ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ಭಾ. ಕೃ. ಅ. ಸಂಸ್ಥೆ) ಕೇಂದ್ರ, ವಿಟ್ಲ, 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್, ರೇಷ್ಮೆ ಕೃಷಿ ಅಭಿವೃದ್ಧಿ ನಿಗಮ, ಮಂಗಳೂರು ಹಾಗೂ ಸಂಜೀವಿನಿ ಎನ್‌ಆರ್‌ಎಲ್‌ಎಂ ತಾಲೂಕು ಪಂಚಾಯತ್ ಸುಳ್ಯ ಇವರ ಸಹಯೋಗದಲ್ಲಿ ರೇಷ್ಮೆ ಕೃಷಿ ಮಾಹಿತಿ ಹಾಗೂ ತಾಳೆ ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾ. ಕೃ. ಅ. ಸಂಸ್ಥೆ ಕೇಂದ್ರ, ವಿಟ್ಲದ ವ್ಯವಸ್ಥಾಪನಾ ನಿರ್ದೇಶಕರಾದ ಎಂ. ಪ್ರಸಾದ್ ಶೆಟ್ಟಿ, ನಿವೃತ್ತ ರೇಷ್ಮೆ ನಿರೀಕ್ಷಕರಾದ ಬಿ.ಕೆ. ನಾಯಕ್, ರೇಷ್ಮೆ ವಿಸ್ತರಣಾಧಿಕಾರಿ ಶಾಂಭವಿ ಹೆಚ್ (ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು), ರೇಷ್ಮೆ ನಿರೀಕ್ಷಕರಾದ ಹೇಮಾ (ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು), 3F ಆಯಿಲ್ ಪಾಮ್ ಪ್ರೈ. ಲಿ., ಉಡುಪಿಯ ಏರಿಯಾ ಮ್ಯಾನೇಜರ್ ಕೃಷ್ಣಾ ವೈ.ಟಿ., ಸಂಜೀವಿನಿ ಕ್ಲಸ್ಟರ್ ಅಧಿಕಾರಿಗಳಾದ ರವಿಶಂಕರ್ (ಸುಳ್ಯ ತಾಲೂಕು) ಹಾಗೂ ರಾಬರ್ಟ್ (ಬಂಟ್ವಾಳ–ಬೆಳ್ತಂಗಡಿ ತಾಲೂಕು) ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಕೃಷಿ ಭೂಮಿ ಹೊಂದಿರುವವರು ಹಾಗೂ ಅಲ್ಪ ಜಾಗವಿರುವವರಿಗೂ ರೇಷ್ಮೆ ಕೃಷಿ ಕೈಗೊಳ್ಳಲು ಅವಕಾಶವಿದ್ದು, ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಹೆಚ್ಚಿನ ಭೂಮಿ ಹೊಂದಿರುವ ಕೃಷಿಕರಿಗೆ ತಾಳೆ ಕೃಷಿ ಮಾಡಲು ಅವಕಾಶವಿದ್ದು, ಸಂಬಂಧಿತ ಇಲಾಖೆಗಳಿಂದ ಎಲ್ಲಾ ರೀತಿಯ ಸಹಕಾರ ಲಭ್ಯವಿರುತ್ತದೆ ಎಂದರು. ರೇಷ್ಮೆ ಬೆಳೆಗಾರರಿಗೆ ಉತ್ಪನ್ನಗಳ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅಗತ್ಯ ತಾಂತ್ರಿಕ ಮಾರ್ಗದರ್ಶನ ಹಾಗೂ ಸಲಕರಣೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ತಾಳೆ ಬೆಳೆ ಈಗಾಗಲೇ ಹಲವು ಕಡೆಗಳಲ್ಲಿ ಬೆಳೆಸಲಾಗುತ್ತಿದ್ದು, ಅದರ ಮಾರಾಟ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು. ಬಂಟ್ವಾಳ ತಾಲೂಕಿನ ತಾಳೆ ಕೃಷಿಕರಾದ ಗೋವಿಂದ ಭಟ್ ಇಡುಕ್ಕಿ ಹಾಗೂ ಬಿ. ಬಾಲಕೃಷ್ಣ ಭಟ್ ತೋಟಕ್ಕೆ ಭೇಟಿ ಮಾಡಿಸಲಾಯಿತು.
ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೃಷಿಕರಿಗಾಗಿ ಇರುವ ವಿವಿಧ ಯೋಜನೆಗಳು, ಸವಲತ್ತುಗಳು, ಕೃಷಿ ಸಲಕರಣಿಗಳು, ಸಬ್ಸಿಡಿಯಲ್ಲಿ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಐ ಐ ಹೆಚ್ ಆರ್ ಬೆಂಗಳೂರುನ ವಿಜ್ಞಾನಿಗಳು ಸಂಶೋಧಿಸಿ ಅಭಿವೃದ್ಧಿ ಪಡಿಸಿದ ಜೈವಿಕ ಪೋಷಕಾಂಶವುಳ್ಳ ಗೊಬ್ಬರವನ್ನು ಕೃಷಿಕರಿಗೆ ಉಚಿತವಾಗಿ ಸಂಸ್ಥೆಯಿಂದ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೃಷಿಕರು, ಬಟ್ಟೆಕಜೆ ರಾಜೇಶ್ ಮತ್ತು ಕೃಷಿಸಖಿಯರಾದ ಪುಷ್ಪಲತಾ ಮಡಪ್ಪಾಡಿ, ಕನಕ ಮಜಲು ಪ್ರೇಮಾ ಅಡ್ಕಾರು, ಜಾಲ್ಸೂರು ವಿಜಯಾ, ಅಜ್ಜಾವರ ಪೂರ್ಣಿಮಾ, ಆಲೆಟ್ಟಿ ಲೋಚನ ಮತ್ತು ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ( ನಿಶಾ ) ಪಾಲ್ಗೊಂಡಿದ್ದರು.



