವ ಎರಡು ದಿನದ ಅನ್ವೇಷಣಾ-2019 ಎಂಬ ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ಅನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಇಂದು ದೊಡ್ಡ ಸಂಖ್ಯೆಯ ರೈತರು ಕಬ್ಬಿನಂತ ಒಂದೇ ಬೆಳೆಯೆಡೆಗೆ ಆಸಕ್ತಿ ವಹಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇಂತಹ ಮನಸ್ಥಿತಿಯನ್ನು ವಿವಿಧ ಬೆಳೆಗಳೆಡೆಗೆ ಗಮನಹರಿಸುವತಹ ಪ್ರೇರಣೆಯನ್ನು ನೀಡುವಂತಹ ಜವಾಬ್ದಾರಿ ಸರಕಾರದ ಮೇಲಿದೆ. ಕೃಷಿಕ ಸಮ್ಮಾನ್ ಯೋಜನೆ ಈ ನಿಟ್ಟಿನಲ್ಲಿ ತುಂಬಾ ಪರಿಣಾಮಕಾರಿ ಎನಿಸಿದೆ. ಪ್ರಸ್ತುತ ಕೃಷಿ ಸಮ್ಮಾನ್ ಯೋಜನೆಯ ಮೊತ್ತವನ್ನು ಹೆಚ್ಚಿಸುವ ಕುರಿತಾಗಿ ಕೃಷಿಕರಿಂದ ಬೇಡಿಕೆ ಇದೆ ಎಂದು ತಿಳಿಸಿದರು. ಇಸ್ರೇಲ್ ಕೃಷಿಗೆ ಮಾದರಿಯಾದ ರಾಷ್ಟ್ರ. ಅಲ್ಲಿಯ ಕೃಷಿಯ ಯೋಜನೆಗಳನ್ನು ನಮ್ಮ ದೇಶಕ್ಕೆ, ವಾತಾವರಣಕ್ಕೆ ಅನುಗುಣವಾಗಿ ಬದಲಾಯಿಸಿಕೊಂಡು ಪ್ರಸ್ತುತಪಡಿಸಬೇಕಾಗಿದೆ. ಆಗ ಅದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಾವಯವ ಕೃಷಿ ಮಿಷನ್‍ನ ಅಧ್ಯಕ್ಷ ಆ.ಶ್ರೀ.ಆನಂದ್ ಮಾತನಾಡಿ, ಗ್ರಾಮೀಣ ಜನತೆಗೆ ಬೇಕಾದಂತ ಅವಶ್ಯಕತೆಗೆ ಅನುಗುಣವಾದಂತಹ ಯಂತ್ರಗಳು ಅಗತ್ಯ. ಹಾಗೆಂದು ಯಂತ್ರಗಳು ಮಣ್ಣಿನೊಂದಿಗಿನ ಮನುಷ್ಯ ಸಂಬಂಧವನ್ನು ಕೆಡಸುವಂತಿರಬಾರದು. ಮನಸ್ಸು ಹಾಗೂ ಮಣ್ಣಿನ ನಡುವೆ ಬಂಧ ಏರ್ಪಡಿಸುವ ಯಂತ್ರಗಳು ಇಂದಿನ ಅವಶ್ಯಕತೆ ಎಂದರಲ್ಲದೆ ಇಂದು ಕೃಷಿಕನನ್ನೇ ಅನ್ವೇಷಣೆಯನ್ನು ಮಾಡಬೇಕಾದ ಪರಿಸ್ಥಿತಿ ಇಂದು ಎದುರಾಗಿದೆ. ತೊಡಗಿಕೊಳ್ಳುವ ಜೀವಗಳು ಇದ್ದಾಗ ಮಾತ್ರ ಯಂತ್ರಗಳು ಸಾರ್ಥಕತೆ ಪಡೆಯುತ್ತವೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಲಘು ಉದ್ಯೋಗ ಭಾರತಿ ಇದರ ಅಧ್ಯಕ್ಷ ಪಿ.ಎಸ್. ಶ್ರೀಕಂಠ ದತ್ತ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾರ್ಥಕ ಜೀವನ ನಡೆಸಬೇಕಾದರೆ, ಉತ್ತಮ ಶಿಕ್ಷಣ, ಸಾಮಾಜಿಕ ಶಿಕ್ಷಣ ಅಗತ್ಯ. ಲಘುಭಾರತಿ ಸರ್ಕಾರ ಹಾಗೂ ಸಣ್ಣ ಕೈಗಾರಿಕೋದ್ಯಮಿಗಳ ನಡುವಣ ಕೊಂಡಿಯಂತೆ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ಹೊಸ ಅನ್ವೇಷಣೆಗಳು ಹೊರಬರುವಲ್ಲಿ ಲಘು ಉದ್ಯೋಗ ಭಾರತಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಪುತ್ತೂರಿನ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸ್ವಾತಂತ್ರ್ಯ ಸಮಯದಲ್ಲಿ ಕೃಷಿಕರ ಸಂಖ್ಯೆ ಶೇ.80 ಇದ್ದರೆ ಇಂದು ಶೇ.60ಕ್ಕೆ ಇಳಿದಿದೆ. ಕೃಷಿಯಲ್ಲಿ ಯಾಂತ್ರಿಕತೆ ಬಂದರೆ ಬದುಕು ಯಾಂತ್ರಿಕತೆ ಆಗುವುದು ತಪ್ಪುತ್ತದೆ. ಹಾಗೆಯೇ ಯುವಸಮೂಹ ಕೃಷಿಯನ್ನೇ ನೆಚ್ಚಿ ಹಳ್ಳಿಯಲ್ಲಿ ಉಳಿಯುವುದು ಸಾಧ್ಯವಾಗುತ್ತದೆ ಎಂದರಲ್ಲದೆ ಮಕ್ಕಳಲ್ಲಿ ಸಂಶೋಧನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ವಿವಿಧ ಶಾಲೆಗಳಲ್ಲಿ ಆರಂಭಿಸುತ್ತಿದೆ. ಈ ಲ್ಯಾಬ್ ಮಕ್ಕಳಲ್ಲಿ ಸಂಶೋಧನೆಯ ಪ್ರವೃತ್ತಿಯನ್ನು ಬೆಳೆಸುತ್ತಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಮಕ್ಕಳು ಮತ್ತು ಸಮಾಜದ ನಡುವಣ ಕೊಂಡಿಯಂತೆ ವಿವೇಕಾನಂದ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಹೆಚ್ಚು ಸಂಖ್ಯೆ ಯುವಕರಿದ್ದಾರೆ ಹಾಗಾಗಿ ಭಾರತಕ್ಕೆ ಮುಂದೆ ಒಳ್ಳೆಯ ದಿನಗಳು ಬರಲಿದೆ. ಜನಸಂಖ್ಯೆ ಎಂಬುದು ಮಾನವಶಕ್ತಿ. ಈ ಚಿಂತನೆ ಮಕ್ಕಳಲ್ಲಿ ಬೆಳೆಸಬೇಕಾದ ದೃಷ್ಟಿಕೋನ ಬೇಕಿದೆ. ನಮ್ಮಲ್ಲಿ ಸ್ವಾಭಿಮಾನ ಹಾಗೂ ಧೈರ್ಯದ ಕೊರತೆಯೇ ಅನೇಕ ಸಾಧನೆಗಳು ಸಾಧ್ಯವಾಗದಿರಲು ಕಾರಣ. ಆದರೆ ನಮ್ಮ ಶಕ್ತಿ ಒಮ್ಮೆ ಹೊರಕಾಣಿಸಿದರೆ ಅನಂತ ಸಾಧ್ಯತೆಗಳು ನಮ್ಮದಾಗುತ್ತವೆ ಎಂದರು. ಇಂದು ಜಗತ್ತು ನಮ್ಮ ದೇಶದ ಕಡೆಗೆ ಬರುತ್ತಿದೆ. ಅಮೇರಿಕಾದ ನಾಸಾದಂತಹ ವಿಜ್ಞಾನ ಸಂಸ್ಥೆಯೂ ಭಾರತೀಯ ಇಸ್ರೋ ಸಂಸ್ಥೆಯತ್ತ ಸಹಾಯಕ್ಕಾಗಿ ಧಾವಿಸುತ್ತಿದೆ. ಹೀಗೆ ನಾವು ಮುಂದುವರೆಯುತ್ತಿರುವ ಹೊತ್ತಿನಲ್ಲಿ ಮಣ್ಣಿನ ಮಹತ್ವವನ್ನು ಮರೆಯಬಾರದು. ಎಲ್ಲದಕ್ಕೂ ಮೂಲ ಭೂಮಿ ಎಂಬ ಕಲ್ಪನೆ ಒಡಮೂಡಬೇಕು. ಈ ದೃಷ್ಟಿಯಿಂದ ಅನ್ವೇಷಣಾದಂತಹ ಕಾರ್ಯಕ್ರಮಗಳು ಕಾರ್ಯನಿರ್ವಹಸುತ್ತಿವೆ ಎಂದು ನುಡಿದರು.
ಇದಕ್ಕೂ ಪೂರ್ವದಲ್ಲಿ ಕೃಷಿ ಮಾದರಿಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣಭಟ್, ಕರ್ನಾಟಕ ಲಘು ಉದ್ಯೋಗ ಭಾರತಿ ಕಾರ್ಯದರ್ಶಿ ನಾರಾಯಣ ಪ್ರಸನ್ನ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಆರ್. ಸಿ. ನಾರಾಯಣ, ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯ ಖಜಾಂಚಿ ಪ್ರಸನ್ನ ಕುಮಾರ್, ಸದಸ್ಯರಾದ ವಸಂತಿ ಕೆದಿಲ, ಚಂದ್ರಶೇಖರ, ಸುಧಾ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್‍ಕುಮಾರ್ ರೈ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಮಮತಾ, ಮುಖ್ಯ ಗುರು ಸಂಧ್ಯಾ, ಮೊದಲಾದವರು ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ. ಸ್ವಾಗತಿಸಿದರು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಮುರಳೀಧರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯ ಭರತ್ ಪೈ ವಂದಿಸಿದರು. ಶಿಕ್ಷಕಿ ಸಾಯಿಗೀತಾ ಎನ್. ರಾವ್ ಕಾರ್ಯಕ್ರಮ ನಿರೂಪಿಸಿದರು.
ಅಡಿಕೆ ಕೊಯ್ಲು: ಅನ್ವೇಷಣೆಯನ್ನು ದೀಪಬೆಳಗುವುದರ ಜತೆಗೆ ಸಾಂಕೇತಿಕವಾಗಿ ವೇದಿಕೆಯ ಮುಂಭಾಗದಲ್ಲಿನ ಸ್ಥಾಪಿಸಿರುವ ಅಡಿಕೆ ಮರದಿಂದ ಅಡಿಕೆ ಕೊಯ್ಯುವ ಮೂಲಕವೂ ಉದ್ಘಾಟಿಸಲಾಯಿತು. ಅಡಿಕೆ ಕೊಯ್ಲು ಮಾಡುವ ಸುಲಭ ಯಂತ್ರದ ಮೂಲಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಡಿಕೆ ಮರದಲ್ಲಿದ್ದ ಅಡಿಕೆಯನ್ನು ಕೆಳಗಿಳಿಸಿದ್ದು ಕಾರ್ಯಕ್ರಮದ ಆಕರ್ಷಣೆಯಾಗಿ ಮೂಡಿಬಂತು.
ಅಡಿಕೆ ಮರದ ಡಯಾಸ್: ಕಾರ್ಯಕ್ರಮದ ವೇದಿಕೆಯಲ್ಲಿ ಅನ್ವೇಷಣಾ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ರೂಪಿಸಲಾದ ಡಯಾಸ್ ಅನ್ನು ಇಡಲಾಗಿತ್ತು. ಸಂಪೂರ್ಣವಾಗಿ ಅಡಿಕೆ ಮರದಿಂದಲೇ ಮಾಡಿದ್ದ ಈ ಡಯಾಸ್ ನೋಡುಗರನ್ನು ವಿಶೇಷವಾಗಿ ಸೆಳೆಯಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…