ಹ್ಹುಂ…ನನಗಾಗ ಹದಿನೆಂಟರ ಹರೆಯ…ಪ್ರಾಯದ ಗುಣವಿದೆಯಲ್ಲಾ…ಅದು ತನ್ನ ಮುನ್ನಡೆಸುವ ಕಾಲ.ಡಿಗ್ರಿ ಪರೀಕ್ಷೆ ಮುಗಿದು ನನ್ನ ಪರಮ ಗುರು ಮಾತಾಮಹರ ಆಶಯದಂತೆ ಕೃಷಿಗೆ ಕಾಲಿಟ್ಟ ದಿನಗಳು.
ಮಳೆಗಾಲ ಇನ್ನೇನು ಬಂತು.. (ಮೂವತ್ತೆರಡು ವರುಷಗಳ ಹಿಂದಿನ ಮಳೆಗಾಲ ,ಪರಮ ವೈಭವದ ಮಳೆಗಾಲ.2019 ರ ಮಳೆಗಾಲದಂತಲ್ಲ.) ಮಳೆಗಾಲ ಮತ್ತು ಕೃಷಿ ಅದರಲ್ಲೂ ಅಡಿಕೆ ಕೃಷಿ ಎಂದರೆ ಕೊಳೆರೋಗಕ್ಕೆ ಸಿಂಪಡಣೆ ಮಾಡುವುದೇ ಒಂದು ಮುಖ್ಯ ಕೆಲಸ. ಇದುವೇ ಮುಂದಿನ ದಿನಗಳಿಗೆ ಪ್ರವೇಶ ಪರೀಕ್ಷೆ. ಸರಿ… ಅಜ್ಜನವರು ಹಿಂದೆಯೇ ಬಂದು ಬಂದು ಸಿಂಪಡಣೆ ಬಗ್ಗೆ ಆದೇಶ ಜಾರಿ ಮಾಡುತ್ತಾ ಇದ್ದರು… ಅಂದರೆ ಸಿಂಪಡಣೆಗೆ ಸಂಭಂದಿಸಿದ ಮಾಹಿತಿ ಕೊಡುತ್ತಾ ಇದ್ದರು. ಆದರೆ ಪ್ರಾಯದ ಗುಣದ ಆದೇಶದಂತೆ ಕೇಳಿಯೂ ಕೇಳದಂತೆ ಇರುತ್ತಿದ್ದೆ. ಸರಿ ನನ್ನ ಸುಪರ್ದಿಯಲ್ಲಿ ಕೊಳೆರೋಗ ಸಿಂಪರಣಾ ದಿನ ಬಂದೇ ಬಿಟ್ಟಿತು. ಸೈನ್ಯದೊಂದಿಗೆ (ಕೆಲಸದವರು) ಸೇನಾಪತಿಯಾಗಿ ನಾ ಮುಂದೆ ಅವರು ಹಿಂದೆ ಅನುಸರಿಸಿ ಬಂದರು. ಸಿಂಪರಣೆಗಾಗಿ ಎಷ್ಟು ಮೈಲುತುತ್ತ ದ್ರಾವಣ ಮತ್ತು ಸುಣ್ಣ ಸೇರಿಸಬೇಕೆಂದು ಕೆಲಸದವರು ಕೇಳಿದ್ದೇ ತಡ ಅಜ್ಜನ ಪಾಠ ನೆನಪಿಗೇ ಬಾರದಾಯಿತು… (ಮನಸ್ಸಿಟ್ಟು ಕಿವಿಗೊಟ್ಟು ಕೇಳಿದ್ದರೆ ತಾನೇ) ಆದರೂ ಎಲ್ಲಾ ಗೊತ್ತಿದ್ದವನಂತೆ ನಾಕು ಪಾಟೆ ಮೈಲುತುತ್ತ ಮತ್ತು ಎಂಟುಪಾಟೆ ಸುಣ್ಣ ಸೇರಿಸಲು ಆದೇಶಿಸಿದೆ…. ಸರಿ ಬೋರ್ಡೋ ಪಾಕ ತಯಾರು… ಕೆಲಸದವನು “…ಸಮಾ ನೀಲಿ ತೋಜುಂಡು ,ಮೈಲುತುತ್ತ ಹೆಚ್ಚಾಂಡೋಂದು…ಅಜ್ಜೇರೆಡ ಕೇಂಡಾರಾ” (….. ದ್ರಾವಣ ತುಂಬಾ ನೀಲಿ ಕಾಣ್ತಿದೆ,ಮೈಲುತುತ್ತ ಹೆಚ್ಚಾಯಿತೇನೋ…ಅಜ್ಜನವರಲ್ಲಿ ಕೇಳಿಕೊಂಡಿದ್ದೀರಾ) ಎಂದ. ನನಗೆಲ್ಲ ಗೊತ್ತಿದೆ ಹೇಳಿದಷ್ಟು ಮಾಡು ಎಂದೆ….ಪಾಪ…ಅವನಿಗೇನು….ಸಿಂಪರಣೆ ಮುಂದುವರಿಯಿತು.
ಸಿಂಪರಣೆ ಮುಗಿಸಿ ಮನೆಗೆ ಬಂದಾಗ ತಾತ ಹಿಂದೆಯೇ ಬಂದು….ಎಷ್ಟು ಡ್ರಮ್ ಮದ್ದು ಮುಗಿಯಿತು, ಇನ್ನೆಷ್ಟು ಮೈಲುತುತ್ತ ,ಸುಣ್ಣ ಉಳಿದಿದೆ…ಮುಂತಾಗಿ ಪ್ರಶ್ನೆ ಕೇಳುತ್ತಾ ಬರುತ್ತಿದ್ದರು…ನಾನು…ಏನೇನೋ ಉತ್ತರ ಹೇಳುತ್ತಾ ತಪ್ಪಿಸಿಕೊಳ್ಳುತ್ತಿದ್ದೆ.
ಮರುದಿನ ಕೆಲಸದವ ಸಂಬಳಕ್ಕಾಗಿ ಅಜ್ಜನವರಲ್ಲಿ ಬಂದಾಗ ಅಜ್ಜನವರು ಸಂಪೂರ್ಣ ವರದಿ ಪಡಕೊಂಡರು. ಕೆಲಸದವ” ಯಾನ್ ಪಂಡೆ ಮರ್ದ್ ಕಂಡಾಬಟ್ಟೆ ನೀಲಿ ತೋಜೊಂಡಿತ್ತ್ಂಡ್…ಆರೆಡ ಪಂಡೆ…ಎನನೇ ಜೋರು ಮಲ್ತೆರ್……ಡ್ರಮ್ಮುಡು ನಣ ರಡ್ಡ್ ಪಾಕದ ಮೈಲುತುತ್ತ ಆವಾತೇ…..”(ನಾನಂದೆ, ದ್ರಾವಣ ತುಂಬಾ ನೀಲಿಯಾಗಿ ಕಾಣ್ತಿದೆ ಎಂದು ಆದರೆ ನನ್ನನ್ನೇ ಗದರಿಸಿ ಬಿಟ್ಟರು.) ಎಂದದ್ದು ದೂರದಿಂದ ನನ್ನ ಕಿವಿಗೆ ಬಿತ್ತು. ಏನೋ ಎಡವಟ್ಟಾಗಿದೆ ಎಂದು ಮನಸ್ಸು ಹೇಳುತ್ತಾನೇ ಇತ್ತು. ಅಜ್ಜನವರು ನನ್ನಲ್ಲಿ ಈ ಬಗ್ಗೆ ಮಾತನಾಡಲೇ ಇಲ್ಲ….ದಿನಗಳುರುಳುತ್ತಾ ಬಂದಾಗ ನನ್ನ “ಬುದ್ದಿವಂತಿಕೆ”… ಒಂದು ಭಾಗ ಕರಟಿದ ಎಳೆ ಅಡಿಕೆಯ ರೂಪದಲ್ಲಿ ಮರದ ಬುಡದಲ್ಲಿ ಬಿದ್ದು ನನ್ನನ್ನೇ ನೋಡುತ್ತಾ ..”ಹಿರಿಯರ ಮಾತು ನೀನು ಕೇಳಿಸಿಕೊಳ್ಳದೆ ನಾವು ಬಾಳುಕಳೆದುಕೊಂಡೆವು” ಎಂದು ರೋಧಿಸುತ್ತಿದ್ದವು…. ಅಡಿಕೆ ಹೆಕ್ಕಿ ತಂದ ಸೇಸು..”…ಮುರಾಣಿ ಸುರೇಸಣ್ಣೇರ್ ಮರ್ದ್ ಬುಡ್ಪಾಯಿನವುಳು ಲತ್ತ್ ಬಜೆಯಿ ಪೂರಾ ಕೆಂಪಾದ್ ಬೂರ್ದ್ಂಡ್” “(ಮೊನ್ನೆ ಸುರೇಶಣ್ಣ ಮದ್ದು ಸಿಂಪರಣೆ ಮಾಡಿಸಿದ ತೋಟದಲ್ಲಿ ಎಳೆ ಅಡಿಕೆ ಕೆಂಪಾಗಿ ಬಿದ್ದಿದೆ)….ಅಂತ ರಾಜ್ಯಪಾಲರಿಗೆ (ಅಜ್ಜನವರಿಗೆ) ವರದಿ ಕೊಡುವುದು ಕಿವಿಗೆ ಬಿದ್ದಾಗ ನಿಜವಾಗಿಯೂ ‘ನನಗೇನೂ ತಿಳಿದಿಲ್ಲ ‘ಎಂಬುದು ನನಗೇ ಗೊತ್ತಾಯ್ತು…ದೂರದಿಂದ ಅಜ್ಜನವರ ವಾರೆನೋಟವೇ ನನ್ನನು ಮುಂದೆ ಕೆಲವು ದಿನಗಳು ಅಜ್ಜನವರ ಎದುರು ಕಾಣಿಸಿಕೊಳ್ಳದಂತೆ ಮಾಡಿತ್ತು.
ಪಾಠ …..
1. ಯಾವುದೇ ಪಾಠವಿರಲಿ ಮೂಲಪಾಠ ಗಟ್ಟಿಯಾಗಿರಬೇಕು.
2.ಒಂದು ನಿಮಿಷದ ಅಸಡ್ಡೆ ,ಉಢಾಫೆ ಜೀವಮಾನದ ಹೊಡೆತ ಕೊಡುತ್ತದೆ.
3.ಅನುಭವದ ಮಾತನ್ನೂ ಕೆಲವೊಂದು ಸಮಯದಲ್ಲಿ ಕೇಳಬೇಕು.
ಸಿಂಪರಣಾ ಕೆಲಸ ಸುಲಭ ಮಾಡಿಕೊಳ್ಳುವ ಉದ್ದೇಶದಿಂದ ಅಜ್ಜನವರು ಆ ಕಾಲದಲ್ಲೇ ,ತೋಟದ ಮದ್ಯದಲ್ಲಿ ,ಮೈಲುತುತ್ತ ಇಡೀ ಚೀಲವನ್ನೇ ಇನ್ನೂರು ಲೀಟರ್ ನೀರಿನಲ್ಲಿ ನೆನೆ ಹಾಕುತ್ತಿದ್ದರು. ಅಂದರೆ ಒಂದು ಕೆಜಿ ಮೈಲುತುತ್ತ ಅಂದರೆ ನಾಲ್ಕು ಲೀಟರ್ ದ್ರಾವಣ. ಒಂದು ಡ್ರಮ್ ಮದ್ದು ಮಾಡಬೇಕಾದರೆ ಎಂಟು ಲೀಟರ್ ದ್ರಾವಣ ಸೇರಿಸಬೇಕು. ಅಳತೆಗೋಸ್ಕರ ನಾಲ್ಕು ಲೀಟರ್ ನ ಪಾಟೆಯೂ ಇರುತ್ತಿತ್ತು.ನಾನು ಎಡವಿದ್ದೂ ಇಲ್ಲೇ…ಅಜ್ಜನವರ ಮಾತು ಕಿವಿಗೆ ಹಾಕಿಕೊಳ್ಳದೆ ಎರಡು ಪಾಟೆ ಮೈಲುತುತ್ತ ದ್ರಾವಣ ಹಾಕಬೇಕಾದಲ್ಲಿ ನಾಲ್ಕು ಪಾಟೆ ಹಾಕಲು ಹೇಳಿ, ಅದು ಎಳೆ ಅಡಿಕೆಗೆ ಖಾರವಾಗಿ ಎಳೆ ಅಡಿಕೆ ನೆಲಕಚ್ಚುವಲ್ಲಿ ಪರ್ಯಾವಸಾನವಾಯಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…