ರಾಜ್ಯದಲ್ಲಿ ಅತಿವೃಷ್ಟಿಯಿಂದ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಹಾಗೂ 30,114 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಹೀಗಾಗಿ ಬೆಳೆ ನಷ್ಟವಾದ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಲಾರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪರಿಶೀಲನೆ ನಡೆಸಿ ಪ್ರತಿಕ್ರಿಯೆ ನೀಡಿದ್ದರು. ಬೆಳೆ ನಷ್ಟ ಸಂಬಂಧ ಈಗಾಗಲೇ ಜಿಪಿಎಸ್ ಆಧಾರಿತ ಸರ್ವೇ ಮಾಡಿ ವಿವರಗಳನ್ನು ಪರಿಹಾರದ ಆ್ಯಪ್ ಗೆ ಅಪ್ ಲೋಡ್ ಮಾಡಲು ಸೂಚನೆ ನೀಡಲಾಗಿದೆ. ವಿವರಗಳು ಲಭ್ಯವಾದ ಬಳಿಕ ಕೂಡಲೇ ರೈತರ ಖಾತೆಗೆ ಪರಿಹಾರ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ರಾಗಿ ಬೆಳೆ, ತೋಟಗಾರಿಕೆ ಬೆಳೆ, ತರಕಾರಿ, ಹೂವಿನ ತೋಟ ನಷ್ಟವಾಗಿರುವುದು ಗಮನಕ್ಕೆ ಬಂದಿದೆ. ಪ್ರಾಥಮಿಕ ವರದಿಯ ಪ್ರಕಾರ ಕೋಲಾರದಲ್ಲಿಯೇ 48,333 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಹಾಗೂ 6,966 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ತಿಳಿಸಿದರು.
ಮಂಗಳವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿದರು. ಕಳೆದ ಹಲವು ದಿನಗಳಿಂದ ಎಡೆಬಿಡದೆ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿಗಳು ಮಾಹಿತಿ ಪಡೆದರು. ರಾಜ್ಯಕ್ಕೆ ಅಗತ್ಯ ನೆರವು ಮತ್ತು ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಪ್ರಧಾನಮಂತ್ರಿ ಶ್ರೀ @narendramodi ರವರು ಇಂದು ಮುಖ್ಯಮಂತ್ರಿ @BSBommai ರವರಿಗೆ ಕರೆ ಮಾಡಿ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ತಮ್ಮ ಸರ್ಕಾರ ತೆಗೆದುಕೊಂಡಿರುವ ರಕ್ಷಣಾ ಮತ್ತು ಪರಿಹಾರ ಕ್ರಮಗಳ ಬಗ್ಗೆ ವಿವರ ನೀಡಿದರು. (1/2)@PMOIndia
— CM of Karnataka (@CMofKarnataka) November 23, 2021
Advertisement
ಅತಿವೃಷ್ಟಿ ಕಾರಣದಿಂದ ಬೆಳೆ ನಷ್ಟವಾಗಿದ್ದು ಟೊಮೆಟೋ ಸಹಿತ ತರಕಾರಿ ಬೆಲೆ ಏರಿಕೆಯಾಗಿದೆ. ಟೊಮೆಟೋ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಇನ್ನಿತರ ತರಕಾರಿ ಮಾರಾಟ ಕೂಡ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ.