ಕಳೆದ ಎರಡು ದಿನಗಳಿಂದ ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ಆಮದು ಮಾಡಿಕೊಳ್ಳುವ ಎರಡು ಕಂಪನಿಗಳ ಒಪ್ಪಂದವು ಚರ್ಚೆಯಾಗುತ್ತಿದೆ. ಈ ನಡುವೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಿದ್ದಾರೆ. ಅಡಿಕೆ ಆಮದು ಆಗುವುದಿಲ್ಲ, ಇದೆಲ್ಲಾ ಸುಳ್ಳು ಸುದ್ದಿಗಳು ಎಂದು ಹೇಳಿದ್ದಾರೆ.
ಬಿಳಿನೆಲೆ ಬಳಿಯ ಸಿಪಿಸಿಆರ್‌ಐ ಕಿದುವಿನಲ್ಲಿ ನಡೆದ ಕೃಷಿಕರ ಸಮಾವೇಶದಲ್ಲಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಈ ಬಾರಿ ಅಡಿಕೆ ಆಮದು ಆಗಿದೆ. ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಳ್ಳದಾರಿಯ ಮೂಲಕವೇ ಆಗಿದೆ. ಆದರೆ ಕಾನೂನು ಮಾರ್ಗದಲ್ಲಿಯೇ ಅಡಿಕೆ ಆಮದು ಆದರೆ ಜಿಎಸ್ಟಿ ಸಹಿತ ಆಮದಾಗುತ್ತದೆ, ಆಗ ಆಮದು ದರ ನಿಗದಿಯಾದ 351 ದರಕ್ಕಿಂತ ಹೆಚ್ಚಿನ ದರದಲ್ಲಿ ಆಮದಾಗುವ ಕಾರಣದಿಂದ ಇಲ್ಲಿನ ಮಾರುಕಟ್ಟೆ ಮೇಲೆ ಪರಿಣಾಮವಾಗದು. ಜಿಎಸ್ಟಿ ಇಲ್ಲದೆ ನಡೆಯುವ ಅಡಿಕೆ ವ್ಯವಹಾರದಿಂದ ಸಹಕಾರಿ ಸಂಸ್ಥೆಗಳಿಗೆ ಸಂಕಷ್ಟವಾಗುತ್ತದೆ, ಈ ಬಗ್ಗೆ ಪ್ರಧಾನಿಗಳ ಗಮನಕ್ಕೂ ಮಾಹಿತಿಯನ್ನು ಕ್ಯಾಂಪ್ಕೋ ತಲಪಿಸಿದೆಎಂದ ಕಿಶೋರ್ ಕುಮಾರ್ ಕೊಡ್ಗಿ,ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ಆಮದು ಎಂಬ ಸುದ್ದಿಯಾಗಿದೆ. ಇದು ಸ್ವಲ್ಪ ಗೊಂದಲವೂ ಆಗಿದೆ. ಆದರೆ ಇದು ಸುಳ್ಳಾಗಿದೆ. ಈ ಸುದ್ದಿಗಳ ನಡುವೆಯೇ ಕ್ಯಾಂಪ್ಕೋ 5 ರೂಪಾಯಿ ಧಾರಣೆಯನ್ನು ಏರಿಕೆ ಮಾಡಿದೆ. ಆಮದು ಸಂಕಷ್ಟ ಇದ್ದರೆ ಏರಿಕೆ ಹೇಗೆ ಸಾಧ್ಯ ಎನ್ನುವುದು ಪ್ರಶ್ನೆಯಾಗಿದೆ. ಯಾವುದೇ ಕಾರಣಕ್ಕೂ ಬೆಳೆಗಾರರು ಭಯಗೊಳ್ಳಬೇಡಿ ಎಂದರು. ರೈತರಿಗೆ ಗೊಂದಲ ಬೇಡ ಎಂದರು. ಮಾರುಕಟ್ಟೆ ದರ ಹಿತವಾಗಿರುವ ಬೆಳೆಗಾರರ ನೆರವೂ ಅಗತ್ಯವಾಗಿದೆ. ಅಡಿಕೆಯನ್ನು ಒಮ್ಮೆಲೇ ಮಾರುಕಟ್ಟೆಗೆ ಬಿಡಬೇಡಿ, ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಮಾರಾಟ ಮಾಡುವ ಮೂಲಕ ಅಡಿಕೆ ಮಾರುಕಟ್ಟೆಯನ್ನೂ ಸ್ಥಿರಗೊಳಿಸಲು ಸಾಧ್ಯ ಎಂದರು.ದರದ ಸ್ಥಿರತೆ ವ್ಯತ್ಯಾಸ ಇರುತ್ತದೆ. ಇದು ಮಾರುಕಟ್ಟೆ ಸಹಜ ಪ್ರಕ್ರಿಯೆ.
ಇಂದು ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಬಯಲು ಸೀಮೆಗೂ ಅಡಿಕೆ ವಿಸ್ತರಣೆಯಾಗಿದೆ. ನೂರಾರು ಅಡಿಕೆ ಕೊಳವೆ ಬಾವಿ ಕೊರೆದು ಅಡಿಕೆ ಬೆಳೆಸಲಾಗುತ್ತದೆ. ಇದು ದುರಂತಕ್ಕೆ ಸಾಕ್ಷಿಯಾಗಿದೆ. ಭತ್ತ, ಕಬ್ಬು ಪ್ರದೇಶದಲ್ಲೂ ಅಡಿಕೆಯಾಗುತ್ತಿದೆ. ಕುಡಿಯಲು ನೀರಿಲ್ಲದೇ ಇರುವ ಜಾಗದಲ್ಲೂ ಟ್ಯಾಂಕರ್ ನೀರು ತಂದು ಅಡಿಕೆ ಬೆಳೆಯಲಾಗುತ್ತದೆ. ಅಡಿಕೆ ಬೆಳೆ ಧಾರಣೆ ಕಡಿಮೆಯಾಗುತ್ತದೆ ಎನ್ನುವ ಗೊಂದಲದ ನಡುವೆ ಪರ್ಯಾಯ ಬೆಳೆಯತ್ತಲೂ ಕೃಷಿಕರು ಮನಸ್ಸು ಮಾಡಬೇಕು. ಅಡಿಕೆಯಲ್ಲಿ ಮಿಶ್ರ ಬೆಳೆಯೂ ಅಗತ್ಯ ಎಂದು ಕಿಶೋರ್ ಕುಮಾರ್ ಕೊಡ್ಗಿ ಎಚ್ಚರಿಸಿದರು.
ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಡಿಕೆ ಧಾರಣೆ ಇಳಿಕೆಯಾಗದಂತೆ ಸರ್ಕಾರ ಎಚ್ಚರ ವಹಿಸಿದೆ. ಅಡಿಕೆ ಆಮದು ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗ ಬೇರೆ ದೇಶದಿಂದ ಅಡಿಕೆ ಆಮದಾಗಲು ಸಾಧ್ಯವೇ ಇಲ್ಲ. ಭೂತಾನ್‌ನಿಂದ ಅಡಿಕೆ ಆಮದು ಮಾಡಲು ಅಂದು ಒಪ್ಪಿತ್ತು. ಭೂತಾನ್ ದೇಶ ಸಂಕಷ್ಟದಲ್ಲಿದೆ ಎಂದು ಅಲ್ಲಿನ ಸರ್ಕಾರ ಮನವಿ ಮಾಡಿತ್ತು, ಹೀಗಾಗಿ ಒಂದು ವರ್ಷಕ್ಕೆ ಸೀಮಿತವಾಗಿ ಆಮದಾಗಿತ್ತು. ಈ ದೇಶಕ್ಕೆ ಹೋಲಿಸಿದರೆ ಅತೀ ಕಡಿಮೆ ಹಸಿ ಅಡಿಕೆ ಆಮದಾಗಿತ್ತು. ಈ ವರ್ಷ ಮತ್ತೆ ಬೇಡಿಕೆ ಇಟ್ಟಾಗ ತಿರಸ್ಕರಿಸಲಾಗಿತ್ತು. ಈಗ ಭೂತಾನ್ ಅಡಿಕೆ ಆಮದು ಮಾಡಲಾಗುತ್ತಿಲ್ಲ. ಶ್ರೀಲಂಕಾದಿಂದ ಕೂಡಾ ಅಡಿಕೆ ಆಮದು ಆಗುವುದು ಇಲ್ಲ. ಈಗ ಈ ಸುದ್ದಿ ಹರಡಿರುವುದು ಯಾವುದೇ ವ್ಯಾಪಾರಿಗಳ ತಂತ್ರವಾಗಿದೆ. ಆಮದು ಸುದ್ದಿ ಹರಡಿಸಿ ಧಾರಣೆ ಕುಸಿತ ಮಾಡಿ ಅಡಿಕೆ ಖರೀದಿ ಮಾಡುವ ತಂತ್ರವಾಗಿದೆ.ಅನಾವಶ್ಯಕವಾದ ಗೊಂದಲ ಉಂಟಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
CAMPCO President Kishore Kumar Kodgi and Union Minister Shobha Karandlaje said that Arecanut cannot be imported, this is all false information.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…