ಸುಳ್ಯ: ಮಗುವಿಗೊಂದು ಗಿಡ ಎಂಬ ಮಾತು ಹಿಂದೆ ಇದ್ದರೆ ಈ ವರ್ಷ ಮಗುವಿಗೊಂದು ಇಂಗುಗುಂಡಿ ಎಂದೂ ಸೇರಿಸಲೇಬೇಕಾದ ಅನಿವಾರ್ಯತೆ ಇದೆ. ಕಾರಣ ಏಕೆಂದು ಹೇಳಬೇಕಾಗಿಲ್ಲ, ಅಷ್ಟೊಂದು ಜಲ ತತ್ತ್ವಾರ ಈ ಬಾರಿ ಕಂಡಿದೆ. ಹಾಗಿದ್ದರೆ ನಾವೇನು ಮಾಡಬಹುದು ಎಂಬುದಕ್ಕೆ ಮಾದರಿಯಾಗಿ ನಿಂತಿದೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ.
ಹಲವು ವೈಶಿಷ್ಠ್ಯಗಳಿಂದ ಕೂಡಿದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಈ ಬಾರಿ ಜಲಸಂರಕ್ಷಣೆಯ ಕಾರ್ಯದಲ್ಲಿ ಸುಳ್ಯ ತಾಲೂಕಿಗೆ ಮಾತ್ರವಲ್ಲ ಜಿಲ್ಲೆಗೆ, ರಾಜ್ಯಕ್ಕೆ ಮಾದರಿಯಾಗಿದೆ. ಸುಳ್ಯ ತಾಲೂಕಿನಂತಹ ಪ್ರದೇಶದಲ್ಲೂ ವಿಪರೀತವಾಗಿ ಈ ಬಾರಿ ಬರದ ಛಾಯೆ ಕಂಡಿದೆ. ಎಲ್ಲಾ ಕಡೆ ಎಲ್ಲರೂ ಬರ ಬರ ಎಂದು ಕೂಗಾಡಿದರು. ಪರಿಹಾರ ಏನು ಎಂಬುದರ ಕಡೆಗೆ ಕೆಲವು ಮಂದಿ ಯೋಚನೆ ಮಾಡಿದರು. ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ ಜಲಜಾಗೃತಿಗೆ ಮುಂದಾದರೆ ಪಡ್ರೆಯಂತಹ ಪ್ರದೇಶದಲ್ಲಿ ಜಲಸಂರಕ್ಷಣೆಗೆ ಹೊಳೆಯಲ್ಲಿ ನಡೆದು ಭವಿಷ್ಯದ ಬಗ್ಗೆ ಚಿಂತೆ ಮಾಡದೆ, ಚಿಂತನೆ ಮಾಡಿದರು. ಮುಂದಿನ 3 ವರ್ಷದಲ್ಲಿ ಸಮೃದ್ಧ ಜಲ ಪಡೆಯುವ ಭರವಸೆಯನ್ನು ವ್ಯಕ್ತಪಡಿಸಿದರು. ಇದೀಗ ಅದೇ ಮಾದರಿಯಲ್ಲಿ ಮತ್ತೊಂದು ಹೆಜ್ಜೆಯನ್ನು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಮಾಡಿದೆ. ಇದು ಪ್ರಾಯೋಗಿಕ ಪಾಠ. ಪುಸ್ತಕದಲ್ಲಿ ಜಲಸಂರಕ್ಷಣೆಯ ಬಗ್ಗೆ ಓದುವುದರ ಬದಲಾಗಿ ಸ್ವತ: ಇಂಗುಗುಂಡಿ ಮಾಡಿ ಪಾಠ ಕಲಿಯುವ ಜೀವನ ಪಾಠ ಇದು. ಇಲ್ಲಿ ಶಾಲೆಯ ಪ್ರತೀ ಮಗುವೂ ಮನೆಯಲ್ಲಿ ಕನಿಷ್ಠ ಒಂದು ಇಂಗು ಗುಂಡಿ ಮಾಡಿ ಜಲಸಂರಕ್ಷಣೆಗೆ ಹೆಜ್ಜೆ ಇರಿಸಿದ್ದಾರೆ. ಜಲದ ವಿಚಾರವು ಇಂದು ಆಂದೋಲನವಲ್ಲ , ಕ್ರಾಂತಿಯಾಗಬೇಕು ಎಂಬುದು ಸ್ನೇಹ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅಕ್ಷರ ದಾಮ್ಲೆ ಹೇಳುತ್ತಾರೆ.
ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯದಲ್ಲಿ ಪ್ರಾರಂಭವಾಗುವ ಹೊತ್ತಿಗೆ ನೀರಿನ ಕೊರತೆ ವಿಪರೀತವಾಗಿ ಕಾಡುತ್ತಿತ್ತು. ಹಾಗಿದ್ದರೆ ಮುಂದೇನು ಎಂಬ ಯೋಚನೆ ಶಾಲೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ಹಾಗೂ ಜಯಲಕ್ಷ್ಮಿ ದಾಮ್ಲೆ ಅವರನ್ನು ಕಾಡಿತ್ತು. ಆದರೆ ಜಲದ ಬಗ್ಗೆ ಹೆಚ್ಚು ಅರಿವು ಹಾಗೂ ಕಾಳಜಿ ಹೊಂದಿದ್ದ ಅವರು ಮೊದಲು ಮಾಡಿದ್ದು ಇಂಗುಗುಂಡಿ. ಶಾಲೆಯ ಆವರಣದ ಸುತ್ತ ಇಂಗುಗುಂಡಿ ತೋಡಿದರು. ಇದರ ಪರಿಣಾಮವಾಗಿ ಎರಡು ವರ್ಷದಲ್ಲಿ ಶಾಲೆಯ ಬಾವಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿತು. ಅಂದಿನಿಂದ ಅಂದಿನವರೆಗೆ ಬಾವಿಯಲ್ಲಿ ನೀರು ಬತ್ತಿಲ್ಲ, ಶಾಲೆಯ ಚಟುವಟಿಕೆಗೆ ನೀರು ಕಡಿಮೆಯಾಗಿಲ್ಲ ಇಂದು ಚಂದ್ರಶೇಖರ ದಾಮ್ಲೆ ವಿಶ್ವಾಸದಿಂದ ಹೇಳುತ್ತಾರೆ.
ಈ ಬಾರಿ ಜಲ ಕ್ಷಾಮ ತೋರುತ್ತಿದ್ದಾಗ ಚಂದ್ರಶೇಖರ ದಾಮ್ಲೆ ಅವರಿಗೆ ಶಾಲೆಯ ಯಶೋಗಾಥೆ ಕಣ್ಣಮುಂದೆ ಬಂತು. ತಕ್ಷಣವೇ ಈ ವಿಚಾರವನ್ನು ಹಂಚಿಕೊಂಡರು. ಇದಕ್ಕೆ ಪೂರಕವಾಗಿ ಅವರ ಪುತ್ರ ಅಕ್ಷರ ದಾಮ್ಲೆ ಅವರು ಕೂಡಾ ಜಲ ಸಂರಕ್ಷಣೆಗೆ ಶಾಲೆಯ ಮಕ್ಕಳ ಮನೆಯಲ್ಲಿ ಕನಿಷ್ಠ ಒಂದು ಇಂಗುಗುಂಡಿ ರಚನ ಮಾಡಿಸಬೇಕು ಎಂಬ ಯೋಚನೆಯಲ್ಲಿದ್ದರು. ಹೀಗಾಗಿ ತಡ ಮಾಡದೆ ಶಾಲೆ ಆರಂಭವಾದ ತಕ್ಷಣವೇ ಮಕ್ಕಳಿಗೆ ಇಂಗುಗುಂಡಿ ಬಗ್ಗೆ ಮಾಹಿತಿ ನೀಡಿ ಮನೆಯಲ್ಲಿ ಇಂಗುಗುಂಡಿ ರಚನೆ ಮಾಡಿ ಫೋಟೊ ಕಳಿಸಲು ಹೇಳಿದರು. ಕೆಲವೇ ದಿನದಲ್ಲಿ ಶಾಲೆಯ ಮಕ್ಕಳು ಇಂಗುಗುಂಡಿ ಮಾಡಿ ಫೋಟೊ ಕಳಿಸಿದರು. ಈಗ ಮಳೆ ಶುರುವಾಯಿತು. ನೀರು ಗುಂಡಿಯಲ್ಲಿ ನಿಲ್ಲ ತೊಡಗಿದೆ. ಓಡುವ ನೀರು ನಿಂತಿದೆ. ನಿಂತ ನೀರು ಇಂಗುತ್ತಿದೆ. ಭವಿಷ್ಯದಲ್ಲಿ ಲೀಟರ್ ಗಟ್ಟಲೆ ನೀರು ಭೂಮಿ ಸೇರಿ ನಮಗೂ ಲಭ್ಯವಾಗುತ್ತಿದೆ.
ಶಾಲೆಯ ವಿದ್ಯಾರ್ಥಿ ಜಯದೀಪ್ ಹೇಳುತ್ತಾನೆ, ಶಾಲೆಯಿಂದ ಈ ಸೂಚನೆ ಬಂದಾಗ ಖುಷಿಯಿಂದ ಇಂಗುಗುಂಡಿ ಮಾಡಿದ್ದೇನೆ. ಈಗ ನೀರು ನಿಲ್ಲುವಾಗ ಖುಷಿಯಾಗುತ್ತದೆ. ಬರುವ ವರ್ಷ ಇನ್ನೊಂದು ಇಂಗುಗುಂಡಿ ಮಾಡುತ್ತೇನೆ ಎನ್ನುತ್ತಾರೆ.
ಇನ್ನೊಬ್ಬ ವಿದ್ಯಾರ್ಥಿನಿ ಧೃತಿ ಹೇಳುತ್ತಾಳೆ,” ನಮಗೆ ಇಂಗುಗುಂಡಿ ಬಗ್ಗೆ ಗೊತ್ತಿರಲಿಲ್ಲ. ಈಗ ಇದರಲ್ಲಿ ನೀರು ನಿಲ್ಲುವಾಗ ಖುಷಿಯಾಗುತ್ತದೆ ಎನ್ನುತ್ತಾರೆ.
ಇಂಗುಗುಂಡಿ ಬಗ್ಗೆ ಯೋಚನೆ ಮಾಡಿದ ಚಂದ್ರಶೇಖರ ದಾಮ್ಲೆ ಹಾಗೂ ಅಕ್ಷರ ದಾಮ್ಲೆ ಹೇಳುತ್ತಾರೆ, “ಜಲಸಂರಕ್ಷಣೆಗೆ ಮೊದಲ ಆದ್ಯತೆ ಇಂದು ಬೇಕಾಗಿದೆ. ಸರಕಾರ ಯೋಜನೆ ಮಾಡುವುದಕ್ಕಿಂತ ಪ್ರತಿಯೊಬ್ಬ ವ್ಯಕ್ತಿಗೂ ಜಾಗೃತಿಯಾಗಬೇಕಿದೆ. ಇದಕ್ಕಾಗಿ ಶಾಲೆಗಳಲ್ಲಿಯೇ ಮೊದಲ ಹೆಜ್ಜೆ ಇರಬೇಕು ಎಂಬುದು ನಮ್ಮ ಅಪೇಕ್ಷೆ” ಎನ್ನುತ್ತಾರೆ.
ಈ ಕೆಲಸ ಸುಳ್ಯ ತಾಲೂಕಿನ ಮಾತ್ರವಲ್ಲ ಜಿಲ್ಲೆಯ ಪ್ರತೀ ಶಾಲೆಗಳಲ್ಲಿ ಒಂದು ಮಗು ಕನಿಷ್ಠ ಒಂದು ಇಂಗುಗುಂಡಿ ರಚನೆ ಮಾಡುವ ಪ್ರೋತ್ಸಾಹ, ಶಾಲೆಯು ಮುತುವರ್ಜಿ ವಹಿಸುವಂತಾಗಬೇಕಿದೆ. ಜಲಸಂರಕ್ಷಣೆಗೆ ಸದ್ಯ ನಾವು ಮಾಡಬಹುದುದಾದ ಇಂದಿನ ಸಣ್ಣ ಪ್ರಯತ್ನ ಇದು.
Advertisement
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…