ಜಲಪಾತದ ಸೌಂದರ್ಯ ಉಳಿಸುವ ಹೊಣೆ ನಮ್ಮೆಲ್ಲರದ್ದು ಎಂಬ ಸಂದೇಶದೊಂದಿಗೆ ಸುಳ್ಯ ತಾಲೂಕಿನ ಕುಕ್ಕುಜಡ್ಕದ ಚಾಮಡ್ಕ ಜಲಪಾತ ಪ್ರದೇಶದಲ್ಲಿ ಸ್ವಚ್ಛತಾ ಸಂಭ್ರಮ ಕಾರ್ಯಕ್ರಮ ನಡೆಯಿತು. ‘ಸ್ವಚ್ಛ ಗ್ರಾಮ ಸುಂದರ, ನಮ್ಮ ಊರು – ನಮ್ಮ ಹೆಮ್ಮೆ’ ಎಂಬ ಆಶಯದಡಿ ಆಯೋಜಿಸಲಾಗಿದ್ದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿಯುಳ್ಳ ಹಲವರು ಉತ್ಸಾಹದಿಂದ ಪಾಲ್ಗೊಂಡು ಜಲಪಾತದ ಸುತ್ತಮುತ್ತಲಿನ ತ್ಯಾಜ್ಯವನ್ನು ಸಂಗ್ರಹಿಸಿದರು.
ಕಳೆದೊಂದು ತಿಂಗಳಿನಿಂದ ಗ್ರಾಮದಲ್ಲಿ ಸ್ವಯಂಪ್ರೇರಣೆಯಿಂದ ಕೃಷಿಕ ಶಿವರಾಂ ಪೈಲೂರು ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛತಾ ನಡಿಗೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪರಿಸರ ಪ್ರೇಮಿಗಳು, ಗ್ರಾಮಸ್ಥರು ಹಾಗೂ ಸ್ವಯಂಸೇವಕರು ಜಲಪಾತದ ಸುತ್ತಮುತ್ತ ಬಿದ್ದಿದ್ದ ವಿವಿಧ ಬಗೆಯ ಕಸವನ್ನು ಸಂಗ್ರಹಿಸುವ ಮೂಲಕ ಪ್ರವಾಸಿ ತಾಣದ ಸ್ವಚ್ಛತೆಗೆ ಕೈಜೋಡಿಸಿದರು.
ಜಲಪಾತದ ಪರಿಸರದಲ್ಲಿ ಮಕ್ಕಳ ಚಿತ್ರಗಳ ಕಲರವ : ಸ್ವಚ್ಛತಾ ಕಾರ್ಯದ ಜೊತೆಗೆ ಸುತ್ತಮುತ್ತಲಿನ ಶಾಲಾ ಮಕ್ಕಳಿಗಾಗಿ ಸುಂದರ ಪರಿಸರದ ಮಹತ್ವ ಸಾರುವ ಚಿತ್ರರಚನೆ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಜಲಪಾತದ ತಿಳಿನೀರ ತೊರೆಯ ಜುಳುಜುಳು ನಾದದ ನಡುವೆ ಮಕ್ಕಳು ಪ್ರಕೃತಿಯ ಸೌಂದರ್ಯವನ್ನು ತಮ್ಮ ಚಿತ್ರಗಳಲ್ಲಿ ಮೂಡಿಸಿದರು.
ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಪ್ರಕೃತಿಯ ಮಹತ್ವವನ್ನು ಬಿಂಬಿಸುವ ಮಕ್ಕಳ ಚಿತ್ರಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ‘ಕಸದಿಂದ ರಸ’ ಪ್ರದರ್ಶನವೂ ಗಮನ ಸೆಳೆಯಿತು. ತ್ಯಾಜ್ಯವೆಂದು ಎಸೆಯುವ ವಸ್ತುಗಳನ್ನು ಮರುಬಳಕೆಯ ಮೂಲಕ ಉಪಯುಕ್ತವಾಗಿಸಬಹುದು ಎಂಬ ಸಂದೇಶವನ್ನು ಈ ಪ್ರದರ್ಶನ ಸಾರಿತು.
ಸ್ವಚ್ಛತಾ ಕಾರ್ಯಕರ್ತರಿಗೆ ಗೌರವ : ನಂತರ ನಡೆದ ಸಮಾರಂಭದಲ್ಲಿ ಅಮರಮುಡ್ನೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ ಅವರು ಕಸಮುಕ್ತ ಗ್ರಾಮದ ಸಂದೇಶ ಸಾರುವ ಫಲಕಗಳನ್ನು ಅನಾವರಣಗೊಳಿಸಿದರು. ಸ್ವಚ್ಛತೆಯ ಅರಿವು ಮೂಡಿಸುವ ಕರಪತ್ರಗಳನ್ನೂ ಬಿಡುಗಡೆ ಮಾಡಿದರು.
ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರು ಹಾಗೂ ಗುಜರಿ ಸಂಗ್ರಹಿಸುವವರನ್ನು ಗೌರವಿಸಲಾಯಿತು. ಚಿತ್ರರಚನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮಸ್ಥರು ಸ್ವಯಂಪ್ರೇರಣೆಯಿಂದ ಕೈಗೊಂಡಿರುವ ಸ್ವಚ್ಛತಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೀರ್ತಿಪ್ರಸಾದ್ ಅವರು, ಗ್ರಾಮವನ್ನು ತ್ಯಾಜ್ಯಮುಕ್ತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಒಂದು ಗ್ರಾಮದ ಪ್ರಯತ್ನ ಮತ್ತೊಂದು ಗ್ರಾಮಕ್ಕೆ ಪ್ರೇರಣೆ : ಚಾಮಡ್ಕ ಜಲಪಾತದ ಸ್ವಚ್ಛತಾ ಸಂಭ್ರಮದ ನಡುವೆ ನೆರೆಯ ಕಲ್ಮಡ್ಕ ಗ್ರಾಮದಲ್ಲಿಯೂ ಯುವಕರು ಒಗ್ಗೂಡಿ ಸ್ವಚ್ಛತಾ ಕಾರ್ಯ ಆರಂಭಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಒಂದು ತಿಂಗಳಿನಿಂದ ನಡೆಯುತ್ತಿರುವ ಸ್ವಚ್ಛತಾ ನಡಿಗೆ, ಜಲಪಾತದ ಸ್ವಚ್ಛತೆ, ಮಕ್ಕಳಲ್ಲಿ ಪರಿಸರ ಜಾಗೃತಿ ಮತ್ತು ತ್ಯಾಜ್ಯ ಮರುಬಳಕೆಯ ಸಂದೇಶ ಹೀಗೆ ಹಲವು ಆಯಾಮಗಳನ್ನು ಒಳಗೊಂಡಿರುವ ಈ ಪ್ರಯತ್ನ ಗ್ರಾಮೀಣ ಪ್ರದೇಶಗಳಲ್ಲಿ ಜನರ ಸಹಭಾಗಿತ್ವದಿಂದ ಪರಿಸರ ಸಂರಕ್ಷಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.
ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಾಗದೆ, ಪ್ರತಿಯೊಬ್ಬರ ಜೀವನದ ಜವಾಬ್ದಾರಿಯಾಗಲಿ ಎಂಬ ಆಶಯವೇ ಈ ಸ್ವಚ್ಛತಾ ಸಂಭ್ರಮದ ವಿಶೇಷ ಸಂದೇಶವಾಗಿದೆ.
A unique cleanliness celebration was organised at Chamadka Waterfall in Kukkuzadka, Sullia taluk, Dakshina Kannada, under the theme ‘Clean Village, Beautiful Village – Our Village, Our Pride’. The programme was part of a month-long voluntary cleanliness walk in the village. Environment-conscious volunteers collected waste around the waterfall, while schoolchildren participated in a drawing competition highlighting environmental protection. A ‘Waste to Wealth’ exhibition also attracted attention. Amaramudnur Gram Panchayat Development Officer Keerthiprasad inaugurated anti-waste awareness signboards, released awareness pamphlets and honoured sanitation workers and scrap collectors. The cleanliness movement has also inspired volunteers in neighbouring Kalmadka village.


