ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ

July 4, 2025
9:45 AM
ಪುತ್ತೂರಿನ ಪ್ರಕರಣವೊಂದು ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ರಾಜಕೀಯವಾಗಿಯೂ ಇದೊಂದು ಚರ್ಚೆ, ಆರೋಪಗಳಿಗೂ ಕಾರಣವಾಗಿದೆ. ಈ ನಡುವೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಬಹಳ ಮಾರ್ಮಿಕವಾದ ಬಹರವೊಂದನ್ನು ಅಭಿಪ್ರಾಯದ ರೂಪದಲ್ಲಿ ಬರೆದಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ....

ವಿನಾ ಸ್ತ್ರೀಯಾ ಜನನಂ ನಾಸ್ತಿ..
ವಿನಾ ಸ್ತ್ರೀಯಾ ಗಮನಮ್ ನಾಸ್ತಿ..
ವಿನಾ ಸ್ತ್ರೀಯಾ ಸೃಷ್ಟಿ ಏವ ನಾಸ್ತಿ..…… ಮುಂದೆ ಓದಿ……

Advertisement

ನಾನು ಹುಟ್ಟಿದಾಗ ನನ್ನನ್ನು ಎತ್ತಿಕೊಂಡು ಅಕ್ಕರೆಯಿಂದ, ಮಮತೆಯಿಂದ ಸಲಹಿದ್ದು ಓರ್ವ ಹೆಣ್ಣು…. ಅವಳೇ ನನ್ನ ತಾಯಿ. ನಾನಿನ್ನೂ ಪುಟ್ಟ ಮಗುವಾಗಿದ್ದಾಗ ಪ್ರೀತಿಯಿಂದ ನನ್ನನ್ನು ನೋಡಿಕೊಳ್ಳುತ್ತಾ ಜೊತೆಗೆ ಆಟ ಆಡುತ್ತಿದ್ದವಳೂ ಒಬ್ಬ ಹೆಣ್ಣು. ಅವಳೇ ನನ್ನ ಒಡಹುಟ್ಟಿದ ಅಕ್ಕ. ಸ್ವಲ್ಪ ದೊಡ್ಡವನಾದ ಬಳಿಕ ಶಾಲೆಗೆ ಹೋಗಲು ಶುರುಮಾಡಿದಾಗ ತಿದ್ದಿ ತೀಡಿ ಅಕ್ಷರಾಭ್ಯಾಸ ಮಾಡಿಸಿದ್ದು, ವಿದ್ಯೆ ಕಲಿಸಿದ್ದೂ ಕೂಡಾ ಹೆಣ್ಣುಮಕ್ಕಳೇ. ಅವರೇ ನನ್ನ ಶಿಕ್ಷಕಿಯರು. ಆ ಬಳಿಕ ನಾನು ಯುಕ್ತ ವಯಸ್ಕನಾದಾಗ, ನನ್ನದೇ ಜೀವನ ಕಟ್ಟಿಕೊಂಡು ನನ್ನದೇ ಆದ ವ್ಯಾಪಾರ ವ್ಯವಹಾರಗಳಲ್ಲಿ ವ್ಯಸ್ತನಾಗಿದ್ದಾಗ, ಕಾಲಕಾಲಕ್ಕೆ ನನ್ನ ಬೇಕು ಬೇಡಗಳನ್ನು ಗಮನಿಸಿ ನನ್ನ ಜೀವನಕ್ಕೆ ಆಧಾರಸ್ಥಂಭದಂತೆ ನಿಂತು ತನ್ನ ಜೀವನವನ್ನೇ ನನಗಾಗಿ ಸಮರ್ಪಿಸಿಕೊಂಡವಳೂ ಕೂಡ ಓರ್ವ ಹೆಣ್ಣು, ಅವಳೇ ನನ್ನ ಹೆಂಡತಿ. ಆ ಬಳಿಕ ನನ್ನ ಖುಷಿಯನ್ನು ಇನ್ನಷ್ಟು ಹೆಚ್ಚಿಸಲು, ನನ್ನ ಜೀವನದ ಸಾರ್ಥಕ್ಯಕ್ಕೋ ಎಂಬಂತೆ ಈ ಭುವಿಗೆ ಬಂದವಳು ಕೂಡಾ ಒಬ್ಬ ಹೆಣ್ಣೇ…. ಅವಳೇ ನನ್ನ ಮಗಳು. ಹೀಗೆ ಸ್ತ್ರೀ ಎಂಬ ಆ ಮಹಾಶಕ್ತಿ ನನ್ನ ಜೀವನದ ಎಲ್ಲಾ ಹಂತಗಳಲ್ಲೂ, ಎಲ್ಲಾ ಮಜಲುಗಳಲ್ಲೂ ಪ್ರಮುಖ ಪಾತ್ರವನ್ನೇ ವಹಿಸಿದೆ… ನನ್ನ ಜೀವನ ಮಾತ್ರವಲ್ಲ, ಈ ಜಗತ್ತಿನ ಪ್ರತಿಯೊಬ್ಬನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಹೆಣ್ಣಿನ ಪಾತ್ರ ಇದ್ದೇ ಇರುತ್ತದೆ. ಹೊತ್ತು, ಹೆತ್ತು, ಸಾಕಿ ಸಲಹಿ ಪೊರೆಯುವವಳು ಹೆಣ್ಣು. ಅಕ್ಕ ತಂಗಿ ಪತ್ನಿ, ಪುತ್ರಿಯಾಗಿ ನಮ್ಮ ಜೀವನವನ್ನು ಪಾವನ ಮಾಡುವವಳು, ನಮ್ಮ ಜೀವನವನ್ನು ಪರಿಪೂರ್ಣಗೊಳಿಸುವವಳು ಹೆಣ್ಣೇ… ಹೆಣ್ಣಿಗೆ ಜಗತ್ತಿನಲ್ಲಿ ಅಪೂರ್ವವಾದ ಸ್ಥಾನ ಇದೆ. ಹೆಣ್ಣು ಇಲ್ಲದಿದ್ದರೆ ಈ ಸೃಷ್ಟಿಯೇ ಇಲ್ಲ. ಹಾಗಾಗಿ ಶಕ್ತಿ ಸ್ವರೂಪಿಣಿಯಾದ ಹೆಣ್ಣಿಗೆ ಜಗಜ್ಜನನಿಯ ಸ್ಥಾನಮಾನ ಕೊಟ್ಟು ಪೂಜಿಸುವವನು ನಾನು.…… ಮುಂದೆ ಓದಿ……

ಆದರೆ ನನ್ನ ಪುತ್ತೂರಿನಲ್ಲಿ ಇತ್ತೀಚಿಗೆ ನಡೆದ ಕೆಲ ಬೆಳವಣಿಗೆಗಳಿಂದಾಗಿ ನನ್ನ ಮನಸ್ಸಿಗೆ ಆಘಾತವಾಗಿದೆ. ಯಾವತ್ತಿಗೂ ಸ್ತ್ರೀಯರಿಗೆ ಅತ್ಯಂತ ಹೆಚ್ಚಿನ ಗೌರವ, ಮಹತ್ವ ಕೊಡುವವನಾದ ನನ್ನ ಮೇಲೆಯೇ ಕೆಲವೊಂದು ವೃಥಾಪವಾದಗಳು ಬಂದವು. ನಾನು ಸ್ತ್ರೀವಿರೋಧೀ ಎಂಬಂತೆ ಬಿಂಬಿಸುವ ಪ್ರಯತ್ನಗಳಾದವು… ಇನ್ನೂ ಈ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುವುದೂ ಹೌದು… ಓರ್ವ ಸಂತ್ರಸ್ತ ಹೆಣ್ಣು ಮಗಳಿಗೆ ನಾನು ನ್ಯಾಯ ಕೊಡಿಸಲಿಲ್ಲ ಅಂತನ್ನೋ ಅಪವಾದದ ಜೊತೆಗೆಯೇ “ಶಾಸಕ ಅಶೋಕ್ ರೈಗಳು ಅಪರಾಧಿಗಳ ಪರ ವಹಿಸಿದ್ದಾರೆ” ಅಂತನ್ನೋ ರೀತಿಯ ಗಂಭೀರ ಆರೋಪವೂ ಬಂತು. ವಿನಾ ಕಾರಣ ನನ್ನ ಹೆಸರನ್ನು ಈ ಪ್ರಕರಣಕ್ಕೆ ತಳುಕು ಹಾಕಿ ಪುತ್ತೂರಿನಲ್ಲಿ ಹೊಲಸು ರಾಜಕಾರಣ ಮಾಡುವ ಪ್ರಯತ್ನವೂ ನಡೆಯಿತು. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ನಾನು ಹೇಳಿಕೆ ನೀಡಿದ್ದರೂ ಕೂಡಾ ನನ್ನ ವಿರುದ್ಧದ ಅಪಪ್ರಚಾರ ಮುಂದುವರೆದ ಹಾಗೆ ಕಾಣಿಸುತ್ತಿದೆ. ಹಾಗಾಗಿ ಈ ಬಗ್ಗೆ ವಿವರವಾಗಿ ನಾನು ಸ್ಪಷ್ಟೀಕರಣ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಘಟನೆ ನಾಗರೀಕ ಸಮಾಜ ಒಪ್ಪುವಂತದ್ದು ಅಲ್ಲ. ಶಾಲಾ ದಿನಗಳ ಪ್ರೀತಿ ಪ್ರೇಮ ಮುಂದುವರಿದು ಹದಿಹರೆಯದ ಹೆಣ್ಣುಮಗಳೊಬ್ಬಳು ಸಂತ್ರಸ್ತಳಾಗಿ ವಿವಾಹವಿಲ್ಲದೆಯೇ ಮಗುವಿನ ತಾಯಿಯಾಗುವ ಸಂದರ್ಭ ಸೃಷ್ಟಿಯಾದಾಗ, ಸಹಜವಾಗಿಯೇ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಹುಡುಗ ಮತ್ತು ಹುಡುಗಿಯ ಮನೆಯವರು ಪರಸ್ಪರ ಒಪ್ಪಿಕೊಂಡು ವಿವಾಹದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದಾದ ತೀರಾ ಖಾಸಗೀ ಮಟ್ಟದ ಪ್ರಕರಣವಿದು. ಆದರೆ ಇನ್ನೂ ಸಂಪೂರ್ಣವಾಗಿ ವಯಸ್ಕರಾಗದ ಇಬ್ಬರು ಮಕ್ಕಳ ಭವಿಷ್ಯದ ಜೀವನದ ಪ್ರಶ್ನೆಯೂ ಇಲ್ಲಿತ್ತು. ಹಾಗಾಗಿ ಪ್ರಕರಣವನ್ನು ಬಗೆಹರಿಸುವಾಗ ಸ್ವಲ್ಪ ಸೂಕ್ಷ್ಮವಾಗಿ ವ್ಯವಹರಿಸಬೇಕಾದ ಅಗತ್ಯತೆಯೂ ಇತ್ತು. ಆದರೆ ಹುಡುಗನ ತಂದೆ ಸಕ್ರಿಯ ರಾಜಕಾರಣಿ, ಓರ್ವ ಜನಪ್ರತಿನಿಧಿ ಅಂದಾಕ್ಷಣ ಪ್ರಕರಣಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಂದರ್ಭ ಒದಗಿದಾಗ ಹುಡುಗನ ತಂದೆ ನನ್ನ, ಸಲಹೆ , ಸಹಕಾರವನ್ನು ಫೋನ್ ಮೂಲಕ ಯಾಚಿಸಿದ್ದು. ಆ ಸಂದರ್ಭದಲ್ಲಿ ಹುಡುಗನ ತಂದೆ ನನ್ನಲ್ಲಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆ, ಹುಡುಗನಿಗೂ ಹುಡುಗಿಗೂ ಕಾನೂನು ಪ್ರಕಾರ ಮಾಡುವ ಮಾಡಿಸುತ್ತೇವೆ…. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹುಡುಗ ವಿವಾಹ ಮಾಡಿಕೊಳ್ಳಲು ಕಾನೂನು ಪ್ರಕಾರ ಯುಕ್ತವಾದ ವಯಸ್ಸು ಹೊಂದಿಲ್ಲದೆಯೇ ಇರುವುದರಿಂದ, ಇನ್ನೊಂದೆರಡು ತಿಂಗಳ ಒಳಗಾಗಾಗಿ ಹುಡುಗನಿಗೆ ಇಪ್ಪತ್ತೊಂದು ವರ್ಷ ತುಂಬಿದ ಕೂಡಲೇ ಮದುವೆ ಮಾಡಿಸುತ್ತೇವೆ ಅಂತ ವಿವರಿಸಿ ಮಾತು ಕೊಟ್ಟ ಮೇಲೆಯೇ ನಾನು ಹುಡುಗಿಯ ಮನೆಯವರೊಂದಿಗೆ ಮಾತನಾಡಿದ್ದು. ಆ ಸಂದರ್ಭದಲ್ಲಿ ನಾನು ಹುಡುಗಿಯ ಮನೆಯವರಿಗೆ ‘ಈಗಲೇ ಪೊಲೀಸ್ ದೂರು ದಾಖಲಿಸಿ ಎಫ್.ಐ.ಆರ್. ಆಗುವಂತೆ ಮಾಡುವುದು ಬೇಡ…. ಹುಡುಗನಿಗೆ ಇಪ್ಪತ್ತೊಂದು ವರ್ಷ ತುಂಬಿದ ಕೂಡಲೇ ಅವರು ಮದುವೆ ಮಾಡಿಸುತ್ತಾರೆ ಅಂತ ಭರವಸೆ ನೀಡಿದ್ದಾರೆ” ಅಂತ ಹೇಳಿ ಪೊಲೀಸ್ ದೂರು ದಾಖಲು ಮಾಡಬೇಡಿ ಅಂತ ವಿನಂತಿ ಮಾಡಿದ್ದು ನಿಜ…

ಸ್ವತಃ ಹೆಣ್ಣು ಮಕ್ಕಳ ತಂದೆಯಾಗಿರುವ ನನಗೆ ಈ ಸಂತ್ರಸ್ತ ಹೆಣ್ಣುಮಗುವಿನ ಮೇಲೆ ಕಾಳಜಿ ಇರುವುದಿಲ್ಲವೇ..? ಆ ಹೆಣ್ಣು ಮಗುವಿನ ಭವಿಷ್ಯದ ಬಗ್ಗೆ ಚಿಂತೆ ಇರುವುದಿಲ್ಲವೇ…? ಕೇವಲ ಆ ಸಂತ್ರಸ್ತ ಹೆಣ್ಣುಮಗಳು ಅಷ್ಟೇ ಅಲ್ಲವಲ್ಲ…. ಆಕೆಯ ಹೊಟ್ಟೆಯೊಳಗೆ ಬೆಳೆಯುತ್ತಿರುವ ಪುಟ್ಟ ಕಂದನ ಭವಿಷ್ಯದ ಬಗ್ಗೆಯೂ ಯೋಚಿಸಬೇಕಲ್ಲ..? ಒಂದು ವೇಳೆ ಹುಡುಗನೋ, ಆತನ ಮನೆಯವರೋ ಈ ಸಂತ್ರಸ್ತ ಹುಡುಗಿಯ ಮದುವೆಯ ಬಗ್ಗೆ ಒಪ್ಪದೆಯೇ ಹೋಗಿದ್ದರೆ, ಆ ಸಂದರ್ಭದಲ್ಲಿ ನಾನೇ ಮುಂದಾಗಿ ಹುಡುಗಿಯ ಮನೆಯವರ ಜೊತೆಗೆ ನಿಂತು ಕೇಸು ದಾಖಲಿಸುವುದಕ್ಕೆ ಬೆಂಬಲವನ್ನೂ ಸೂಚಿಸುತ್ತಿದ್ದೆ. ಆದರೆ ಆಗ ಪರಿಸ್ಥಿತಿ ಹಾಗಿರಲಿಲ್ಲ… ಹುಡುಗನ ತಂದೆ ನನಗೆ ಮದುವೆ ಮಾಡಿಸುವ ಬಗ್ಗೆ ಮಾತು ಕೊಟ್ಟಿದ್ದರು. ಈ ಸಂದರ್ಭದಲ್ಲೇನಾದರೂ ಹುಡುಗಿ ಮನೆಯವರು ಕೇಸು ದಾಖಲಿಸಿದ್ದೇ ಆದರೆ, ಆಗ ಎರಡೂ ಮನೆಯವರ ಮಧ್ಯೆ ವೈಮನಸ್ಸು ಮೂಡಿ ನಡೆಯಬಹುದಾಗಿದ್ದ ಈ ಮದುವೆಯೇ ನಿಂತು ಹೋಗಬಹುದು ಎಂಬ ಕಾಳಜಿ ನನಗಿತ್ತು. ಒಂದು ವೇಳೆ ಹಾಗಾದಲ್ಲಿ ಹುಡುಗಿಯ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಪುಟ್ಟ ಕಂದನ ಭವಿಷ್ಯ ಏನು..? ಕಾನೂನು ಹೋರಾಟ ಮಾಡಿದರೆ ಸಿಗುವ ಪರಿಹಾರ ಏನು….? ಈ ಪ್ರಕರಣ “ಕಾನೂನಿನ ಪ್ರಕಾರವೇ ಪರಿಹಾರ, ದಂಡ, ತಪ್ಪಿತಸ್ಥನಿಗೆ ಶಿಕ್ಷೆ” ಎಂಬ ರೀತಿಯಲ್ಲಿ ಬಗೆಹರಿದರೂ ಕೂಡಾ ಆ ಸಂತ್ರಸ್ತ ಹುಡುಗಿಯ ಬಾಳು ಸರಿಯಾಗುವುದಿಲ್ಲ… ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ಭವಿಷ್ಯ ಚೆನ್ನಾಗಿರುವುದಿಲ್ಲ…. ಎಂಬ ಅರಿವು ನನಗಿತ್ತು. ಹಾಗಾಗಿ ಇದೆಲ್ಲವೂ ಸೌಹಾರ್ದಯುತವಾಗಿ ಪರಿಹಾರವಾಗಲಿ ಎಂಬುದೇ ನನ್ನ ಕಳಕಳಿಯಾಗಿತ್ತು.

Advertisement

ಅಂದ ಹಾಗೆ , ಹುಡುಗನ ತಂದೆ ನನ್ನಲ್ಲಿ ಯಾವುದೆಲ್ಲಾ ಭರವಸೆಗಳನ್ನು ನೀಡಿದ್ದರೋ ಅವುಗಳನ್ನೆಲ್ಲಾ ಪೊಲೀಸ್ ಠಾಣೆಗೆ ನೀಡಿದ್ದ ಮುಚ್ಚಳಿಕೆ ಪತ್ರದಲ್ಲೂ ಬರೆದಿದ್ದರಲ್ಲ… ಹಾಗಾಗಿ ನಾನು ಕೊಂಚ ನಿರಾಳನಾದೆ. ಈ ಪ್ರಕರಣ ಸುಸೂತ್ರವಾಗಿ, ಸೌಹಾರ್ದಯುತವಾಗಿ ಬಗೆ ಹರಿಯಿತು ಅಂತಲೇ ಅಂದುಕೊಂಡೆ. ನಿಜಕ್ಕಾದರೆ ಇಂಥಹಾ ವೈಯುಕ್ತಿಕ ನೆಲೆಯ ಪ್ರಕರಣವೊಂದರಲ್ಲಿ ಊರಿನ ಶಾಸಕನಾಗಿ ನಾನು ವಹಿಸಬೇಕಾಗಿದ್ದ ಪಾತ್ರ ತೀರಾ ನಗಣ್ಯವಾಗಿತ್ತು. ಆದರೆ ಹುಡುಗನ ತಂದೆ ಓರ್ವ ಸ್ಥಳೀಯ ಜನ ಪ್ರತಿನಿಧಿ ಆಗಿದ್ದುದರಿಂದ, ವೈಯುಕ್ತಿಕವಾಗಿ ನನಗೆ ಪರಿಚಯಸ್ಥರೂ ಆದುದರಿಂದ ಮತ್ತು ಅವರಾಗಿಯೇ ಈ ಬಗ್ಗೆ ನನ್ನನ್ನು ಸಂಪರ್ಕಿಸಿ ಸಹಾಯ ಯಾಚಿಸಿದ್ದರಿಂದ ( ಅವರು ರಾಜಕೀಯವಾಗಿ ನನ್ನ ಎದುರಾಳಿ ಪಕ್ಷದವರಾಗಿದ್ದರೂ ಕೂಡಾ) ನಾನು ಮಾನವೀಯ ನೆಲೆಯಲ್ಲಷ್ಟೇ ಸಲಹೆ ನೀಡಿದ್ದೆ. ಏನೇ ಆದರೂ, ಆ ಹೊತ್ತಿಗೆ ಪೊಲೀಸ್ ಕೇಸು ದಾಖಲಾಗಲಿಲ್ಲ ಎಂಬುದನ್ನು ಹೊರತು ಪಡಿಸಿ ನನ್ನಿಂದಾಗಿ ಈ ಪ್ರಕರಣದಲ್ಲಿ ಬೇರೆ ಏನೂ ವ್ಯತ್ಯಾಸಗಳಾಗಿರಲಿಲ್ಲ… ಒಂದು ವೇಳೆ ಹುಡುಗನಿಂದ ಮತ್ತು ಆತನ ಮನೆಯವರಿಂದ ಯಾವುದೇ ರೀತಿಯ ತೊಂದರೆ, ನಂಬಿಕೆ ದ್ರೋಹವಾದರೂ ಸಂತ್ರಸ್ತೆ ಮತ್ತಾಕೆಯ ಮನೆಯವರಿಗೆ ಕಾನೂನು ಪ್ರಕಾರ ಹೋರಾಟ ಮುಂದುವರಿಸುವ ಮತ್ತು ಪೊಲೀಸ್ ದೂರು ದಾಖಲಿಸುವ ಅವಕಾಶಗಳಂತೂ ಖಂಡಿತಾ ಇದ್ದೇ ಇತ್ತು. ಅದಕ್ಕೆ ಬೆಂಬಲವಾಗಿ ಹುಡುಗನ ತಂದೆಯೇ ಪೊಲೀಸ್ ಠಾಣೆಯಲ್ಲಿ ಬರೆದುಕೊಟ್ಟ ಮುಚ್ಚಳಿಕೆ ಪತ್ರವಿತ್ತು.

ಆದರೆ ಈಗ ಪ್ರಕರಣದಲ್ಲಿ ಒಂದಷ್ಟು ಆತಂಕಕ್ಕೆ ಎಡೆಮಾಡಿಕೊಡುವ ಬೆಳೆವಣಿಗೆಗಳು ನಡೆದಿವೆ. ಆರೋಪಿ ಸ್ಥಾನದಲ್ಲಿದ್ದ ಹುಡುಗ ನಾಪತ್ತೆಯಾಗಿದ್ದಾನೆ. ಸಂತ್ರಸ್ತ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ, ಮತ್ತು ಹುಡುಗನ ಮನೆಯವರು ಮದುವೆಗೆ ನಿರಾಕರಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹುಡುಗಿಯ ಮನೆಯವರು ಪೊಲೀಸ್ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿಯೇ ಈ ಪ್ರಕರಣದಲ್ಲಿ ಹೊಲಸು ರಾಜಕಾರಣ ಶುರುವಾಯಿತು. ಅಪಕ್ವ ಮನಸ್ಸಿನ ಹುಡುಗ ಹುಡುಗಿಯರಿಬ್ಬರ ನಡುವಿನ ಪ್ರೀತಿ- ಪ್ರೇಮದ ಪ್ರಕರಣವೊಂದು ಹೀಗೆ ಅಸಹ್ಯ ಮಟ್ಟದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಬಹುದೆಂದು ನಾನು ಊಹಿಸಿಯೇ ಇರಲಿಲ್ಲ…. ನನ್ನ ಹೆಸರನ್ನೂ ವಿನಾಕಾರಣ ಎಳೆದು ತರಲಾಯಿತು. ಸಂತ್ರಸ್ತೆಗೆ ನಾನು ನ್ಯಾಯ ಒದಗಿಸಲಿಲ್ಲ… ಆ ನೊಂದ ಕುಟುಂಬದ ಪರವಾಗಿ ನಿಲ್ಲಲಿಲ್ಲ ಎಂಬಂತಹ ರೀತಿಯ ಆರೋಪಗಳೂ ಬಂದವು. ನನ್ನ ಮನಸ್ಸಿಗೆ ತುಂಬಾ ಖೇದವಾಯಿತು. ಆದರೆ ಈಗ ಈ ಪ್ರಕರಣವನ್ನು ಮಾತುಕತೆಯ ಮೂಲಕ ಪರಿಹರಿಸುವುದು ಕಷ್ಟವೇ, ಬದಲಿಗೆ ಕಾನೂನು ಮುಖಾಂತರವೇ ಪರಿಹಾರ ಕಂಡುಕೊಳ್ಳಬೇಕಾಗಿರುತ್ತದೆ ಎಂಬುದು ನನ್ನ ಅನಿಸಿಕೆ. ಈಗಾಗಲೇ ಎಸ್ ಪಿ, ಡಿ ವೈ ಎಸ್ ಪಿ ಯವರ ಜೊತೆ ಖುದ್ದು ಮಾತಾಡಿದ್ದೇನೆ. ನಾನು ಯಾವತ್ತಿದ್ದರೂ ಆ ಸಂತ್ರಸ್ತ ಹುಡುಗಿಯ ಪರವೇ, ಆ ಕುಟುಂಬದ ಪರವೇ ಇರುತ್ತೇನೆ. ಅವರಿಗೆ ಏನೇ ಸಹಾಯ ಬೇಕಿದ್ದರೂ ನನ್ನ ಕೈಯಲ್ಲಾದ ರೀತಿಯಲ್ಲಿ ಖಂಡಿತಾ ಮಾಡುತ್ತೇನೆ. ಇಲ್ಲಿ ನಾನು ವೈಯುಕ್ತಿವಾಗಿ ಹೇಳಲು ಬಯಸುವುದು ಇಷ್ಟೇ. ಸಂತ್ರಸ್ತ ಹೆಣ್ಣಿನ ಬದುಕು ಹಾಳಾಗಬಾರದು, ಬದಲಿಗೆ ಜೀವನ ಬಂಗಾರವಾಗಬೇಕು…

ಇನ್ನು ಪುತ್ತೂರಿನ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಸಂತ್ರಸ್ತ ಯುವತಿಯ ಕುಟುಂಬಕ್ಕೆ ನನ್ನ ಸಂಪೂರ್ಣ ಬೆಂಬಲ, ಸಹಕಾರ ಇದೆ. ನಾನು ಶಾಸಕನ ನೆಲೆಯಲ್ಲೂ, ವೈಯುಕ್ತಿಕವಾಗಿಯೂ ಬಹಳ ದೃಢವಾಗಿ ಆ ಸಂತ್ರಸ್ತ ಕುಟುಂಬದ ಹಿಂದೆ ಇದ್ದೇನೆ. ಸದ್ಯಕ್ಕೆ ಎದುರಾಗಿರುವ ಈ ಗಂಭೀರ ಸಮಸ್ಯೆಗೆ ಒಂದು ತಾರ್ಕಿಕವಾದ ಮತ್ತು ಶಾಶ್ವತವಾದ ಪರಿಹಾರ ಒದಗಿಸಿಕೊಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ಆ ಹೆಣ್ಣುಮಗುವಿನ ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ಮಾಡಲು ನಾನು ಸದಾ ಸಿದ್ಧ. ಎಂಥದ್ದೇ ಸಂದರ್ಭ ಬಂದರೂ, ಯಾವುದೇ ಸಮಸ್ಯೆ ಎದುರಾದರೂ ಆ ಕುಟುಂಬ ಯಾವುದೇ ಹಿಂಜರಿಕೆಯಿಲ್ಲದೆಯೇ ನನ್ನನ್ನು ಸಂಪರ್ಕಿಸಬಹುದು.

ಕಳೆದ ಎರಡು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಹಲವು ಅಸಹಾಯಕರ ಕಷ್ಟಕ್ಕೆ ಸ್ಪಂದಿಸುತ್ತಿರುವ ನನಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೀಡುತ್ತಿರುವ ಉಚಿತ ಸಲಹೆಗಳ ಅಗತ್ಯವಿಲ್ಲ. ಹೆಣ್ಣು ಮಕ್ಕಳ ಕಷ್ಟವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. “ಎಲ್ಲರ ಬಳಿ ನನ್ನದೊಂದು ವಿನಂತಿ: ರಾಜಕೀಯಕ್ಕಾಗಿ, ಸ್ವ ಪ್ರತಿಷ್ಠೆಗಾಗಿ, ಪ್ರಚಾರಕ್ಕಾಗಿ ಇಂತಹ ಪ್ರಕರಣವನ್ನು ಬಳಸಿಕೊಳ್ಳಬೇಡಿ. ಸಂತ್ರಸ್ತೆ ಹೆಣ್ಣು ಮಗಳ ಭವಿಷ್ಯ ಬಂಗಾರವಾಗಲಿ ಎಂದು ಹಾರೈಸೋಣ. ಸಾಮಾಜಿಕ ಮಾಧ್ಯಮಗಳಲ್ಲಿ ಸುಖಾ ಸುಮ್ಮನೆ ಪ್ರಕರಣದ ಪರ ವಿರೋಧ ಚರ್ಚೆಗಳಿಂದ ಸಂತ್ರಸ್ತೆಗೆ ಇನ್ನಷ್ಟು ಮಾನಸಿಕ ಹಿಂಸೆ ಕೊಡುವುದು ಬೇಡ. ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ ವನ್ನು”.

ಅಂದ ಹಾಗೆ ನಾನು ರಾಜಕೀಯಕ್ಕೆ ಬಂದ ಉದ್ದೇಶವನ್ನು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ನನ್ನ ಗುರಿಯೇನಿದ್ದರೂ ಅಭಿವೃದ್ಧಿ ಮಾತ್ರ… ಹಾಗಾಗಿ ಅವಕಾಶವಾದೀ ರಾಜಕೀಯ ಕೆಸರೆರಚಾಟದಲ್ಲಿ ನನಗೆ ನಂಬಿಕೆ ಇಲ್ಲ… ಸಾರ್ವಜನಿಕ ಬದುಕಿನಲ್ಲಿ ನಾನ್ಯಾವತ್ತೂ ನನ್ನ ಆತ್ಮಸಾಕ್ಷಿಗೆ ಅನುಸಾರವಾಗಿಯೇ ನಡೆದುಕೊಂಡಿದ್ದೇನೆ. ಇನ್ನು ಮುಂದೆಯೂ ಹಾಗೆಯೇ ಇರುತ್ತೇನೆ.…… ಮುಂದೆ ಓದಿ……

Advertisement

ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ
ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್
July 15, 2025
9:31 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ | ತುಂಬಿ ಹರಿಯುತ್ತಿರುವ ನದಿಗಳು
July 15, 2025
9:29 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror