ಸಂಪಾಜೆ : ಪರಿಸರ ಸಮತೋಲನಕ್ಕೆ ಪ್ರತಿಯೊಂದು ಜೀವಿಯೂ ಮುಖ್ಯವಾದುದಾಗಿದೆ ಎಂದು ಸಂಪಾಜೆ ವಲಯದ ಅರಣ್ಯಾಧಿಕಾರಿ ಮಧುಸೂದನ್ ಕೆ.ಎಂ ಅವರು ಅಭಿಪ್ರಾಯಪಟ್ಟರು.
ಡಿ.23 ರಂದು ಸಂಪಾಜೆ ಅರಣ್ಯ ವಲಯದ ವತಿಯಿಂದ ಸರಕಾರಿ ಪ್ರೌಢಶಾಲೆ ಚೆಂಬು, ಇಲ್ಲಿನ ವಿದ್ಯಾರ್ಥಿಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಇಲ್ಲಿಗೆ ‘ಚಿಣ್ಣರ ವನದರ್ಶನ’ ಕಾರ್ಯಕ್ರಮದ ಪ್ರಯುಕ್ತ ಪ್ರವಾಸ ಕರೆದುಕೊಂಡು ಹೋಗಲಾಗಿತ್ತು. ಅದರ ಪ್ರಯುಕ್ತ ನಡೆಸಲಾದ ಚಿತ್ರಕಲೆ, ಪ್ರಬಂಧ ಮತ್ತು ಜ್ಞಾನ ಪರೀಕ್ಷೆ ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮತ್ತು ಚಿಣ್ಣರ ವನದರ್ಶನ ಕಾರ್ಯಕ್ರಮದ ಸಾಧಕ ಭಾದಕಗಳನ್ನು ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಉದ್ದೇಶದಿಂದ ಡಿ.27 ರಂದು ಸರಕಾರಿ ಪ್ರೌಢಶಾಲೆ ಚೆಂಬು ಇಲ್ಲಿನ ಸಭಾಂಗಣದಲ್ಲಿ ಸಮಾಲೋಚನಾ ಸಭೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಧುಸೂದನ್ ಕೆ.ಎಂ ಅವರು ವಿದ್ಯಾರ್ಥಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಕುರಿತ ವಿದ್ಯಾರ್ಥಿಗಳ ಅನುಮಾನಗಳಿಗೆ ಉತ್ತರಿಸುತ್ತಾ ಆಹಾರ ಸರಪಳಿ, ಆನೆಗಳ ಸಹಜೀವನ ಮತ್ತು ಹಾರ್ನ್‍ಬಿಲ್ ಪಕ್ಷಿಯ ಜೀವನ ಕ್ರಮವನ್ನು ನಿದರ್ಶನಗಳಾಗಿ ನೀಡುವ ಮೂಲಕ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಇರುವುದೊಂದೆ ಭೂಮಿ ಇದರ ಉಳಿವಿನಿಂದಷ್ಟೇ ಮನುಕುಲದ ಉಳಿವು ಸಾಧ್ಯ ಆದ್ದರಿಂದ ನಾವುಗಳೆಲ್ಲರು ಪರಿಸರ ಸಂರಕ್ಷಣೆ ಅರಿವನ್ನು ಪಡೆಯುವುದರೊಂದಿಗೆ ಸಾರ್ವಜನಿಕರಲ್ಲಿ ಇದರ ಜಾಗೃತಿಯನ್ನು ಮೂಡಿಸಲು ಸಹಕರಿಸಬೇಕು ಎಂದು ಕಿವಿಮಾತನ್ನು ಹೇಳಿದರು. ಅಲ್ಲದೆ ಪರಿಸರ ಸಮತೋಲನದಿಂದ ಇರಬೇಕಾದರೆ ಗೆದ್ದಲು ಹುಳುವಿನಂತ ಚಿಕ್ಕ ಚಿಕ್ಕ ಜೀವರಾಶಿಯಿಂದ ಹಿಡಿದು ಜಿಂಕೆ, ಹಂದಿ, ಹುಲಿ, ಸಿಂಹ, ಆನೆಗಳಂತಹ ದೊಡ್ಡ ದೊಡ್ಡ ಜೀವಿಗಳು ಅಗತ್ಯವಾಗಿ ಇರಲೇ ಬೇಕು ಎಂದು ಹೇಳುತ್ತಾ ಪರಿಸರ ಸಮತೋಲಕ್ಕೆ ಪ್ರತಿಯೊಂದು ಜೀವಿ ಅಸ್ತಿತ್ವದಲ್ಲಿರಲೇ ಬೇಕು ಆದ್ದರಿಂದ ಪ್ರಾಣಿಗಳ ಬೇಟೆಯಾಡುವಂತಹ ಸಂಸ್ಕೃತಿಯನ್ನು ಕೈಬಿಡಬೇಕು ಎಂಬುದನ್ನು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಶಿಕ್ಷಕಿ ಶ್ರೀಮತಿ ದೇಜಮ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಗಳಾದ ರಾಘವ ಪಿ.ಜೆ, ಬಸವರಾಜಪ್ಪ ಎಸ್.ಹೆಚ್, ಅರಣ್ಯ ರಕ್ಷಕರಾದ ಚಂದ್ರಪ್ಪ ಎಂ. ಬಣಕಾರ್, ಶಿಕ್ಷಕಿಯರಾದ ಯಮುನಾ ಎನ್.ಜಿ ಮತ್ತು ಕಾಮಾಕ್ಷಿ ಪಿ.ಎಸ್ ಹಾಗೂ ಡಾ.ಯೋಗೀಶ ಬಿ.ಎಸ್, ವಾಸುದೇವಾ ಕೆ.ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರಪ್ಪ ಎಂ. ಬಣಕಾರ್ ನಿರೂಪಿಸಿದರು. ಕಾಮಾಕ್ಷಿ ಪಿ.ಎಸ್ ಎಲ್ಲರನ್ನು ಸ್ವಾಗತಿಸಿದರು. ಡಾ. ಯೋಗೀಶ ಬಿ.ಎಸ್ ಅವರು ಕಾರ್ಯಕ್ರಮದ ಯಶಸ್ವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ಚಿತ್ರಕಲೆ, ಪ್ರಬಂಧ ಮತ್ತು ಜ್ಞಾನ ಪರೀಕ್ಷೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…