ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆ ಯಲ್ಲಿ ಆಕರ್ಷಕ ರೀತಿಯಲ್ಲಿ ಜೋಡಿಸಿಟ್ಟ ಹಪ್ಪಳಗಳು ಕಾಣಸಿಗುತ್ತವೆ. ಯಾಕೋ ಮೊದಲ ಬಾರಿಗೆ ಅದೂ ಹಲಸಿನ ಹಪ್ಪಳವನ್ನು ಈ ರೀತಿಯಲ್ಲಿ ಕಂಡಾಗ ಮನಸ್ಸಿಗೆ ಏನೋ ಕಸಿವಿಸಿಯಾಗಿತ್ತು.
ಹಪ್ಪಳದೊಂದಿಗೆ ಬಾಲ್ಯದ ನೆನಪುಗಳು ಕಣ್ಣ ಮುಂದೆ ಒಂದೊಂದಾಗಿ ಬರಲಾರಂಭಿಸುತ್ತವೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಅಜ್ಜಿ ಮನೆಗೆ ಹೋಗುವ ಸಂಭ್ರಮ. ಅಲ್ಲಿ ಮಾಡುವ ಹಪ್ಪಳ, ಮಾಂಬಳ, ಸಂಡಿಗೆ ಕೆಲಸಗಳಿಗೆ ನಾವೂ ಸಾಥ್ ಕೊಡುವ ಉತ್ಸಾಹ.
ಒಂದೊಂದು ಹಲಸಿನಹಣ್ಣುಗಳಿಗೂ ಬೇರೆ ಬೇರೆ ರೀತಿಯ ಗುಣಗಳು. ಕೆಲವು ಹಲಸಿನ ಕಾಯಿಗಳು ಪಾಯಸ ಕಡುಬುಗಳಿಗೆ ಆಗುವಂತದ್ದಾದರೆ, ಕೆಲವು ಕಾಯಿಗಳು ಸೋಂಟೆ ಹಪ್ಪಳಗಳಿಗೆ ರುಚಿಯಾಗಿರುತ್ತವೆ. ಇನ್ನೂ ಕೆಲವು ಸಾಂಬಾರು , ಪಲ್ಯ, ದೋಸೆಗಳಿಗೆ ಲಾಯಕ್ ಆಗಿರುತ್ತವೆ. ಕೆಲವು ಹಸಿ ತಿನ್ನಲು ರುಚಿ. ಬಹುಕಾಲ ಉಳಿಯುವಂತಹ ಹಲಸಿನ ಸೊಳೆಗಳನ್ನು ಉಪ್ಪು ನೀರಿನಲ್ಲಿ ಹಾಕಿ ಇಡುವುದು ರೂಡಿಯಲ್ಲಿದೆ. ಆಕಾಲದಲ್ಲೂ ಕೂಡ ಹಲಸಿನ ವಿವಿಧ ಖಾದ್ಯಗಳನ್ನು ಸವಿಯುವುದು ಇದರಿಂದ ಸಾಧ್ಯ ವಿದೆ. ನಮ್ಮ ಅಜ್ಜಿ ಈ ಸೊಳೆಗಳನ್ನು ಬಳಸಿ ಹಪ್ಪಳ ಮಾಡಿದ್ದುಂಟು. ಬೇಸಿಗೆಕಾಲದಲ್ಲಿ ಕೆಲವೊಮ್ಮೆ ಹಲಸಿನಕಾಯಿ ಬೆಳೆದಿಲ್ಲದೇ ಇರುವಾಗ ಉಪ್ಪಿನಲ್ಲಿ ಹಾಕಿಟ್ಟ ಸೊಳೆಯನ್ನು ಬಳಸಿ ಹಪ್ಪಳ ಮಾಡಿ ಬಿಡುತ್ತಿದ್ದರು. ಅದು ಒಂದು ರೀತಿಯ ಗಮ್ಮತು.
ಅಜ್ಜ ಬೆಳಿಗ್ಗೆಯೇ ಹಲಸಿನಕಾಯಿ ಕೊಯ್ದು ಭಾಗ ಮಾಡಿ ಕೊಟ್ಟು ಬಿಡುತ್ತಿದ್ದರು. ಅಜ್ಜಿ ನಮಗೂ ನಮ್ಮ ಅತ್ತೆಯಂದಿರ ಕೈಗೂ ಈ ಸೊಳೆಗಳನ್ನು ಸರಿಮಾಡುವ ಜವಾಬ್ದಾರಿ ಗಳನ್ನು ಒಪ್ಪಿಸಿ ಬಿಡುತ್ತಿದ್ದರು. ನಾವೆಲ್ಲ ಸೇರಿ ಸರಿಮಾಡಿ ಕೊಟ್ಟರೆ ಅವರು ದೊಡ್ಡ ಒಲೆಯಲ್ಲಿ ಬೇಯಿಸಿ ಬೀಸಲು ತಯಾರು ಮಾಡಿಕೊಡುತ್ತಿದ್ದರು. ಅತ್ತೆಯಂದಿರ ಜೊತೆ ನಾವು ಸೇರಿ ಬೀಸುತ್ತಿದ್ದೆವು. ಆಮೇಲೆ ಉಂಡೆ ಮಾಡಿ ಜೋರು ಬಿಸಿಲು ಬರಬೇಕಾದರೆ ಒತ್ತಿಯಾಗ ಬೇಕೆಂದು ಗಡಿಬಿಡಿ ಮಾಡುತ್ತಿದ್ದರು.. ಅಜ್ಜ ಹಪ್ಪಳ ಒತ್ತುವಾಗ ನಾವು ನಾವು ಎಂದು ಜಗಳವೂ ನಡೆಯುತ್ತಿತ್ತು.
ಒಣಗಿದ ಹಪ್ಪಳವನ್ನು ಅಜ್ಜಿ ಜತನದಿಂದ ಅಟ್ಟಿ ಮಾಡಿ ಜೆಂಗದ ಮೇಲೆ ಶೇಕರಿಸಿಡುತ್ತಿದ್ದದ್ದೇ ಒಂದು ಚೆಂದ. ಗಾಳಿಯಾಡದಂತೆ ಕಾಪಾಡಿ ಬೇಕೆಂದಾಗ ಅವರೇ ತೆಗೆದು, ಹುರಿದು ಅಥವಾ ಕೆಂಡದಲ್ಲಿ ಸುಟ್ಟು ಕೊಬ್ಬರಿ ತುಂಡಿನೊಂದಿಗೆ ತಿನ್ನಲು ಕೊಟ್ಟರೆ ತಟ್ಟೆ ಖಾಲಿಯಾದದ್ದೇ ಗೊತ್ತಾಗುತ್ತಿರಲಿಲ್ಲ. ಹೀಗೆ ಹಪ್ಪಳ ಹಳ್ಳಿಯ ೮೦ ರ ದಶಕದ ನೆನಪುಗಳನ್ನು ಕಣ್ಣ ಮುಂದೆ ತಂದು ಬಿಟ್ಟಿತು.
ಬದಲಾದ ಕಾಲ ಘಟ್ಟದಲ್ಲಿ ಹಪ್ಪಳ ತಯಾರಿ, ಮಾರಾಟವೊಂದು ಯಶಸ್ವಿ ಉದ್ಯಮ. ಹಲವು ಜನರ ಬದುಕಿನ ದಾರಿ ದೀಪ. ಒಳ್ಳೆಯ ಜಾತಿಯ ಒಂದೆರಡು ಹಲಸಿನ ಮರವಿದ್ದು, ದುಡಿಮೆಯ ಮನಸ್ಸಿದ್ದರೆ ಬದುಕಿನ ದಾರಿ ತಾನೇ ತಾನಾಗಿ ಗೋಚರಿಸುವುದರಲ್ಲಿ ಸಂಶಯವಿಲ್ಲ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement