ಸುಳ್ಯ: ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಅಭಿವೃದ್ದಿ ಮತ್ತು ಭಾಷೆಯ ಉಳಿವಿನ ಬಗ್ಗೆ ಚರ್ಚೆಗಳಾಗಬೇಕು. ಆಂಗ್ಲಭಾಷೆ ಜಗತ್ತನ್ನು ಆಳುತ್ತಿದೆ. ಹಣ ಗಳಿಸುವುದನ್ನು ಹೇಳಿ ಕೊಡುವ ಈ ಭಾಷೆಗೆ ಹೊರತಾದ ಆಲೋಚನಾ ಕ್ರಮ ಕನ್ನಡ ಭಾಷೆಯಲ್ಲಿದೆ. ಇಂಗ್ಲೀಷ್ ಸಂವಹನ ಭಾಷೆಯಾದರೆ ಕನ್ನಡ ವೈಚಾರಿಕತೆಯ ಮತ್ತು ನಮ್ಮ ಹೃದಯದ ಭಾಷೆಯಾಗಬೇಕು ಎಂದು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಹೇಳಿದರು.
ಎಲಿಮಲೆಯಲ್ಲಿ ನಡೆದ ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಕನ್ನಡ ಭಾಷೆ ತಂತ್ರಜ್ಞಾನದ ಮೂಲಕ ಬೆಳೆಯಬೇಕು. ಭಾಷೆಯ ಬೆಳವಣಿಗೆಗೆ ಭಾಷಾ ಸೂಕ್ಷ್ಮಗಳನ್ನು ಅರಿತುಕೊಂಡು ತಂತ್ರಜ್ಞಾನಗಳನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಜಾಗತೀಕರಣದ ಪ್ರಭಾವದ ಬಳಿಕ ಆಂಗ್ಲಭಾಷೆ ಉದ್ದಾರಕ ಭಾಷೆಯಾಗದೇ ಭಸ್ಮಾಸುರನಂತೆ ಇತರ ಭಾಷೆಗಳ ಮೇಲೆ ಸಂಹಾರ ಮಾಡಲು ಹೊರಟಿದೆ. ಆಂಗ್ಲಭಾಷೆಯನ್ನು ಈ ಹಿಂದಿನಂತೆ ಈಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಪ್ರತಿರೋಧವನ್ನು ಒಡ್ಡುವ ಕಾರ್ಯ ಸ್ಥಳೀಯ ಭಾಷೆಗಳು ಮಾಡಬೇಕು. ಸಾಹಿತ್ಯ ಸಮ್ಮೇಳನಗಳು ಲಾಭ ನಷ್ಟಗಳನ್ನು ನೋಡದೇ ಸಮಾಜ ಮತ್ತು ಸಂಸ್ಕೃತಿಯ ಮೇಲೆ ಬೀರುವ ಪರಿಣಾಮವನ್ನು ಯೋಚಿಸಬೇಕು. ಯುವಜನತೆ ವಿಚಾರದ ಭಾಷೆ ಮತ್ತು ಸಂವಹನದ ಭಾಷೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಯುವ ಬರಹಗಾರರ ಕೊರತೆ ಕಾಡುತ್ತಿದೆ. ಕನ್ನಡ ಭಾಷೆಯ ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಕಾಡೆಮಿಗಳು ಕೊಂಡಿಯಾಗಿ ಕೆಲಸ ಮಾಡಬೇಕು. ಆಂಗ್ಲಭಾಷೆಯ ಪ್ರಭಾವಗಳಿಂದ ಮಾತೃಭಾಷೆಗಳಿಗೆ ಆತಂಕ ಎದುರಾಗಿದೆ. ಉಪಭಾಷೆಗಳ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನಗಳು ಕೆಲಸ ಮಾಡಬೇಕು ಎಂದು ಹೇಳಿದರು.
ಕೃ.ಶಾ.ಮರ್ಕಂಜ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೀಣಾ ಕೃಷ್ಣ ಶಾಸ್ತ್ರಿ, ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಕ.ಸಾ.ಪ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷೀ ಗೌಡ, ಕ.ಸಾ.ಪ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು, ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾಕರ ಆಳ್ವ, ಸ್ವಾಗತ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ, ಜಯಂತ್ ತಳೂರು, ಗೋಪಿನಾಥ ಮೆತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಬಳಿಕ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ, ಎಲಿಮಲೆ ಸರಕಾರಿ ಪ್ರೌಢಶಾಲೆ ಮತ್ತು ದೇವಚಳ್ಳ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ, ಬಳಿಕ ಬೈಲೂರು ಚೈತನ್ಯ ಕಲಾವಿದರಿಂದ ಕನ್ನಡ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಕನ್ನಡ ಕಸ್ತೂರಿ ಸನ್ಮಾನ: ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಗೋಪಾಲಕೃಷ್ಣ ಕಣ್ಕಲ್(ಆಡಳಿತ ಸೇವೆ), ದಿನೇಶ್ ಮಡಪ್ಪಾಡಿ(ಸಂಘಟನೆ), ಎಂ.ಜಿ.ಕಜೆ(ಶಿಕ್ಷಣ ಮತ್ತು ಕಲೆ), ಗೋಪಿ(ನಾಟಿವೈದ್ಯೆ), ಡಾ.ವೆಂಕಟಾಚಲಪತಿ(ಪಶುವೈದ್ಯಕೀಯ ಕ್ಷೇತ್ರ), ಗಿರಿಧರ ಗೌಡ ಮಂದಲ್ಪಾಡಿ(ಉರಗಪ್ರೇಮಿ), ಹರೀಶ್ ಕೇರ(ಸಾಹಿತ್ಯ ಮತ್ತು ಪತ್ರಿಕೋದ್ಯಮ), ಬೋಜಪ್ಪ ಅಜಿಲ(ಭೂತಾರಾಧನೆ), ಡಾ.ರಂಗಯ್ಯ(ಸಮಾಜಸೇವೆ), ಹರ್ಷ ಕರುಣಾಕರ(ಧಾರ್ಮಿಕ ಕ್ಷೇತ್ರ), ಧರ್ಮಪಾಲ ಗಟ್ಟಿಗಾರು(ಕೃಷಿ), ಚೈತ್ರ ಮಣಿಯೂರು(ಕ್ರೀಡೆ) ಅವರಿಗೆ ಕನ್ನಡ ಕಸ್ತೂರಿ ಸನ್ಮಾನ ನೀಡಿ ಗೌರವಿಸಲಾಯಿತು. ಮಯೂರ್ ಅಂಬೆಕಲ್ಲು(ಸಾಂಸ್ಕೃತಿಕ ಮತ್ತು ಸಂಗೀತ), ಮಧು ಎಂ.ಕೆ.(ಶೈಕ್ಷಣಿಕ), ಶ್ರೇಷ್ಠಾ ಸಿ.ಆರ್ ಮತ್ತು ರಶ್ಮಿ ಕೇಪಳಕಜೆ(ಕ್ರೀಡೆ) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.