Advertisement
Opinion

ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ

Share

“ಪೂಗೀ ಫಲ ಸಮಾಯುಕ್ತಂ ನಾಗವಲ್ಲೀ ದಳೈರ್ಯುತಂ |
ಕರ್ಪೂರ ಚೂರ್ಣ ಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಂ ||”

ಮಳೆಗಾಲದಲ್ಲೂ ಮಳೆಯಿಲ್ಲದ ರಾತ್ರಿ ಕಪ್ಪೆಗಳು ಮಳೆಗಾಗಿ ಪ್ರಾರ್ಥನೆ ಮಾಡಿದಂತೆ ಸದ್ದು ಮಾಡುತ್ತಿದ್ದವು.

ರಾಮಕೃಷ್ಣಯ್ಯ ಮೆಲ್ಲಗೆ ತಮ್ಮ ಪತ್ನಿ ಗೌರಕ್ಕನನ್ನು ಕೇಳಿದರು.

“ಗೌರಿ… ಆ ರಮೇಶ್ ನಮ್ಮ ಹಸು ಗಂಗೆಯನ್ನು ಸಾಕುವುದಕ್ಕೆ ತೆಗೆದುಕೊಂಡು ಹೋಗಿದ್ದನಲ್ಲವೇ? ಈಗ ಅದು ಹಾಲು ಕೊಡುತ್ತಿಲ್ಲ. ಏಳೆಂಟು ಕರು ಹಾಕಿದೆ ಅಂತ ಯಾರಾದರೂ ಕಟುಕರಿಗೆ ಕೊಡೋದಿಲ್ಲ ಅಲ್ವಾ…?”

ನಿದ್ದೆಯಲ್ಲಿದ್ದ ಗೌರಕ್ಕನಿಗೆ ಗಂಡನ ಮಾತಿನಿಂದ ಎಚ್ಚರವಾಗಿ ಸ್ವಲ್ಪ ಸಿಟ್ಟು ಬಂತು.

“ರೀ… ಬೆಳಿಗ್ಗೆಯಿಂದ ಎಷ್ಟು ಬಾರಿ ಇದೇ ಪ್ರಶ್ನೆ ಕೇಳ್ತೀರಾ? ನಾವು ಹಸುವನ್ನು ಕಟುಕರಿಗೆ ಕೊಟ್ಟಿದ್ದೇವಾ? ನಾವು ರಮೇಶ್‌ಗೆ ಕೊಟ್ಟೆವು. ಅವನು ಹಣ ಕೊಟ್ಟ, ಹಸುವನ್ನೂ ತೆಗೆದುಕೊಂಡು ಹೋದ. ಅವನು ಚೆನ್ನಾಗಿ ಸಾಕಿರಬಹುದು. ಅಲ್ಲಿಗೆ ನಮ್ಮ ಪಾತ್ರ ಮುಗಿಯಿತು. ಈಗ ಮಲಗಿ…”

ಆದರೆ ರಾಮಕೃಷ್ಣಯ್ಯನ ಮನಸ್ಸು ಸಮಾಧಾನವಾಗಲಿಲ್ಲ.

“ಅಯ್ಯೋ… ನಮಗೆ ಪಾಪ ತಟ್ಟುವುದಿಲ್ಲವೇ? ಎಷ್ಟು ವರ್ಷ ಅದು ನಮ್ಮ ಮನೆಯಲ್ಲಿ ಇತ್ತು. ನಮಗೆ ಹಾಲೆಂಬ ಅಮೃತ ಕೊಟ್ಟಿತು. ಈಗ ಅದು ಕಟುಕರ ಪಾಲಾಗಿ ಅಸಹಾಯಕತೆಯಿಂದ ಕಣ್ಣೀರು ಹಾಕಿದರೆ, ಅದರ ಪಾಪದಲ್ಲಿ ನಮಗೂ ಪಾಲು ಸಿಗುವುದಿಲ್ಲವೇ…?”

ಗೌರಕ್ಕ ಮಗ್ಗಲು ಬದಲಾಯಿಸಿ ಮಲಗಿದಳು.

ಹೊರಗೆ ಮಳೆಗಾಗಿ ಪ್ರಕೃತಿಯ ಜೀವಿಗಳು ಇನ್ನಷ್ಟು ಜೋರಾಗಿ ಕೂಗುತ್ತಿದ್ದವು. ರಾಮಕೃಷ್ಣಯ್ಯ ಮಾತ್ರ ಗಂಗೆಯನ್ನು ನೆನೆದು ಕಣ್ಣೀರು ಹಾಕುತ್ತಾ ಮಗ್ಗಲು ಬದಲಾಯಿಸುತ್ತಲೇ ಇದ್ದರು.

**************

ಈ ಕಥೆ ನಮ್ಮ ಮಲೆನಾಡು ಹಾಗೂ ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಇಂದಿನ ಪರಿಸ್ಥಿತಿಗೆ ಅನ್ವಯಿಸುತ್ತದೆ.

ಮೊನ್ನೆ ಮಹಾರಾಷ್ಟ್ರದಲ್ಲಿ ಕರ್ನಾಟಕದಿಂದ ತೆರಳಿದ್ದ ಸುಮಾರು ಐವತ್ತು ಅಡಿಕೆ ಲಾರಿಗಳನ್ನು ತಡೆಹಿಡಿದ ಘಟನೆ ಎಲ್ಲ ಅಡಿಕೆ ಬೆಳೆಗಾರರಿಗೂ ತಿಳಿದಿದೆ. ಈ ಘಟನೆಯಲ್ಲಿ ಕೆಲವು ವಿಚಾರಗಳು ಅತ್ಯಂತ ಗಂಭೀರವಾಗಿವೆ.

ಗಮನಿಸಬೇಕಾದ ಅಂಶಗಳು

1. ಕರ್ನಾಟಕದಿಂದ ಸಾಗಿಸಿದ್ದ ಕಳಪೆ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

2. ಕಳಪೆ ಹಾಗೂ ಮಾನವ ಆರೋಗ್ಯಕ್ಕೆ ಅಪಾಯಕಾರಿ ಎಂದು ವರದಿಯಾದ ಅಡಿಕೆಯನ್ನು ಮಹಾರಾಷ್ಟ್ರ ಸರ್ಕಾರದ ಆಹಾರ ಸುರಕ್ಷತಾ ಇಲಾಖೆ ನಾಶಪಡಿಸಿದೆ ಎಂಬ ಮಾಹಿತಿ ಹೊರಬಂದಿದೆ. ಇದು ಅಡಿಕೆ ಕ್ಷೇತ್ರಕ್ಕೆ ಅತ್ಯಂತ ಅವಮಾನಕರ ಬೆಳವಣಿಗೆ. ಯಾವುದೇ ಕಾರಣವಿಲ್ಲದೆ ಅವರು ಕರ್ನಾಟಕದ ಅಡಿಕೆಯನ್ನು ನಾಶಪಡಿಸಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

3. ಒಂದು ಬಾರಿ ಅಡಿಕೆ ಲಾರಿ ತಡೆಗಟ್ಟಿದರೆ, ಅದರ ಗುಣಮಟ್ಟವನ್ನು ಪರೀಕ್ಷಿಸಿ ವರದಿ ನೀಡಲು ಸುಮಾರು ಇಪ್ಪತ್ತು ದಿನಗಳವರೆಗೆ ಬೇಕಾಗುತ್ತದೆ. ಅಷ್ಟರೊಳಗೆ ಲಾರಿ ಅಲ್ಲಿಯೇ ನಿಲ್ಲಬೇಕು.

ಇದರಿಂದ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ.

  • ಲಾರಿಯಲ್ಲಿರುವ ಅಡಿಕೆಯ ಗುಣಮಟ್ಟ ಹೇಗೆ ಕಾಪಾಡುವುದು?
  • ವರದಿ ಕಲಬೆರಕೆ ಎಂದು ಬಂದರೆ?
  • ಲಕ್ಷಾಂತರವಲ್ಲ, ಕೋಟ್ಯಂತರ ರೂಪಾಯಿ ಮೌಲ್ಯದ ಅಡಿಕೆ ನಾಶವಾದರೆ ಅದರ ಹೊಣೆ ಯಾರು?

ಈ ಹಿನ್ನೆಲೆಯಲ್ಲಿ ಅಡಿಕೆ ವ್ಯಾಪಾರಿಗಳು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿ, ತಡೆಹಿಡಿದ ಲಾರಿಗಳನ್ನು ಬೇಷರತ್ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಇದು ಒಂದು ದಿನದ ಸಮಸ್ಯೆಯಲ್ಲ. ಕಳೆದ ಕೆಲವು ತಿಂಗಳಿಂದ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.

ಮಹಾರಾಷ್ಟ್ರದ ಕಟ್ಟುನಿಟ್ಟಿನ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಈ ಕ್ರಮಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಯಾವುದೇ ಒತ್ತಡಕ್ಕೂ ಮಣಿಯದ ಅಧಿಕಾರಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಈ ಸಂಗತಿ ಈ ವಿಷಯದ ಗಂಭೀರತೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.

ಆದರೆ ಇಲ್ಲಿ ಒಂದು ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ.  ಒಂದು ವೇಳೆ ಅಧಿಕಾರಿಯನ್ನು ವರ್ಗಾವಣೆ ಮಾಡಿ, ನಂತರ ಯಾವುದೇ ತಪಾಸಣೆಯಿಲ್ಲದೆ ಅಡಿಕೆ ಲಾರಿಗಳು ಎಂದಿನಂತೆ ಉತ್ತರ ಭಾರತ ತಲುಪಿದರೆ, ಅಡಿಕೆ ವ್ಯಾಪಾರ ಸಹಜ ಸ್ಥಿತಿಗೆ ಮರಳಬಹುದು.

ಆದರೆ ಈಗ ಪ್ರಯೋಗಾಲಯದ ವರದಿಯಲ್ಲಿ ಕಲಬೆರಕೆ ದೃಢಪಟ್ಟರೆ, ಅದು ಮುಂದಿನ ದಿನಗಳಲ್ಲಿ ಅಡಿಕೆ ವಿರೋಧಿ ಅಭಿಯಾನಗಳಿಗೆ ದೊಡ್ಡ ಅಸ್ತ್ರವಾಗುವ ಸಾಧ್ಯತೆಯಿದೆ. ನ್ಯಾಯಾಲಯದಲ್ಲಿಯೂ ಇಂತಹ ವರದಿಗಳನ್ನು ಆಧಾರವಾಗಿಟ್ಟುಕೊಂಡು ಅಡಿಕೆ ನಿಷೇಧಕ್ಕೆ ಒತ್ತಾಯಿಸುವ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಅಡಿಕೆ ಕಲಬೆರಕೆ ಎಂದರೇನು? : ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿ, ದರ ಸುಮಾರು ₹90 ಸಾವಿರದವರೆಗೆ ಏರಿಕೆಯಾಗಿತ್ತು. ಆ ಸಂದರ್ಭದಲ್ಲಿ ವಿದೇಶಿ ಅಡಿಕೆ, ವಿಶೇಷವಾಗಿ ಶ್ರೀಲಂಕಾ ಸೇರಿದಂತೆ ಕೆಲವು ದೇಶಗಳಿಂದ ಅಡಿಕೆ ಭಾರತಕ್ಕೆ ಬರಲು ಆರಂಭವಾಯಿತು.ಕೆಲವು ವ್ಯಾಪಾರಿಗಳು ಈ ಅಡಿಕೆಯನ್ನು ಸಂಸ್ಕರಿಸಿ, ಕಾಂಕ್ರೀಟ್ ಮಿಕ್ಸರ್‌ಗಳಲ್ಲಿ ಹಾಕಿ, ಸಾಂಪ್ರದಾಯಿಕ ಚೊಗರಿನ ಬದಲು ಕೃತಕ ರಾಸಾಯನಿಕ ಬಣ್ಣಗಳನ್ನು ಬಳಸಿ, ಮಾರುಕಟ್ಟೆಗೆ ಬಿಡಲು ಆರಂಭಿಸಿದರು. ಇಂತಹ ಬಣ್ಣಗಳಲ್ಲಿ ಮಾನವ ಆರೋಗ್ಯಕ್ಕೆ ಹಾನಿಕಾರಕ ಅಂಶಗಳಿವೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿದ್ದವು. ನಂತರ ಅಡಿಕೆ ದರ ಒಂದು ಹಂತಕ್ಕೆ ಇಳಿದರೂ, ವಿದೇಶಿ ಅಡಿಕೆಯ ಆಮದು ಸಂಪೂರ್ಣ ನಿಲ್ಲಲಿಲ್ಲ. ಈಶಾನ್ಯ ರಾಜ್ಯಗಳ ಗಡಿ, ಭೂತಾನ್ ಗಡಿ ಹಾಗೂ ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಅಡಿಕೆ ದೇಶದೊಳಗೆ ಬರುತ್ತಿದೆ ಎಂಬ ಸುದ್ದಿಗಳು ಆಗಾಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಇಂದಿಗೂ ಗಡಿ ಪ್ರದೇಶಗಳಲ್ಲಿ ಅಕ್ರಮ ಅಡಿಕೆ ಲಾರಿಗಳು ವಶಪಡಿಸಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ಸಿಕ್ಕಿಬೀಳುವುದಕ್ಕಿಂತ ಹಲವು ಪಟ್ಟು ಹೆಚ್ಚು ಪ್ರಮಾಣದಲ್ಲಿ ಅಕ್ರಮ ಅಡಿಕೆ ದೇಶದೊಳಗೆ ಬರುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.ಈ ಅಕ್ರಮ ಆಮದು ದೇಶೀಯ ಅಡಿಕೆ ಬೆಲೆಯ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಕಳವಳ ಮೂಡಿಸುತ್ತಿದೆ.

ರಾಸಾಯನಿಕ ಬಣ್ಣದ ಅಪಾಯ : ವಿದೇಶಿ ಅಡಿಕೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಕೃತಕ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ ಎಂಬ ಆರೋಪಗಳಿವೆ.ಇದರ ಜೊತೆಗೆ ಕರ್ನಾಟಕದಲ್ಲಿಯೇ ಕಡಿಮೆ ಗುಣಮಟ್ಟದ ಅಡಿಕೆಗೂ ಇದೇ ರೀತಿಯ ಕೃತಕ ಬಣ್ಣ ಹಚ್ಚಿ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ ಎಂಬ ಮಾತುಗಳು ಅಡಿಕೆ ವಲಯದಲ್ಲಿ ಕೇಳಿಬರುತ್ತಿವೆ.ಯಾರೂ ಕೇಳುವವರಿಲ್ಲ, ನಿಯಂತ್ರಣವೂ ಸಮರ್ಪಕವಾಗಿಲ್ಲದ ಪರಿಸ್ಥಿತಿಯಲ್ಲಿ ಇಂತಹ ಅಡಿಕೆಯ ಉಪ ಉತ್ಪನ್ನಗಳು ಕಳೆದ ಹಲವು ವರ್ಷಗಳಿಂದ ಜನರ ಕೈಗೆ ತಲುಪುತ್ತಿವೆ. ಈ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವವರು ವಾಹನ ಚಾಲಕರು, ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ದುಡಿಯುವ ವರ್ಗದ ಜನರು. ಅವರ ಆರೋಗ್ಯದ ಮೇಲೆ ಇದರ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಡಿಕೆ ಕ್ಯಾನ್ಸರ್‌ಕಾರಕವೇ? : ಮಲೆನಾಡಿನಲ್ಲಿ ಸಾಂಪ್ರದಾಯಿಕವಾಗಿ ನೇರಳೆ ಸಿಪ್ಪೆಯ ಚೊಗರಿನಲ್ಲಿ ಬೇಯಿಸಿ, ಒಣಗಿಸಿ ಸಂಸ್ಕರಿಸುವ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳಿರುವ ಸಾಧ್ಯತೆ ಕಡಿಮೆ. ಆದರೆ ಕೃತಕ ರಾಸಾಯನಿಕ ಬಣ್ಣ ಬಳಸಿ ಸಂಸ್ಕರಿಸಲ್ಪಡುವ ಅಡಿಕೆಯ ಕಾರಣದಿಂದ ಇಡೀ ಅಡಿಕೆ ಬೆಳೆ ಇಂದು “ಕ್ಯಾನ್ಸರ್‌ಕಾರಕ” ಎಂಬ ಕಳಂಕವನ್ನು ಹೊರುತ್ತಿದೆ . ಅಡಿಕೆ ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿ, ಪೂಜೆ ಮತ್ತು ಸಂಪ್ರದಾಯದ ಭಾಗವಾಗಿದೆ. ಆದರೆ ಕೆಲವು ಕಲಬೆರಕೆಗಾರರ ಕೃತ್ಯದಿಂದ ಇಡೀ ಅಡಿಕೆ ಕ್ಷೇತ್ರವೇ ಪ್ರಶ್ನೆಗೆ ಒಳಗಾಗುತ್ತಿರುವುದು ವಿಷಾದನೀಯ.

ಸಾಂಪ್ರದಾಯಿಕ ಸಂಸ್ಕರಣೆ ಕಡಿಮೆಯಾಗುತ್ತಿದೆ : ಒಂದು ಕಾಲದಲ್ಲಿ ಮಲೆನಾಡಿನ ಬಹುತೇಕ ರೈತರು ತಮ್ಮ ಮನೆಯಲ್ಲಿಯೇ ಅಡಿಕೆಯನ್ನು ಸುಲಿದು, ಚೊಗರಿನಲ್ಲಿ ಬೇಯಿಸಿ ಸಂಸ್ಕರಿಸುತ್ತಿದ್ದರು.ಆದರೆ ಕಾಲ ಬದಲಾಗಿದೆ.ಇಂದು ಹೆಚ್ಚಿನ ಅಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಚೇಣಿದಾರರು ಹಾಗೂ ಸಂಸ್ಕರಣಾ ಘಟಕಗಳೇ ಸಂಸ್ಕರಿಸುತ್ತಿವೆ.ಇದರರ್ಥ ಎಲ್ಲರೂ ಕಲಬೆರಕೆ ಮಾಡುತ್ತಾರೆ ಎಂದಲ್ಲ. ಆದರೆ ದೊಡ್ಡ ಪ್ರಮಾಣದ ಸಂಸ್ಕರಣೆಯಲ್ಲಿ ಚೊಗರಿನ ಕೊರತೆ ಅಥವಾ ಸುಲಭದ ಕಾರಣಕ್ಕಾಗಿ ಕೆಲವರು ಕೃತಕ ಬಣ್ಣ ಬಳಸುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ. ಇದರ ದುಷ್ಪರಿಣಾಮವನ್ನು ಅನುಭವಿಸುತ್ತಿರುವವರು ಪ್ರಾಮಾಣಿಕವಾಗಿ ಅಡಿಕೆ ಬೆಳೆಯುವ ರೈತರು. ಇಂದು ಅಡಿಕೆಯ ವಿರುದ್ಧ ಮೂಡುತ್ತಿರುವ ನಕಾರಾತ್ಮಕ ಭಾವನೆಗೆ ಮೂಲ ಕಾರಣ ಸಾಂಪ್ರದಾಯಿಕ ಅಡಿಕೆ ಅಲ್ಲ; ಕಲಬೆರಕೆ ಮತ್ತು ರಾಸಾಯನಿಕ ಬಣ್ಣ ಬಳಸಿ ಸಂಸ್ಕರಿಸಲ್ಪಟ್ಟ ಅಡಿಕೆಯೇ ಆಗಿದೆ.

ಈಗಿನ ಪರಿಸ್ಥಿತಿಯಲ್ಲಿ ಒಂದು ಪ್ರಶ್ನೆ ಎದುರಾಗುತ್ತದೆ. ಇಂದು ಮಹಾರಾಷ್ಟ್ರ ಸರ್ಕಾರದ ಆಹಾರ ಸುರಕ್ಷತಾ ಇಲಾಖೆಯ ಮುಖ್ಯ ಅಧಿಕಾರಿ ನಾಳೆ ಮತ್ತೊಂದು ಇಲಾಖೆಗೆ ವರ್ಗಾವಣೆಯಾಗಬಹುದು. ಅದರ ನಂತರ ಎಂದಿನಂತೆ ಒಳ್ಳೆಯ ಅಡಿಕೆಯೂ, ಕಲಬೆರಕೆ ಅಡಿಕೆಯೂ ಯಾವುದೇ ಅಡೆತಡೆ ಇಲ್ಲದೆ ಉತ್ತರ ಭಾರತದ ಮಾರುಕಟ್ಟೆಗಳನ್ನು ತಲುಪಬಹುದು. ಆದರೆ ಇದು ಎಷ್ಟು ದಿನ?, ಒಂದು ದಿನ ನ್ಯಾಯಾಲಯದಲ್ಲಿ ಅಡಿಕೆ ಕುರಿತ ತೀರ್ಪು ಬರುವವರೆಗೆ ಮಾತ್ರ.ಒಮ್ಮೆ ಅಡಿಕೆಗೆ “ಕ್ಯಾನ್ಸರ್‌ಕಾರಕ” ಎಂಬ ಕಳಂಕ ಅಧಿಕೃತ ದಾಖಲೆಗಳಲ್ಲಿ ಗಟ್ಟಿಯಾಗಿ ನೆಲೆಗೊಂಡರೆ, ಸಾವಿರಾರು ವರ್ಷಗಳಿಂದ ಪೂಜನೀಯವಾಗಿದ್ದ, ಔಷಧೀಯ ಗುಣಗಳಿರುವ ಬೆಳೆ ಎಂಬ ಹೆಸರಿಗಿಂತ, ಕಲಬೆರಕೆ ಮಾಡಿದ ಕೆಲವರ ತಪ್ಪಿನಿಂದ ಇಡೀ ಅಡಿಕೆ ಉದ್ಯಮವೇ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಅಡಿಕೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬೆಳೆ. ಆಗಬೇಕಾಗಿರುವುದು “ಅಡಿಕೆ ಬ್ಯಾನ್” ಅಲ್ಲ… “ಕಲಬೆರಕೆ ಅಡಿಕೆ ಬ್ಯಾನ್” ಆಗಬೇಕು.

“ಮಲೆನಾಡಿಗೆ ಅಡಿಕೆಯೇ ಐಕಾನಿಕ್ ಬೆಳೆ. ಮಲೆನಾಡಿಗೆ ಅಡಿಕೆಯೇ ಭೂಷಣ. ಮಲೆನಾಡಿನಲ್ಲಿ ಆರೋಗ್ಯಕರ, ಆರೋಗ್ಯವರ್ಧಕ ಅಡಿಕೆ ತಯಾರಾಗಲಿ. ಅಡಿಕೆಗೆ ಮಾನ ಹೋಗದಿರಲಿ.”

ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಗುರುತು ಬೇಕು : ಸುಮಾರು ಮೂವತ್ತು ವರ್ಷಗಳ ಹಿಂದೆ ಗುಟ್ಕಾ ಉದ್ಯಮದ ಕಾರಣ ಅಡಿಕೆಗೆ ಭಾರೀ ಬೇಡಿಕೆ ಬಂದಾಗಲೇ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಗುರುತು ಹಾಗೂ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಬೇಕಾಗಿತ್ತು. ಆದರೆ ಆಗ ಹೆಚ್ಚಿನ ಗಮನ ಬೆಲೆ ಹಾಗೂ ವ್ಯಾಪಾರದ ಮೇಲೆಯೇ ಇದ್ದ ಕಾರಣ, ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಮತ್ತು ಬೇರೆ ಪ್ರದೇಶದ ಅಡಿಕೆಗಳ ನಡುವೆ ಗುಣಮಟ್ಟದ ವ್ಯತ್ಯಾಸವನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ. ಇಂದು ಅದರ ದುಷ್ಪರಿಣಾಮ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಲಾದರೂ ಏನು ಮಾಡಬೇಕು? : ಈಗಲಾದರೂ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸುವ ಪ್ರಯತ್ನ ಆರಂಭವಾಗಬೇಕು. ಪ್ರತಿ ಬ್ಯಾಚ್‌ನ ಅಡಿಕೆಯೂ ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದ್ದು, ಯಾವುದೇ ಹಾನಿಕಾರಕ ರಾಸಾಯನಿಕ ಬಣ್ಣ ಬಳಸಿಲ್ಲ ಎಂಬುದನ್ನು ಅಧಿಕೃತವಾಗಿ ಗುಣಮಟ್ಟ ಪರೀಕ್ಷೆ ಮಾಡಿ ಪ್ರಮಾಣೀಕರಿಸಬೇಕು.ಅದನ್ನು ಖರೀದಿಸುವ ವ್ಯಾಪಾರಿಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನ ತಯಾರಕರು ತಮ್ಮ ಉತ್ಪನ್ನದ ಮೇಲೆ “ಮಲೆನಾಡಿನ ಸಾಂಪ್ರದಾಯಿಕ ಅಡಿಕೆಯಿಂದ ತಯಾರಿಸಲಾಗಿದೆ” ಅಥವಾ “ಸುರಕ್ಷಿತ ಅಡಿಕೆ ಉತ್ಪನ್ನ” ಎಂಬ ರೀತಿಯ ಗುಣಮಟ್ಟದ ಗುರುತಿನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಗ್ರಾಹಕರ ವಿಶ್ವಾಸವೂ ಹೆಚ್ಚಬಹುದು.

ಪ್ರತ್ಯೇಕ ಮಾರುಕಟ್ಟೆಯೇ ಭವಿಷ್ಯದ ದಾರಿ : ಮಲೆನಾಡಿನ ಒಂದು ಎಕರೆಗೆ ಸಿಗುವ ಉತ್ಪಾದನೆ ಮತ್ತು ಬಯಲುಸೀಮೆಯ ಉತ್ಪಾದನೆಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಸಂಪೂರ್ಣವಾಗಿ ಉತ್ಪಾದನೆಯ ಆಧಾರದಲ್ಲಿ ಸ್ಪರ್ಧಾತ್ಮಕವಾಗಿಬಿಟ್ಟರೆ, ಕಡಿಮೆ ಉತ್ಪಾದನೆಯ ಮಲೆನಾಡಿನ ರೈತರಿಗೆ ಅದೇ ದರದಲ್ಲಿ ಬದುಕು ಸಾಗಿಸುವುದು ಕಷ್ಟವಾಗಬಹುದು. ಆದ್ದರಿಂದ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆಯೇ ಭವಿಷ್ಯದ ಆಶಾಕಿರಣ.

ಗುಣಮಟ್ಟಕ್ಕೆ ಬೆಲೆ ಸಿಗಬೇಕಿತ್ತು : ಒಂದು ಕಾಲದಲ್ಲಿ ಶಿವಮೊಗ್ಗ ಹಾಗೂ ಶಿರಸಿ ಕೆಂಪಡಿಕೆಯ ಪ್ರಮುಖ ಮಾರುಕಟ್ಟೆಗಳಾಗಿದ್ದವು. ಆ ಸಮಯದಲ್ಲೇ ಮಲೆನಾಡಿನ ಅಡಿಕೆಯ ವಿಶೇಷತೆ, ಅದರ ರುಚಿ, ಸಾಂಪ್ರದಾಯಿಕ ಸಂಸ್ಕರಣೆ ಹಾಗೂ ಗುಣಮಟ್ಟವನ್ನು ದೇಶದ ಖರೀದಿದಾರರಿಗೆ ಪರಿಣಾಮಕಾರಿಯಾಗಿ ಪರಿಚಯಿಸಿದ್ದರೆ, ಇಂದಿನ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕಿಂತ ಪ್ರಮಾಣಕ್ಕೆ ಹೆಚ್ಚಿನ ಆದ್ಯತೆ ಸಿಕ್ಕ ಪರಿಣಾಮ ಎಲ್ಲ ಅಡಿಕೆಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ಒಂದೇ ದರದಲ್ಲಿ ಖರೀದಿಸುವ ವ್ಯವಸ್ಥೆ ಬೆಳೆದಿದೆ. ಈ ಪ್ರತ್ಯೇಕತೆ ಇಲ್ಲದಿರುವುದೇ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ದೊಡ್ಡ ಹೊಡೆತವಾಗಿದೆ. ಇಂದು ಎದುರಾಗಿರುವ ಸಮಸ್ಯೆಗೆ ಪರಿಹಾರ ಅಡಿಕೆಯನ್ನು ನಿಷೇಧಿಸುವುದಲ್ಲ. ಕಲಬೆರಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ, ಸುರಕ್ಷಿತ ಸಂಸ್ಕರಣೆಗೆ ಉತ್ತೇಜನ, ಗುಣಮಟ್ಟದ ಪ್ರಮಾಣೀಕರಣ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಾಣವೇ ಶಾಶ್ವತ ಪರಿಹಾರ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ | 08-07-2026 | ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿ ಹೇಗಿದೆ…? ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆಯೇ?

ಆಗಸ್ಟ್‌ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್‌…

4 hours ago

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…

8 hours ago

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…

16 hours ago

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

18 hours ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

19 hours ago