ಈಗ ಎಲ್ಲೆಡೆಯೂ ಸದ್ದು ಮಾಡುತ್ತಿರುವ ವಿಷಯ ಭೂಕುಸಿತ. ವಯನಾಡ್ ಘಟನೆಯ ನಂತರವಂತೂ ತೀವ್ರವಾದ ಚರ್ಚೆಯಾಗುತ್ತಿದೆ. ಪರಿಸರದ ಒಳಗೆ ನಡೆಯುತ್ತಿರುವ ಘಟನೆಗಳು, ಭೂಮಿಯ ಒಳಗೆ ನಡೆಯುತ್ತಿರುವ ಪ್ರಾಕೃತಿಕವಾದ ಚಲನೆಗಳು ಇತ್ಯಾದಿಗಳ ಬಗ್ಗೆ ಅಧ್ಯಯನಗಳು ಹೊಸ ಹೊಸ ರೂಪದಲ್ಲಿ ನಡೆಯುತ್ತಿದೆ. ಆದರೆ 1982 ರಲ್ಲಿ ಸುಳ್ಯದ ಕೆಲವು ಕಡೆ ಭೂಕುಸಿತ ಕಂಡುಬಂದಿತ್ತು. ಆಗ ಇದನ್ನು ಕೊಪ್ಪರಿಗೆ ಹೋಗುವುದು ಎಂದು ಜನರು ಮಾತನಾಡುತ್ತಿದ್ದರು, ಈಗಲೂ ಮಾತನಾಡುತ್ತಾರೆ ಕೂಡಾ. ಇಂತಹ ಕುಸಿತಗಳ ಬಗ್ಗೆ 1982 ರಲ್ಲಿ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬಿ ಆರ್ ಬಾದಾಮಿ ಮತ್ತು ಬಿ ಎಂ ರವೀಂದ್ರ ಅವರು ಲೇಖನವನ್ನು ಉದಯವಾಣಿ ಪತ್ರಿಕೆಯು 18-11-1982 ರಂದು ಪ್ರಕಟ ಮಾಡಿತ್ತು. ಹವಾಮಾನ ಆಸಕ್ತ, ಮಳೆ ದಾಖಲು ಮಾಡುತ್ತಿರುವ ಸುಳ್ಯದ ಬಾಳಿಲದ ಪಿಜಿಎಸ್‌ಎನ್ ಪ್ರಸಾದ್ ಅವರು ಈ ಬರಹವನ್ನು ದಾಖಲಿಸಿ ಇರಿಸಿಕೊಂಡಿದ್ದರು. ಈಚೆಗೆ ಭೂಕುಸಿತದ ಸುದ್ದಿಗಳು ಬಂದಾಗ ಈ ಲೇಖನಗಳನ್ನು ಅವರು ಉಲ್ಲೇಖಿಸಿದ್ದರು. ಅಂದು ಉದಯವಾಣಿಯಲ್ಲಿ ಪ್ರಕಟವಾದ ಬರಹದ ಯಥಾರೂಪ ಇಲ್ಲಿದೆ……..ಮುಂದೆ ಓದಿ….
ಆಗಸ್ಟ್ 2ರಂದು (1982) ಸುಳ್ಯ ತಾಲೂಕಿನ ಕೆಲವು ಸ್ಥಳಗಳಲ್ಲಿ ಭೂಕುಸಿತ, ಸೀಳುಗಳು ಇತ್ಯಾದಿ ಸಂಭವಿಸಿ ಜನಸಾಮಾನ್ಯರನ್ನು ವಿಸ್ಮಯಗೊಳಿಸಿದವು.
ಅರಣ್ಯರಿಂದ ಅವೃತವಾದ ಬೇಂಗಮಲೆಯ ಒಂದು ಗುಡ್ಡದ ತಪ್ಪಲಲ್ಲಿ ಅರ್ಧ ಅಂಡಾಕಾರದ ಎರಡು ಮೀಟರ್ ಆಳದ ಹೊಂಡವಾಗಿದೆ. ಇದಕ್ಕೆ ತಾಗಿ ಇಳಿಜಾರಿನಲ್ಲಿಆರರಿಂದ ಎಂಟು ಮೀಟರ್ ಅಗಲದ ನೂರೈವತ್ತು ಮೀಟರ್ ಉದ್ದದ ರಸ್ತೆಯನ್ನು ಹೋಲುವಂತಹ, ನಿಸರ್ಗ ನಿರ್ಮಿತವಾದ ರಚನೆಯಾಗಿದೆ. ಇಲ್ಲಿ ಕೊಪ್ಪರಿಗೆ ಜರಿದಿದೆ ಎಂದು ಜ್ಯೋತಿಷಿಗಳು,ಊರಿನ ಹಿರಿಯರು ಬಣ್ಣಕಟ್ಟಿ ವಿವರಿಸುತ್ತಾರೆ.
ಕೋಟೆ ಮುಂಡುಗಾರಿನ ಸೇಡಿಕಜೆ ನಾರ್ಣ ನಾಯ್ಕರ ತೋಟದ ಉತ್ತರದಲ್ಲಿ ಎತ್ತರದ ಗುಡ್ಡದ ಇಳಿಜಾರಿನಲ್ಲಿ ಅಸಂಖ್ಯ ಸೀಳುಗಳು ಬಿರಿದು ಕೆಲವು ಭಾಗಗಳು ತಗ್ಗಿ, ಮೆಟ್ಟಲುಗಳಂತಹ ರಚನೆಯಾಗಿದೆ.
ಐವರ್ನಾಡು ಗ್ರಾಮದ ಕುಡುಂಗ್ ಕೃಷ್ಣಪ್ಪ ಗೌಡ ಅವರ ತೋಟದ ಬಳಿಯ ಗುಡ್ಡ ಜರಿದು ಮಣ್ಣು ಬಿದ್ದು ಸುಮಾರು 200 ಅಡಿಕೆ ಮರಗಳು ಹಾಗೂ ನೀರು ಹರಿಯುತ್ತಿದ್ದ ಒಂದು ತೋಡು ಭೂಗತವಾದವು. ಸಹಸ್ರಾರು ಜನರಿಗೆ ಸೋಜಿಗವೆನಿಸಿದ ಈ ನೈಸರ್ಗಿಕ ಘಟನೆಗಳಿಂದ ಕುತೂಹಲಗೊಂಡು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಾವು ಮೇಲೆ ಹೇಳಿದ ಸ್ಥಳಗಳನ್ನು 11-9- -82 ರಂದು ಸಂದರ್ಶಿಸಿ ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸಿವೆವು.
ಬೇಂಗಮಲೆ: ಸುಳ್ಯದಿಂದ ಮಂಗಳೂರಿಗೆ ಬರುವಾಗ ಮೂರು ಕಿ.ಮಿ. ದೂರದಲ್ಲಿ ಪೈಚಾರಿದೆ. ಪೈಚಾರಿನಿಂದ ಬೆಳ್ಳಾರೆಗೆ ಹೋಗುವ ದಾರಿಯಲ್ಲಿ ಮೂರು ಕಿ.ಮೀ. ಕ್ರಮಿಸಿದರೆ ‘ಬೆಳ್ಳಾರೆ 8’ ಎಂದು ಸೂಚಿಸುವ ಕಿಲೋಮೀಟರ್ ಕಲ್ಲಿನ ಬಳಿ ಬಲಕ್ಕೆ ತಿರುಗಿ ಅರಣ್ಯ ಇಲಾಖೆ ನಿರ್ಮಿಸಿದ ಮಣ್ಣಿನ ದಾರಿಯಲ್ಲಿ ಮುನ್ನೂರೈವತ್ತು ಮೀಟರ್ ಮುಂದೆ ಹೋದರೆ ಬೆಂಗಮಲೆಯ ವಿಚಿತ್ರವೆನಿಸುವ ಘಟನೆಯ ಸ್ಥಳ ಸಿಗುತ್ತದೆ. ಬೇಂಗಮಲೆಯ 913 ಅಡಿ ಎತ್ತರದ ಗುಡ್ಡದ ದಕ್ಷಿಣ ಪಶ್ಚಿಮ (ನೈಋತ್ಯ) ಗುಡ್ಡದ ತಪ್ಪಲು 20-30 ಡಿಗ್ರಿಗಳಷ್ಟು ಇಳಿಜಾರಾಗಿದೆ. ಇಲ್ಲಿ ಪ್ಯಾರಾ ಬೋಲದಂತಹ (ಅರ್ಧ ಅಂಡಾಕಾರದ) ಎರಡು ಮೀಟರ್ ಆಳದ ಹೊಂಡವಾಗಿದೆ. ಹೊಂಡದ ಅಗಲ ಮೇಲ್ಬಾಗದಲ್ಲಿ (ಅಂದರೆ ಉತ್ತರದ ಕಡೆ) ನಾಲ್ಕು ಮೀಟರ್, ಕೆಳಭಾಗದಲ್ಲಿ (ದಕ್ಷಿಣ ಭಾಗ) ಎಂಟು ಮೀಟರ್, ಹೊಂಡದ ಉದ್ದ ಹದಿನಾರು ಮೀಟರ್, ಹೊಂಡದ ಅಂಚಿಗೆ ತಾಗಿ ದಕ್ಷಿಣಕ್ಕೆ ಗುಡ್ಡದ ಇಳಿಜಾರಿನಲ್ಲಿ ಆರರಿಂದ ಎಂಟು ಮೀಟರ್ ಆಗಲದ, ನೂರೈವತ್ತು ಮೀಟರ್ ಉದ್ದದ ಒಂದು ನೈಸರ್ಗಿಕ ರಸ್ತೆ ನಿರ್ಮಾಣವಾಗಿದೆ .
ಈ ಭೂಭಾಗದ ಬದಲಾವಣೆಯನ್ನು 3-8-82 ರಂದು ಬೆಳಗ್ಗೆ ಗಮನಿಸಿದವರಲ್ಲಿ ಸುಳ್ಯ ರಬ್ಬರ್ ವಿಭಾಗದ ಫಾರೆಸ್ಟರ್ ಶ್ರೀ ಬೆಳ್ಳಿಯಪ್ಪ ಒಬ್ಬರು. ಹಿಂದಿನ ದಿನ ಸಂಜೆಯವರೆಗೆ ಎಲ್ಲವೂ ಸರಿಯಾಗಿತ್ತಂತೆ ಹಾಗಾಗಿ ಎರಡನೆಯ ತಾರೀಕು ರಾತ್ರಿ ಈ ಘಟನೆ ನಡೆಯಿತು ಎನ್ನುವುದರಲ್ಲಿ ಸಂಶಯವಿಲ್ಲ. ಮಾರನೆಯ ದಿನ ಹಗಲು(3 ನೇಯ ತಾರೀಕು)ಈ ನಿಸರ್ಗ ನಿರ್ಮಿತ ರಸ್ತೆಯ ಮಧ್ಯೆ ತೋಡಿನಲ್ಲಿ ನೀರು ಹರಿಯುತ್ತಿತ್ತು. ಮಳೆ ನಿಂತ ಮೇಲೆ ನೀರು ಹರಿಯುವಿಕೆಯು ನಿಂತು ಹೋಯಿತು.
ಒಂದು ರಾತ್ರಿಯೊಳಗೆ ನಿಸರ್ಗ ನಿರ್ಮಿಸಿಕೊಟ್ಟ ಈ ದಾರಿಯಲ್ಲಿ ಬೆಳೆದು ನಿಂತಿದ್ದ ಸುಮಾರು 20-25 ಅಡಿ ಎತ್ತರದ ಮರಗಳು ಬುಡ ಸಮೇತ ಕಿತ್ತುಕೊಂಡು ಪ್ರವಾಹದಲ್ಲಿ ಕಡ್ಡಿಗಳು ಚಲಿಸಿದಂತೆ ಜಾರು ದಾರಿಯಲ್ಲಿ ದಕ್ಷಿಣಾಭಿಭಿಮುಖವಾಗಿ ಚಲಿಸಿ “ರಸ್ತೆ”ಯ ಬುಡದಲ್ಲಿ ರಾಶಿಯಾಗಿ ನಿಂತಿವೆ. ಕೆಲವು ಮರಗಳು ರಸ್ತೆಯ ಇಕ್ಕೆಲೆಗಳಲ್ಲಿ ರಸ್ತೆಗೆ ಸಮಾಂತರವಾಗಿ ಮಲಗಿವೆ. ರಸ್ತೆಯಲ್ಲಿದ್ದ ಗಿಡಗಳು ಎಲೆ ಬರಿದಾಗಿ, ತೊಗಟೆಗಳು ಸವರಿದಂತೆ ಉಜ್ಜಿ ಹೋಗಿ ಯಾರೋ ಬಲವಾಗಿ ಒತ್ತಿ ಹಿಡಿಂತೆ ದಕ್ಷಿಣ ದಿಕ್ಕಿನೆಡೆ (ರಸ್ತೆಗೆ ಸಮಾಂತರವಾಗಿ ) ಬಾಗಿ ನಿಂತಿವೆ. ರಸ್ತೆಯಲ್ಲಿದ್ದ ಸಡಿಲವಾದ ಕಲ್ಲುತುಂಡುಗಳು ಉರುಳಿ ಜಾರಿ ಹೋಗಿವೆ.
ರಭಸವಾದ ನೀರಿನ ಪ್ರವಾಹ ಮೇಲಿನ “ಹೊಂಡ”ದಿಂದ ಹೊರಟು ಹೊಳೆಯಂತೆ ಕೆಳಗೆ ಹರಿದು ಈ ನೈಸರ್ಗಿಕ ರಸ್ತೆಯನ್ನು ನಿರ್ಮಿಸಿತು ಎನ್ನುವುದು ನಿರ್ವಿವಾದ. ರಸ್ತೆಯ ನಡುವೆ ಉಂಟಾಗಿರುವ ಸುಮಾರು ಎರಡು ಅಡಿ ಅಗಲ ಮತ್ತು ಅಷ್ಟೇ ಆಳದ ತೋಡು ಕೂಡಾ ನೀರಿನ ಹರಿಯುವಿಕೆಯಿಂದ ಆಗಿರುವ ಲಕ್ಷಣಗಳನ್ನು ಹೊಂದಿದೆ.
ಈ ನೈಸರ್ಗಿಕ ರಸ್ತೆಯು ಅರಣ್ಯ ಇಲಾಖೆಯವರ ರಸ್ತೆಯವರೆಗೆ ಬಂದು, ತದ ನಂತರ ಅಗಲ ಕಿರಿದು ಕಿರಿದಾಗಿ ತಿರುವಿಕೊಂಡ ಸಣ್ಣ ನೀರು ಹರಿಯುವ ತೋಡಿನಂದಾಗಿ ಸುಮಾರು 100 ಮೀಟರ್‌ಗಳ ನಂತರ ಕೊನೆಗೊಂಡಿದೆ.
ತೋಡಿನಲ್ಲಿ ಹರಿದುಬಂದ ನೀರು ಬಿಸಿ ಇರಲಿಲ್ಲ. ದೈನಂದಿನ ಬಳಕೆಯ ನೀರಿನ ಗುಣರುಚಿಗಳನ್ನು ಮಾತ್ರ ಹೊಂದಿತ್ತೆಂದು ನೀರು ಕುಡಿದವರು ತಿಳಿಸಿರುವರು. ಇದರಿಂದಾಗಿ ; ನೀರು ಭೂಮಿಯ ಆಳದಿಂದ ಬಂದಿದ್ದಲ್ಲ ಎಂದು ತೀರ್ಮಾನಿಸಬಹುದು. ಭೂಮಿಯ ಆಳದಿಂದ ಹೊರಬಂದ ನೀರು ವಿಶೇಷ ಉಷ್ಣತೆ, ವಾಸನೆ ಇತ್ಯಾದಿ ಗುಣಗಳನ್ನು ಹೊಂದಿರುವುದುಂಟು.
ಕೋಟೆಮುಂಡುಗಾರು: ಬೇಂಗಮಲೆಯಿಂದ ಹೊರಬಂದು, ಬೆಳ್ಳಾರೆಯ ರಸ್ತೆಯಲ್ಲಿ ಮುಂದುವರಿದರೆ ಬಲಕ್ಕೆ ಜಲ್ಲಿ ಹಾಸಿದ ರಸ್ತೆ ಇದೆ.ಇದು ಚೊಕ್ಕಾಡಿ ಮುಂಡುಗಾರು-ಕಳಂಜ ದಾರಿಯಾಗಿ ಮತ್ತೆ ಬೆಳ್ಳಾರೆಯನ್ನು ಸೇರುತ್ತದೆ. ಈ ದಾರಿಯಲ್ಲಿ ಕೋಟೆಮುಂಡುಗಾರು ಗ್ರಾಮದ ಬಳಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಬಲ ತಿರುವಿನ ಮಣ್ಣಿನ ರಸ್ತೆಯಲ್ಲಿ ಮುಂದೆ ಹೋದರೆ ನಾರ್ಣ ನಾಯ್ಕರ ತೋಟ ಸಿಗುತ್ತದೆ.
ತೋಟದ ಉತ್ತರ ದಿಕ್ಕಿಗಿರುವ ಗುಡ್ಡದ ಇಳಿಜಾರಿನಲ್ಲಿ ಮೂಡು-ಪಡು ದಿಕ್ಕಿನಲ್ಲಿ ಅಂಕುಡೊಂಕಾಗಿ ಹಾಯುವ ಎರಡರಿಂದ ಹತ್ತಂಗುಲ ಅಗಲ ಮತ್ತು ಆರರಿಂದ ಇನ್ನೂರೈವತ್ತು ಅಡಿ ಉದ್ದದ ಅನೇಕ ಸಮಾಂತರ ಬಿರುಕು (ಸೀಳುಗಳು) ನೆಲದಲ್ಲಿ ಕಾಣಿಸುತ್ತವೆ ಕೆಲವು ಸೀಳುಗಳ ಮಧ್ಯೆ ನಮ್ಮ-ನಿಮ್ಮ ಕಾಲು ತೂರುವಷ್ಟು ಆಗಲಕ್ಕೆ ಭೂಮಿ ಬಾಯಿಬಿಟ್ಟಿದೆ.ಮೇಲೆ ಹೇಳಿದ ಸೀಳು (ಮೂಡು-ಪಡು)ಗಳಲ್ಲದೆ, ವಾಯುವ್ಯ -ಆಗ್ನೇಯ ದಿಕ್ಕಿನಲ್ಲಿ ಹಾಯುವ ಇನ್ನೊಂದು ಸೀಳುಗಳ ಸಮೂಹವನ್ನು ಇಲಿ ಗಮನಿಸಿಬಹುದು. ಸೀಳುಗಳ ದಕ್ಷಿಣ ಭೂಭಾಗಗಳು ಕೆಲವು ಅಂಗುಲಗಳಿಂದ ಹಿಡಿದು ಆರಡಿಯಷ್ಟು ಕೆಳಗೆ ಹೋಗಿ ಮೆಟ್ಟಿಗಳಂತಹ ರಚನೆಯಾಗಿದೆ.
ಬಿರುಕುಗಳ ಈ ಗುಡ್ಡದ ತೆಂಕಣ ಅಂಚಿನಲ್ಲಿ(ತೋಟದ ಬಳಿ) ಭೂಕುಸಿತವಾಗಿ ಮಣ್ಣು ಜರಿದು ಬಿದ್ದು ರಾಶಿಯಾಗಿದೆ. ತೋಟದ ಅನೇಕ ಗಿಡಮರಗಳು ಹೂತು ಹೋಗಿವೆ.
ಈ ಶೇಡಿಕಜೆ ಗುಡ್ಡದ ಬಡಗು ದಿಕ್ಕಿನಲ್ಲಿ ಮುಪ್ಪೇರ್ಯ ಗ್ರಾಮದ ಕಾವಿನಮೂಲೆಯಲ್ಲಿ ಕೂಡಾ ಇದೇ ರೀತಿ ಮೆಟ್ಟಿಲುಗಳಂತಹ ಏರುತಗ್ಗುಗಳಾಗಿವೆ ಎಂದು ತಿಳಿದುಬಂದಿದೆ. ಈ ಬಿರುಕುಗಳು, ಏರುತಗ್ಗುಗಳು, ಭೂಕುಸಿತಗಳು ನಡೆದದ್ದು ಆ.2 ರಂದು ರಾತ್ರಿ.
ಐವರ್ನಾಡು: ಐವರ್ನಾಡು ಗ್ರಾಮದಲ್ಲಿ, ಕೊಳ್ತಿಗೆ ಗ್ರಾಮದ ಗಡಿಗೆ ತಾಗಿರುವ ಕುಮುಂಗು ಕೃಷ್ಣಪ್ಪ ಗೌಡರ ತೋಟದ ದಕ್ಷಿಣ ಭಾಗದಲ್ಲಿ ಮೂಡಣ ಪಡುವಣ ದಿಕ್ಕಿನಲ್ಲಿ 2 ಕಿಮೀವರೆಗೆ ಚಾಚಿಕೊಂಡಿರುವ ಕೆಂಪು ಮುರ ಮಣ್ಣಿನ ಗುಡ್ಡಗಳ ಸಾಲಿದೆ.ಒಂದು ಗುಡ್ಡದ ಉತ್ತರದ ಇಳಿಜಾರಿನಲ್ಲಿ ಆ.2 ರಂದು ಹಗಲು ಹಂತ ಹಂತವಾಗಿ ಭೂಕುಸಿತ ಸಂಭವಿಸಿತು. ಬೆಳಗ್ಗೆ 11 ಗಂಟೆಗೆ, ಮಧ್ಯಾಹ್ನ 2 ಗಂಟೆಗೆ ಮತ್ತು ಸಂಜೆ 4.30 ಗಂಟೆಗೆ ಗುಡ್ಡ ಜರಿಯಿತು ಎಂದು ಕೃಷ್ಣಪ್ಪ ಗೌಡರು ಹೇಳುತ್ತಾರೆ. ಆ ದಿನ ಗೌಡರು 13 ಮಂದಿ ಆಳುಗಳೊಂದಿಗೆ ಗುಡ್ಡದ ತಪ್ಪಲಲ್ಲಿ ಕೆಲಸ ಮಾಡಿಸುತ್ತಿದ್ದರು. ಗುಡ್ಡದ ಕೆಳಗೆ ನೀರು ಹರಿಯುವ ತೋಡಿದೆ. ಅದರ ದಂಡೆ ಯಲ್ಲಿ ಗೌಡರು ನಿಂತು ಸಾಗುತ್ತಿದ್ದ ಕೆಲಸವನ್ನು ನೋಡುತ್ತಿದ್ದರು. ಇದ್ದಕ್ಕಿದ್ದಂತೆ, ಗುಡ್ಡದ ಮೇಲಿನ ಗೇರು ಮರವು ತೋಟದ ಕಡೆಗೆ ಬಾಗಿದಂತೆ ಅನಿಸಿತು ಗೌಡರಿಗೆ ‘ಗುಡ್ಡ ಜರಿಯಿತಯ್ಯ’ ಎಂದು ಆಳುಗಳಿಗೆ ಕೂಗಿ ಹೇಳಿದರು. ಗುಡ್ಡ ಜರಿಯಿತು. ಆಳುಗಳು ಸಮಯಾವಧಾನತೆಯಿಂದ ಹಾರಿ ಜೀವವುಳಿಸಿಕೊಂಡರು. ಆದರೆ ಅವರ ಉಪಕರಣಗಳು ಕುಸಿದ ಮಣ್ಣಿನಡಿಯಲ್ಲಿ ಭೂಗತವಾದವು. ತೋಡಿನ ಅಂಚಿನಲ್ಲಿದ್ದ ಗೌಡರು ಕೆಲವು ಅಡಿಗಳನ್ನು ದೂರಕ್ಕೆ ಎಸೆಯಲ್ಪಟ್ಟರು. ಆಸುಪಾಸಿನ ಒಂದು ಮನೆಯವರಿಗೆ ಗುಡ್ಡ ಜರಿದಾಗ ಭಯಂಕರವಾದ ಶಬ್ದ ಕೇಳಿ ಬಂತಂತೆ. (ಶಬ್ಬದ ಬಗ್ಗೆ ಒಮ್ಮತವಿಲ್ಲ). ಭೂ ಕುಸಿತದಿಂದ ರಾಶಿಬಿದ್ದ ಮಣ್ಣಿನಿಂದ ತೋಡು ಮುಚ್ಚಿ ಹೋಯಿತು. ಸುಮಾರು 200 ಅಡಿಕೆ ಮರಗಳು ನಾಶವಾದವು, ಕುಸಿದ ಸ್ಥಳದಿಂದ ನೀರು ಹರಿದು ಬಂತು.
ಕೃಷ್ಣಪ್ಪ ಗೌಡರಿಗೆ ಭೂಕುಸಿತಗಳು ಹೊಸದು ಅಲ್ಲ. 1945ರಲ್ಲಿ ಅವರು ವಾಸಿಸುತ್ತಿದ್ದ ಮನೆಯ ಬಳಿ ಭೂಕುಸಿತವಾಗಿ ಮನೆ ನಾಶವಾಯಿತು. ಸದ್ಯ, ಆ ವೇಳೆಗೆ ಮನೆಯಲ್ಲಿ ಯಾರೂ ಇರಲಿಲ್ಲ. ಆಮೇಲಿಂದೀಚೆಗೆ ಅವರ ತೋಟದಂಚಿನಲ್ಲಿ 2 ಕಿಮೀ ಉದ್ದದ ಗುಡ್ಡದ ಸಾಲಿನಲ್ಲಿ ಮಳೆಗಾಲದಲ್ಲಿ ಭೂಕುಸಿತಗಳು ಸಾಮಾನ್ಯವಾಗಿ ಆಗುತ್ತಿದ್ದು, ಅವು ಅವರಿಗೆ ಜೀವನದ ಕಷ್ಟಸುಖಗಳಷ್ಟೇ ಸಹಜವೆನಿಸಿದೆ. ಈ ಬಾರಿ ಭೂಕುಸಿತದ ಹಿಂದೆ – ನಾಲ್ಕು ದಿನ ಎಡೆಬಿಡದೆ ಮಳೆ ಬಂದಿದ್ದನ್ನು ಅವರು ಜ್ಞಾಪಿಸಿಕೊಂಡು, ನೀರಿನ ಒತ್ತಡದಿಂದ ಇಂತಹ ಕುಸಿತಗಳು ಆಗುತ್ತವೆಂದರು.
ಬೇಂಗಮಲೆಯ ನಿಸರ್ಗ ನಿಂತ ರಚನೆಯನ್ನು ಊರಿನವರು ಕೊಪ್ಪರಿಗೆ ಜರಿದಿದೆ ಎನ್ನುತ್ತಿದ್ದಾರೆ. ಕಲ್ಲೆಣ್ಣಿಗೆ ಸಂಬಂಧಪಟ್ಟ ನೈಸರ್ಗಿಕ ಅನಿಲದಿಂದಾಯಿತು ಎನ್ನುವವರಿದ್ದಾರೆ. ಇದೊಂದು ಮಣ್ಣಿನ ಅಗ್ನಿ ಪರ್ವತ ಎಂದುಕೊಂಡವರಿದ್ದಾರೆ. ಈ ಬಗೆಯ ಅಭಿಪ್ರಾಯಗಳಿಗೆ ಪುಷ್ಟಿ ಕೊಡುವಂತಹ ಪುರಾವೆಗಳು ಯಾವುವೂ ನಮಗೆ ದೊರೆಯ ಲಿಲ್ಲ.
ಈ ಪ್ರದೇಶದಲ್ಲಿರುವ ಶಿಲೆಗಳು 2700 ಮಿಲಿಯ ವರ್ಷದಿಂದಲೂ ಹಳೆಯವು. ಇಷ್ಟೊಂದು ವಯಸ್ಸಿನ ಶಿಲೆಗಳಲ್ಲಿ ನೈಸರ್ಗಿಕ ಅನಿಲದ ನಿಕ್ಷೇಪಗಳಿರುವುದು ಅಸಂಭವ. ಕಲ್ಲೆಣ್ಣೆ ಮತ್ತು ನೈಸರ್ಗಿಕ ಅನಿಲಗಳ ನಿಕ್ಷೇಪಗಳು ಭೂ ವೈಜ್ಞಾನಿಕವಾಗಿ ಕಿರಿಯ ವಯಸ್ಸಿನ ಶಿಲಾ ಪದರಗಳಿಗೆ ಮಾತ್ರ ಸೀಮಿತವಾಗಿರುತ್ತವೆ.
ಭೂಮಿಯ ಮೇಲ್ಬಾಗದ ಪದರುಗಳು(ಸ್ಥರಗಳು) ಕೆಲವು ವಿಶಿಷ್ಟ ದಿಕ್ಕುಗಳಲ್ಲಿ ದುರ್ಬಲವಾಗಿರುತ್ತವೆ. ಸುಳ್ಯದ ಸುತ್ತು ಮುತ್ತಿನ ಶಿಲಾಪದರಗಳು ಪೂರ್ವ-ಪಶ್ಚಿಮ ಮತ್ತು ವಾಯುವ್ಯ-ಆಗ್ನೇಯ ದಿಕ್ಕುಗಳಲ್ಲಿದುರ್ಬಲತೆಯ ಲಕ್ಷಣಗಳನ್ನು ಹೊಂದಿವೆ. ಈ ಪ್ರದೇಶದ ನೈಸ್ ಮತ್ತು ಶಿಸ್ಟ್ ಶಿಲೆ ಗಳಲ್ಲಿ ಈ ಎರಡು ದಿಕ್ಕುಗಳಲ್ಲಿ ಹಾಯುವ ನಿಯಮಿತವಾದ ಸೀಳಿಕೆಗಳನ್ನು ಗುರುತಿಸಬಹುದು.
ಸುಳ್ಯದ ಸುತ್ತ ಮೂರು ಬೇರೆಬೇರೆ ಕಡೆಗಳಲ್ಲಿ ಉಂಟಾದ ಭೂಘಟನೆಗಳು ನಡೆದುದು ಒಂದೇ ದಿನ : ಆಗಸ್ಟ್ 2ರಂದು ಹಗಲು ಮತ್ತು ರಾತ್ರಿ. ಆ ಹಿಂದೆ ಮೂರು ನಾಲ್ಕು ದಿನ ಸತತವಾಗಿ ಮಳೆ ಬರುತ್ತಿತ್ತು. ಆ ದಿನ ಸುಳ್ಯದ ಸುತ್ತಮುತ್ತ ಸಣ್ಣ ಮಟ್ಟದ ಭೂ ಚಲನೆಗಳು, ಕಂಪನಗಳು ಉಂಟಾದವೆಂದು ನಂಬಬಹುದಾಗಿದೆ. ಸಣ್ಣ ಮಟ್ಟದ ಭೂ ಕೆಂಪನಗಳನ್ನು ಮನುಷ್ಯ ಸಾಮಾನ್ಯವಾಗಿ ಗುರುತಿಸಲಾರ, ಭೂಚಲನೆಯ ಶಕ್ತಿಗನು ಸಾರವಾಗಿ ಶಿಲೆಗಳ ದುರ್ಬಲತೆಯ ದಿಕ್ಕು ಗಳಲ್ಲಿ ಸಣ್ಣ ಅಥವಾ ದೊಡ್ಡ ಪ್ರಮಾಣದ ಚಲನೆಗಳು, ಏರುತಗ್ಗಾಗಿ ಸ್ಥಾನ ಪಲ್ಲಟವಾಗುವಿಕೆಇತ್ಯಾದಿ ಸಂಭವಿಸುವುದು ಉಂಟು. ಸಡಿಲವಾದ ಮಣ್ಣು ಮುಚ್ಚಿರುವ ಪ್ರದೇಶಗಳಲ್ಲಿ ಮಣ್ಣಿನಲ್ಲಿ ಬಿರುಕುಗಳು, ಏರುತಗ್ಗು ಗಳು ಹುಟ್ಟಿಕೊಳ್ಳುತ್ತವೆ. ಇನ್ನು ಮಳೆಯ ಪರಿಣಾಮವನ್ನು ಗಮನಿಸೋಣ. ಭೂಮಿಗೆ ಬಿದ್ದ ಮಳೆಯ ನೀರಿನಲ್ಲಿ ಸ್ವಲ್ಪಾಂಶ ನೆಲದ ಮೇಲ್ಮೈಯಲ್ಲಿ ಹರಿದು ಹೋದರೆ ಉಳಿದ ಭಾಗವು ನೆಲದೊಳಗೆ ಇಂಗಿ ಅಂತರ್ಜಲವಾಗುತ್ತದೆ (ಅಂದರೆ ಬಾವಿ ತೋಡಿದಾಗ ಸಿಗುವ ನೀರು), ಮುರಮಣ್ಣಿನಲ್ಲಿ ನೀರು ಕ್ಷಿಪ್ರವಾಗಿ ಇಂಗುತ್ತದೆ.
ಇಂಗುವ ನೀರಿನ ಪರಿಮಾಣವು ನೆಲದಡಿಯಲ್ಲಿ ಹರಿಯುವ ಪರಿಮಾಣಕ್ಕಿಂತ ಹೆಚ್ಚಾದಾಗ ನೆಲದಡಿಯಲ್ಲಿ ನೀರಿನ ಒತ್ತಡವಾಗು ತ್ತದೆ. ಒತ್ತಡಕ್ಕೆ ಒಳಗಾದ ಅಂತರ್ಜಲ ಹೊರಗೆ ನುಗ್ಗಿ ಬರಲು ಯತ್ನಿಸುತ್ತದೆ, ಇದರ ಪರಿಣಾಮವಾಗಿ ಸಡಿಲ ಮಣ್ಣಿನ ಭೂಭಾಗಗಳು ಕುಸಿಯುವವು.
ಮೂರು ನಾಲ್ಕು ದಿನಗಳ ಸತತ ಮಳೆಯಿಂದಾಗಿ ಬೇಂಗಮಲೆಯ ‘ಹೊಂಡ’ ವಾಗಿರುವ ಜಾಗದಲ್ಲಿ ಇಂಗಿದ ನೀರು ಎರಡು ಮೀಟರ್ ಆಳದ ವರೆಗೆ ಮಣ್ಣಿನಲ್ಲಿ ಶೇಖರವಾಯಿತು. ಇನ್ನು ಕೆಳಗೆ ಇಂಗಗೊಡದ ಗಟ್ಟಿ ಶಿಲೆಗಳಿದ್ದುದರಿಂದ ನೀರು (ಅಂತರ್ಜಲ) ಅಲ್ಲೇ ನಿಂತು ಒಳ ಒತ್ತಡ ಹೆಚ್ಚಿತು. ಒತ್ತಡದಿಂದ ಪಾಗೂ ಸಣ್ಣ ಪ್ರಮಾಣದ ಭೂ ಚಲನೆಗಳಿಂದ ಮೇಲಿನ ಮಣ್ಣಿನಲ್ಲಿ ಬಿರುಕುಗಳು ಉಂಟಾದವು. ಬಿರುಕುಗಳ ಆಸುಪಾಸಿನ ಮಣ್ಣು ಅರ್ಧ ಅಂಡಾಕಾರದಲ್ಲಿ ಕುಸಿಯಿತು. ಅಂತರ್ಜಲ ಹೊರಹೊಮ್ಮಿ ಹೊಳೆಯಾಗಿ ಹರಿಯಿತು. ಬೇಂಗಮಲೆಯ ಆರರಿಂದ ಎಂಟು ಮೀಟರ್ ಅಗಲದ ನೈಸರ್ಗಿಕ ರಸ್ತೆ ನಿರ್ಮಾಣವಾಯಿತು. ರಭಸವಾಗಿ ಹೊಮ್ಮಿದ ನೀರು ಗುರುತ್ವಶಕ್ತಿಯ ಬೆಂಬಲ ಪಡೆದು ಇಳಿಜಾರಿನಲ್ಲಿ ಹರಿಯಿತು. ತನ್ನ ದಾರಿಯಲ್ಲಿದ್ದ ಸಡಿಲವಾದ ಮಣ್ಣನ್ನು, ಕಲ್ಲುಗಳನ್ನು ಕೊಚ್ಚಿ ಜಾರುದಾರಿಯಲ್ಲಿ ಎಳೆದೊಯ್ಯಿತು. ಬೆಳೆದು ನಿಂತ ಮರಗಳ ಬೇರುಗಳ ಸುತ್ತ ಮಣ್ಣು ಸಡಿಲವಾಗಿ ನೀರಿನಲ್ಲಿ ಕೊಚ್ಚಿ ಹೋದಾಗ ಆಧಾರ ತಪ್ಪಿದ ಮರಗಳು ಉರುಳಿದವು.ಉರುಳಿಬಿದ್ದ ಮರಗಳು ಪ್ರವಾಹದೊಂದಿಗೆ ಇಳಿಜಾರಿನಲ್ಲಿ ತೇಲಿ ಹೋದವು. ಬಹುಶಃ ಈ ಎಲ್ಲಾ ವಿಶೇಷ ಘಟನೆಗಳು ಮೂರು ನಾಲ್ಕು ಗಂಟೆಗಳ ಅವಧಿಯೊಳಗೆ ಮುಗಿದಿರಬಹುದು, ತದನಂತರ ಉಳಿದ ನೀರು ‘ಹೊಂಡ’ದ ಬಿರುಕುಗಳಿಂದ ಹೊಮ್ಮಿ ಚಿಕ್ಕ ತೊರೆಯಂತೆ ಒಂದೂವರೆ ಎರಡಡಿ ಆಗಲದಲ್ಲಿ “ರಸ್ತೆ”ಯ ಮಧ್ಯೆ ಹರಿದು ‘ತೋಡು’ ಉಂಟಾಯಿತು.
ಕೋಟೆಮುಂಡುಗಾರಿನಲ್ಲಿ ಅದೇ ರಾತ್ರಿ ನಡೆದ ಘಟನೆಯಲ್ಲಿ ಮಳೆ-ಭೂಚಲನೆ ಮತ್ತು ಅಂತರ್ಜಲದ ಒತ್ತಡದ ಪರಿಣಾಮಗಳು ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡಿವೆ. ಇಲ್ಲಿನ ಕೆಂಪು ಮುರ ಮಣ್ಣಿನ ಗುಡ್ಡವೂ ಬೇಂಗಮಲೆಯಂತೆ ಪೂರ್ವ ಪಶ್ಚಿಮ ದಿಕ್ಕಿ ನಲ್ಲಿ ಚಾಚಿಕೊಂಡಿದೆ. ಇಲ್ಲಿ ಗುಡ್ಡದ ಇಳಿ ಜಾರಿನಲ್ಲಿ ಪೂರ್ವ ಪಶ್ಚಿಮ ದಿಕ್ಕಿನಲ್ಲಿ ಹಾಗೂ ವಾಯುವ್ಯ ಆಗ್ನೇಯ ದಿಕ್ಕಿನಲ್ಲಿ ಹಲವಾರು ಹೆಚ್ಚು ಕಡಿಮೆ ಸಮಾಂತರವಾದ ಅಂಕುಡೊಂಕಾದ ಸೀಳುಗಳು ಮತ್ತು ಸ್ತರಭಂಗಗಳು ನೆಲದಲ್ಲಿ ಉಂಟಾಗಿವೆ. ಸ್ತರಭಂಗ ಎಂದರೆ ಭೂಮಿಯ ಪದರಗಳ ಮುರಿಯುವಿಕೆ ಹಾಗೂ ಸ್ಥಾನಪಲ್ಲಟ ಆಗುವಿಕೆ. ಕೆಲವು ಸೀಳುಗಳ ಮಧ್ಯೆ ಸುಮಾರು ಒಂದಡಿಯಷ್ಟು ಭೂಮಿ ಬಿರುಕು ಬಿಟ್ಟಿದೆ. ಕೆಲವು ಸೀಳುಗಳ ದಕ್ಷಿಣದ ಭಾಗಗಳು ಆರಡಿ ಯಷ್ಟು ತಗ್ಗಿವೆ. ಭೂಕಂಪನಕ್ಕೆ ಗುರಿಯಾದ ಪ್ರದೇಶಗಳಲ್ಲಿ ಈ ಬಗೆಯ ಸೀಳುಗಳು, ಸ್ವರಭಂಗಗಳು ಹಾಗೂ ಏರು ತಗ್ಗಿನ ಸ್ಥಾನ ಪಲ್ಲಟಗಳು ತೀರ ಸಾಮಾನ್ಯ. ಮುರಮಣ್ಣು ಸ್ವಭಾವತಃ ಸಡಿಲವಾಗಿದ್ದು, ದುರ್ಬಲತೆಯಿಂದ ಕೂಡಿರುವುದರಿಂದ ಸಣ್ಣ ಮಟ್ಟದ ಭೂ ಚಲನೆಗಳು ಇಲ್ಲಿ ಸ್ವರಭಂಗಗಳನ್ನೂ, ಏರುತಗ್ಗುಗಳನ್ನೂ ಉಂಟು ಮಾಡಿದವು. ಈ ಭೂಚಲನೆಗಳ ಹಾಗೂ ಅಂತರ್ಜಲದ ಪರಿಣಾಮವಾಗಿ ಗುಡ್ಡದ ದಕ್ಷಿಣದ ಕೊನೆ ಯಂಚಿನಲ್ಲಿ ಕಡಿದಾಗಿದ್ದು ಆಧಾರವಿಲ್ಲದ ಮಣ್ಣು ಕುಸಿದು ಬಿದ್ದು ತೋಟಕ್ಕೆ ಹಾನಿ ಮಾಡಿತು.
ಐವರನಾಡು ಗ್ರಾಮದ ಭೂಕುಸಿತವಾದ ಸ್ಥಳದಲ್ಲಿ ಕೂಡಾ ಪೂರ್ವ ಪಶ್ಚಿಮ ದಿಕ್ಕಿನಲ್ಲಿ ಚಾಚಿಕೊಂಡಿರುವ ಕೆಂಪು ಮುರಮಣ್ಣಿನ ಗುಡ್ಡವಿದೆ. ಸತತವಾಗಿ ಸುರಿದ ಮಳೆಯು ಗುಡ್ಡದ ಸಡಿಲ ಮಣ್ಣಿನೊಳಗೆ ಇಂಗಿ ಶೇಖರವಾಯಿತು. ಅಂತರ್ಜಲವು ಇನ್ನೂ ಆಳಕ್ಕೆ ಇಂಗದಂತೆ ಮುರಮಣ್ಣಿನಿಂದ ಕೆಳಗಿರುವ (ಅಂದರೆ ಭೂಮಿಯೊಳಗೆ) ಇಂಗಗೊಡದ ಶಿಲೆಗಳು ನಿರ್ಬಂಧಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಂತರ್ಜಲದ ಒತ್ತಡ ಏರ್ಪಡುವುದು ಅನಿವಾರ್ಯ, ಗುಡ್ಡದ ಅಂಚಿನ (ತಪ್ಪಲಿನ) ಸಡಿಲ ಮುರಮಣ್ಣು ಒತ್ತಡಕ್ಕೆ ಬಲಿಯಾಗಿ ಅರ್ಧ ಚಂದ್ರಾಕಾರದಲ್ಲಿ ಜರಿದು ಬಿತ್ತು . ಇಲ್ಲಿ ಭೂಕುಸಿತಗಳು ಸುಮಾರು ಎರಡುವರೆ ಮೂರು ಗಂಟೆಗಳ ಅಂತರದಲ್ಲಿ ಮೂರು ಸಲ ನಡೆದಿರುವುದು ಒಂದು ವಿಶೇಷ.
ಪಶ್ಚಿಮ ಘಟ್ಟಗಳಲ್ಲಿ (ಶಿರಾಡಿ, ಸಂಪಾಜೆ, ಚಾರ್ಮಾಡಿ ಇತ್ಯಾದಿ) ರಸ್ತೆ ಕಡಿದ ಗುಡ್ಡ ಗಳು ಐವರನಾಡು ಗ್ರಾಮದಲ್ಲಾದಂತೆ. ಭೂಕುಸಿತಗಳಿಗೆ ಬಲಿಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಇದೇ ರೀತಿ ಸಡಿಲವಾದ ಮುರಮಣ್ಣು ಇರುವೆಡೆ ನಿವೇಶನಗಳ ಆವರಣಕ್ಕೆ ಕಟ್ಟಿದ ಕಲ್ಲಿನ ಗೋಡೆಗಳು ಮಣ್ಣಲ್ಲಿ ಇಂಗಿಸಿದ ನೀರಿನ ಒತ್ತಡಕ್ಕೆ ಬಲಿಯಾಗಿ ಆಧಾರತಪ್ಪಿ ಬೀಳುವುದು ಕೂಡಾ ಸಾಮಾನ್ಯ ವಾಗಿದೆ.
ನೆಲದಡಿಯಲ್ಲಿ ಮಣಿನ ಕಣಗಳು, ಶಿಲಾಪದರಗಳು ಮತ್ತು ಬಿರುಕುಗಳ ಮೂಲಕ ಪ್ರವಹಿಸುವ ಅಂತರ್ಜಲವು ಅತಿವೃಷ್ಠಿಯಿಂದ ಒಳ ಒತ್ತಡಕ್ಕೆ ಒಳಗಾದಾಗ ಯಾವ ಬಗೆಯ ದುಷ್ಪರಿಣಾಮಗಳನ್ನು ಮಾಡಬಹುದು ಎನ್ನುವುದಕ್ಕೆ ಈ ಮೇಲಿನ ಘಟನೆಗಳು ನಿದರ್ಶನವಾಗಿದೆ. (ಸೂಕ್ತ ಸಲಹೆಗಳನ್ನು ಕೊಟ್ಟ ಮಾನ್ಯ ಪ್ರೊ| ಕೆ. ಎಂ. ಗುರಪ್ಪನವರಿಗೆ ಕೃತಜ್ಞತೆಗಳು.)
ಲೇಖನ: ಆರ್.ಬಿ, ಬಾದಾಮಿ ಮತ್ತು ಬಿ.ಎಂ.ರವೀಂದ್ರ (ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಗಳೂರು)
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…