ಮ್ಯಾಂಚೆಸ್ಟರ್ : ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವಕಪ್ ನಿಂದ ಹೊರಬಿದ್ದಿದೆ. ಈ ಮೂಲಕ 2019ರ ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಕೊಹ್ಲಿ ಪಡೆಯು ಸೆಮಿಫೈನಲ್ ನಲ್ಲಿ ಮುಗ್ಗರಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಜಡೇಜ ಹಾಗೂ ಧೋನಿಯ ಸಾಹಸದಿಂದ ರೋಚಕ ಘಟ್ಟ ತಲುಪಿದ್ದ ಪಂದ್ಯವು ಕೊನೆ ಕ್ಷಣದಲ್ಲಿ 18 ರನ್ ಗಳಿಂದ ಗೆದ್ದ ನ್ಯೂಝಿಲ್ಯಾಂಡ್ ಫೈನಲ್ ಪ್ರವೇಶಿಸಿದೆ. ಗೆಲುವಿಗೆ 50 ಓವರ್ ಗಳಲ್ಲಿ 240 ರನ್ ಗಳ ಗುರಿ ಪಡೆದಿದ್ದ ಭಾರತ 221 ರನ್ ಗಳಿಗೆ ಆಲ್ ಔಟಾಗಿ 18 ರನ್ ಗಳ ಸೋಲೊಪ್ಪಿಕೊಂಡಿತು. ಭಾರತದ ಪರ ಜಡೇಜ(77) ಧೋನಿ (50) ಪಂತ್ ಹಾಗೂ ಪಾಂಡ್ಯ ತಲಾ 32 ರನ್ ಗಳಿಸಿದರು. ಭಾರತ 10 ಓವರ್‌ಗಳಲ್ಲಿ 24 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ 5ನೇ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿದ ಹಾರ್ದಿಕ್ ಪಾಂಡ್ಯ (32) ಹಾಗೂ ರಿಷಭ್ ಪಂತ್(32) ತಂಡವನ್ನು ಆಧರಿಸಿದರು. ಈ ಇಬ್ಬರು ಪೆವಿಲಿಯನ್‌ಗೆ ವಾಪಸಾದ ಬಳಿಕ ಮಾಜಿ ನಾಯಕ ಧೋನಿ ಹಾಗೂ ಜಡೇಜ 7ನೇ ವಿಕೆಟ್‌ಗೆ 116 ಜೊತೆಯಾಟ ನಡೆಸಿ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ, ಜಡೇಜ ವಿಕೆಟನ್ನು ಉರುಳಿಸಿದ ಬೌಲ್ಟ್ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು. ಜಡೇಜ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು. 49ನೇ ಓವರ್‌ನಲ್ಲಿ ಧೋನಿ ಅವರು ಗಪ್ಟಿಲ್‌ರಿಂದ ರನೌಟ್ ಆಗುವುದರೊಂದಿಗೆ ಭಾರತದ ಹೋರಾಟ ಬಹುತೇಕ ಅಂತ್ಯವಾಯಿತು. ಧೋನಿ 72 ಎಸೆತಗಳ ಇನಿಂಗ್ಸ್‌ನಲ್ಲಿ ತಲಾ 1 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ್ದರು. ಕಿವೀಸ್‌ನ ಪರ ಹೆನ್ರಿ(3-37), ಬೌಲ್ಟ್(2-42) ಹಾಗೂ ಸ್ಯಾಂಟ್ನರ್(2-34)7 ವಿಕೆಟ್‌ಗಳನ್ನು ಹಂಚಿಕೊಂಡರು. ಇದಕ್ಕೂ ಮೊದಲು ಮಂಗಳವಾರ ನಿಗದಿಯಾಗಿದ್ದ ಸೆಮಿಫೈನಲ್ ಪಂದ್ಯವು ನ್ಯೂಝಿಲ್ಯಾಂಡ್ ಬ್ಯಾಟಿಂಗ್ ಪೂರ್ತಿಗೊಳಿಸುವ ಮುಂಚೆಯೇ ಸುರಿದ ಮಳೆಯ ಕಾರಣದಿಂದ ಬುಧವಾರಕ್ಕೆ ಮುಂದೂಡಿಕೆಯಾಗಿತ್ತು. 46.1 ಓವರ್ ನಲ್ಲಿ 211 ಗಳಿಸಿದ್ದ ನ್ಯೂಝಿಲ್ಯಾಂಡ್ ಇಂದು ಬ್ಯಾಟಿಂಗ್ ಪೂರ್ತಿಗೊಳಿಸಿ 8 ವಿಕೆಟ್ ನಷ್ಟಕ್ಕೆ 239 ಗಳಿಸಿತ್ತು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel