ಸುಳ್ಯ/ಸುಬ್ರಹ್ಮಣ್ಯ: ನಿರಂತರ ಮೂರನೇ ದಿನವೂ ನಿರಂತರವಾಗಿ ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನಲ್ಲಿ ಜನರು ತತ್ತರಿಸಿದ್ದಾರೆ. ಕುಮಾರಧಾರ ನದಿ ಉಕ್ಕಿ ಹರಿದು ಪ್ರವಾಹ ಭೀತಿ ಉಂಟಾದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯದಲ್ಲಿ 6 ಕುಟುಂಬಗಳ 18 ಮಂದಿ ಮತ್ತು ಪ್ರವಾಹ ಮತ್ತು ಗುಡ್ಡ ಕುಸಿತದ ಭೀತಿ ಹಿನ್ನಲೆಯಲ್ಲಿ ಕಲ್ಮಕಾರಿನಲ್ಲಿ 8 ಕುಟುಂಬಗಳ 25 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ವಸತಿ ಗೃಹದಲ್ಲಿ ಮತ್ತು ಕಲ್ಮಕಾರಿನ ಶಾಲಾ ರಂಗ ಮಂದಿರದಲ್ಲಿ ಈ ಕುಟುಂಬಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಬ್ರಹ್ಮಣ್ಯ ಮತ್ತು ಕಲ್ಮಕಾರಿನ ಕೇಂದ್ರಕ್ಕೆ ಊಟ ಮತ್ತು ಉಪಹಾರ ವ್ಯವಸ್ಥೆಯನ್ನು ಮಾಡಲಾಯಿತು. ಪ್ರವಾಹ ಪೀಡಿತ ಪ್ರದೇಶಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಟ್ಟಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರ ನದಿ ಉಕ್ಕಿಹರಿಯುತ್ತಿದ್ದು ಅಪಾಯ ಮಟ್ಟದಲ್ಲಿದೆ. ಅಲ್ಲದೆ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಕುಮಾರಧಾರ ನದಿಯ ಉಪ ನದಿ ದರ್ಪಣತೀರ್ಥ ನದಿ ಕೂಡ ತುಂಬಿ ಹರಿಯುತ್ತಿರುವುದರಿಂದ ಎರಡು ನದಿಗಳ ಹರಿವು ಹೆಚ್ಚಾಗಿ ನೀರು ಹೆದ್ದಾರಿಯನ್ನು ಆವರಿಸಿತ್ತು.
ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ಕುಕ್ಕೆಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ದರ್ಪಣತೀರ್ಥ ಸೇತುವೆಯು ಮುಳುಗಡೆಗೊಂಡಿತು. ನದಿ ನೀರು ಸುಮಾರು ಅರ್ಧ ಕಿ.ಮೀ ದೂರದ ತನಕ ರಾಜ್ಯ ಹೆದ್ದಾರಿಯನ್ನು ಆಕ್ರಮಿಸಿಕೊಂಡಿತ್ತು. ದರ್ಪಣ ತೀರ್ಥ ನದಿ ದಡದ ಎಲ್ಲಾ ಕೃಷಿ ತೋಟಗಳು ನೀರಿನಿಂದ ತುಂಬಿತ್ತು. ಕುಮಾರಧಾರದಲ್ಲಿನ ಶ್ರೀ ದೇವರ ಜಳಕದ ಕಟ್ಟೆಯು ಜಲಾವೃತವಾಗಿದೆ.
ಕುಮಾರಧಾರ ನದಿಯ ಪ್ರವಾಹದಿಂದಾಗಿ ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲ ಬೈಲು, ಮುಂತಾದ ಕಡೆಗಳ ಹಲವು ಮನೆಗಳಿಗೆ ನೀರು ನುಗ್ಗಿತು. ಸುಬ್ರಹ್ಮಣ್ಯದ ಕುಲ್ಕುಂದ, ಮಲೆಯಾಳ, ಮರಕತ ಮೊದಲಾದೆಡೆ ಮರ ಉರುಳಿತ್ತು. ಜಾಲ್ಸೂರು-ಸುಬ್ರಹ್ಮಣ್ಯ-ಬಿಸಿಲೆ ರಸ್ತೆಗೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಹಾಗೂ ಅಲ್ಲಲ್ಲಿ ಗುಡ್ಡಗಳು ಜರಿದು ರಸ್ತೆಯ ಮೇಲೆ ಮಣ್ಣು ಬಿದ್ದುದರಿಂದ ರಸ್ತೆ ತಡೆ ಆಗಿತ್ತು.
ಬಾರೀ ಗಾಳಿ ಮಳೆಗೆ ಕೃಷಿತೋಟದಲ್ಲಿನ ಅಡಿಕೆ ಮರಗಳು ಧರೆಗುರುಳಿದೆ. ಅಲ್ಲದೆ ರಬ್ಬರ್ ಮರಗಳು ಮುರಿದಿದೆ.ಕೆಲವು ಕಡೆಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದು ಸುಬ್ರಹ್ಮಣ್ಯ ಮೆಸ್ಕಾಂ ಉಪವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ 25ಕ್ಕೂ ಅಧಿಕ ವಿದ್ಯುತ್ ಕಂಬಗಳು ನಾಶವಾಗಿದೆ. ಬಾರೀ ಗಾಳಿಯಿಂದಾಗಿ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿತ್ತು. ಅಲ್ಲದೆ ವಿದ್ಯುತ್ ವ್ಯತ್ಯಯಗೊಂಡಿತ್ತು.
ಗ್ರಾಮೀಣ ಪ್ರದೇಶವಾದ ಬಾಳುಗೋಡು ವ್ಯಾಪ್ತಿಯಲ್ಲಿ ಸುರಿದ ಬಾರೀ ಮಳೆಯಿಂದಾಗಿ ಬಾಳುಗೋಡು ಹೊಳೆಯು ತುಂಬಿ ಹರಿಯುತ್ತಿದೆ. ಇಲ್ಲಿನ ಪರಿಸರದ ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ ಮೊದಲಾದೆಡೆ ನಿರಂತರ ಮಳೆಯಾದುದರಿಂದ ಈ ಪರಿಸರದಲ್ಲಿ ಹರಿಯುವ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಹರಿಹರ ಹೊಳೆಯಲ್ಲಿ ಬಾರೀ ಪ್ರವಾಹ ಬಂದುದರಿಂದ ಹರಿಹರೇಶ್ವರ ಸಂಗಮ ಕ್ಷೇತ್ರ ಜಲಾವೃತ್ತವಾಗಿದೆ. ಪಂಜ ಹೊಳೆಯು ತುಂಬಿ ಹರಿಯುತ್ತಿದ್ದು, ಪ್ರವಾಹವು ಪಂಜ ಸಮೀಪ ಬೊಳ್ಮಲೆ ಎಂಬಲ್ಲಿ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯನ್ನು ಆಕ್ರಮಿಸಿದೆ. ಇದರಿಂದಾಗಿ ಸುಬ್ರಹ್ಮಣ್ಯ-ಪುತ್ತೂರು ಸಂಚಾರವು ಸ್ಥಗಿತಗೊಂಡಿತು. ಪಂಜ ಹೊಳೆಗೆ ಪಲ್ಲೋಡಿ ಸಮೀಪ ನಿರ್ಮಿಸಿದ್ದ ಕಿಂಡಿಅಣೆಕಟ್ಟು ನದಿಯಲ್ಲಿನ ಬಾರೀ ಪ್ರವಾಹದಿಂದ ಮುಳುಗಡೆಗೊಂಡಿತು. ಇದರಿಂದಾಗಿ ಬೊಳ್ಮಲೆ ಭಾಗಕ್ಕೆ ಸಂಚಾರ ವ್ಯತ್ಯಯವಾಯಿತು. ಅಲ್ಲದೆ ಅಣೆಕಟ್ಟಿನಲ್ಲಿ ಬೃಹತ್ ಮರದ ದಿಮ್ಮಿಗಳು ಸಿಲುಕಿಕೊಂಡಿದೆ. ಬಾರೀ ಪ್ರವಾಹದೊಂದಿಗೆ ಮರಗಳು ಬಂದು ಅಣೆಕಟ್ಟಿನ ಮೇಲೆ ನಿಂತಿದ್ದವು. ಇದಲ್ಲದೆ ಕಡಬ-ಪಂಜ ಸಂಪರ್ಕ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಯು ರಸ್ತೆಯನ್ನು ಆಕ್ರಮಿಸಿಕೊಂಡ ಕಾರಣ ರಸ್ತೆ ಸಂಚಾರವು ಸ್ಥಗಿತಗೊಂಡಿದೆ. ಸುಬ್ರಹ್ಮಣ್ಯ ಪರಿಸರದಲ್ಲಿ ಬಾರೀ ಮಳೆಯಾಗುತ್ತಿದೆ.ಅಲ್ಲದೆ ಕುಮಾರಧಾರ ಸೇರಿದಂತೆ ಗ್ರಾಮೀಣ ಪರಿಸರದ ನದಿ ತೊರೆಗಳು ತುಂಬಿ ಹರಿಯುತ್ತಿದೆ.ಆದುದರಿಂದ ಮುಂಜಾಗೃತೆಗಾಗಿ 13 ಮಂದಿಯ ಎನ್‍ಡಿಆರ್‍ಎಫ್ ಪಡೆಯನ್ನು ಮುಂಜಾಗೃತೆಗಾಗಿ ಸುಬ್ರಹ್ಮಣ್ಯದಲ್ಲಿ ನಿಯೋಜನೆ ಮಾಡಲಾಗಿದೆ. ಆಗ್ನಿಶಾಮಕ ದಳ ಕೂಡ ಸನ್ನದ್ಧವಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ, ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಸುಳ್ಯ ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ.ಎನ್, ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ತಾಲೂಕು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತಿತರರು ಭೇಟಿ ನೀಡಿದರು.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…