ಅಡಿಕೆ ಬೆಳೆಗಾರ ಸಂಸ್ಥೆಯ ಪ್ರಮುಖರಿಗೆ ಆ ದಿನದ ಅಡಿಕೆ ಮಾರುಕಟ್ಟೆಗಿಂತಲೂ ಹೆಚ್ಚಿನ ಧಾರಣೆ…!. ಸಾಮಾನ್ಯ ಸದಸ್ಯರಿಗೆ ಆ ದಿನದ ಧಾರಣೆ…!. ಹೀಗೊಂದು ಚರ್ಚೆ ಈಗ ಅಡಿಕೆ ಬೆಳೆಗಾರರ ನಡುವೆ ಆರಂಭವಾಗಿದೆ. ಏನಿದು ಚರ್ಚೆ ?
ಅಡಿಕೆ ಬೆಳೆಗಾರರಿಗೆ ಕಳೆದ ಕೆಲವು ಸಮಯಗಳಿಂದ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಅದರ ಜೊತೆಗೆ ಧಾರಣೆಯಲ್ಲಿ ಏರಿಳಿತವೂ ಕಂಡುಬರುತ್ತಿದೆ. ಸಾಮಾನ್ಯ ಬೆಳೆಗಾರರು ಅಡಿಕೆ ಯಾವಾಗ ನೀಡಬೇಕು ಎಂಬ ಗೊಂದಲದಲ್ಲೇ ಇರುತ್ತಾರೆ.ವಿವಿಧ ಸಂಘ ಸಂಸ್ಥೆಗಳು , ಮಾರುಕಟ್ಟೆ ತಜ್ಞರು ಮಾಹಿತಿ ನೀಡುತ್ತಲೇ ಇರುತ್ತಾರೆ. ಹೀಗಾಗಿ ಅಡಿಕೆ ಬೆಳೆಗಾರರ ಸಂಸ್ಥೆಯ ಕಡೆಗೇ ಹೆಚ್ಚಿನ ಬೆಳೆಗಾರರು ಈಚೆಗೆ ಗಮನಹರಿಸಿದ್ದಾರೆ. ಸಂಸ್ಥೆಯ ಮೂಲಕವೇ ಅಡಿಕೆ ಮಾರುಕಟ್ಟೆಗೆ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಕ್ಯಾಂಪ್ಕೋ ಸಂಸ್ಥೆಯನ್ನೇ ಹೆಚ್ಚಾಗಿ ಬೆಳೆಗಾರರು ಆಶ್ರಯಿಸಿದ್ದಾರೆ. ಸುಮಾರು 1000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಹಿವಾಟನ್ನು ಅಡಿಕೆಯ ಮೂಲಕವೇ ಕ್ಯಾಂಪ್ಕೋ ನಡೆಸಿದೆ. ಈಗ ಬಂದಿರುವ ಚರ್ಚೆ ಸಂಸ್ಥೆಯ ಪ್ರಮುಖರಿಗೆ ಹೆಚ್ಚಿನ ಧಾರಣೆಯಲ್ಲಿ ಅಡಿಕೆ ಖರೀದಿ ಹೇಗೆ ಸಾಧ್ಯವಾಗುತ್ತದೆ. ಸಂಸ್ಥೆಯನ್ನು ಮುನ್ನಡೆಸಬೇಕಾದ ಹಾಗೂ ಸಂಸ್ಥೆಯನ್ನು ರಕ್ಷಣೆ ಮಾಡಬೇಕಾದವರೇ ಹೀಗೆ ಮಾಡಿದರೆ ಹೇಗೆ? ಎನ್ನುವುದು ಈಗ ಎದ್ದಿರುವ ಪ್ರಶ್ನೆ.
ಅಡಿಕೆ ಮಾರುಕಟ್ಟೆಯ ಆ ದಿನದ ಧಾರಣೆಗಿಂತಲೂ ಹೆಚ್ಚಿನ ಧಾರಣೆಯಲ್ಲಿ ಸಂಸ್ಥೆಯ ಪ್ರಮುಖರ ಅಡಿಕೆಯನ್ನು ಖರೀದಿ ಮಾಡಿರುವುದು ಈಗ ಬೆಳಕಿಗೆ ಬಂದಿರುವ ಸಂಗತಿ.
ನವೆಂಬರ್ 14 ರಂದು ಹಳೆ ಅಡಿಕೆಗೆ ಕ್ಯಾಂಪ್ಕೋ ನಿಗದಿ ಮಾಡಿರುವ ಮಾರುಕಟ್ಟೆ ದರ 385 ರಿಂದ 400 ರೂಪಾಯಿ. ಆದರೆ ಅಂದು ಕೇವಲ ದೂರವಾಣಿ ಮೂಲಕ ಮಾತುಕತೆ ನಡೆಸಿ ಸಂಸ್ಥೆಯ ಪ್ರಮುಖರೊಬ್ಬರಿಗೆ 405 ರೂಪಾಯಿ ಧಾರಣೆ ನೀಡಲಾಗಿರುವುದು ಈಗ ಬೆಳಕಿಗೆ ಬಂದಿದೆ. ಅಂದರೆ ಕೆಜಿಯಲ್ಲಿ 5 ರೂಪಾಯಿಯಷ್ಟು ಹೆಚ್ಚು ಧಾರಣೆಯನ್ನು ನೀಡಲಾಗಿದೆ. ಬೇರೆ ಬೇರೆ ಹೆಸರಿನಲ್ಲಿ ಒಟ್ಟು ಸೇರಿಸಿ 500 ಕ್ವಿಂಟಾಲ್ ಗೂ ಅಧಿಕ ಅಡಿಕೆಯನ್ನು ಕ್ಯಾಂಪ್ಕೋದ ಬೈಕಂಪಾಡಿ ಬ್ರಾಂಚ್ ಮೂಲಕ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ಬಾರಿ ಮಾಡಿರುವ ಬಗ್ಗೆಯೂ ಈಗ ಗುಮಾನಿ ವ್ಯಕ್ತವಾಗಿದೆ.
ಅದೇ ರೀತಿ ಅಕ್ಟೋಬರ್ 22 ರಂದು ಹಳೆ ಅಡಿಕೆಗೆ 385 ರಿಂದ 385 ರೂಪಾಯಿ ಇದ್ದ ಸಂದರ್ಭದಲ್ಲಿ 400 ರೂಪಾಯಿಗೆ ಬೆಳ್ಳಾರೆಯ ಬ್ರಾಂಚ್ ಮೂಲಕ 10 ಕ್ವಿಂಟಾಲ್ ಅಡಿಕೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ಮಾದರಿಯಲ್ಲಿ ಕಾರ್ಕಳ ಬ್ರಾಂಚ್ ಮೂಲಕವೂ ಅಡಿಕೆಗೆ 350-398 ರೂಪಾಯಿ ಇದ್ದ ಸಂದರ್ಭದಲ್ಲಿ 405 ರೂಪಾಯಿಗೆ ಖರೀದಿ ಮಾಡಲು ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಂಸ್ಥೆಗೆ ಆಗಿರುವ ನಷ್ಟ ಎಷ್ಟು ? ಸಾಮಾನ್ಯ ಬೆಳೆಗಾರರಿಗೆ ಈ ಮಾದರಿಯಲ್ಲಿ ಧಾರಣೆ ಹೆಚ್ಚುವರಿ ಮಾಡಲು ಸಾಧ್ಯವಿದೆಯೇ ? ಎಂಬುದೂ ಈಗ ಪ್ರಶ್ನೆಯಾಗಿದೆ.
ಈ ರೀತಿಯಾಗಿ ಕ್ಯಾಂಪ್ಕೋದಲ್ಲಿ ಪ್ರಮುಖರೇ ತಮಗೆ ಬೇಕಾದಂತೆ ಅಡಿಕೆ ಧಾರಣೆ ಹಾಕಿಸಿಕೊಳ್ಳುವುದರ ಬಗ್ಗೆ ಈಗ ಬೆಳೆಗಾರರ ನಡುವೆ ಚರ್ಚೆ ಆರಂಭವಾಗಿದೆ. ಈ ರೀತಿಯಾಗಿ ಮಾರುಕಟ್ಟೆ ಧಾರಣೆಗಿಂತ ಹೆಚ್ಚುವರಿಯಾಗಿ ತಮಗೆ ಮಾತ್ರವೇ ಅಡಿಕೆ ಧಾರಣೆ ಹಾಕಿಸಿಕೊಳ್ಳುವುದು ಹೇಗೆ ಸಾಧ್ಯ ? ಕ್ಯಾಂಪ್ಕೋ ಚುನಾವಣೆಯ ಹೊತ್ತಿಗೆ ಪ್ರಮುಖರಿಗೆ ಮಾತ್ರಾ ಈ ಧಾರಣೆ ಹೆಚ್ಚುವರಿಯ “ಟ್ರಿಕ್ಸ್ ” ಬೆಳಕಿಗೆ ಬಂದಿದೆ.
ಅಡಿಕೆ ಬೆಳೆಗಾರರ ಹಿತಕ್ಕಾಗಿ ಕ್ಯಾಂಪ್ಕೋ ಸಂಸ್ಥೆಯನ್ನು ವಾರಣಾಸಿ ಸುಬ್ರಾಯ ಭಟ್ಟರು ಯಾವುದೇ ಸ್ವಾರ್ಥ ಇಲ್ಲದೆ ಕಟ್ಟಿ ಬೆಳೆಸಿ ಇದೀಗ ಸ್ವಾರ್ಥಕ್ಕಾಗಿ ಕೆಲವರು ಸಂಸ್ಥೆಯನ್ನು ಬಳಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತವಾಗಿದೆ. ಸಂಘಟನೆಗಳು ಈ ಬಗ್ಗೆ ಗಮನಿಸಬೇಕು, ಅಡಿಕೆ ಬೆಳೆಗಾರರ ಸಂಘಟನೆಗಳು ಕೂಡಾ ಧಾರಣೆಯ ಈ ವ್ಯತ್ಯಾಸದ ಬಗ್ಗೆ ಖಂಡಿಸಬೇಕಾದ ಅಗತ್ಯವಿದೆ ಎಂದು ಬೆಳೆಗಾರರು ಹೇಳುತ್ತಾರೆ.
ನ.14 ರಂದು CJJ ಅಡಿಕೆ ಮಾರಾಟ ಮಾಡಿರುವ ಬಿಲ್ ಗೆ ಆ ದಿನದ ಮಾರುಕಟ್ಟೆಗಿಂತ 405 ರೂಪಾಯಿಗೆ ಕೋಟ್ ಮಾಡಿರುವುದಕ್ಕೆ ಅನುಮತಿ ಕೇಳಿರುವುದು.
ಇದು ಸುಳ್ಯದ ಬೆಳ್ಳಾರೆಯಲ್ಲಿ ಮಾರಾಟ ಮಾಡಿರುವ ಬಿಲ್. ಆ ದಿನದ ಅಡಿಕೆ ಮಾರುಕಟ್ಟೆ CJJ ಕ್ವಾಲಿಟಿಗೆ ಎಷ್ಟು ಇತ್ತು ?