ಅಡಿಕೆಯಲ್ಲಿದೆ ಆಂಬ್ರೋಸಿಯ ಬೀಟಲ್ ಎಂಬ ಕೀಟದ ಸಮಸ್ಯೆ | ಏನಿದು ಕೀಟ ? | ನಿರ್ವಹಣೆ ಬೇಕಾ ? | ವಿಜ್ಞಾನಿ ಡಾ.ಭವಿಷ್ಯ ಬರೆಯುತ್ತಾರೆ…. |

April 24, 2022
10:20 PM

“ಎಳೆ ಅಡಿಕೆ ( ಹಸಿರು ನಳ್ಳಿ/ ಪಚ್ಚೆ ನಳ್ಳಿ) ಬೀಳುತ್ತಿದೆ. ಏನಾದರೂ ಸಿಂಪಡಣೆ ಬೇಕಾ” ನನ್ನನ್ನ ತಂದೆ ಕೇಳಿದ್ದರು. ವರದಿ ಒಪ್ಪಿಸಲು ಇವತ್ತು ಬೆಳಿಗ್ಗೆ ತೋಟಸುತ್ತಿದೆ. ಎಂಟತ್ತು ಮರಗಳಲ್ಲಿ ಹಸಿರು ನಳ್ಳಿ ಬಿದ್ದಿದ್ದವು…!  ನನಗೆ ಆಶ್ಚರ್ಯ ಅನಿಸಿದ್ದು ಅದಲ್ಲ. ಬೇರೆ ಕೀಟದ ಸಮಸ್ಯೆ. ನಾವು ವಿಟ್ಲದ ಸಿ.ಪಿ.ಸಿ.ಆರ್.ಐ ಸಂಸ್ಥೆಯಿಂದ ತಂದು ನೆಟ್ಟ ಶತಮಂಗಳ ಮತ್ತು ಮಧುರ ಮಂಗಳ ತಳಿಯ 70 ಗಿಡಗಳು ಹುಲುಸಾಗಿ ಬೆಳೆಯುತ್ತಿವೆ. ಕಾಲಕಾಲಕ್ಕೆ ಅದರ ಪೋಷಣೆಯನ್ನೂ ಮಾಡುತ್ತಿದ್ದೇವೆ. ಅದಕ್ಕೀಗ ಎರಡೂವರೆ ವರ್ಷ. ಇವತ್ತು ನೋಡಿದಾಗ, ಒಂದು ಗಿಡದ ಕಾಂಡದಿಂದ ಅಂಟು (ಗೋಂದು) ಹೊರಬರುತ್ತಿತ್ತು. ಅರೇ….!  ನಮ್ಮ ತೋಟಕ್ಕೂ ಕಾಲಿಟ್ಟಿತಾ ಈ ಕೀಟ…! ,ನನಗೆ ನಿಜಕ್ಕೂ ಅಚ್ಚರಿ….! 

Advertisement
Advertisement
Advertisement

ಇದು ಆಂಬ್ರೋಸಿಯ ಬೀಟಲ್ ಎಂಬ ಕೀಟದ ಸಮಸ್ಯೆ. ಸಾಮಾನ್ಯವಾಗಿ, ಬೇರೊಂದು ಸಮಸ್ಯೆಯಿಂದ ಬಳಲುತ್ತಿರುವ ಮರಗಳಲ್ಲಿ ಇದರ ಬಾಧೆ ಹೆಚ್ಚು. ಅಂದರೆ, ನೀರು ಸರಿಯಾಗಿ ಬಸಿದು ಹೋಗದಿರುವ ಅಥವಾ ನೀರುಣಿಸದ ತೋಟ, ರೋಗದಿಂದ ಬಳಲುತ್ತಿರುವ ಮರಗಳು, ಕಾಂಡದಿಂದ ರಸ ಹೀರುವ ಕೀಟದ ಬಾಧೆಯಿಂದ ಬಳಲಿರುವ ಮರಗಳು, ನಿರ್ವಹಣೆ ಸರಿ ಇಲ್ಲದೆ ಸೊರಗಿರುವ ಮರಗಳು, ಇತ್ಯಾದಿ. ಕೆಲವೊಮ್ಮೆ ಚೆನ್ನಾಗಿ ನಿರ್ವಹಣೆ ಮಾಡಿರುವ ತೋಟದಲ್ಲೂ ಕಾಣುವುದಿದೆ. ಅದರ ಸಾಧ್ಯತೆ ಕಡಿಮೆ. ಆದರೆ, ಚೆನ್ನಾಗಿ ನಿರ್ವಹಣೆ ಮಾಡುತ್ತಿರುವ ನಮ್ಮ ತೋಟದಲ್ಲೂ ಈ ಅತಿಥಿಯನ್ನು ನೋಡಿ ನಾನೊಮ್ಮೆ ಅವಾಕ್ಕಾದೆ. ಕಳೆದ ಭಾನುವಾರ ನೋಡಿದಾಗ ಅದು ಕಂಡಿರಲಿಲ್ಲ.

Advertisement

ವಿಟ್ಲದ ಸಿ.ಪಿ.ಸಿ.ಆರ್.ಐ ಸಂಶೋಧನಾ ಕೇಂದ್ರದಲ್ಲಿ ಕೀಟಶಾಸ್ತ್ರಜ್ಞರಾಗಿ ಕೆಲಸ ಮಾಡಿದ್ದ ಡಾ. ಶಿವಾಜಿ ತುಬೆ, Euplatypus parallelus ಹೆಸರಿನ ಈ ಆಂಬ್ರೋಸಿಯ ಕೀಟವನ್ನು ಅಧ್ಯಯನ ಮಾಡಿ, ವರದಿ ಮಾಡಿದ್ದರು. ಸಣ್ಣ ಗಾತ್ರದ ಈ ಕೀಟವು ಒಂದೂವರೆ ಮಿಲ್ಲಿಮೀಟರ್ ಅಗಲದ ರಂಧ್ರವನ್ನು ಮಾಡಿ ಕಾಂಡದ ಒಳ ಸೇರುತ್ತದೆ. ರಂಧ್ರದ ಉದ್ದ ಸುಮಾರು ನಾಲ್ಕು ಸೆಂಟಿಮೀಟರ್. ಹಸಿರು ಬಣ್ಣದ ಕಾಂಡವಿರುವ ಗಿಡವಾದರೆ, ಕೊರೆದ ರಂಧ್ರದಿಂದ ಅಂಟು ಪದಾರ್ಥ ಹೊರಬರುತ್ತದೆ. ವಯಸ್ಕ ಮರವಾದರೆ, ರಂಧ್ರದಿಂದ ಹೊರನೂಕಲ್ಪಟ್ಟ ಬಿಳಿ ಬಣ್ಣದ ಹಿಕ್ಕೆಯನ್ನು ಕಾಣಬಹುದು. ಕೊರೆದ ರಂಧ್ರದ ಒಳಗೆ ಈ ಕೀಟವು ಮೊಟ್ಟೆ ಇಡುತ್ತದೆ. ಅದರಿಂದ ಹೊರಬಂದ ಲಾರ್ವಾಗಳು ಮುಖ್ಯ ರಂಧ್ರಕ್ಕೆ ಅಡ್ಡಲಾಗಿ ರಂಧ್ರ ಕೊರೆದು ಅದರಲ್ಲಿ ಸುಪ್ತಾವಸ್ಥೆ ಮುಗಿಸಿ, ವಯಸ್ಕ ಕೀಟವಾಗುತ್ತವೆ. ಹೀಗೆ ಅಡಿಕೆ ಕಾಂಡಕ್ಕೆ ಕೊರೆದ ರಂಧ್ರದಲ್ಲಿಯೇ ತನ್ನ ಜೀವನ ಚಕ್ರ ಮುಗಿಸುತ್ತವೆ.

Advertisement

ಬಹಳ ವಿಶೇಷವಾಗಿ, “ಈ ಕೀಟ ಮತ್ತು ಶಿಲಿಂಧ್ರಕ್ಕೆ ನಂಟಿದೆ. ಕೀಟದೊಂದಿಗೆ ಒಳಸೇರುವ ಶಿಲೀಂಧ್ರ, ರಂಧ್ರದೊಳಗೆ ಬೆಳೆಯುತ್ತದೆ. ಹಾಗಾಗಿ, ರಂಧ್ರದ ಸುತ್ತ ಮೊದಲು ಬಿಳಿ ಬಣ್ಣ ಕಂಡು, ನಂತರ ಅದು ಕಪ್ಪು ಬಣ್ಣಕ್ಕೆ ಬದಲಾವಣೆಯಾಗುತ್ತದೆ. ಮೊಟ್ಟೆಯಿಂದ ಹೊರಬಂದ ಲಾರ್ವಕ್ಕೆ ಈ ಶೀಲಿಂಧ್ರವು ಆಹಾರವಾಗುತ್ತದೆ. ಹಾಗಾಗಿ, ಆಂಬ್ರೋಸಿಯ ಕೀಟ ಮತ್ತು ಶಿಲೀಂಧ್ರಗಳು ಪರಸ್ಪರ ಹೊಂದಾಣಿಕೆ(symbiosis)ಯಿಂದ ಬದುಕುತ್ತವೆ” ಎನ್ನುತ್ತಾರೆ. ಈ ಕೀಟವನ್ನು ಅಡಿಕೆಯಲ್ಲಿ ಮೊದಲು ವರದಿ ಮಾಡಿದ ಡಾ. ಶಿವಾಜಿ ತುಬೆ. ಈ ಕೀಟವನ್ನು ಆಕರ್ಷಣಾ ವಸ್ತು (Trap) ಬಳಸಿ ಹಿಡಿಯುವ ವಿಧಾನವನ್ನು ಅವರು ಅಭಿವೃದ್ದಿಪಡಿಸಿದ್ದು, ಮೌಲ್ಯಮಾಪನ(evaluation)  ಹಂತದಲ್ಲಿದೆ.

ದಕ್ಷಿಣ ಮತ್ತು ಮಧ್ಯ ಅಮೆರಿಕಾ ಈ ಕೀಟದ ಮೂಲಸ್ಥಾನವಾದರೂ, ಇವತ್ತು ಜಗದಗಲ ಹಬ್ಬಿದೆ. ಅಡಿಕೆಯಲ್ಲದೆ, ಗೇರು, ರಬ್ಬರ್, ಬೆಣ್ಣೆ ಹಣ್ಣು, ರೋಸ್ ವುಡ್ ಸೇರಿದಂತೆ ಸುಮಾರು ಎಂಬತ್ತೆರಡಕ್ಕಿಂತಲೂ ಅಧಿಕ ಜಾತಿಯ ಮರಗಳನ್ನು ಈ ಕೀಟ ಕಾಡುತ್ತಿದೆ. ಭಾರತದಲ್ಲಿ ಇದು ವರದಿಯಾದದ್ದು ತೀರಾ ಇತ್ತೀಚಿಗೆ. ಇದಲ್ಲದೆ, ಬೇರೆ ಜಾತಿಯ ಆಂಬ್ರೋಸಿಯ ಕೀಟಗಳು ತೆಂಗು, ಸಾಗುವಾನಿ, ಕೊಕ್ಕೋ, ಸೇರಿದಂತೆ ನೂರಾರು ಮರಗಳ ಕಾಂಡವನ್ನು ಕೊರೆಯುತ್ತವೆ. ಜೊತೆಗೆ, ಹಾನಿಕಾರಕ ಶಿಲಿಂಧ್ರವನ್ನೂ ಜೊತೆಗೊಯ್ಯುವ ಕೆಲಸವನ್ನೂ ಮಾಡುತ್ತವೆ.

Advertisement

ನಿರ್ವಹಣೆ ಹೇಗೆ? : ಕೆಲವು ದಿನಗಳ ಹಿಂದೆ ಬಿದ್ದ ಹಾಳೆಯ ಜಾಗದಲ್ಲಿ ಸುಮಾರು 30 ರಂಧ್ರಗಳನ್ನು ಆಂಬ್ರೋಸಿಯ ಕೀಟಗಳು ಕೊರೆದಿದ್ದವು. ಬೇರೆ ರಸ ಹೀರುವ ಕೀಟದ ಹಾವಳಿಯಿಂದ ಹಾಳೆ ಬೇಗ ಹಣ್ಣಾಗಿ ಕಾಂಡದಿಂದ ಬೇರ್ಪಟ್ಟಿತ್ತು (ಹಾಳೆ ಒಣಗಿದ್ದ ಕಾರಣ ಯಾವ ಕೀಟವೆಂದು ನನಗೆ ತಿಳಿಯಲಿಲ್ಲ). ಆದರೆ, ಒಳಗಿನ ಕಾಂಡ ಗಟ್ಟಿಯಾಗಿರಲಿಲ್ಲ. ಹಾಳೆ ಕಾಂಡದಿಂದ ಬೇರ್ಪಟ್ಟ ಕಾರಣ, ಆ ಜಾಗದಲ್ಲಿ ಆಂಬ್ರೋಸಿಯ ಕೀಟ ಒಳ ಸೇರಿ ರಂಧ್ರ ಕೊರೆದಿತ್ತು. ಹಾಗಾಗಿ, ಕಳೆದ ವಾರ ಪ್ರತೀ ಗಿಡವನ್ನು ನಾನು ಗಮನಿಸಿದ್ದರೂ, ಆಂಬ್ರೋಸಿಯ ನನ್ನ ಗಮನಕ್ಕೆ ಬಂದಿರಲಿಲ್ಲ.ಅಲ್ಲದೆ, ಹೊರಗಿನ ಹಾಳೆಯಲ್ಲಿ ರಂಧ್ರವಿರಲಿಲ್ಲ. ಆ ಹಾಳೆ ಬಿದ್ದ ನಂತರವಷ್ಟೇ ಕೀಟದ ಬಾಧೆ ಕಂಡಿದ್ದು.

ರಂಧ್ರದಿಂದ ಹೊರಬಂದ ಅಂಟನ್ನು ತೆಗೆದು ಶುಚಿ ಮಾಡಿದೆ. ಶುಚಿ ಮಾಡಿದ ನಂತರ ಹಸುವಿಗೆ ಇಂಜೆಕ್ಷನ್ ನೀಡಲು ಬಳಸುವ ಸಿರಿಂಜ್ ಬಳಸಿ Chloropyriphos 20EC ಕೀಟನಾಶಕವನ್ನು ಒಂದು ಲೀಟರ್ ನೀರಿಗೆ 5 ಮಿಲ್ಲಿಲೀಟರ್ ಪ್ರಮಾಣದಲ್ಲಿ ರಂಧ್ರದೊಳಗೆ ಸೇರಿಸುವುದು ನಿರ್ವಹಣಾ ಕ್ರಮ. ಒಳಗೆ ತೂರಿಸದೆ ಮೇಲೆ ಮಾತ್ರ ಬಳಿದರೆ, ರಂಧ್ರದಿಂದ ಹೊರಬರುವ ಅಂಟು ಪದಾರ್ಥದಿಂದಾಗಿ ಕೀಟನಾಶಕ ಸರಿಯಾಗಿ ಒಳಸೇರುವುದಿಲ್ಲ. ಕೀಟವು ಆಳಕ್ಕೆ ರಂಧ್ರ ಮಾಡಿರದಿದ್ದರೆ, ಸರಿಗೆ/ ಸಿರಿಂಜ್ ತೂರಿಸುವಾಗ ಕೀಟಕ್ಕೆ ಹಾನಿಯಾಗುತ್ತದೆ. ನಂತರ, ಬೋರ್ಡೋ ಪೇಸ್ಟ್ ನಂತಹ ವಸ್ತುವಿನಿಂದ ರಂಧ್ರವನ್ನು ಮುಚ್ಚಬೇಕು.

Advertisement

ಹೆಚ್ಚು ರಂಧ್ರಗಳಿದ್ದರೆ, ಸಿರಿಂಜ್ ಬಳಸಿ ಕೀಟನಾಶಕ ಒಳಸೇರಿಸುವುದು ಕಷ್ಟ. ಅಂತಹ ಸಂದರ್ಭದಲ್ಲಿ ಮತ್ತು ವಯಸ್ಕ ಮರಗಳಲ್ಲಿ, ಶೇಡ್ ನೆಟ್ ಬಳಸಿ ಕಾಂಡವನ್ನು ಉಜ್ಜಬೇಕು. ನಂತರ, Chloropyriphos 20EC ಕೀಟನಾಶಕವನ್ನು ಒಂದು ಲೀಟರ್ ನೀರಿಗೆ 5 ಮಿಲ್ಲಿಲೀಟರ್ ಪ್ರಮಾಣದಲ್ಲಿ ಪೈಂಟಿಂಗ್ ಬ್ರಷ್ ಬಳಸಿ ಬಳಿಯಬಹುದು. ಕೈಗೆ ಗ್ಲೌಸ್ ಹಾಕಿದ್ದರೆ, ಕೀಟನಾಶಕದ ದ್ರಾವಣದಲ್ಲಿ ಶೇಡ್ ನೆಟ್ ಅದ್ದಿ, ನಂತರ ಕಾಂಡವನ್ನು ಉಜ್ಜಬಹುದು.ಈ ನಿರ್ವಹಣಾ ಕ್ರಮ ಅನುಸರಿಸಿ ಅನೇಕ ಕೃಷಿಕರು ಈ ಕೀಟವನ್ನು ನಿಯಂತ್ರಿಸಿದ್ದಾರೆ.

ಆದರೆ ನನಗೆ ಸಿರಿಂಜ್ ಸಿಗಲಿಲ್ಲ. ಕೃಷಿಕ ರಮೇಶ್ ದೇಲಂಪಾಡಿಯವರ ಬರಹ ನೆನಪಾಗಿ ಸಣ್ಣ ಸರಿಗೆ(ತಂತಿ)ಯನ್ನು ರಂಧ್ರದ ಒಳಸೇರಿಸಿದೆ. ಹಲ್ಲುಜ್ಜುವ ಹಳೆಯ ಬ್ರಷ್ ತೆಗೆದುಕೊಂಡು ರಂಧ್ರವನ್ನು ಉಜ್ಜಿದೆ. ನಂತರ ಕೀಟನಾಶಕದ ದ್ರಾವಣದಲ್ಲಿ ಬ್ರಷ್ ಮುಳುಗಿಸಿ ಪುನಃ ರಂಧ್ರಗಳನ್ನು ಉಜ್ಜಿ, ಇಡೀ ಕಾಂಡಕ್ಕೆ ದ್ರಾವಣವನ್ನು ಲೇಪಿಸಿದೆ. ಸಧ್ಯಕ್ಕೆ, ಸಿಮೆಂಟ್ ಚೀಲದಿಂದ ಕಾಂಡವನ್ನು ಮುಚ್ಚಿ ಅದಕ್ಕೆ ಉಳಿದ ಕೀಟನಾಶಕದ ದ್ರಾವಣವನ್ನು ಸುರಿದಿದ್ದೇನೆ. ಬೋರ್ಡೋ ಪೇಸ್ಟ್ ಹಚ್ಚಬೇಕು. ಸುತ್ತಲಿನ ನಾಲ್ಕೈದು ಗಿಡಗಳ ಕಾಂಡಕ್ಕೂ ಬಳಿದಿದ್ದೇನೆ.   ಕೀಟನಾಶಕದ ಪ್ರಮಾಣ ಹೆಚ್ಚಿರುವ (2 ಮಿಲ್ಲಿಲೀಟರ್ ಬದಲಾಗಿ 5 ಮಿಲ್ಲಿಲೀಟರ್) ಕಾರಣ ಕಡ್ಡಾಯವಾಗಿ ಕೈಗವಸು hand gloves)  ಹಾಕಬೇಕು. ಅದರಲ್ಲಿ ರಾಜಿ ಇಲ್ಲ. ಸಧ್ಯಕ್ಕೆ ಈ ಕೀಟ ಗಂಭೀರವಾಗಿಲ್ಲ. ಕೀಟದ ಬಗ್ಗೆ ಮಾಹಿತಿ ಇರಲೆಂದು ಬರೆದೆ. ಇದನ್ನು ನೈಸರ್ಗಿಕವಾಗಿ ಹತೋಟಿ ಮಾಡುವ ನೈಸರ್ಗಿಕ ಶತ್ರು ಕೀಟಗಳನ್ನೂ ಕೂಡ ಅರಿಯಬೇಕಿದೆ.

Advertisement

( # ಡಾ.ಭವಿಷ್ಯ ಅವರು ಸಾಮಾಜಿಕ ತಾಲತಾಣದಲ್ಲಿ  ಹಂಚಿಕೊಂಡ ಸ್ವಂತ ಅನುಭವ ಯಥಾವತ್‌ ರೂಪ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror