ಸಂತೃಪ್ತಿಯೇ ಆನಂದದ‌ ಬದುಕಿನ ಗುಟ್ಟು

November 23, 2026
7:50 PM
ಮನುಷ್ಯನ ಬದುಕಿನಲ್ಲಿ ಆಸೆ ಸಹಜವಾದರೂ ಅದು ಮಿತಿಮೀರಿದಾಗ ದುಃಖ ಮತ್ತು ಅತೃಪ್ತಿಗೆ ಕಾರಣವಾಗುತ್ತದೆ. ಇರುವುದರಲ್ಲೇ ಸಂತೋಷ ಕಾಣುವುದು, ಆಸೆಗಳಿಗೆ ಕಡಿವಾಣ ಹಾಕುವುದು ಮತ್ತು ಸ್ವಯಂಪೂರ್ಣತೆಯ ಭಾವ ಬೆಳೆಸಿಕೊಳ್ಳುವುದೇ ಆನಂದಮಯ ಬದುಕಿನ ಸೂತ್ರ ಎಂಬುದು ಲೇಖನದ ಆಶಯ.

“ಬಾಳ್ವೆ ಇತರ ಜೀವಿಗಳ ಪಾಲಿಗೆ ಹೇಗೂ ಇರಲಿ , ಮನುಷ್ಯನ ಪಾಲಿಗೆ ಹಾಗೇನೆ ಉಳಿದಿಲ್ಲ” – ಇದು ಡಾI ಶಿವರಾಮ ಕಾರಂತರು ತಮ್ಮ ಬಾಳ್ವೆಯೇ ಬೆಳಕು ಎಂಬ ಕೃತಿಯಲ್ಲಿ ಹೇಳಿದ ಮಾತು. ಮನುಷ್ಯನ ಬದುಕು ಇತರೆಲ್ಲಾ ಜೀವಿಗಳಿಂದ ಪ್ರತ್ಯೇಕ,ವಿಶಿಷ್ಟ. ಕಾರಣ ಆತನ ಬುದ್ಧಿಯೆಂಬ ವಿಶೇಷ ಶಕ್ತಿ! ಬುದ್ಧಿಯ ಪೂರ್ವದಲ್ಲಿ ಮನಸ್ಸು, ಅಪರದಲ್ಲಿ ಚಿತ್ತ ಮತ್ತು ಅಹಂಕಾರಗಳು. ಇವನ್ನೇ ಒಟ್ಟಾಗಿ ಅಂತಃಕರಣ ಚತುಷ್ಟಯವೆನ್ನುವುದು. ಪ್ರಾಣಿಗಳಿಂದ ಭಿನ್ನವಾದ ದೇಹರಚನೆಯನ್ನೂ ಅಂಗಸೌಷ್ಟವವನ್ನೂ ಜೊತೆಗೆ ಅಂತಃಕರಣವನ್ನೂ ಪಡೆದ ಮಾನವನು‌ ಭೂಲೋಕದ ಧನ್ಯ ಜೀವಿಯೇ ಸರಿ. ಯಾವ ಜೀವಿಯೂ ಬಯಸಿ ಜನಿಸುವುದಲ್ಲ. ಆದರೆ, ಜನಿಸಿದ ಬಳಿಕ ಜೀವಿಸಬಯಸುವುದು! ಅದು ಅನಿವಾರ್ಯ. ಸೃಷ್ಟಿಯ ನಿಯಮವದು. ಜೀವಿಗಳೆಲ್ಲಾ ಬಯಸುವುದು ಆನಂದಮಯ ಬದುಕನ್ನೇ. ಆದರೆ, ಹಾಗಿದೆಯೇ ಪ್ರಪಂಚ? ಬದುಕಿದು ಸುಖ-ದುಃಖದ ಸಂತೆ! ಪ್ರಾಯಶಃ ಆನಂದದ ಪ್ರತೀಕ್ಷೆಯಲ್ಲಿದ್ದುಕೊಂಡು ಎದುರಾಗುವ ಸವಾಲುಗಳನ್ನು ಸ್ವೀಕರಿಸುತ್ತಾ ಜೀವಿಗಳೆಲ್ಲಾ ಬದುಕುತ್ತಿರುವುದು ಇಂದಿನ ಅರಿವಿಗೆ ಬಾರದ ನಾಳೆಗಳ ಭರವಸೆಯಿಂದಲೇ.

ಜೀವಿಗಳನ್ನೆಲ್ಲಾ ಬದುಕಲ್ಲಿ ಬಂಧಿಸಿರುವುದು ಆಸೆಯೆಂಬ ಸಂಕೋಲೆ. ಮಾನವನ ಪಾಲಿಗದು ದೊಡ್ಡ ಬಲೆ. ಆಸೆಯೇ ಬದುಕನ್ನು ಕಟ್ಟಿಕೊಡುವ ಮೌಲ್ಯವಾದರೂ ಅದು ಅತಿಯಾದರೆ ಮಾತ್ರ ಅಪಾಯ ಶತಸ್ಸಿದ್ಧ. ಆದರೆ, ಆಸೆಯನ್ನು ಬೆಂಬತ್ತದ ಮನುಷ್ಯ ಒಬ್ಬನೇ ಒಬ್ಬ ಸಿಗಲಾರನು. ಬ್ರಿಟಿಷ್ ಅರ್ಥಶಾಸ್ತ್ರಜ್ಞನಾದ ಲಾಯ್ನಲ್ ರಾಬಿನ್ಸ್ ” Human wants are unlimited ” ಎಂದಿದ್ದಾನೆ. ಆಗತಾನೇ ಸಂಜನಿಸಿದ ಶಿಶುವಿನಿಂದ ತೊಡಗಿ ಜೀವನದ ಕೊನೆಘಳಿಗೆಯನ್ನು ತಲುಪುತ್ತಿರುವ ವಯೋವೃದ್ಧನಿಗೂ ಆಸೆಯಿರುತ್ತದೆ. ವಯಸ್ಸಾದಂತೆ ಆಸೆ ಮತ್ತು ಆಕರ್ಷಣೆಗಳು ಬದಲಾಗಬಹುದು. ಆದರೆ, ಅವು ಪೂರ್ಣವಾಗಿ ಬಿಟ್ಟು ಹೋಗವು. ಕೆಲವರಿಗೆ ದ್ರವ್ಯಕಾಮನೆ; ಇನ್ನುಕೆಲವರಿಗೆ ಕೀರ್ತಿಕಾಮನೆ/ಯಶಃಕಾಮನೆ; ಮತ್ತೆ ಕೆಲವರಿಗೆ ಕಾಮಿನೀ ಕಾಮನೆ. ವಿದ್ಯಾಕಾಮನೆಯೂ ಕಾಮನೆಯೇ. ಕಾಮನೆಯು ಸಾಮಾನ್ಯ ಸಂಗತಿಯೇ ಆದರೂ ಅದು ಯಾವ ಕಾಮನೆಯೇ ಆಗಲಿ, ಅತಿಯಾದರೆ ಮನುಷ್ಯ ಮರುಳನಾಗುವನು.

ಜೀವಿಗಳ ಪೈಕಿ ಮನುಷ್ಯನು ಅತಿ ಹೆಚ್ಚು ಸ್ವಾರ್ಥಿ(Selfish). ನಿಸ್ವಾರ್ಥ ಮನೋಭಾವದವರು ಇರಬಹುದಾದರೂ ಅವರ ಸಂಖ್ಯೆ ಬೆರಳೆಣಿಕೆಯದು. ನಿಸ್ವಾರ್ಥಿಗಳೆನಿಸಿಕೊಂಡವರಲ್ಲೂ ನಡುನಡುವೆ ಅಷ್ಟೋ ಇಷ್ಟೋ ಸ್ವಾರ್ಥವು ಸುಳಿಯದೆ ಇದ್ದೀತೇ? ಆಧುನಿಕ ಮನುಷ್ಯನ ಗೋಳೇನು? ದ್ರವ್ಯ ಸಂಪಾದನೆ,ಐಷಾರಾಮದ ಜೀವನದ ನಿರೀಕ್ಷೆ. ವಿದ್ವಾನ್ ರಂಗನಾಥ ಶರ್ಮ ಅವರು ಹೇಳಿದ್ದಾರೆ- ಇಂದು ಮನುಷ್ಯನ “ಬುದ್ಧಿಯ ಓಟ ದ್ರವ್ಯ ಸಂಪಾದನೆಯವರೆಗೆ” ಎಂದು. ವಸ್ತುವಿನಿಮಯ ಪದ್ಧತಿ ಹಿನ್ನೆಲೆಗೆ ಸರಿದು ಹಣವು ವಿನಿಮಯದ ಮಾಧ್ಯಮವಾಗಿ ಸರಕು ಮತ್ತು ಸೇವೆಗಳನ್ನು ಕೊಂಡುಕೊಳ್ಳಬಲ್ಲ ಸಾಧನವಾದ ಬಳಿಕ ಧನಸಂಪಾದನೆಯು ಮನುಷ್ಯನಿಗೆ ಅನಿವಾರ್ಯವಾಗಿದೆ. ಅದು ಅಲ್ಲಿಗೆ ನಿಂತಿಲ್ಲ, ಹಣ ಎಷ್ಟಿದ್ದರೂ ಸಾಲದೆಂಬ ಗೋಳು ಬಹುತೇಕರದು. ಇನ್ನು ಕೆಲವರಿಗೆ ಆಸ್ತಿ-ಭೂಮಿಯ ಒಡೆತನದ ಹಂಬಲ, ಸಂಪತ್ತಿನ ಒಡೆತನದ ಆಸೆ. ಒಟ್ಟಿನಲ್ಲಿ ದ್ರವ್ಯವಿಲ್ಲದೆ, ಆಸ್ತಿ-ಸಂಪತ್ತುಗಳಿಲ್ಲದೆ ಮನುಷ್ಯ ಬದುಕಲಾರನಾದರೂ ಅವನ್ನು ಎಷ್ಟು , ಯಾವ ಪ್ರಮಾಣದಲ್ಲಿ ಸಂಪಾದಿಸಬೇಕು ಎಂಬಲ್ಲಿರುವುದು ಸಮಸ್ಯೆ. ರಂಗನಾಥ ಶರ್ಮ ಅವರು ಹೇಳಿರುವಂತೆ “ಹಣವು ಆತ್ಮಕಲ್ಯಾಣಕ್ಕೆ ಸಾಧನವೇ ಹೊರತು ಸಾಧ್ಯವಲ್ಲ! ” ಆಸ್ತಿಯೋ ಸಂಪತ್ತೋ ನಮ್ಮ ಜೀವನಕ್ಕೆ ಪೂರಕವೇ ಹೊರತು ಅವೇ ಅಂತಿಮವಲ್ಲ.

ಆಧುನಿಕ ಜೀವನ ಕ್ರಮವು ಸ್ಪರ್ಧಾತ್ಮಕತೆಯೆಂಬ ಅತಿರೇಕವನ್ನು ತಂದಿಟ್ಟಿದೆ. ಬಹುತೇಕರು ತಮ್ಮ ಜೀವನವನ್ನು ಇತರರ ಜೀವನದೊಂದಿಗೆ ಹೋಲಿಸಿಕೊಳ್ಳುತ್ತಾ ಕೊರಗುವುದು ಎಲ್ಲೆಡೆ ಕಾಣುತ್ತದೆ. ವಿದ್ಯೆ,ಧನ,ಸಂಪತ್ತು,ಕೀರ್ತಿ ಮೊದಲಾದವುಗಳು ಎಲ್ಲರಿಗೂ ಏಕಪ್ರಕಾರವಾಗಿ ಸಿಗವು. ಕಾರಣ,ವ್ಯಕ್ತಿಭಿನ್ನತೆ( Individual Difference). ಅಂತೆಯೇ ಬುದ್ಧಿವಂತಿಕೆಯ ಭಿನ್ನತೆ. ಬುದ್ಧಿಶಕ್ತಿ ಎಲ್ಲಾ ಮನುಷ್ಯರಿಗಿದ್ದರೂ ಅದು ಕೂಡ ಏಕಪ್ರಕಾರವಾಗಿಲ್ಲ. ಆದ ಕಾರಣ ಎಲ್ಲರೂ ಒಂದೇ ರೀತಿಯ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗದು. ಆ ರೀತಿ ಬಯಸುವುದೇ ಸರಿಯಾಗದು. ಭೂಮಿಯ ಮೇಲಿನ ಜೀವಿಗಳಿಗೆಲ್ಲಾ ಒಂದೇ ರೀತಿಯ ಜೀವನವನ್ನು ಭಗವಂತ ಕರುಣಿಸಿಲ್ಲ. ಜೀವಿಗಳಿಗೆಲ್ಲ ಆಯುಷ್ಯ – ಜೀವಿತಾವಧಿ ಏಕಪ್ರಕಾರವಾಗಿಲ್ಲ. ಮನುಷ್ಯನಿಗೂ ಅಂತೆಯೇ – ಆರೋಗ್ಯವೋ ಆಯುಷ್ಯವೋ ದ್ರವ್ಯವೋ ಆಸ್ತಿಯೋ ಕೀರ್ತಿಯೋ ಎಲ್ಲರಿಗೂ ಏಕಪ್ರಕಾರವಾಗಿ ಸಿಗವು. ಅವುಗಳಿಗೆ ಯೋಗ ಭಾಗ್ಯಗಳು ಬೇಕು. ಮನುಷ್ಯ ಪ್ರಯತ್ನ ಮಾಡಬೇಕು ನಿಜ. ಆದರೆ, ಆತನಿಗೆ ಸಿಕ್ಕುವುದು ಮತ್ತು ದಕ್ಕುವುದು ದೈವನಿರ್ಧರಿತ. ದೈವ ಎಂದರೆ ಅದೃಷ್ಟ ,ಪೂರ್ವಜನ್ಮದ ಪುಣ್ಯ. ಆದ ಕಾರಣ ಮನುಷ್ಯನು ತನ್ನ ಮಿತಿಯನ್ನರಿತು ಪ್ರಯತ್ನಿಸಬೇಕೇ ಹೊರತು ಬಯಸಿದ್ದೆಲ್ಲವೂ ಸಿಗಲೇಬೇಕೆಂಬ ಹಟಕ್ಕೆ ಬಿದ್ದರೆ ಪ್ರಯೋಜನವಾಗದು. ಬಲಾತ್ಕಾರದಿಂದ ವಶಮಾಡಿಕೊಂಡ ಧರೆಯಾಗಲಿ, ಸಿರಿಯಾಗಲಿ, ವನಿತೆಯಾಗಲಿ ಸಿಕ್ಕಿದರೂ ದಕ್ಕದೆಂಬುದು ಆರ್ಷನೀತಿ.

ಆದರೆ ಮನುಷ್ಯನ ಜೀವನದ ಪಾಡೇನು? ಕವಿ ಗೋಪಾಲಕೃಷ್ಣ ಅಡಿಗರ ಕವನವೊಂದರ ಒಂದು ಸಾಲು ಹೀಗಿದೆ ” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ “. ಬಹುತೇಕರ ಸಮಸ್ಯೆ ಇದು. ತಮ್ಮ ಪಾಲಿಗೆ ಬಂದ ಬೆಲ್ಲವನ್ನೋ ಸಕ್ಕರೆಯನ್ನೋ ಜೇನನ್ನೋ ಸವಿಯುವುದನ್ನು ಬಿಟ್ಟು ಇತರರ ತಟ್ಟೆಯಲ್ಲಿರುವ ಹಾಲನ್ನೋ ಮೊಸರನ್ನೋ ತುಪ್ಪವನ್ನೋ ನೋಡುತ್ತಾ ಅದು ಇದಕ್ಕಿಂತಲೂ‌ ಶ್ರೇಷ್ಠವೆಂದು ಭಾವಿಸುತ್ತಾ ಅವನ್ನೂ ತಾವು ಸಂಪಾದಿಸುವ ಬಗೆ ಹೇಗೆಂಬುದನ್ನು ಯೋಚಿಸುತ್ತಾ ಪಂಚಾಮೃತವನ್ನು ಸವಿಯುವ ಕನಸನ್ನು ಕಾಣುತ್ತಾರೆ. ಒಂದು ವೇಳೆ ಕ್ಷೀರ -ದಧಿ-ಘೃತ ಶೇಖರಿಸಲಾಗದೆ ಪಂಚಾಮೃತವನ್ನು ತಯಾರಿಸಲಾಗದಿದ್ದಲ್ಲಿ ವೃಥಾ ಕೊರಗತೊಡಗುತ್ತಾರೆ. ಆಗ ಆ ಮೊದಲೇ ತಾವು ಸಂಪಾದಿಸಿಟ್ಟಿದ್ದ ಬೆಲ್ಲ ಸಕ್ಕರೆಗಳು ಕರಗಿ ಹಾಳಾಗಿಹೋಗುತ್ತವೆ. ಆಗ , ಇದೂ ಇಲ್ಲ ಅದೂ ಇಲ್ಲ ಎಂಬಂತಾಯಿತು. ಪಂಚಾಮೃತವು ಎಲ್ಲರಿಗೂ ಸಿಗದು. ಹಾಗೆ ರೂಢಿಯಲ್ಲಿ ಬಂದ ಮಾತೇ ಇದು-
” ಪಾಲಿಗೆ ಬಂದದ್ದು ಪಂಚಾಮೃತ.” ಮತ್ತೆ ಇನ್ನೊಂದು ವಿಚಾರವೂ ಇಲ್ಲಿದೆ. ಪಂಚಾಮೃತವನ್ನು ಜೀರ್ಣಿಸಿಕೊಳ್ಳಬಲ್ಲ ತಾಕತ್ತು ಎಲ್ಲರಿಗೂ ಇರದು. ಹಾಗಾಗಿ ತನಗೆ ಏನು ಇದೆಯೋ ಅದರಲ್ಲಿಯೇ ತೃಪ್ತಿಪಟ್ಟುಕೊಳ್ಳುವವನು ಜಾಣನು.

ಕಾಮ(ಆಸೆ)ವೇ ಬದುಕಿಗೆ ಕಾರಕ. ಅದುವೇ ಸಂಕಟಕ್ಕೆ ಕಾರಣವೂ ಆಗಿದೆ. ಕಾಮವು ಇಂದ್ರಿಯಮೂಲದ್ದು. ಮಹಾನ್ ಮೇಧಾವಿ , ಆಚಾರ್ಯ ಎಂ. ಹಿರಿಯಣ್ಣನವರು ಆಸೆ(ಕಾಮ- Desire)ಯನ್ನು ಬಿಟ್ಟಿರಲಾರದೆ ತೊಳಲಾಡುವವರಿಗೆ ಹೀಗೆ ಉಪದೇಶಿಸಿದ್ದಾರೆ: ” Desiring for sensual pleasures is like desiring to open an empty box. It is destined to lead to disappointment.” (26-12-1916)[CHAFF AND DRAFF- The Personal Diary of Prof. M Hiriyanna, Edited by, Shash Kiran B N]. “ಇಂದ್ರಿಯ ಸುಖಕ್ಕಾಗಿ ಹಾತೊರೆಯುವುದು ಖಾಲಿಪೆಟ್ಟಿಗೆಯೊಂದನ್ನು ಆಸೆಪಟ್ಟು ತೆರೆದಂತೆ. ಅಲ್ಲಿ ನಮಗೆ ಅನುಭವಕ್ಕೆ ಬರುವುದು ನಿರಾಶೆ ಮಾತ್ರ.” (ಉಕ್ತಿಯ ಅನುವಾದ: ಪ್ರಕೃತ ಲೇಖಕನದು).ಆಸೆಗೆ ದಾಸನಾಗದಿದ್ದರೆ ನಿರಾಶೆಯ ಪ್ರಶ್ನೆಯೇ ಎದುರಾಗದು. ಅದಕ್ಕಿರುವ ದಾರಿ ಒಂದೇ, ನಾವೇ ಆಸೆಗೆ ಮಿತಿಯನ್ನು ಹೇರಿಕೊಳ್ಳುವುದು. ಅದು ಹೇಗೆ? ದಾರ್ಶನಿಕ ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಬೋಧಿಸಿದ್ದಾರೆ:

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು I
ಗುರುತಿಸೊಳಿತಿರುವುದನು ಕೇಡುಗಳ ನಡುವೆ II
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು I
ಹರುಷಕದೆ ದಾರಿಯೆಲೊ – ಮಂಕುತಿಮ್ಮ II

‘ಇನ್ನಷ್ಟು ಬೇಕು’ ಎಂದು ಹಂಬಲಿಸುತ್ತಾ ಕೊರಗುವುದಲ್ಲ! ನಮ್ಮ ಪಾಲಿಗೆ ಏನು ಬಂದಿದೆಯೋ ಅದನ್ನು ಅನುಭವಿಸುವಿತ್ತಾ ಸಂತೋಷಪಡಬೇಕು. ಎಲ್ಲಡೆಯಲ್ಲೂ ಗುಣವನ್ನು ಒಳಿತನ್ನು ಕಾಣಬೇಕು. ಕೆಡುಕನ್ನೋ ದೋಷವನ್ನೋ ಗುರುತಿಸುವುದನ್ನೇ ಕಾಯಕಮಾಡಿಕೊಂಡರೆ ಮಾನಸಿಕ ನೆಮ್ಮದಿಯು ನಷ್ಟವಾಗುವುದು. ಹರುಷದ ದಾರಿ ಯಾವುದು? ಡಿವಿಜಿಯವರು ಹೇಳುತ್ತಾರೆ, ಅದು ಇರುವ ಭಾಗ್ಯವಷ್ಟನ್ನು ಒಪ್ಪಿಕೊಂಡು ಬದುಕುವುದು. ನಮಗಿರುವ ಭಾಗ್ಯವಷ್ಟನ್ನು ಅನುಭವಿಸುತ್ತಾ ಸಂತೃಪ್ತಿಯನ್ನು ತಳೆದರೆ ಅದುವೇ ತಾನೇ ಸುಖ! ಅಲ್ಲಿರುವುದೇ ಸೌಖ್ಯ. ನಾವು ಬಯಸಿದ್ದೆಲ್ಲಾ ಸಿಗದು. ತಾನು ಬಯಸಿದ್ದೆಲ್ಲಾ ಸಿಕ್ಕರೆ ಮನುಷ್ಯನು ಮನುಷ್ಯನಾಗಿ ಉಳಿಯನು.

ದಾಸಶ್ರೇಷ್ಠ ಪುರಂದರರು ‘ಆರು ಹಿತವರು ನಿನಗೆ’ ಎಂಬ ಕೀರ್ತನೆಯಲ್ಲಿ ಈ ರೀತಿ ಕೇಳಿದ್ದಾರೆ, ” ಆರು ಹಿತವರು ನಿನಗೆ ಈ ಮೂವರೊಳಗೆ, ನಾರಿಯೊ ಧಾರುಣಿಯೊ ಬಲುಧನದ ಸಿರಿಯೋ?” . ಅವರೇ ಉತ್ತರಿಸಿದ್ದಾರೆ, ” ಅರ್ಧದೇಹವೆನಿಸುವ ಸತಿಯನ್ನು ಇಂದಲ್ಲ ನಾಳೆ ಕಾಲನೊಯ್ವನು; ಧರೆಯನಾಳ್ವ ಚೆನ್ನಿಗ ದೊರೆಯನ್ನೇ ಆತ ಅಸುನೀಗಿದಾಗ ಹೊರಹಾಕುವರು; ಸಾಕಷ್ಟು ಧನ-ಸಂಪತ್ತು ಕೂಡಿಟ್ಟು ಇನ್ನೇನು ಅದನ್ನು ಅನುಭವಿಸಬೇಕೆಂಬಾಗ ಆಯುಷ್ಯವೇ ಮುಗಿಯುವುದು! ನೀನು ಸತ್ತಾಗ ಸತಿ-ಸುತರು-ಬಾಂಧವರು ಶೋಕಿಸುವರು.” ಅಲ್ಲಿಗೆ ಎಲ್ಲವೂ ಮುಗಿಯಿತು. ಅಷ್ಟೇ ತಾನೇ! ಇಷ್ಟೇ ತಾನೇ ಬದುಕು! ಪುರಂದರ ದಾಸರು ಕೀರ್ತಿಸುತ್ತಾರೆ,

” ಲೋಕದಲಿ ಸ್ಥಿರವಾದ ಕೀರ್ತಿ-ಅಪಕೀರ್ತಿಗಳು
ಸಾಕಾರವಾಗಿ ಸಂಗಡ ಬಾಹುವಲ್ಲದೆ ” ಮತ್ಯಾವುವೂ ಅಲ್ಲ.

ಆಸೆಯೆನ್ನುವುದು ದೇಹಕ್ಕೆ ಬಿದ್ದ ಗಂಟು.ಆತ್ಮಕ್ಕಿಲ್ಲ ಅದರ ಹಂಗು. ದೇಹಧಾರಿ ಮನುಷ್ಯನಿಗೆ ಆಸೆಯಿಲ್ಲದೆ ಬದುಕಿಲ್ಲ ನಿಜ. ಆದರೆ, ಅದು ಅತಿಯಾದರೆ ಬದುಕು ದುಃಖಮಯವಾಗುವುದು. ಆರ್ಷಸಾಹಿತ್ಯವು ಇಂದ್ರಿಯಜನಕವಾದ ಆಸೆಯನ್ನು ನಿಯಂತ್ರಿಸಲು ಇಂದ್ರಿಯಗಳನ್ನೇ ಹತೋಟಿಯಲ್ಲಿಟ್ಟುಕೊಳ್ಳುವಂತೆ ಉಪದೇಶಿಸುತ್ತದೆ. ಗೌತಮ ಬುದ್ಧನು “ಆಸೆಯೇ‌ ದುಃಖಕ್ಕೆ ಮೂಲ” ವೆಂದು ಅಂದೇ ಎಚ್ಚರಿಸಿದ್ದಾನೆ.
ಆದುದರಿಂದ ನಮ್ಮ ಕಾಮನೆಗಳನ್ನು ಸ್ವಯಂ ನಿಯಂತ್ರಿಸಿಕೊಳ್ಳುತ್ತಾ ಇದ್ದಷ್ಟು ಸಾಕು ಎಂಬ ಸ್ವಯಂಪೂರ್ಣತೆಯ (Feeling of self sufficiency)ಭಾವದಿಂದ ಸ್ವಾಭಿಮಾನದಿಂದ ಬಾಳಿದರೆ ಬದುಕು ಆನಂದಮಯ.

✍️ ಜಯಪ್ರಕಾಶ ಎ ನಾಕೂರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ – ಮಂಗಳೂರಿನಲ್ಲಿ ದಂಡ ವಿಧಿಸಿ ಎಚ್ಚರಿಕೆ
November 23, 2026
7:36 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2026 | ನ.24 ರಿಂದ ಮಲೆನಾಡು, ನ.25 ರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ
November 23, 2026
12:09 PM
by: ಸಾಯಿಶೇಖರ್ ಕರಿಕಳ
ಚಾಮಡ್ಕ ಜಲಪಾತದಲ್ಲಿ ಸ್ವಚ್ಛತಾ ಸಂಭ್ರಮ – ಮಕ್ಕಳ ಚಿತ್ರಗಳಲ್ಲಿ ಪರಿಸರ ಕಾಳಜಿಯ ಸಂದೇಶ
November 23, 2026
12:01 PM
by: ದ ರೂರಲ್ ಮಿರರ್.ಕಾಂ
Rubber tapper collecting latex in a natural rubber plantation
ಮತ್ತೆ ಇಳಿಕೆಯಾದ ರಬ್ಬರ್‌ ಬೆಲೆ – ರಬ್ಬರ್ ಬೆಳೆಗಾರರಿಗೆ ಮತ್ತೆ ಬೆಲೆ ಇಳಿಕೆಯ ಆತಂಕ
November 23, 2026
11:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror