ಇಂಡೋನೇಷ್ಯಾ, ಮ್ಯಾನ್ಮಾರ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಿಂದ ಕಡಿಮೆ ಗುಣಮಟ್ಟದ ಅಡಿಕೆಯನ್ನು ಬೇರೆ ಎಚ್‌ಎಸ್‌ಎನ್(HSN) ಕೋಡ್‌ಗಳ ಅಡಿಯಲ್ಲಿ ಆಮದು ಮಾಡಿಕೊಂಡು ಕನಿಷ್ಠ ಆಮದು ಬೆಲೆ (MIP) ಹಾಗೂ ಹೆಚ್ಚಿನ ಕಸ್ಟಮ್ಸ್ ಸುಂಕವನ್ನು ತಪ್ಪಿಸುವ ಸಾಧ್ಯತೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಕೇಳಲಾದ ಪ್ರಶ್ನೆಗೆ ಮಹತ್ವದ ಉತ್ತರ ದೊರೆತಿದೆ. ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು ಈಗಾಗಲೇ ಬಿಗಿಗೊಳಿಸಲಾಗಿದ್ದು, ಅಡಿಕೆ ಮತ್ತು ರೋಸ್ಟೆಡ್ ಅಡಿಕೆಗೆ ಏಕರೂಪದ ಆಮದು ನೀತಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು ಉತ್ತರ ನೀಡಿದ್ದಾರೆ.
ಕೇಂದ್ರ ಸರ್ಕಾರವು 2025ರ ಏಪ್ರಿಲ್‌ನಲ್ಲಿ ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು ಬದಲಾಯಿಸಿದೆ. ಪ್ರತಿ ಕೆ.ಜಿ.ಗೆ ₹351 ಅಥವಾ ಅದಕ್ಕಿಂತ ಹೆಚ್ಚಿನ ಆಮದು ಮೌಲ್ಯ ಹೊಂದಿರುವ ರೋಸ್ಟೆಡ್ ಅಡಿಕೆಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಈ ಕ್ರಮದಿಂದ ರೋಸ್ಟೆಡ್ ಅಡಿಕೆಗೆ ಅನ್ವಯಿಸುವ ಆಮದು ಷರತ್ತುಗಳನ್ನು ಸಾಮಾನ್ಯ ಅಡಿಕೆಗೆ ಅನ್ವಯಿಸುವ ಷರತ್ತುಗಳೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಇದರ ಮೂಲಕ ಕನಿಷ್ಠ ಆಮದು ಬೆಲೆ (MIP) ತಪ್ಪಿಸಲು ರೋಸ್ಟೆಡ್ ಅಡಿಕೆ ಹೆಸರಿನಲ್ಲಿ ಪರ್ಯಾಯ ಮಾರ್ಗ ಬಳಸುವ ಸಾಧ್ಯತೆಯನ್ನು ತಡೆಯುವ ಉದ್ದೇಶ ಹೊಂದಲಾಗಿದೆ. ಅಡಿಕೆ ಮತ್ತು ರೋಸ್ಟೆಡ್ ಅಡಿಕೆಯ ಆಮದು ನೀತಿಗಳನ್ನು ಒಂದೇ ರೀತಿಯಾಗಿ ಮಾಡಿರುವುದರಿಂದ ಪರ್ಯಾಯ ಸುಂಕ ವರ್ಗೀಕರಣದ ಅಡಿಯಲ್ಲಿ ನಡೆಯಬಹುದಾದ ಆಮದು ಕುರಿತ ಆತಂಕಗಳನ್ನು ಪರಿಹರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ತಪ್ಪು ವರ್ಗೀಕರಣ ಕಂಡುಬಂದರೆ ಕ್ರಮ : ಆಮದು ಸರಕುಗಳನ್ನು ತಪ್ಪಾಗಿ ಘೋಷಿಸುವುದು ಅಥವಾ ತಪ್ಪು ವರ್ಗೀಕರಣ ಮಾಡುವ ಪ್ರಕರಣಗಳ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ನಿಗಾ ವಹಿಸುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಇಂತಹ ಪ್ರಕರಣಗಳು ಪತ್ತೆಯಾದಲ್ಲಿ 1962ರ ಕಸ್ಟಮ್ಸ್ ಕಾಯ್ದೆ ಹಾಗೂ ಅನ್ವಯವಾಗುವ ಇತರ ಕಾನೂನುಗಳ ಅಡಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.
ಅಡಿಕೆ ಬೆಲೆಯ ಮೇಲೆ ದೇಶೀಯ ಉತ್ಪಾದನೆ, ಬೇಡಿಕೆ–ಪೂರೈಕೆ ಸ್ಥಿತಿ, ಗುಣಮಟ್ಟ, ಹಂಗಾಮಿನ ಆವಕ ಮತ್ತು ಮಾರುಕಟ್ಟೆ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳು ಪರಿಣಾಮ ಬೀರುತ್ತವೆ. ದೇಶೀಯ ಮಾರುಕಟ್ಟೆಯ ಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಗಮನಿಸುತ್ತಿದ್ದು, ಸಂಬಂಧಪಟ್ಟವರೊಂದಿಗೆ ಸಂಪರ್ಕದಲ್ಲಿದೆ ಎಂದು ಕೇಂದ್ರ ತಿಳಿಸಿದೆ.
ಬಂದರು, ಗಡಿ ಪ್ರದೇಶಗಳಲ್ಲಿ ತಪಾಸಣೆ : ಮಾನವ ಬಳಕೆಗೆ ಉದ್ದೇಶಿಸಿರುವ ಅಡಿಕೆ ಸೇರಿದಂತೆ ಎಲ್ಲ ಆಮದು ಆಹಾರ ಸರಕುಗಳು 2006ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ ಹಾಗೂ ಅದರಡಿ ರೂಪಿಸಲಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಗತ್ಯ ಸಂದರ್ಭಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ನಿಯಂತ್ರಣ ತಪಾಸಣೆ ನಡೆಸುತ್ತದೆ. ಇದರ ಜೊತೆಗೆ ಕಸ್ಟಮ್ಸ್ ಅಧಿಕಾರಿಗಳು ನಿಗದಿತ ಅಪಾಯ ನಿರ್ವಹಣಾ ವ್ಯವಸ್ಥೆಯಡಿ ಸರಕುಗಳನ್ನು ಪರಿಶೀಲಿಸುತ್ತಾರೆ.
ಬಂದರುಗಳು ಮತ್ತು ಭೂ ಕಸ್ಟಮ್ಸ್ ಕೇಂದ್ರಗಳಲ್ಲಿ ವಿವಿಧ ಸಂಸ್ಥೆಗಳ ಸಮನ್ವಯ, ಗುಪ್ತಚರ ಆಧಾರಿತ ಮಧ್ಯಪ್ರವೇಶ ಹಾಗೂ ಉಲ್ಲಂಘನೆಗಳು ಪತ್ತೆಯಾದ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಎಫ್‌ಟಿಎ ನಿಯಮಗಳನ್ನೂ ಪರಿಶೀಲನೆ : ಅಡಿಕೆ ಸೇರಿದಂತೆ ವಿವಿಧ ಸರಕುಗಳ ಆಮದು ನೀತಿ ಹಾಗೂ ಅದರ ಷರತ್ತುಗಳನ್ನು ಸರ್ಕಾರ ಕಾಲಕಾಲಕ್ಕೆ ಪರಿಶೀಲಿಸುತ್ತದೆ. ಇದೇ ವೇಳೆ ಮುಕ್ತ ವ್ಯಾಪಾರ ಒಪ್ಪಂದಗಳ (FTA) ಅಡಿಯಲ್ಲಿ ಭಾರತ ಮಾಡಿಕೊಂಡಿರುವ ಬದ್ಧತೆಗಳನ್ನೂ ಪರಿಶೀಲಿಸಲಾಗುತ್ತದೆ.
ಅಂತರರಾಷ್ಟ್ರೀಯ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ದೇಶೀಯ ಉತ್ಪಾದಕರು, ಗ್ರಾಹಕರು ಹಾಗೂ ಇತರ ಪಾಲುದಾರರ ಹಿತಾಸಕ್ತಿಯನ್ನು ಪರಿಗಣಿಸಿ ಆಮದು ನೀತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಡಿಕೆ ಬೆಳೆಗಾರರಿಗೆ ಇದರ ಸಂದೇಶವೇನು..? : ದೇಶೀಯ ಅಡಿಕೆ ಬೆಲೆಯ ಮೇಲೆ ಆಮದು ಮಾತ್ರವಲ್ಲದೆ ಉತ್ಪಾದನೆ, ಬೇಡಿಕೆ–ಪೂರೈಕೆ, ಗುಣಮಟ್ಟ, ಹಂಗಾಮಿನ ಆವಕ ಮತ್ತು ಮಾರುಕಟ್ಟೆ ಪರಿಸ್ಥಿತಿಯೂ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಹೀಗಾಗಿ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರ ಬೆಲೆ ಸಮಸ್ಯೆಗೆ ಆಮದು ನಿಯಂತ್ರಣದ ಜೊತೆಗೆ ದೇಶೀಯ ಮಾರುಕಟ್ಟೆಯ ಬೇಡಿಕೆ–ಪೂರೈಕೆ ಪರಿಸ್ಥಿತಿಯೂ ಪ್ರಮುಖ ಅಂಶವಾಗಲಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
The Union Government has informed the Lok Sabha that it revised the import policy for roasted areca nuts in April 2025 from “Free” to “Prohibited”, except where the CIF-based import value is ₹351 per kg or above. The move aligned the import conditions for roasted areca nuts with those applicable to areca nuts and was intended to prevent circumvention of the Minimum Import Price (MIP). The Government said Customs authorities act against cases of misdeclaration or misclassification under the Customs Act, 1962. Imported areca nuts meant for human consumption are also subject to applicable food safety regulations and checks by FSSAI and Customs. The Government said it periodically reviews import policy and Free Trade Agreement commitments while considering the interests of domestic producers and other stakeholders.

