ಸುಳ್ಯ: ರಸ್ತೆ ಬದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಕೋಳಿ ತ್ಯಾಜ್ಯ ಎಸೆದು ಕಂಡು ಬಂದಲ್ಲಿ ಪತ್ತೆ ಹಚ್ಚಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಕೋಳಿ ತ್ಯಾಜ್ಯ ಎಸೆದು ಸಿಕ್ಕಿ ಬಿದ್ದರೆ ಅಂತವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಕೋಳಿ ಅಂಗಡಿಯ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಎಚ್ಚರಿಕೆ ನೀಡಿದ್ದಾರೆ.
ಸುಳ್ಯ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ನಗರದ ಕೋಳಿ ಅಂಗಡಿ ಮಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಸುಳ್ಯ ನಗರ ಸಮೀಪದ ಬೇಂಗಮಲೆ, ಅರಂಬೂರು, ಆನೆಗುಂಡಿ, ಕಾಂತಮಂಗಲ ಮತ್ತಿತರ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯುತಿರುವುದರ ಬಗ್ಗೆ ದೂರುಗಳಿರುವ ಹಿನ್ನೆಲೆಯಲ್ಲಿ ಕೋಳಿ ಅಂಗಡಿ ಮಾಲಕರ ಸಭೆ ಕರೆಯಲಾಗಿತ್ತು. ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಮತ್ತು ವ್ಯವಸ್ಥೆ ಕಲ್ಪಿಸಬೇಕು. ಅದರಿಂದ ಸಾರ್ವಜನಿಕರಿಗೆ ಅಥವಾ ಪರಿಸರಕ್ಕೆ ಯಾವುದೇ ತೊಂದರೆ ಆಗಬಾರದು. ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇಲ್ಲದಿದ್ದರೆ ಕೋಳಿ ಅಂಗಡಿಗಳ ಲೈಸೆನ್ಸ್ ರದ್ದು ಪಡಿಸಲಾಗುವುದು. ಇದರ ಪರಿಶೀಲನೆಗೆ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಯಿತು. ಸಮಿತಿಯು ಪ್ರತಿ ಕೋಳಿ ಅಂಗಡಿಗಳಿಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ಮತ್ತು ಅಂಗಡಿಯ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿ ತಹಶೀಲ್ದಾರರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಯಿತು. ಪೊಲೀಸ್ ಇಲಾಖೆಯ ವತಿಯಿಂದ ವಿವಿಧ ಕಡೆಗಳಲ್ಲಿ ಬೀಟ್ ನಡೆಸಲಾಗುವುದು. ಕೋಳಿ ತ್ಯಾಜ್ಯ ಎಸೆಯುವುದು ಕಂಡು ಬಂದರೆ ಅಂತವರನ್ನು ಹಿಡಿದು ಕೇಸು ದಾಖಲಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಯಿತು. ಕೇರಳ ಮತ್ತು ಕರ್ನಾಟಕದಿಂದ ಬರುವ ವಾಹನಗಳಲ್ಲಿ ಕೋಳಿ ತ್ಯಾಜ್ಯ ತಂದು ಎಸೆಯುವ ಸಂಶಯ ಬಂದರೆ ಅಂತಹಾ ವಾಹನಗಳನ್ನು ಪರಿಶೀಲನೆ ನಡೆಸಿ ಕೋಳಿ ತ್ಯಾಜ್ಯ ಮತ್ತಿತರ ತ್ಯಾಜ್ಯಗಳು ಇದ್ದರೆ ಕೇಸು ದಾಖಲಿಸುವಂತೆ ಸೂಚನೆ ನೀಡಲಾಯಿತು. ನಗರ ಪಂಚಾಯತ್, ವಿವಿಧ ಗ್ರಾಮ ಪಂಚಾಯತ್ ಗಳಲ್ಲಿರುವ ಕೋಳಿ ಅಂಗಡಿಗಳ ಪರವಾನಗಿ, ನಿರಾಕ್ಷೇಪಣಾ ಪತ್ರಗಳನ್ನು ಪರಿಶೀಲಿಸಬೇಕು. ಪರವಾನಗಿ ಮತ್ತು ನಿರಾಕ್ಷೇಪಣಾ ಪತ್ರ ಇಲ್ಲದ ಮತ್ತು ಲೈಸೆನ್ಸ್ ನವೀಕರಿಸದೇ ಇರುವುದು ಕಂಡು ಬಂದರೆ ಅಂತಹಾ ಕೋಳಿ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ನಗರ ಪಂಚಾಯತ್ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ನೀಡಲಾಯಿತು.
ಪೊಲೀಸ್ ವೃತ್ತ ನಿರೀಕ್ಷಕ ಆರ್.ಸತೀಶ್‍ಕುಮಾರ್, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಎಸ್‍ಐ ಎಂ.ಆರ್.ಹರೀಶ್, ತಾ.ಪಂ.ಸದಸ್ಯೆ ಪುಷ್ಪಾ ಮೇದಪ್ಪ, ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ ಮತ್ತಿತರರು ಉಪಸ್ಥಿತರಿದ್ದರು.