ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಶಿವಣ್ಣ ಹಲಸು ಪ್ರಿಯ. ಸಖರಾಯಪಟ್ಟಣವು ಕರ್ನಾಟಕದಲ್ಲೇ ಹೆಸರು ಪಡೆಯಬೇಕಾದ ಉತ್ಕೃಷ್ಟ ಹಲಸಿನ ತಳಿಗಳ ಊರು. ಚಿಕ್ಕಮಗಳೂರಿನಿಂದ ಇಪ್ಪತ್ತೆರಡು ಕಿಲೋಮೀಟರ್ ದೂರ. ಕಡೂರು ಮಂಗಳೂರು ಹೆದ್ದಾರಿಯಲ್ಲಿದೆ.
ಶಿವಣ್ಣರಿಗೆ ಹಲಸಿನ ಮೌಲ್ಯವರ್ಧನೆಯತ್ತ ಸದಾ ಚಿಂತನೆ. ‘ಪರಿವರ್ತನ್’ ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಅದರ ಮೂಲಕ ಹಳ್ಳಿಯ ಉತ್ಪನ್ನಕ್ಕೆ ಮಾನ ತರಲು ಶ್ರಮಿಸುತ್ತಿದ್ದಾರೆ. ಮೊದಲು ಸ್ವತಃ ತಾನು ಕಲಿತು, ಬಳಿಕ ಪರಿವರ್ತನ್ ಸಂಸ್ಥೆಯ ಸದಸ್ಯರಿಗೆ ತರಬೇತಿ ನೀಡಿ ತಂಡವನ್ನು ಸದೃಢವನ್ನಾಗಿಸಿದ್ದಾರೆ. ಹಪ್ಪಳ ಮತ್ತು ಚಿಪ್ಸ್ ಮುಖ್ಯ ಉತ್ಪನ್ನ.
ಆರೇಳು ವರುಷವಾಯಿತು, ಪಾಲಕ್ಕಾಡು ಜಿಲ್ಲೆಯ ಕಾಞರಪುಳದ ಜೇಮ್ಸ್ ಪಿ. ಮ್ಯಾಥ್ಯೂ ಅವರ ಹಲಸಿನ ಒಣ ಉತ್ಪನ್ನಗಳು ಶಿವಣ್ಣರನ್ನು ಸೆಳೆದಿತ್ತು. ಹಲಸಿನ ವಿವಿಧ ಉತ್ಪನ್ನಗಳ ವೀಕ್ಷಣೆ, ಅಧ್ಯಯನ, ತರಬೇತಿಯನ್ನು ಕಲಿತು ಬಂದರು. ‘ಪರಿವರ್ತನ್’ ಮೂಲಕ ಆಸಕ್ತ ಮಹಿಳೆಯರನ್ನು ಒಗ್ಗೂಡಿಸಿದ್ದರು. ಅವರಿಗೆ ಮಾಹಿತಿ ನೀಡಿ ಒಂದೊಂದು ಉತ್ಪನ್ನಗಳ ಮಾದರಿ ಸಿದ್ಧಪಡಿಸಿದ್ದರು. ಆಸಕ್ತರಿಗೆ ಹಂಚಿದರು. ಚಿಪ್ಸ್, ಹಪ್ಪಳ, ಜಾಮ್, ಜ್ಯೂಸ್, ಉಪ್ಪಿನಕಾಯಿ ಅಲ್ಲದೆ ಹಲಸಿನ ಒಣ ಕಾಯಿ ಸೊಳೆ, ಹಣ್ಣು ಸೊಳೆ, ಪೌಡರ್, ಕ್ಯಾಂಡಿ, ಒಣ ಎಳೆಹಲಸು.. ಹೀಗೆ ಸಾಲು ಸಾಲು ಉತ್ಪನ್ನಗಳ ತಯಾರಿ.
ಹಲಸಿಗೆ ಸಂಬಂಧಿಸಿದ ಸೆಮಿನಾರ್, ಗೋಷ್ಠಿಗಳು, ಮೇಳಗಳು ಎಲ್ಲಿದ್ದರೂ ತಮ್ಮ ತಂಡದೊಂದಿಗೆ ಅಥವಾ ವೈಯಕ್ತಿಕವಾಗಿ ಶಿವಣ್ಣ ಭಾಗಿ. ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ, ಶಿಬಿರಾರ್ಥಿಯಾಗಿಯೂ ಭಾಗವಹಿಸುತ್ತಲೇ ಇರುತ್ತಾರೆ. ಸಂದರ್ಭ ಸಿಕ್ಕಾಗಲೆಲ್ಲಾ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು ಪ್ರಚಾರ ಮಾಡುತ್ತಾರೆ. ಕೃಷಿಕರ ಫೋನ್ ನಂಬ್ರಗಳನ್ನು ದಾಖಲಿಸಿಟ್ಟು ಸದಾ ಸಂಪರ್ಕದಲ್ಲಿರುತ್ತಾರೆ. ಹಲಸಿಗೆ ಸಂಬಂಧಿಸಿದ ಕೆಲಸಗಳಿಗೆ ಶಿವಣ್ಣರಿಗೆ ವಿಶ್ರಾಂತಿಯಿಲ್ಲ. ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ಸಖರಾಯಪಟ್ಟಣದಲ್ಲಿ ‘ಅಂಕುರ ಆಹಾರ ಸಂಸ್ಕರಣ ಸಂಘ’ ಹುಟ್ಟುಹಾಕಿದ್ದಾರೆ. ತಿರುವನಂತಪುರದಲ್ಲಿ ಜರುಗಿದ ರಾಷ್ಟ್ರೀಯ ಹಲಸು ಹಬ್ಬದಲ್ಲಿ ಹವಾಯಿಯಿ ಕೆನ್‍ಲವ್ ಅವರು ಹಲಸಿನ ಹಣ್ಣಿನ ಸೊಳೆಯನ್ನು ಬಹುಕಾಲ ಕಾಪಿಡುವ ರೆಸಿಪಿಯೊಂದನ್ನು ಪರಿಚಯಿಸಿದ್ದರು. ಇದನ್ನು ಕೂಡಾ ತನ್ನ ಯೋಜನೆಯನ್ನು ಅಳವಡಿಸಿಕೊಳ್ಳುವ ಫೈಲ್ ತೆರೆದುಕೊಂಡಿದೆ.
ಎಳೆಹಲಸಿನ (ಗುಜ್ಜೆ) ‘ಅಡುಗೆಗೆ ಸಿದ್ಧ’ – ರೆಡಿ ಟು ಕುಕ್ – ಉತ್ಪನ್ನವನ್ನು ಪ್ಯಾಕೆಟ್ ಮಾಡಿ ಮಾರುಕಟ್ಟೆ ಮಾಡುವ ಯತ್ನ. ಪ್ರಾಯೋಗಿಕವಾಗಿ ಒಂದು ಕ್ವಿಂಟಾಲ್ ಗುಜ್ಜೆಯನ್ನು ಅಡುಗೆಗೆ ಸಿದ್ಧ ರೂಪದಲ್ಲಿ ಮಾರುಕಟ್ಟೆ ಮಾಡಿದ್ದಾರೆ. ಈ ಉತ್ಪನ್ನಕ್ಕೆ ತಾಳಿಕೆ ಕಡಿಮೆ. ಕ್ಷಿಪ್ರವಾಗಿ ಗ್ರಾಹಕರಿಗೆ ತಲಪಿಸುವುದು ದೊಡ್ಡ ಸವಾಲು.
“ಬೆಂಗಳೂರು, ಮಂಗಳೂರಿನಂತಹ ದೊಡ್ಡ ನಗರದಲ್ಲಿ ಕ್ಯಾಟರಿಂಗ್, ಅಡುಗೆಯವರನ್ನು ಭೇಟಿ ಮಾಡುವ ಯೋಚನೆಯಿದೆ. ಅವರಿಂದ ದೊಡ್ಡ ಪ್ರಮಾಣದಲ್ಲಿ ಆರ್ಡರ್ ಸಿಕ್ಕಿ ಬಿಟ್ಟರೆ ಅಡುಗೆಗೆ ಬೇಕಾದ ಗುಜ್ಜೆಯನ್ನು ‘ರೆಡಿ ಟು ಕುಕ್’ ರೂಪದಲ್ಲಿ ಒದಗಿಸಬಹುದು,” ಎನ್ನುತ್ತಾರೆ. ಈ ಕುರಿತು ಹುಡುಕಾಟ ಆರಂಭವಾಗಿದೆ. ಶಿವಣ್ಣ ಭುವನೇಶ್ವರಕ್ಕೆ ಹೋಗಿದ್ದಾಗ ಚಿಕ್ಕ ಗಾಡಿಯೊಂದರಲ್ಲಿ ಎಳೆ ಹಲಸಿನ ‘ರೆಡಿ ಟು ಕುಕ್’ ಉತ್ಪನ್ನ ಮಾರಿಹೋಗುತ್ತಿರುವುದನ್ನು ನೋಡಿದ್ದರು. ಅಲ್ಲಿ ಸಾಧ್ಯವಾದುದು ನಮ್ಮಲ್ಲಿ ಸಾಧ್ಯವಿಲ್ವಾ? ಈ ಪ್ರಶ್ನೆ ಶಿವಣ್ಣರ ಮನದಲ್ಲಿ ರಿಂಗಣಿಸುತ್ತಿದೆ.
ಕೇವಲ ರೆಡಿ ಟು ಕುಕ್ ಉತ್ಪನ್ನ ಮಾತ್ರವಲ್ಲ ಹಲಸಿನ ಹಣ್ಣನ್ನು ಮಾರುಕಟ್ಟೆ ಮಾಡುವ ಕಾಯಕ ನಿರಂತರ. ವರುಷಪೂರ್ತಿ ಹಲಸಿನ ಹಣ್ಣು ಸಿಗಬೇಕೆನ್ನುವುದು ಅವರ ದೂರದೃಷ್ಟಿ. ಕೆಲವು ವರ್ಷದ ಹಿಂದೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಮಾರಂಭವೊಂದರಲ್ಲಿ ಜೇಮ್ ಜೋಸೆಫ್ ಅವರ ‘ಜ್ಯಾಕ್‍ಫ್ರುಟ್365’ ಬ್ರಾಂಡಿನ ಶೈತ್ಯೀಕರಿಸಿದ ಹಣ್ಣು (ಫ್ರೀಝ್ ಡ್ರೈ) ತಿಂದಿದ್ದರು. ಅದರ ರುಚಿಗೆ ಮಾರುಹೋದ ಶಿವಣ್ಣರಿಗೆ ಸದಾ ಫ್ರೀಝ್ ಡ್ರೈ ಗುಂಗು. ಸಂಬಂಧಪಟ್ಟ ಕಂಪೆನಿ, ಯಂತ್ರೋಪಕರಣಗಳಿಗೆ ಗೂಗಲ್ ಹುಡುಕಾಟ. ಗುಜರಾತಿನ ವಡೋದರದಲ್ಲಿ ಒಂದು ಕಂಪೆನಿ ಪತ್ತೆ. ಅದರ ವರಿಷ್ಠರೊಂದಿಗೆ ನಿರಂತರ ಮಾತುಕತೆ. ಹಲಸಿನ ಹಣ್ಣಿನೊಂದಿಗೆ ವಡೋದರಕ್ಕೆ ಹೋದರು. ಯಂತ್ರಗಳನ್ನು ಅಭ್ಯಸಿಸಿದರು. ಯಂತ್ರಕ್ಕೆ ಸ್ವತಃ ಹಣ್ಣನ್ನು ಉಣಿಸಿ ಪ್ರಾಯೋಗಿಕವಾಗಿ ಫ್ರೀಝ್ ಡ್ರೈ ಉತ್ಪನ್ನವನ್ನು ಮಾಡಿದರು.
“ಹಲಸಿನ ಹಣ್ಣಿನಲ್ಲಿರುವ ತೇವಾಂಶ ದ್ರವರೂಪಕ್ಕೆ ಬಾರದೆ ನೇರವಾಗಿ ಆವಿಯಾಗಿ ಹೋಗುವುದು ಫ್ರೀಝ್ ಡ್ರೈಯಿಂಗಿನ ವೈಶಿಷ್ಟ್ಯ. ಸಾಮಾನ್ಯವಾಗಿ ಬಿಸಿ ಗಾಳಿ ಬಳಸಿ ಮಾಡುವ ಡ್ರೈಯಿಂಗಿನಲ್ಲಿ ಹನ್ನೆರಡರಿಂದ ಹದಿನೈದು ಶೇಕಡ ತೇವಾಂಶ ಉಳಿಯುತ್ತದೆ. ಆದರೆ ಫ್ರೀಝ್ ಡ್ರೈಯಿಂಗಿನಲ್ಲಿ ಉಳಿಯುವುದು ನಾಲ್ಕು ಶೇಕಡಾ ಮಾತ್ರ. ಉಳಿದೆಲ್ಲಾ ಒಣಗಿಸುವ ವಿಧಾನಕ್ಕಿಂತ ಹೆಚ್ಚಾಗಿ ಈ ವಿಧಾನವು ಮೂಲ ಉತ್ಪನ್ನದ ಪರಿಮಳ, ರೂಪ, ಉಳಿಸಿಕೊಡುತ್ತದೆ. ಆಯಾಯ ಒಳಸುರಿಯಲ್ಲಿರುವ ತೇವಾಂಶ ಹೊಂದಿಕೊಂಡು ಫ್ರೀಝ್ ಡ್ರೈ ಕೊನೆ ಉತ್ಪನ್ನ ಸಿಗುತ್ತದೆ.” ಶಿವಣ್ಣರ ಅಧ್ಯಯನವಿದು.
ವಡೋದರಕ್ಕೆ ಹೋಗಿ ಬಂದ ಮೇಲೆ ಶಿವಣ್ಣರ ತಲೆಯೊಳಗೆ ಫ್ರೀಝ್ ಡ್ರೈಯರ್ ಯಂತ್ರದ ಸದ್ದು! ಸ್ವಲ್ಪ ಹೆಚ್ಚೇ ಹಣಕಾಸು ಬೇಡುವ ಈ ಯಂತ್ರವನ್ನು ಹೊಂದುವ ಕನಸಿನ ತೇವ ಇನ್ನೂ ಆರಿಲ್ಲ. ಹಲಸು ಮತ್ತಿತರ ಸ್ಥಳಿಯ ಹಣ್ಣುಗಳ ಸಂಸ್ಕರಣೆ ಮಾಡುವ ಉದ್ದೇಶ. ಸಖರಾಯಪಟ್ಟಣದಲ್ಲೂ ಯುನಿಟ್ ಸ್ಥಾಪಿಸಿಬೇಕು ಎನ್ನುವ ಆಶೆ ಹಸಿಯಾಗಿದೆ. “ಮಧುರೈಯಲ್ಲಿ ಒಂದು ಯುನಿಟ್ ಕಾರ್ಯಾಚರಿಸುತ್ತಿದೆ. ನೋಡಿದ್ದೇನೆ,” ಎನ್ನುವ ಹಿಮ್ಮಾಹಿತಿ ನೀಡುತ್ತಾರೆ.
ಸದಾ ಅಧ್ಯಯನಶೀಲ ಮತ್ತು ಹೊಸತರ ಹುಡುಕಾಟದಲ್ಲಿರುವ ಶಿವಣ್ಣರಿಗೆ ಒಂದು ಮಾಹಿತಿ ಸಿಕ್ಕಿತು. ಪಿಲಿಪೈನ್ಸಿನಲ್ಲಿ ಹಲಸಿನ ಬೀಜವನ್ನು ಬಳಸಿ ಪೇಯ ಮಾಡುತ್ತಾರಂತೆ. ನಮ್ಮಲ್ಲಿ ಯಾಕೆ ಆಗದು? ಪ್ರಯೋಗ ಶುರು. ಒಂದೇ ವರುಷದಲ್ಲಿ ಫಾರ್ಮುಲಾ ಕೈವಶ. ಈ ಪೇಯಕ್ಕೆ ‘ಜಾಫಿ’ ಎಂದು ನಾಮಕರಣ ಮಾಡಿದರು. ಕ್ಲಿಕ್ ಆಯಿತು. ಈಗ ಬೇಡಿಕೆ ಏರುತ್ತಿದೆ. ಕನ್ನಾಡಿನಾದ್ಯಂತ ಓಡಾಡಿ ಸ್ಥಳೀಯ ಹಲಸು ಪ್ರಿಯ ಸಂಘಟನೆಗಳೊಂದಿಗೆ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆಯನ್ನು ಶಿವಣ್ಣ ಆಯೋಜಿಸಿದ್ದರು.
“ವರುಷದಿಂದ ವರುಷಕ್ಕೆ ಸಖರಾಯಪಟ್ಟಣದ ಹಲಸಿಗೆ ಬೇಡಿಕೆ ಹೆಚ್ಚುತ್ತಿದೆ. ದಶಕಗಳಿಂದ ಮೂರು ನಾಲ್ಕು ತಿಂಗಳಷ್ಟೇ ನಡೆಯುತ್ತಿರುವ ಹಲಸಿನ ವ್ಯಾಪಾರವು ಕೆಲವು ವರುಷಗಳಿಂದ ಹೆಚ್ಚು ಕಾಲಕ್ಕೆ ಹಬ್ಬುತ್ತಾ ಬಂದು ಈಗ ವರ್ಷಕ್ಕಿಡೀ ಚಾಚಿದೆ. ಇಲ್ಲಿಯ ಹಣ್ಣು ಶಿವಮೊಗ್ಗ, ಮಂಗಳೂರು, ಬೆಂಗಳೂರು, ತಮಿಳುನಾಡು, ಬೆಳಗಾವಿ… ಮೊದಲಾದ ಊರುಗಳಿಗೆ ಹೋಗುತ್ತದೆ,” ಎಂದು ಖುಷಿಯಿಂದ ಶಿವಣ್ಣ ತನ್ನೂರಿನ ಹಲಸಿಗೆ ದನಿಯಾಗುತ್ತಾರೆ. ‘ಹಲಸಿನ ಮೌಲ್ಯವರ್ಧನೆಯಾದಾಗ ಮಾತ್ರ ಅದರ ಮಾನವರ್ಧನೆಯಾಗುತ್ತದೆ’ ಎನ್ನುವ ಸ್ವ-ಖಚಿತ ನಿಲುವು ಶಿವಣ್ಣರದು.