ಯುವಜನತೆ ಒಂದಾಗಿ ಹೆಜ್ಜೆ ಇಟ್ಟರೆ ಗ್ರಾಮಗಳ ಚಿತ್ರಣವನ್ನೇ ಬದಲಿಸಬಹುದು ಎಂಬುದಕ್ಕೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿ ಆರಂಭವಾಗಿರುವ ಸ್ವಚ್ಛತಾ ಕಾರ್ಯ ಮಾದರಿಯಾಗಿದೆ. ಅಮರಮುಡ್ನೂರಿನಲ್ಲಿ ಆರಂಭವಾದ ಸ್ವಚ್ಛತಾ ಆಂದೋಲನ ಇದೀಗ ಪಕ್ಕದ ಕಲ್ಮಡ್ಕ ಗ್ರಾಮಕ್ಕೂ ವಿಸ್ತರಣೆಯಾಗಿದ್ದು, ಊರಿನ ಯುವಕರು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದಲ್ಲಿ ಇತ್ತೀಚೆಗೆ ಶಿವರಾಂ ಪೈಲೂರು ಆರಂಭಿಸಿದ ಸ್ವಚ್ಛತಾ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಈ ಅಭಿಯಾನದ ಪ್ರೇರಣೆಯಿಂದ ಕಲ್ಮಡ್ಕದಲ್ಲಿಯೂ ಸ್ವಚ್ಛತಾ ಕಾರ್ಯ ಆರಂಭವಾಗಿದೆ.
ಕಲ್ಮಡ್ಕದ ಕೃಷಿಕ ಹಾಗೂ ರಂಗಕರ್ಮಿ ಸಾಯಿನಾರಾಯಣ ಅವರು ಊರಿನ ಯುವಕರ ತಂಡದೊಂದಿಗೆ ಶನಿವಾರ ಸಂಜೆ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಲ್ಮಡ್ಕದ ಸಾಂಸ್ಕೃತಿಕ ಸಂಘಟನೆಯಾದ ಕಲಾಗ್ರಾಮದ ವತಿಯಿಂದ ಈ ಕಾರ್ಯವನ್ನು ಸಂಘಟಿಸಲಾಗಿದೆ.
ನಮ್ಮ ಊರು, ನಮ್ಮ ಹೆಮ್ಮೆ – ಸ್ವಚ್ಛತಾ ಆಂದೋಲನ : ‘ನಮ್ಮ ಊರು, ನಮ್ಮ ಹೆಮ್ಮೆ – ಸ್ವಚ್ಛತಾ ಆಂದೋಲನ’ ಎಂಬ ಘೋಷವಾಕ್ಯದೊಂದಿಗೆ ಯುವಕರು ರಸ್ತೆ ಬದಿಗಳಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಎಂಬ ಸಂದೇಶವನ್ನು ಈ ಅಭಿಯಾನ ಸಾರುತ್ತಿದೆ.
ಸ್ವಚ್ಛ ಪರಿಸರ, ಸ್ವಸ್ಥ ಸಮಾಜ ನಿರ್ಮಾಣದ ಈ ಕಾರ್ಯದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೈಜೋಡಿಸಬೇಕು ಎಂದು ಸಾಯಿನಾರಾಯಣ ಮನವಿ ಮಾಡಿದ್ದಾರೆ.
ಶಾಲಾ ಮಕ್ಕಳೂ ಸ್ವಚ್ಛತಾ ಕಾರ್ಯದಲ್ಲಿ ಭಾಗಿ : ಈ ಸ್ವಚ್ಛತಾ ಅಭಿಯಾನದಲ್ಲಿ ಉದಯ ಬೆಟ್ಟ, ಡಾ. ಶಶಿಧರ ಪಡೀಲ್, ರವೀಂದ್ರ ಮಾಳಿಗೆ, ಶಕುಂತಲ, ಭಾಗೀರತಿ, ಸಚಿನ್, ಹೊನ್ನಪ್ಪ, ಪ್ರಜ್ಞಾನ್, ಪ್ರಶಾಂತ, ಶೇಷಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಶಾಲಾ ಮಕ್ಕಳೂ ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷವಾಗಿತ್ತು.
ಸಂಗ್ರಹಿಸಿದ ಕಸವನ್ನು ಗ್ರಾಮ ಪಂಚಾಯಿತಿಯ ಸ್ವಚ್ಛತಾ ಘಟಕಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.
ಗ್ರಾಮದ ರಸ್ತೆಗಳು ಕಸಮುಕ್ತವಾಗಲಿ ಎಂಬ ಆಶಯ : ಗ್ರಾಮದ ಇನ್ನಷ್ಟು ಯುವಕರು ಇಂತಹ ಕಾರ್ಯಗಳಲ್ಲಿ ಭಾಗವಹಿಸಿದರೆ ಇಡೀ ಗ್ರಾಮವನ್ನು ಸ್ವಚ್ಛವಾಗಿಡಲು ಸಾಧ್ಯ. ಮುಖ್ಯವಾಗಿ ರಸ್ತೆಗಳ ಇಕ್ಕೆಲಗಳಲ್ಲಿ ಕಸ ಎಸೆಯುವುದನ್ನು ತಡೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕದಂತೆ ಜನರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಮುಂದಿನ ಉದ್ದೇಶವಾಗಬೇಕಿದೆ.
ಕೇವಲ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ಸ್ವಚ್ಛತೆಯನ್ನು ಜೀವನಶೈಲಿಯನ್ನಾಗಿ ರೂಪಿಸಿಕೊಳ್ಳುವ ಅಗತ್ಯವಿದೆ. ಯುವಕರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಊರಿನ ಸೌಂದರ್ಯ ಕಾಪಾಡಲು ಕೈಜೋಡಿಸುತ್ತಿರುವುದು ಇತರ ಗ್ರಾಮಗಳಿಗೂ ಪ್ರೇರಣೆಯಾಗಬಲ್ಲದು.
‘ಸ್ವಚ್ಛತೆಯೇ ಸೇವೆ – ಬನ್ನಿ, ನಮ್ಮ ಊರನ್ನು ನಾವೇ ಸ್ವಚ್ಛಗೊಳಿಸೋಣ’ ಎಂಬ ಭಾಗವಹಿಸಿದ ಗ್ರಾಮಸ್ಥರ ಕರೆ ಇದೀಗ ಕಲ್ಮಡ್ಕದ ಸ್ವಚ್ಛತಾ ಅಭಿಯಾನದ ಆಶಯವಾಗಿದೆ.
ಪರಿಸರ ಕಾರ್ಯಕರ್ತ ನಾಗರಾಜ್ ಬಜಾಲ್ ಅವರ ಸ್ವಚ್ಛ ದಂಡಯಾತ್ರೆಯಿಂದ ಪ್ರೇರಣೆಗೊಂಡು ಅಮರಮುಡ್ನೂರಿನಲ್ಲಿ ಶಿವರಾಂ ಪೈಲೂರು ಅವರು ತನ್ನೂರಿನಲ್ಲಿ ತನ್ನ ಊರಿನ ಸುಮಾರು 1.2 ಕಿಮೀ ರಸ್ತೆಯ ಬದಿಯ ಕಸ, ಪ್ಲಾಸ್ಟಿಕ್ ಸ್ವಚ್ಛ ಮಾಡುವ ಮೂಲಕ ಆರಂಭಿಸಿದ ಪ್ರಯತ್ನಕ್ಕೆ ಕಲ್ಮಡ್ಕದಲ್ಲಿ ಸಾಯಿನಾರಾಯಣ ಮತ್ತು ಯುವಕರು ಕೈಜೋಡಿಸಿರುವುದು ಗ್ರಾಮೀಣ ಸಮುದಾಯದ ಸಕಾರಾತ್ಮಕ ಬದಲಾವಣೆಯ ಉದಾಹರಣೆ. ಒಂದು ಒಳ್ಳೆಯ ಕೆಲಸಕ್ಕೆ ಪ್ರಚಾರ, ಶ್ಲಾಘನೆಯ ಜೊತೆಗೆ ಬೇಕಾಗಿರುವುದು ಮತ್ತೊಂದು ಊರಿನಲ್ಲಿ ಅದನ್ನು ಮುಂದುವರಿಸುವ ಕೈಗಳು.
ನಿಮ್ಮೂರಿನಲ್ಲೂ ಯುವಕರು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆಯೇ? ರಸ್ತೆ ಬದಿಯ ಕಸ ಸಂಗ್ರಹಿಸುತ್ತಿದ್ದಾರೆಯೇ? ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆಯೇ? ಕಸ ನಿರ್ವಹಣೆಯಲ್ಲಿ ಮಾದರಿಯಾಗಿದ್ದಾರೆಯೇ? ಅವರ ಪ್ರಯತ್ನಕ್ಕೆ ಪ್ರಚಾರ ನೀಡೋಣ. ಮತ್ತಷ್ಟು ಗ್ರಾಮಗಳಿಗೆ ಪ್ರೇರಣೆ ನೀಡೋಣ. The Rural Mirror ನಿಮ್ಮೂರಿನ ಇಂತಹ ಸಕಾರಾತ್ಮಕ ಪ್ರಯತ್ನಗಳಿಗೆ ವೇದಿಕೆಯಾಗಲಿದೆ. ನಿಮ್ಮೂರಿನ ಸ್ವಚ್ಛತಾ ಕಾರ್ಯದ ಫೋಟೋ, ವಿಡಿಯೋ ಮತ್ತು ಮಾಹಿತಿಯನ್ನು ನಮಗೆ ಕಳುಹಿಸಿ. ನಮ್ಮ ವ್ಯಾಟ್ಸಪ್ ಸಂಖ್ಯೆ 9449125447 . ಒಂದು ಊರಿನ ಸತ್ಕಾರ್ಯ, ನೂರಾರು ಊರಿಗೆ ಪ್ರೇರಣೆ ಆಗಲಿ.
#ಸ್ವಚ್ಛಹಳ್ಳಿನಮ್ಮಹೆಮ್ಮೆ, #TheRuralMirror
A community-led cleanliness campaign has begun in Kalmadka village of Sullia taluk, Dakshina Kannada district, inspired by a similar initiative in neighbouring Amar Amudnur. Farmer and theatre personality Sainarayana, along with the Kalmadka cultural organisation Kalagrama and local youth, launched the roadside waste collection drive on Saturday evening under the slogan ‘Our Village, Our Pride – Cleanliness Campaign’. Villagers and schoolchildren participated enthusiastically. The collected waste will be handed over to the village panchayat sanitation unit. The initiative aims to encourage community participation and discourage littering in public places.


