ಮುಂಗಾರು ಚುರುಕುಗೊಂಡಿದೆ. ಕೇರಳದ(Kerala) ವಯನಾಡು ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣ ಮೈಸೂರು (Mysuru) ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯ (Kabini Dam) ಭರ್ತಿಯಾಗಿದೆ. ದಿನದಿಂದ ದಿನಕ್ಕೆ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವ ಕಾರಣ ಇಂದು 4 ಕ್ರಸ್ಟ್ ಗೇಟ್ ತೆರೆದು 25 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನಿನ್ನೆ 15 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಇದೇ ವೇಳೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ (Rain) ಆರ್ಭಟ ಮುಂದುವರಿದಿದ್ದು, ಹಳೆ ಮೈಸೂರು(Mysore) ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಕೆಆರ್‌ಎಸ್ (KRS) ಡ್ಯಾಂಗೆ 25 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ಹರಿದು ಬಂದಿದೆ. ಇದರಿಂದ ಕೆಆರ್‌ಎಸ್ ಡ್ಯಾಂಗೆ ಜೀವ ಕಳೆ ಬಂದಿದೆ.
ಕಬಿನಿ ಜಲಾಶಯ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಇಂದಿನ ನೀರಿನ ಮಟ್ಟ 2283 ಅಡಿ ಇದೆ. ಒಳ ಹರಿವು 20,217 ಕ್ಯುಸೆಕ್ ಇದೆ. 25 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ಹಲವು ಸಣ್ಣ ಸೇತುವೆಗಳು ಮುಳುಗಡೆಯಾಗಲಿದೆ. ಮತ್ತಷ್ಟು ಮಳೆಯಾಗಿ 50 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದರೆ ದೊಡ್ಡ ಸೇತುವೆಗಳು ಮುಳುಗಡೆಯಾಗಲಿದೆ.
ಸೋಮವಾರ ಬೆಳಗ್ಗೆ 10,121 ಕ್ಯುಸೆಕ್ ನೀರು ಹರಿದು ಬಂದಿತ್ತು. ಸಂಜೆ ವೇಳೆಗೆ 19,202 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಇಂದು ಒಳಹರಿವು 25,933 ಕ್ಯುಸೆಕ್‌ಗೆ ಏರಿಕೆಯಾಗಿದ್ದು, ಸಂಜೆಯ ವೇಳೆಗೆ 30,000 ಕ್ಯುಸೆಕ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ 2 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಇದೀಗ 107.60 ಅಡಿಯಷ್ಟು ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗಿದೆ. ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಿಂದ ರೈತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಒಳಹರಿವು ಇದೇ ರೀತಿ ಬಂದರೆ ಕೆಲವೇ ದಿನದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆ ಇದೆ. ಕಾವೇರಿಗಾಗಿ ತಮಿಳುನಾಡು ಕ್ಯಾತೆಯಲ್ಲಿದ್ದ ಕರುನಾಡಿಗೆ ಇದೀಗ ಸ್ವಲ್ಪ ನಿರಾಳವಾಗಿದೆ. ಮಳೆ ಆರ್ಭಟ ಮುಂದುವರೆದರೆ ತಮಿಳುನಾಡಿಗೂ ನೀರು ಬಿಡುವ ಸಾಧ್ಯತೆ ಇದೆ.
ಕುದುರೆಮುಖ (Kudremukh) ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ (Rain) ಭದ್ರಾ ನದಿ (Bhadra River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭದ್ರಾ ನದಿ ಅಬ್ಬರಕ್ಕೆ ಹೆಬ್ಬಾಳೆ ಸೇತುವೆ ಮುಡುಗಡೆಯಾಗಿದೆ. ಮಳೆಗಾಲದಲ್ಲಿ ಮೊದಲ ಬಾರಿಗೆ ಕಳಸ ತಾಲೂಕಿನ ಹೊರನಾಡು ಬಳಿ ಇರುವ ಹೆಬ್ಬಾಳೆ ಸೇತುವೆ (Hebbale Bridge) ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಿಂದಾಗಿ ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ. ಕಳೆದ ರಾತ್ರಿಯಿಂದಲೂ ಸೇತುವೆಯ ಮೇಲೆ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಮುನ್ನೆಚ್ಚರಿಕಾ ಕಾರ್ಯಕ್ರಮವಾಗಿ ಸೇತುವೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸೇತುವೆ ಬಳಿ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಕುಸಿದ ಕಾಪೌಂಡ್: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಪೌಂಡ್ ಕುಸಿದು ಬಿದ್ದಿದೆ. ಸೋಮವಾರ ಸಂಜೆಯ ಧಾರಾಕಾರ ಮಳೆಗೆ ಕಾಪೌಂಡ್ ಕುಸಿದಿದೆ.
- ಅಂತರ್ಜಾಲ ಮಾಹಿತಿ