ಗೋಧರ್ಮ

ಕೃಷಿ-ವಿಜ್ಞಾನ-ಕೃಷಿಕ ಇವುಗಳ ಸುತ್ತ | ಕೃಷಿಕನ ದಾರಿ ಯಾವುದಯ್ಯಾ? |

Share

ಇತ್ತೀಚೆಗೆ ಬರೆದ ಗೋ ಆಧಾರಿತ ಕೃಷಿಯ ಬಗ್ಗೆ ಒಂದು ವಿಮರ್ಶೆಯಲ್ಲಿ ಹಲವು ಅಭಿಪ್ರಾಯದ ಆಧಾರ ಪ್ರಕಾರ ನಾನು ಹೇಳಿದ್ದು ಆಧಾರ ರಹಿತ ಹೇಳಿಕೆ ಅಂತ ಚರ್ಚೆಯಾಯಿತು…. ಆ ಬಗ್ಗೆ ಇನ್ನೊಂದಿಷ್ಟು ಸ್ಪಷ್ಟನೆಗಳನ್ನು ಬರೆಯೋಣವೆನಿಸಿದೆ. ದೇಸೀ ಗೋವು, ಮಲೆನಾಡು ಗಿಡ್ಡ ಗೋತಳಿ ಉಳಿವಿನ ಹಾಗೂ ಬೆಳೆಯುವ ದೃಷ್ಟಿಯಿಂದ…

ವಿಜ್ಞಾನ ಎಂಬ ಪದದ ಬಗ್ಗೆ ನಾನು ವಿವರಣೆಯನ್ನು ಈ ಹಿಂದೆ ಕೊಟ್ಟಿದ್ದೆ. ನನ್ನ ಅಧ್ಯಯನಾನುಭವದ ಹಿನ್ನೆಲೆಯಲ್ಲಿ ವಿಜ್ಞಾನ ಎಂಬ ಶಬ್ದಕ್ಕೆ ಮೂಲ ವೇದಗಳು. ವೇದಗಳಲ್ಲಿ ವಿಜ್ಞಾನ ಶಬ್ದವು ಬಹಳಷ್ಟು ಉಲ್ಲೇಖವಾಗಿದೆ. “ವಿಜ್ಞಾನಂ ಬ್ರಹ್ಮೇತಿ ವ್ಯಜಾನಾತ್” ಎಂಬ ವಾಕ್ಯ ತೈತ್ತಿರೀಯೋಪನಿಷತ್ನಲ್ಲಿ ಬರುತ್ತದೆ. ವಿಜ್ಞಾನವೇ ಬ್ರಹ್ಮವೆಂದು ಭೃಗು ಮಹರ್ಷಿಯು ಅರಿತನು. ಎಂಬ ಅರ್ಥದಲ್ಲಿ. ಇನ್ನೂ ಅನೇಕ ಕಡೆ ವಿಜ್ಞಾನ ಶಬ್ದವು ಬರ್ತದೆ. ವಿಶೇಷವಾದ ಅಥವಾ ವಿಶಿಷ್ಟವಾದ ಜ್ಞಾನ ಎಂಬ ಸರಳ ಅರ್ಥ. ಇದನ್ನು ಅರ್ಥಮಾಡಕೊಳ್ಳಲು ಸುಲಭವಾದ ಉದಾಹರಣೆಯನ್ನು ಕೊಡೋದಾದರೆ,

  1. ಸೂರ್ಯನ ಬೆಳಕಿನ ಸಹಾಯದಿಂದ ಕಣ್ಣಿನ ಮೂಲಕ ವಸ್ತುಗಳನ್ನು ನೋಡಬಹುದು ಎಂಬುದು “ಜ್ಞಾನ.”
  2. ಸೂರ್ಯನ ಬೆಳಕನ್ನು ಮಸೂರದ ಸಹಾಯದಿಂದ ಕೇಂದ್ರೀಕರಿಸಿ ಅಗ್ನಿಯನ್ನು ಉತ್ಪಾದಿಸಬಹುದು ಎಂಬುದು “ವಿಜ್ಞಾನ.”

ಇವೆರಡೂ ಕಪೋಲಕಲ್ಪಿತ ಅರ್ಥ ಅಲ್ಲ.ಯಥಾರ್ಥ. ಹೀಗೆ ಜ್ಞಾನ -ವಿಜ್ಞಾನ ಶಬ್ದಾರ್ಥಗಳಿಗೆ ವ್ಯತ್ಯಾಸ ತಿಳಿಸುವ ಸಲುವಾಗಿ ಉದಾಹರಣೆ ಮಾತ್ರ.

ಆದರೆ, ಆಧುನಿಕ ಪರಿಭಾಷೆಯ ಸೈನ್ಸ್ ನ್ನು ಶಬ್ದಾರ್ಥ ತಿಳಿಯಲು ವಿಜ್ಞಾನ ಶಬ್ದದ ಸಹಾಯದಿಂದ ಭಾರತೀಯ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ. ತಪ್ಪಲ್ಲ ಅದೂ ಕೂಡ ವಿಜ್ಞಾನವೇ. ಆದ್ರೆ ಅದೇ ಕಾರಣಕ್ಕೆ ಭಾರತೀಯ ವಾಙ್ಮಯ ಸಂಪತ್ತಿನೊಳಗೆ ಅಡಕವಾದ ವಿಜ್ಞಾನವನ್ನು ವಿಜ್ಞಾನವಲ್ಲ ಎಂದು ತೀರ್ಮಾನಿಸುವ ಹಕ್ಕು ಸೈನ್ಸ್ ಗಿಲ್ಲ.

ಫಿಸಿಕ್ಸ್ = ಭೌತಶಾಸ್ತ್ರ,ಕೆಮೆಸ್ಟ್ರಿ=ರಸಾಯನ ಶಾಸ್ತ್ರ ಇತ್ಯಾದಿ ಭಾಷಾಂತರಗಳಿಗೆ ಸಂಸ್ಕೃತದ ಪದಗಳನ್ನೇ ಆಶ್ರಯಿಸಲಾಗಿದೆ. ಅಂದರೆ ಭೌತ ರಸಾಯನಾದಿ ವಿಜ್ಞಾನ ವಿಷಯಗಳು ಸಂಸ್ಕೃತದಲ್ಲಿ ಮೊದಲೇ ಇದ್ದ ಕಾರಣವೇ ಭಾಷಾಂತರ ಸಾಧ್ಯವಾಯಿತು.
ಮ್ಯಾಥಮೆಟಿಕ್ಸ್ =ಗಣಿತ, ಗಣನಾ ಪದ್ಧತಿ ಇದೂ ಕೂಡ ಸಂಸ್ಕೃತದಲ್ಲಿ ಮೊದಲೇ ಇತ್ತು. ಖಗೋಳ,ಔಷಧ,ಆಹಾರ,ಕೃಷಿ ಇವೆಲ್ಲವೂ ವಿಜ್ಞಾನಗಳಾಗಿ ಸಂಸ್ಕೃತ ವಾಙ್ಮಯದಲ್ಲಿ ವಿಫುಲವಾಗಿತ್ತು. ಯಾವ ಕಾಲಕ್ಕೆ ಇವೆಲ್ಲವೂ ವ್ಯವಸ್ಥಿತವಾಗಿ ಸಮಗ್ರವಾಗಿ ಅಧ್ಯಯನ ಮಾಡಲ್ಪಡುತ್ತಿತ್ತು ಕಾಲಕ್ರಮೇಣ ಈ ಕ್ಷೇತ್ರ ಹಿನ್ನಡೆಗೆ ಒಳಗಾಯಿತು ಎಂಬುದು ಇತಿಹಾಸಾಧ್ಯಯನದ ಸಹಿತ ಅರಿತುಕೊಳ್ಳಬೇಕಾದುದು ಇನ್ನೊಂದು ಮುಖ.

ಇಲ್ಲಿ ನನ್ನ ವಿವಕ್ಷೆ ಇರುವುದು ಕೃಷಿಯ ಕುರಿತಾಗಿ. ಇಂದಿನ ಕೃಷಿ ಸಂಶೋಧನೆಯಿಂದ ನಿರ್ಧಾರಿತವಾದ ಸಂಗತಿಗಳಿಗೂ ಮೊದಲೇ ಭಾರತದಲ್ಲಿ ಕೃಷಿ ಮಾಡಿ ಅನ್ನಾಹಾರಗಳನ್ನು ಬೆಳೆದು ಉಂಡೇ ಜನ ಬಾಳಿದ್ರು. ಕೃಷಿಗೂ- ಆರೋಗ್ಯಕ್ಕೂ-ಔಷಧಕ್ಕೂ-ಖಗೋಳಕ್ಕೂ-ಗೋಸಾಕಾಣಿಕೆಗೂ ಪರಸ್ಪರ ಸಂಬಂಧ ಇತ್ತು. ಕೃಷಿ ಅಂದ್ರೆ ಕೇವಲ ಬೀಜ-ನೀರು- ಗೊಬ್ಬರ- ಮಣ್ಣುಗಳ ಸಂಯೋಜನೆ ಮಾತ್ರ ಆಗಿರಲಿಲ್ಲ. ಆಧುನಿಕ ಶಿಕ್ಷಣದ ಇತಿಹಾಸ ಪಾಠಗಳು ಸಾರುವ ಅಲೆಮಾರಿ ಪದ್ಧತಿಯ ಕೃಷಿಗಿಂತ ಮೊದಲೇ ನಿತ್ಯ ನಿರಂತರ ಸುಸ್ಥಿರ ಕೃಷಿಪದ್ಧತಿಯನ್ನು ಭಾರತೀಯರು ಅರಿತುಕೊಂಡಿದ್ರು. ರಾಮಾಯಣ ಮಹಾಭಾರತಗಳಲ್ಲಿ ತೋಟಗಳನ್ನು ನಿರ್ಮಿಸಿದ, ಫಲಪುಷ್ಪಗಳನ್ನು ವ್ಯವಸ್ಥಿತವಾಗಿ ಬೆಳೆಸುತ್ತಿದ್ದ, ಗದ್ದೆ ಬೇಸಾಯ ಮಾಡ್ತಿದ್ದ ಬಗ್ಗೆ ಉಲ್ಲೇಖಗಳು ಸಿಗ್ತವೆ. ಸಂಸ್ಕೃತದ ಅಮರಕೋಶ ಕೃಷಿ ಮತ್ತು ಗಿಡ ಔಷಧಿಯ ಸಸ್ಯ ವನಸ್ಪತಿಗಳ ಬಗ್ಗೆ ನೂರಾರು ಶಬ್ದಭಂಡಾರವನ್ನೇ ಹೊಂದಿದೆ.

ನಿರಂತರವಾಗಿ ಒಂದೇ ಕ್ಷೇತ್ರದಲ್ಲಿ ಕೃಷಿಮಾಡುವುದರಿಂದ ಕಡಿಮೆಯಾಗುವ ಮಣ್ಣಿನಫಲವತ್ತತೆಯನ್ನು ಪುನಃ ಸರಿದೂಗಿಸಲು ಗೋವುಗಳನ್ನು ಆಶ್ರಯಿಸಿ ನಿರಂತರ ಕೃಷಿಯನ್ನು ಭಾರತದ ಜನ ಅರಿತುಕೊಂಡಿದ್ರು. ಆದ್ದರಿಂದಲೇ ಗೋವು ಪೂಜನೀಯ ಎಂಬ ಮಹತ್ವನ್ನು ಪದೇ ಪದೇ ಸಾರಿದ್ರು. ಧರ್ಮ-ಶ್ರದ್ಧೆ- ನಂಬಿಕೆಗಳಿಗೆ ಒತ್ತು ನೀಡುವುದು ಭಾರತೀಯರ ರಕ್ತಗತ ಗುಣ. ಇದರಿಂದಲೇ ಜನರ ನೆನಪಿನಂಗಳದಲ್ಲೇ ಭಾಗಶಃ ಆದರೂ ಜ್ಞಾನ-ವಿಜ್ಞಾನಗಳು ಉಳಿಯಲು ಸಾಧ್ಯವಾಯಿತು. ಕುಟುಂಬ ಪದ್ಧತಿಯೂ ಕೂಡ ವ್ಯವಸ್ಥಿತವಾಗಿರಲೂ ಸಾಧ್ಯವಾಗಿದ್ದು ಈ ಕಾರಣಕ್ಕೇ. ಜನ ಯಾವ ರೀತಿ ತಮ್ಮ ಕುಟುಂಬಗಳನ್ನು ಕಾಪಾಡಿಕೊಂಡು ಬಂದ್ರೋ ಅದೇ ರೀತಿ ಭಾರತೀಯ ಗೋ ಕುಟುಂಬಗಳನ್ನೂ ಕಾಪಾಡಿಕೊಂಡು ಬಂದ್ರು.

ನಾನು ಭಾರತೀಯ ತಳಿಗಳ ಬಗ್ಗೆ ಬರೆದ್ರೆ ಅದನ್ನು ಗೋವುಗಳಲ್ಲಿ ಜಾತಿಭೇದವನ್ನು ಹುಟ್ಟು ಹಾಕ್ತೀರಿ ಅಂತ ಯಾರಾದ್ರೂ ಹೇಳೋದಿದ್ರೆ, ಅವರಿಗೆ ತಿಳಿಸ್ತೀನಿ. ಸ್ವಾಮೀ ಜಾತಿ ಯಾವುದರಲ್ಲಿ ಇಲ್ಲ ಹೇಳಿ. ನೀವು ಇಂಗ್ಲೀಷ್ ನಲ್ಲಿ ಬ್ರೀಡ್ ಅಂದ್ರೆ ಅದೇ ನಮ್ಮ ಭಾಷೆಯಲ್ಲಿ ಜಾತಿ. ನಾಯಿ- ಹಂದಿ- ಬೆಕ್ಕುಗಳಲ್ಲೆಲ್ಲಾ ಬ್ರೀಡ್ ಎಂಬ ಜಾತಿ ಗುರುತು ಮಾಡ್ತೀರಿ. ಗೋವುಗಳ ಬಗ್ಗೆ ಹೇಳಿದ್ರೆ ಮಾತ್ರ ಜಾತಿ ಭೇದ ಮಾಡ್ತೀರಿ.. ಜರ್ಸಿ ಎಚ್ಚೆಪ್ಪು ಗಿರ್ ಮಲ್ನಾಡ್ ಗಿಡ್ಡ ಎಲ್ಲ ಬೇರೆ ಮಾಡಿ ಮಿಶ್ರ ತಳಿಗಳಿಗೆ ಅವಮಾನ ಮಾಡ್ತೀರಿ ಅಂತಾನೂ.ಎಲ್ಲಾ ಒಂದೇ ವರ್ಗ ಅಂತಾನೂ ತಕರಾರು ತೆಗೀತೀರಿ. ಕತ್ತೆ ಒಂದು ಜಾತಿ,ಕುದುರೆ ಒಂದು ಜಾತಿ. ಕುದುರೆಗಳಲ್ಲೇ ಅರಬೀ ಕುದುರೇ ಟರ್ಕೀ ಕುದುರೆ ಅಂತೆಲ್ಲ ಇದ್ರೆ ಅದು ಬ್ರೀಡ್ ಅಂತೆ. ನಾಯಿಗಳಲ್ಲಿ ಕಂತ್ರೀ,ಆಲ್ಸೆಶನ್ ,ಪೊಮೆರಿಯನ್,ಲ್ಯಾಬ್ರಡಾರ್ ಅಂತೆಲ್ಲಾ ಇದ್ರೆ ಅದು ಬ್ರೀಡ್ ಅಂತೆ…

ಹಾಗಿದ್ರೆ ಭಾರತದ ನಾನಾ ಭಾಗದಲ್ಲಿ ವಿಶಿಷ್ಟವಾದ ವರ್ಣಗುಣಲಕ್ಷಣಗಳಲ್ಲೂ ವಿಭಿನ್ನವಾದ ವ್ಯತ್ಯಾಸಗಳಿಂದ ಇರುವ ಗೋವುಗಳ ವರ್ಗೀಕರಣವನ್ನು ಮಾಡಿದ್ರೆ ತಪ್ಪೇನು. ಅಷ್ಟಕ್ಕೂ ಈ ವರ್ಗೀಕರಣವನ್ನು ಸರಕಾರ-ಪಶು ಇಲಾಖೆಗಳೇ ಪ್ರಚುರಪಡಿಸಿರೋವಾಗ ನಮ್ಮಂತಹ ಖಾಸಗಿ ವ್ಯಕ್ತಿಗಳು ಅದ್ರ ಬಗ್ಗೆ ಹೇಳಿದ್ರೆ ಅದು ಪಶುಜಾತಿಭೇದ ಎಂಬ ಆರೋಪಕ್ಕೆ ಗುರಿಯಾಗುವುದೆಂತೋ?. ಇನ್ನು ಕೆಲವರು ಪಶುಜಾತಿಭೇದ ವಿರೋಧಿ ಚಳುವಳಿಯನ್ನೂ ಕೈಗೆತ್ತಿಕೊಳ್ತಾರೆನೋ ಎಂಬ ಅನುಮಾನ.

ಅದೇನೇ ಇರಲಿ ಜೆರ್ಸಿ ಎಚ್ಚೆಫ್ ಹೊರದೇಶದಿಂದ ಬಂದ ಗೋಜಾತಿ ಆಗಿರೋದ್ರಿಂದ ಅವುಗಳ ಆಹಾರಪಚನಕ್ರಿಯೆ ಹಾಗೂ ಹಾಲು ಸೆಗಣಿ ಮೂತ್ರಗಳಂತಹ ಉತ್ಪನ್ನಗಳಿಗೂ ಭಾರತದೇಶದ ನಾನಾ ತಳಿಗಳ ಆಹಾರ ಪಚನಕ್ರಿಯೆ ಹಾಗೂ ಉತ್ಪನ್ನಗಳಿಗೆ ವ್ಯತ್ಯಾಸ ಇದೆ ಎಂಬುದು ಈಗ ಸಾಬೀತಾಗಿದೆ. ಇಲ್ಲ ಎಲ್ಲ ಒಂದೇ ಅನ್ನೊರಿಗೆ ಪ್ರತ್ಯಕ್ಷಾನುಭವದ ಕೊರತೆ ಇದೆ ಅಥವಾ ಒಪ್ಪಿಕೊಳ್ಳೋ ಮನಸ್ಥಿತಿ ಇಲ್ಲ. ಅಥವಾ ಸೆಗಣಿಯಲ್ಲಿರುವ ಸೂಕ್ಷ್ಮ ಜೀವಾಣುಗಳ ಬಗ್ಗೆ ಅಧ್ಯಯನದ ವರದಿಗಳ ಕೊರತೆ ಇರಬಹುದು.ಹೀಗೆ ವ್ಯತ್ಯಾಸ ಇರೋದ್ರಿಂದಾನೆ ಭಾರತದ ತಳಿಗಳ ಸೆಗಣಿ ಗೋಮೂತ್ರಗಳ ಬಳಕೆಯಿಂದ ಯಾವ ಪರಿಣಾಮ ಆಗುತ್ತೋ ಅದು ಜೆರ್ಸಿ ಎಚ್ಚೆಫ್ ನಂತಹ ಗೋವುಗಳಿಂದಾಗೋದಿಲ್ಲ. ಸೂಕ್ಷ್ಮಾಣುಜೀವಿಗಳ ಸಂಖ್ಯೆಯಲ್ಲಿ ಕೃಷಿಪೂರಕತೆಯಲ್ಲಿ ವ್ಯತ್ಯಾಸ ಇದೆ.

ಕೃಷಿ ವಿಜ್ಞಾನಿಗಳು ಎಲ್ಲಾತರದ ಸೆಗಣಿ ಮೂತ್ರಗಳನ್ನು ರೈತರ ಮೂಲಕ ಪ್ರಯೋಗಿಸಿದ್ದಾರೆ,ವ್ಯತ್ಯಾಸ ಇಲ್ಲ ಅನ್ನಲಿ ಆಕ್ಷೇಪ ಇಲ್ಲ. ಯಾಕಂದ್ರೆ ಕೃಷಿ ವಿಜ್ಞಾನಿಗಳು ಸೆಗಣಿಯ ಸೂಕ್ಷ್ಮ ಜೀವಾಣುಗಳ ಬಗ್ಗೆ ಆ ಪ್ರಾಯೋಗಿಕ ಪರೀಕ್ಷೆ ಸಂದರ್ಭದಲ್ಲಿ ಒತ್ತುಕೊಟ್ಟಿದ್ದಾರೋ ಅಥವಾ ಕೇವಲ ಸಾರಜನಕ ರಂಜಕದಂತಹ ಮೂಲವಸ್ತುಗಳ ಪ್ರಮಾಣ ಇತ್ಯಾದಿ ಅಂಶಗಳ ಬಗ್ಗೆ ಮಾತ್ರ ಗಮನ ನೀಡಿದ್ದಾರೋ ಗೊತ್ತಿಲ್ಲ. ಅವರ ಪರೀಕ್ಷೆಯ ವಿಧಾನದ ಹೇಗೆ ಎಂದು ವಿಮರ್ಶಿಸುವ ಅಗತ್ಯ ನನಗೆ ಈ ವಿಚಾರದಲ್ಲಿ ಕಾಣ್ತಿಲ್ಲ. ಅದನ್ನು ಸುಳ್ಳು ಅಂತಲೂ ಪ್ರತಿಪಾದಿಸ್ತಿಲ್ಲ.

ಹಾಗಿರೋವಾಗ ನಾನು ಮತ್ತು ನನ್ನಂತಹ ಕೃಷಿಕರು ತಮ್ಮ ಪ್ರಾದೇಶಿಕ ಗೋತಳಿಗಳ ಸೆಗಣಿ ಮೂತ್ರಗಳನ್ನು ನಿರ್ದಿಷ್ಟ ವಿಧಾನದಲ್ಲಿ ಬಳಸಿದ್ದನ್ನು ಕೃಷಿ ವಿಜ್ಞಾನಿಗಳಾಗಲಿ ಇತರ ಆಧುನಿಕ ವಿಜ್ಞಾನಿಗಳಾಗಲಿ ಸುಳ್ಳು ಅಂತ ಹೇಳುವುದು ಹೇಗೆ ಸಮರ್ಪಕ? ಇದು ನಮ್ಮ ಅನುಭವ.ಆಧುನಿಕ ಕೃಷಿ ವಿಜ್ಞಾನಿಗಳ ಸಂಶೋಧನೆ ಆದ ನಂತರ ಕೃಷಿ ಆರಂಭ ಆಗಿದ್ದಲ್ವಲ್ಲಾ. ಇರುವ ಕೃಷಿಯ ಜೊತೆ ಜೊತೆಗೇ ಕೃಷಿ ವಿಜ್ಞಾನ ಬೆಳೆದಿದ್ದು. ನಾವು ಆಧುನಿಕ ಸಂಶೋಧನೆಗಳನ್ನು ತಿರಸ್ಕರಿಸೋದಿಲ್ಲ. ಆದ್ರೆ ಅದೇ ಸತ್ಯ, ಉಳಿದಿರೋದೆಲ್ಲ ಸುಳ್ಳು ಅಂದ್ರೆ ಒಪ್ಪೋದಿಲ್ಲ.

ಮೋಟರ್ ಪಂಪ್,ಪೈಪ್ ಗಳಿಂದ ನೀರಾವರಿಗೆ ಮೊದಲು ಸ್ವಾಭಾವಿಕ ನೀರಿನ ಆಶ್ರಯ ಇರುವಲ್ಲಿ ಕೃಷಿ ಮಾಡ್ತಿದ್ದರು ಅಥವಾ ಏತದಂತಹ ಸಾಧನಗಳನ್ನು ಬಳಸ್ತಿದ್ದರು. ಆಧುನಿಕತೆ ಬಂದ ಹಾಗೇ ಅದರ ಪ್ರಯೋಜನವನ್ನೂ ಬಳಸಿಕೊಂಡು ಹಿಂದಿನವರ ತಿಳುವಳಿಕೆಗಳನ್ನೂ ಉಳಿಸಿಕೊಂಡು ಕೃಷಿ ಮಾಡಬಾರದೆಂದೇನೂ ನಿಯಮ ಇಲ್ವಲ್ಲ.

ಈಗೀಗ ತಾಪಮಾನ ಏರಿಕೆ,ನೀರಿನ ಕೊರತೆಗಳಿಗೆ ಏನು ಕಾರಣ ಅಂತ ಹುಡುಕಿದ್ರೆ, ಹಲವು ಹಿಂದಿನವರ ಉಪಾಯಗಳು ಈಗಲೂ ಪ್ರಾಕ್ಟಿಕಲ್ ಆಗಿರೋದು ಸುಳ್ಳಲ್ವಲ್ಲ. ಉದಾ: ತರಗೆಲೆ ಹಾಕಿದ್ರೆ ಮಣ್ಣಿನ ತೇವಾಂಶ ಕಾಪಾಡೋದಿಕ್ಕಾಗ್ತದೆ ಎಂಬುದು ಹಿಂದೆ-ಇಂದು- ನಾಳೆ ಕೂಡ ಸತ್ಯ ತಾನೆ. ಅದನ್ನು ಇಲ್ಲ ಅಂತ ಯಾವ ಕೃಷಿವಿಜ್ಞಾನಿಯೂ ಪ್ರತಿಪಾದಿಸುವುದಿಲ್ಲ. ಹಾಗೆ ಯಾವುದೇ ಆಧುನಿಕ ಯಂತ್ರೋಪಕರಣಗಳು ಬೇಕಾಗಿಲ್ಲ ಅಂತ ಯಾವ ಕೃಷಿಕನೂ ಹೇಳೋದಿಲ್ಲ. ವಿಷ್ಯ ಇಷ್ಟೇ, ಆಧುನಿಕ ಸೌಲಭ್ಯದ ಜೊತೆ ಜೊತೆಗೆ ಪ್ರಾಚೀನರು ಅನುಸರಿಸಿದ ಕೃಷಿವಿಧಾನಗಳು ಇಂದಿಗೂ ಅನ್ವಯಿ ಆಗಿದ್ರೆ, ಬಳಕೆಯಿಂದ ಪ್ರಯೋಜನ ಇದ್ರೆ, ಅದನ್ನು ಅನುಭವದಿಂದ ಕಂಡುಕೊಂಡು ಹೇಳಿದರೆ ಜನರನ್ನ ತಪ್ಪುದಾರಿಗೆ ಎಳೆದೆಂತೆ ಎಂಬ ಆರೋಪದ ಹಿನ್ನೆಲೆ ಏನು ಅಂತ ಅರ್ಥ ಆಗ್ತಿಲ್ಲ.

ಅನೇಕ ಬೋಗಸ್ ಔಷಧ,ಪೋಷಕಾಂಶ ಎಂಬ ಹೆಸರಿನಲ್ಲಿ ಮಾರ್ಕೆಟ್ ಮಾಡಿ ಜನರನ್ನ ಮರುಳು ಮಾಡೋ ತರ ಯಾವುದೇ ದೇಶೀ ದನದ ಸೆಗಣಿ ಮೂತ್ರಗಳನ್ನ ಮಾರ್ಕೆಟಿಂಗ್ ಮಾಡ್ತಿಲ್ಲ ನಾವು. ಕೃಷಿಕರೇ ನೀವೇ ಸಾಕಿ ಬಳಸಿ ಫಲಿತಾಂಶ ನೋಡಿ ಅಂತ ಮಾತ್ರ ಹೇಳ್ತಿರೋದು. ಅಂತಹ ಅನುಭವದ ಸಾರದಲ್ಲಿ ಮಲೆನಾಡು ಕರಾವಳಿ ಭಾಗದ ಕೃಷಿಕರಿಗೆ ದೇಶೀ ಮಲೆನಾಡ ಗಿಡ್ಡ ಜಾನುವಾರುಗಳ ಗೋಮಯ ಗೋಮೂತ್ರ ಪ್ರಯೋಜನಕಾರಿ ಎಂಬ ಸತ್ಯಾಂಶವನ್ನು ತಿಳಿಸೋದು ಮಾತ್ರ. ಇದು ಜನರನ್ನ ತಪ್ಪುದಾರಿಗೆ ಎಳೆದಂತೆ ಆಗೋದಾದ್ರೆ ಮಾರಕ ವಿಷಗಳನ್ನು ಬಳಸಲು ಸೂಚಿಸಿದ ವಿಜ್ಞಾನಿಗಳು, ಕಂಪೆನಿಗಳು, ಮಾರಾಟಗಾರರು, ಕೂಡ ಜನರನ್ನು ದಾರಿತಪ್ಪಿಸಿಲ್ಲವೇ?

ಬರಹ :
ಮುರಲೀಕೃಷ್ಣ.ಕೆ. ಜಿ.
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

Published by
ಮುರಲೀಕೃಷ್ಣ ಕೆ ಜಿ

Recent Posts

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ

ಗುಜ್ಜೆ ಶೇಂಗಾ ಪಲ್ಯ ಮಾಡುವ ವಿಧಾನ...

4 hours ago

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

11 hours ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

12 hours ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

12 hours ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

1 day ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

1 day ago