ಕರ್ನಾಟಕದ ಮಲೆನಾಡು ಭಾಗದ ವಿಶಿಷ್ಟ ದೇಶೀಯ ತಳಿ “ಮಲೆನಾಡು ಗಿಡ್ಡ ಗೋವು” ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂಬುದು ವಿಧಾನಪರಿಷತ್ ನಲ್ಲಿ ಸರ್ಕಾರ ತಿಳಿಸಿದೆ. ರಾಜ್ಯದಲ್ಲಿ ಒಟ್ಟು 7,12,998 ಮಲೆನಾಡು ಗಿಡ್ಡ ಗೋವುಗಳು ಇರುವುದಾಗಿ ದಾಖಲೆ ತಿಳಿಸುತ್ತದೆ.
ವಿಧಾನಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರು ಮಲೆನಾಡು ಗಿಡ್ಡ ಗೋವುಗಳ ಸಂರಕ್ಷಣೆ ಹಾಗೂ ಸಂರಕ್ಷಣೆಗೆ ಜಾಗ ಮೀಸಲಿಟ್ಟಿರುವ ಬಗ್ಗೆ ಪ್ರಶ್ನೆ ಕೇಳಿದ್ದರು. ಸರ್ಕಾರ ನೀಡಿದ ಉತ್ತರದಲ್ಲಿ, ಮಲೆನಾಡು ಗಿಡ್ಡ ಗೋವುಗಳ ಸಾಕಣೆ ಉತ್ತೇಜಿಸಲು ವಿವಿಧ ಯೋಜನೆಗಳ ಮೂಲಕ ಸಹಾಯಧನ, ಸಂಶೋಧನೆ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಯ್ಲಾದಲ್ಲಿ 275 ಮಲೆನಾಡು ಗಿಡ್ಡ ಗೋತಳಿಯ ಸಂರಕ್ಷಣೆ ನಡೆಯುತ್ತಿದೆ. ಅಲ್ಲಿ 615 ಎಕ್ರೆ ಜಾಗವೂ ಮೀಸಲಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪ್ರಕಾರ, ಮಲೆನಾಡು ಗಿಡ್ಡ ಗೋವುಗಳ ಸಂರಕ್ಷಣೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ತಳಿಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಹಾಗೂ ಸಾಕಣೆದಾರರಿಗೆ ಉತ್ತೇಜನ ನೀಡಲು ಸಹಾಯಧನ ವ್ಯವಸ್ಥೆ ಇದೆ, 2025-26ರ ಸಾಲಿನಲ್ಲಿ ಈ ಯೋಜನೆಗಳಿಗೆ ಹಣ ಬಿಡುಗಡೆಯಾಗಿದೆ.
ಮಲೆನಾಡು ಗಿಡ್ಡ ಗೋವುಗಳು ಕಡಿಮೆ ಗಾತ್ರದ ಹಾಗೂ ಹೆಚ್ಚು ಸಹನಶೀಲತೆ, ರೋಗ ನಿರೋಧಕ ಶಕ್ತಿ ಮತ್ತು ಕಡಿಮೆ ಆಹಾರದಲ್ಲಿ ಬದುಕುವ ಸಾಮರ್ಥ್ಯ ಹೊಂದಿರುವ ಅಪರೂಪದ ದೇಶೀ ತಳಿ. ಈ ತಳಿ ಮಲೆನಾಡು ರೈತರ ಜೀವನಾಧಾರವಾಗಿದ್ದು, ಹಾಲು ಉತ್ಪಾದನೆ, ಜೈವಿಕ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಜಿಲ್ಲಾವಾರು ಮಲೆನಾಡು ಗಿಡ್ಡ ಗೋವುಗಳ ಸಂಖ್ಯೆಯನ್ನು ಗಮನಿಸಿದರೆ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ – 2,89,178, ಉತ್ತರ ಕನ್ನಡ – 1,72,593, ಉಡುಪಿ – 81,204, ಚಿಕ್ಕಮಗಳೂರು – 40,837 ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 7,12,998 ಮಲೆನಾಡು ಗಿಡ್ಡ ಗೋವುಗಳು ಇರುವುದಾಗಿ ದಾಖಲೆ ತಿಳಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




