ಸುಳ್ಯ: ಎಲ್ಲಾ ಭಾಷೆಗಳ ತಾಯಿ ಎನಿಸಿಕೊಂಡಿರುವ ಸಂಸ್ಕೃತ ಭಾಷೆಯ ಉಳಿವಿಗಾಗಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಸಂಸ್ಥೆ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ.
ಇಂದು ಮಾತೃಭಾಷೆಗೆ ಆಂಗ್ಲಭಾಷೆಯನ್ನು ಕಲಬೆರಕೆ ಮಾಡಿ ಭಾಷೆಯ ಸೌಂದರ್ಯವನ್ನು ಕಲುಷಿತಗೊಳಿಸಿ ಮಾತನಾಡುವುದನ್ನೇ ಪ್ರತಿಷ್ಠೆ ಅಂದುಕೊಂಡಿರುವ ಆಧುನಿಕ ಯುವಪೀಳಿಗೆಯ ನಡುವೆಯೂ ಈ ನೆಲದ ಮೂಲಸೆಲೆ ಮತ್ತು ಸಂಸ್ಕೃತಿ ಉಳಿಸುವ ಕಾಯಕ ನಡೆಯುತ್ತಿದೆ.
ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ಪ್ರತೀ ವರ್ಷ ಬೇಸಿಗೆ ರಜೆಯಲ್ಲಿ ನಡೆಯುವ ‘ವೇದ ಯೋಗ ಕಲಾ ಶಿಬಿರ’ದಲ್ಲಿ ವರ್ಷದಿಂದ ವರ್ಷಕ್ಕೆ ಭಾರತೀಯ ಕಲೆ ಸಂಸ್ಕೃತಿ ಸಂಪ್ರದಾಯಗಳಿಗೆ ಪೂರಕವಾದ ಭಿನ್ನ ಭಿನ್ನ ಚಟುವಟಿಕೆಗಳನ್ನು ಜೋಡಿಸಿಕೊಳ್ಳಲಾಗುತ್ತಿದ್ದು ಈ ಬಾರಿಯ ವಿಶೇಷವೆಂಬಂತೆ ‘ಸಂಸ್ಕೃತ ಸಂಭಾಷಣಾ ಶಿಬಿರ‘ವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಗೀತಾಲಕ್ಷ್ಮಿ ಮಾತಾಜಿ ಕಂಬಾರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಈ ಶಿಬಿರವನ್ನು ನಡೆಸಿಕೊಡುತ್ತಿದ್ದಾರೆ.
ತಲಾ 60 ವಿದ್ಯಾರ್ಥಿಗಳ ಎರಡು ತಂಡ ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದು ದಿನನಿತ್ಯ ಬಳಸುವ ವಸ್ತುಗಳು, ತರಕಾರಿಗಳು, ಹಣ್ಣು-ಹಂಪಲು, ಹೂವು, ಬಣ್ಣಗಳು, ಪ್ರಾಣಿ-ಪಕ್ಷಿಗಳು ಮುಂತಾದವುಗಳಿಗೆ ಸಂಬಂಧಿಸಿದ ಸಂಸ್ಕೃತ ಪದಪ್ರಯೋಗವನ್ನು ಆರಂಭದ ತರಗತಿಯಲ್ಲಿ ತಿಳಿಸಿಕೊಡಲಾಗುತ್ತಿದ್ದು ಆ ಬಳಿಕ ಚಿತ್ರದ ಮೂಲಕ ಮತ್ತು ಅಭಿನಯದ ಮೂಲಕವೂ ಆಕರ್ಷಕ ಶೈಲಿಯಲ್ಲಿ ಸಂಭಾಷಣಾ ತರಗತಿಗಳನ್ನು ನಡೆಸುವುದು ಮಾತಾಜಿಯವರ ವಿಶೇಷತೆಯಾಗಿದೆ.
ಶಿಬಿರಾರ್ಥಿಗಳು ಸಂಸ್ಕೃತ ಪದಪುಂಜಗಳ ಮೇಲೆ ಒಂದು ಹಂತದ ಹಿಡಿತ ಸಾಧಿಸಿದ ಬಳಿಕ ಸಂಸ್ಕೃತ ವ್ಯಾಕರಣದ ಕಲಿಕೆ ಮತ್ತು ‘ಏಕವಚನ’ ‘ಬಹುವಚನ’ದ ಪ್ರಯೋಗಗಳಲ್ಲದೇ ಸಂಸ್ಕೃತ ಭಾಷೆಯಲ್ಲಿ ವಿಶಿಷ್ಟವೆನಿಸಿರುವ ‘ದ್ವಿವಚನ’ ಪ್ರಯೋಗವನ್ನೂ ತಿಳಿಸಿಕೊಡಲಾಗುತ್ತದೆ. ಕೇವಲ 10 ದಿನಗಳಲ್ಲಿ ಸರಳ ರೀತಿಯ ಸಂಭಾಷಣಾ ಕೌಶಲ್ಯವನ್ನು ಕರಗತಗೊಳಿಸಿಕೊಂಡಿರುವ ಶಿಬಿರಾರ್ಥಿಗಳ ಗ್ರಹಿಕಾ ಸಾಮರ್ಥ್ಯ ವನ್ನು ಮೆಚ್ಚಿಕೊಂಡಿರುವ ಮಾತಾಜಿಯವರು, ಶಿಬಿರ ಮುಗಿಯುವ ಹಂತದಲ್ಲಿ ಪೂರ್ಣಪ್ರಮಾಣದಲ್ಲಿ ಸಂಸ್ಕ್ಕೃತ ಸಂಭಾಷಣಾ ಸಾಮಥ್ರ್ಯವನ್ನು ಹೊಂದುತ್ತಾರೆ ಅನ್ನುವುದಾಗಿ ಶಿಬಿರಾರ್ಥಿಗಳ ಕುರಿತು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘ಸಂಸ್ಕೃತ ಸಂಭಾಷಣಾ ಶಿಬಿರವು ಈ ವರ್ಷದ ವಿನೂತನ ಕಲಿಕಾ ಪ್ರಯೋಗವಾಗಿದ್ದು ಇದರಿಂದಾಗಿ ಶಿಬಿರಾರ್ಥಿಗಳ ಸಂಸ್ಕಾರ ವೃದ್ಧಿಯಾಗುತ್ತದೆ, ಕಠಿಣ ವೇದಮಂತ್ರಗಳ ಅರ್ಥವನ್ನು ಸುಲಭದಲ್ಲೇ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ, ವೇದಗಳ ಕುರಿತಾಗಿ ವೇದಾಧ್ಯಾಯಿಗಳಿಗೆ ಶ್ರದ್ಧೆ ಮತ್ತು ಆಸಕ್ತಿ ಇಮ್ಮಡಿಯಾಗುತ್ತದೆ. ಸಂಸ್ಕ್ಕೃತ ಸಂಭಾಷಣಾ ಕೌಶಲ್ಯವನ್ನು ಕರಗತ ಮಾಡಿಕೊಂಡ ವಿದ್ಯಾರ್ಥಿಗಳ ಮಾತಿನಲ್ಲಿ ಅಲ್ಪಪ್ರಾಣ ಮಹಾಪ್ರಾಣಗಳ ವ್ಯತ್ಯಾಸವನ್ನು ಗಮನಿಸಬಹುದಲ್ಲದೇ, ಅವರ ಉಚ್ಚಾರವೂ ಸ್ಪಷ್ಟವಾಗುತ್ತದೆ. ಬುದ್ಧಿ ಚುರುಕಾಗಿ ಮನಸ್ಸು ಪ್ರಫುಲ್ಲಿತವಾಗಿರುತ್ತದೆ. ಶಿಬಿರಾರ್ಥಿಗಳ ಮೂಲಕ ಪ್ರತೀ ಮನೆ ಮನೆಗಳಲ್ಲೂ ಸಂಸ್ಕೃತ ಭಾಷೆಯ ಕುರಿತಾಗಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ.’ ಎಂಬುದಾಗಿ ಪ್ರತಿಷ್ಠಾನದ ಅಧ್ಯಕ್ಷರೂ, ಶಿಬಿರದ ರೂವಾರಿಗಳೂ ಆಗಿರುವ ಪುರೋಹಿತ ನಾಗರಾಜ್ ಭಟ್ ಅಭಿಪ್ರಾಯಪಡುತ್ತಾರೆ.
ಆಂಗ್ಲಭಾಷಾ ವ್ಯಾಮೋಹದಿಂದಾಗಿ ಮಾತೃಭಾಷೆಯನ್ನೇ ಧಿಕ್ಕರಿಸಿ ತಾರತಮ್ಯದ ಧೋರಣೆ ತಳೆಯುವ ಆಧುನಿಕ ಯುವಪೀಳಿಗೆಯ ಮನಸ್ಸಿನಲ್ಲಿ ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಜಾಗೃತಿಯನ್ನು ಬಿತ್ತುತ್ತಿರುವ ಶ್ರೀಕೇಶವಕೃಪಾದ ಕಾರ್ಯ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…