ಕೃಷಿ ಅಭಿವೃದ್ಧಿಯಲ್ಲಿ ಕೃಷಿ ಲೆಕ್ಕಾಚಾರವೂ ಅಗತ್ಯ. ಇಂದಿನ ಸನ್ನಿವೇಶದಲ್ಲಿ ಕೃಷಿ ಬೆಳವಣಿಗೆಗೆ ಏನು ಮಾಡಬೇಕು, ಯಂತ್ರಗಳ ಬಳಕೆ ತೀರಾ ಅಗತ್ಯ. ಹಾಗಿರುವು ಈ ಅನುಭವಗಳ ಆಧಾರದಲ್ಲಿ ನೋಡುವುದಾದರೆ….,
ಅನುಭವ ಒಂದು: ಅವರಿಗೆ ಮನೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಮುಕ್ಕಾಲು ಎಕರೆ ಅಡಿಕೆ ಬಾಗಾಯ್ತಿದೆ . ಒಂದು ಆರನೂರು ಅಡಿಕೆ ಕೊನೆ ಬರುತ್ತದೆ. ಉಪ ವೃತ್ತಿ ಏನೋ ಇದೆ ಅವರಿಗೆ ಒಮ್ಮೆ ಅವರು ಅಡಿಕೆ ಕೊನೆ ತೆಗೆಸಿದಾಗ ಅವರ ಸಮಯಕ್ಕೆ ಸರಿಯಾಗಿ ಗೂಡ್ಸ್ ಗಾಡಿಯವ ಬರಲಿಲ್ಲ. ಆ ಸಿಟ್ಟಿಗೆ ಅವರು ಉತ್ತಮ ಸದೃಢ ಕಂಡಿಷನ್ ಆಗಿದ್ದ ಮಾಡೆಲ್ ಇರುವ ಓಮಿನಿ ಕಾರನ್ನು ಕೊಯ್ಯಿಸಿ ಅದರಲ್ಲಿ ಪಿಕ್ ಅಪ್ ಮಾಡಿಸಿದರು. ಒಂದೊಳ್ಳೆಯ ಓಮ್ಬಿ ಯನ್ನು ವರ್ಷಕ್ಕೆ ಕೇವಲ ಮೂರ್ ನಾಕು ಟ್ರಿಪ್ ಕೊನೆ ತರಲು ದಂಡ ಅಥವಾ ಹಾಳು ಮಾಡಿದರು.
ಅನುಭವ ಎರಡು : ಆತ ಯುವ ಕೃಷಿಕ. ಹೊಸದಾಗಿ ಹಾಕಿದ ಎರಡು ಎಕರೆ ಅಡಿಕೆ ತೋಟದಲ್ಲಿ ನಾಚಿಕೆ ಮುಳ್ಳು ಯಥೇಚ್ಛವಾಗಿ ಬೆಳದಿದ್ದು. ಯೂಟ್ಯೂಬ್ ನಲ್ಲಿ ನೋಡಿ ಹದಿನಾರು ಹೆಚ್ ಪಿ ಆಫ್ ರೋಡ್ ಟ್ರಾಕ್ಟರ್ ನಮೂನೆಯ ಒಂದು ಲಕ್ಷ ಎಂಬತ್ತು ಸಾವಿರ ಬೆಲೆ ಕಲ್ಟಿವೇಟರ್ ಇರುವ ವಾಹನ ತಂದ. ಅದು ಬಯಲು ಸೀಮೆಯ ವಿಶಾಲವಾದ ಕಪ್ಪು (ಬಸಿಗಾಲುವೆ) ಇರದ “ಬಣ” ದಲ್ಲಿ ಕಳೆ ಕೊಚ್ಚಲು ಇರುವ ವಾಹನವಾಗಿತ್ತು. ಅದಕ್ಕೆ ಚಿಕ್ಕ ಟ್ರೈಲರ್ ಬೇರೆ ಮಾಡಿಸಿದ್ದ. ಆ ಟ್ರಾಕ್ಟರ್ ನಲ್ಲಿ ಯೂಟ್ಯೂಬ್ ನಲ್ಲಿ ತೋರಿಸಿದಷ್ಟು ಉತ್ತಮವಾಗಿ ಕೆಲಸ ಮಾಡಲಾಗದೇ ಕೇವಲ ಮೂರು ನಾಲ್ಕು ಗಂಟೆಗಳ ಫೀಲ್ಡ್ ವರ್ಕ್ ಮಾಡಿ ಅದೀಗ ಬದಿಗೆ ನಿಂತಿದೆ.
ಅನುಭವ ಮೂರು : ಬೈಕ್ ಟ್ರಾಲಿ…, ಪರಿಚಿತರೊಬ್ಬರು ಯಾವುದೋ ಕೃಷಿ ಮೇಳದ ಪ್ರಾತ್ಯಕ್ಷಿಕೆ ನೋಡಿ ಬೈಕ್ ಗೆ ಸಿಕ್ಕಿಸಿಕೊಂಡು ಹೋಗುವ ಟ್ರ್ಯಾಲಿ ಮನೆಗೆ ತಂದು ತನ್ನ ಆಳದ ತೋಟದಿಂದ ಕೊನೆ ತುಂಬಿ ಎತ್ತರಕ್ಕೆ ಅದನ್ನು ಚಾಲನೆ ಮಾಡಿ ಕೊಂಡು ಬರುವಾಗ ಪಲ್ಟಿಯಾಗಿ ಬಿದ್ದು ಆತನ ಸೊಂಟಕ್ಕೆ ಬಲವಾಗಿ ಪೆಟ್ಟಾಗಿ ಏಳೆಂಟು ಲಕ್ಷ ಖರ್ಚಾಯಿತು. ಅವನೀಗ ಮೊದಲಿನಂತೆ ಗಟ್ಟಿ ಕೆಲಸ ಮಾಡಲಾರ….!.ನಮ್ಮ ಮದ್ಯಮ ವರ್ಗದ ರೈತರ ಮನೆಯ ಕಡಿಮಾಡಿನಲ್ಲಿ ಅಂಗಳದಲ್ಲಿ ಸ್ಟೋರ್ ರೂಮಿನಲ್ಲಿ ಹೀಗಿನ ಬಗೆ ಬಗೆಯ ಯಂತ್ರೋಪಕರಣಗಳು ಬಲೆ ಕಟ್ಟಿ ನಿಂತಿರುತ್ತದೆ.ಯೂಟ್ಯೂಬ್ ನಲ್ಲೋ , ಕೃಷಿ ಮೇಳದ ಸ್ಟಾಲ್ ನಲ್ಲೋ ತೋರಿಸಿದ ನೋಡದ ಗಾಡಿಗಳು ನಮ್ಮ ಮಲೆನಾಡು ಕರಾವಳಿಯ ಹೂದಲು ಮಣ್ಣು, ಏರು ತಗ್ಗಿನ ಜಾಗಗಳಲ್ಲಿ ನಿರೀಕ್ಷಿತ ಕೆಲಸ ಮಾಡಲಾಗದೇ ಸೋತು ಬದಿಗೆ ನಿಲ್ಲುತ್ತವೆ…
ಈ ವಾಹನ ನಮಗೆಷ್ಟು worth…., ನಮ್ಮ ತೋಟ ನಮ್ಮ ಮನೆಯಿಂದ ಎರಡು ಕಿಲೋ ಮೀಟರ್. ನಾವು ಗೊಬ್ಬರ ಸಾಗಣೆಗೆ, ಕೊನೆ ತರಲು ಖಾಸಗಿ ಗೂಡ್ಸ್ ವಾಹನಗಳಿಗೆ ಅವಲಂಬಿತರು. ಮಧ್ಯಮ ವರ್ಗದ ನಾವು ವರ್ಷಕ್ಕೆ ಒಂದು ಎಂಟು ಹತ್ತು ಟ್ರಿಪ್ ಸಾಗಣೆ ಮಾಡಲು ಎರಡು ಲಕ್ಷದ ಗೂಡ್ಸೋ ,ಆಲ್ಟ್ರೇಷನ್ ವಾಹನವೋ ಮಾಡಿದರೆ ದೊಡ್ಡ ನಷ್ಟ. ಐವತ್ತು ವರ್ಷ ದಾಟಿದ ಮೇಲೆ ಮೂಟೆಯೋ , ತೂಕದ ಕೊನೆಯೋ ಹೊತ್ತು ಗಾಡಿಗೆ ಹಾಕುವುದೂ ಕಷ್ಟ. ಮಲೆನಾಡಿನ ಇಳಿಜಾರು, ಎತ್ತರದ ಜಾಗ , ಕಡಿದಾದ ತಿರುವುಗಳಲ್ಲಿ ಈ ಆಲ್ಟ್ರೇಷನ್ ವಾಹನಗಳು ಅಪಾಯಕಾರಿ. ಪ್ರತಿ ಊರಿನಲ್ಲೂ ಬಾಡಿಗೆಗೆ 4×4 ಪಿಕ್ ಅಪ್ ವಾಹನಗಳು ಇರುತ್ತದೆ. ಯಾರನ್ನೋ ಖಾಯಂ ಆಗಿ ಗೊತ್ತು ಮಾಡಿಕೊಂಡು ಅವರಿಗೆ ನಿಗದಿತ ಸಮಯಕ್ಕೆ ಬಂದು ನಿಮ್ಮ ಕೃಷಿ ಸರಕು ಸಾಗಣೆ ಮಾಡಿ..
ಈಗ ಎಲೆಚುಕ್ಕಿ ಸಂವತ್ಸರ… ಇಂತಹ ಲಕ್ಷದ ಮೇಲ್ಪಟ್ಟ ವಾಹನಗಳಿಗೆ ಬಂಡವಾಳ ಹಾಕುವುದು ಮದ್ಯಮ ವರ್ಗದ ರೈತರಿಗಂತೂ ರಿಸ್ಕು,. ಕಳೆಮಿಷನ್ ಮನೆಯಲ್ಲಿ ಇರುತ್ತದೆ, ಆದರೆ ಬಹಳ ಹೊತ್ತು ನಿಂತು ಕಳೆ ಹೊಡೆಯಲು ಸೊಂಟ ನೋವು. ಅದಕ್ಕೆ ಬಾಡಿಗೆ ಕಳೆ ಮಿಷನ್ ನವರಲ್ಲಿ ಕಳೆ ಹೊಡೆಸುತ್ತೇವೆ… ಮಿಷನ್ ಗರಗಸ ಇದೆ…. ಆದರೆ ನಾವು ಸ್ವಂತ ಕಟ್ಟಿಗೆ ಕೊಯ್ಯೋಲ್ಲ.
ಹೀಗೆ ಹೊಂಡ ಮಾಡುವ ಯಂತ್ರ, ಚಿಕ್ಕ ಹೂಟಿ ಮಾಡುವ ಯಂತ್ರ, ಎಲ್ಲವೂ ಸ್ಟೋರ್ ರೂಮಿನಲ್ಲಿ ಚಿರ ನಿದ್ರೆಯತ್ತಾ ಸಾಗಿವೆ…!!. ಇಂತಹ ಎಲ್ಲಾ ಯಂತ್ರ ಕೊಂಡು ರೈತ ಸ್ವಾವಲಂಬಿ ಆಗುವ ಕನಸು ಮುರುಟಿದೆ. ಏಕೆಂದರೆ ಈ ಯಂತ್ರ ಗಳ ಬಳಸುವುದು ನಿರ್ವಹಣೆ ಯೂಟ್ಯೂಬ್ ನಲ್ಲಿ ನೋಡಿದಷ್ಟು ಸುಲಭವಲ್ಲ. ವರ್ಷಕ್ಕೆ ಒಂದು ಪಿಕ್ ಅಪ್ ಕಟ್ಟಿಗೆ ಬೇಕಾಗುವ ಒಬ್ಬ ರೈತನಿಗೇಕೆ ಹದಿನೈದು ಸಾವಿರ ರೂಪಾಯಿ ಚೈನ್ ಸಾ..? ಒಂದು ಸಾವಿರ ರೂಪಾಯಿ ಬಾಡಿಗೆ ಕೊಟ್ಟರೆ ಮನೆ ಬಾಗಿಲಿಗೆ ಬಂದು ಕಟ್ಟಿಗೆ ಕೊಯ್ದು ಕೊಟ್ಟು ಹೋಗೋಲ್ವಾ…? ರೈತರು ಇದೆಲ್ಲಾ ಯೋಚನೆ ಮಾಡಬೇಕು.
ಅಡಿಕೆ ಸುಲಿಯುವ ಯಂತ್ರ , ಗೊರಬಲು ಪಾಲಿಷರ್ ಯಂತ್ರ, ಸೇರಿದಂತೆ ಅಡಿಕೆ ಸಂಸ್ಕರಣೆಗೆ ಬೇಕಾದ ಎಲ್ಲಾ ಪರಿಕರ ರೈತರ ಮನೆಯಲ್ಲಿದೆ. ಆದರೆ ರೈತ ಮನೆಯಲ್ಲಿ ಸ್ವಂತ ಅಡಿಕೆ ಸಂಸ್ಕರಣೆ ಮಾಡದೇ ವರ್ಷಗಳೇ ಕಳೆದಿದೆ. ಇದೆಲ್ಲಾ ಲಕ್ಷಾಂತರ ಬೆಲೆ ಬಾಳುವಂತಹದ್ದು….??!
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು ಯೋಚಿಸಿ ನಂತರ ಕೊಳ್ಳುವುದು ಒಳಿತು ಅಲ್ವಾ…? ಒಂದು ಕಡೆ ಆರ್ಥಿಕ ಹೊರೆ. ಅದೇ ರೀತಿಯಲ್ಲಿ ಇಂತಹ ವಾಹನಗಳ ಚಾಲನೆ ನಿರ್ವಹಣೆ ದೈಹಿಕವಾಗಿಯೂ ದಣಿಸುತ್ತದೆ.
ಇಂತಹ ಯಂತ್ರ ಕೊಂಡು ಅವುಗಳ ನಿರ್ವಹಣೆ , ದೈಹಕ ಸವಕಳಿ ನಂತರದ ಆಸ್ಪತ್ರೆ ವೆಚ್ಚದ ಬಗ್ಗೆ ಲೆಕ್ಕಾಚಾರ ಹಾಕಿದರೆ ಹೊರಗಿನವರ ಕೈಲಿ ಕೆಲಸ ಮಾಡಿಸೋದೇ ಒಳ್ಳೆಯದು.
ನಾಲ್ಕು ಲಕ್ಷ ದ ಓಮಿನಿ ಈಗ ನಲವತ್ತು ಸಾವಿರಕ್ಕೂ ಯಾರೂ ಕೇಳೋಲ್ಲ..! ಒಂದು ಲಕ್ಷದ ಎಂಬತ್ತು ಸಾವಿರದ ಟ್ರಾಕ್ಟರ್ ಇದೀಗ ಐವತ್ತು ಸಾವಿರವೂ ಬೆಲೆ ಬಾಳೋಲ್ಲ. ಕೆಳಗಿನ ತೋಟದಿಂದ ಸುಲಭವಾಗಿ ಬೈಕ್ ಟ್ರ್ಯಾಲಿಯಲ್ಲಿ ಕೊನೆ ತರುತ್ತೇನೆಂದು ಹೋಗಿ ಬಿದ್ದು ಸೊಂಟ ಮುರಿದು ಕೊಂಡವನ ಲೈಫೇ ಸ್ಕ್ರಾಪು….
ಇಂತಹ ಲಕ್ಷ ಬೆಲೆಬಾಳುವ ಗಾಡಿ ಇತರೆ ಪರಿಕರ ಕೊಳ್ಳುವಾಗ ಮಾತ್ರ ಬೆಲೆ. ನಿಮಗೆ ಪ್ರಯೋಜನ ಇಲ್ಲಾಂತಾದರೆ ಮಾರಾಟ ಮಾಡುವುದಾದಲ್ಲಿ ಮೂರು ಕಾಸಿನ ಬೆಲೆ ಇಲ್ಲ…!!
ಇಪ್ಪತ್ತು ಇಪ್ಪತ್ತೈದು ಸಾವಿರ ಕ್ಕೆ ಸಿಕ್ಕುವ ಎಫ್ ಸಿ ಮುಗಿದ ಮಾರುತಿ 800 ನ್ನು ಕಡಿಮೆ ವೆಚ್ಚದಲ್ಲಿ alter ಮಾಡಿ ಬಳಸಿ. ಬೈಕ್ ನ್ನ ಚಿಕ್ಕ ವೆಚ್ಚದಲ್ಲಿ alter ಮಾಡಿ ಬಳಸಿ. ಸ್ಥಳೀಯ ವಾಗಿ ಗೂಡ್ಸ್ ವಾಹನದವರು ಲಭ್ಯ ವಿದ್ದರೆ ಅವರಿಗೆ ಬಾಡಿಗೆ ಕೊಡಿ. ಅನಗತ್ಯ ವೆಚ್ಚ ಮಾಡುವ ಸಮಯ ಇದಲ್ಲ…