ಅಡಿಕೆ ಮತ್ತು ವೀಳ್ಯದೆಲೆಯನ್ನು ಸಾಂಪ್ರದಾಯಿಕವಾಗಿ ಬಳಸುವ ಸಂಸ್ಕೃತಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ವಿಯೆಟ್ನಾಂನ ಯುವಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ವಿಯೆಟ್ನಾಂನ ಬಾಕ್ ನಿನ್ ಪ್ರಾಂತ್ಯದ 27 ವರ್ಷದ ನ್ಗುಯೆನ್ ತುಂಗ್ ಲಾಮ್ ಅವರು ಅಡಿಕೆಯ ವಿಶಿಷ್ಟ ರುಚಿ ಮತ್ತು ವೀಳ್ಯದೆಲೆಯ ಪರಿಮಳವನ್ನು ಬಳಸಿಕೊಂಡು ವಿಭಿನ್ನ ಕಾಕ್‌ಟೇಲ್ ಸಿದ್ಧಪಡಿಸಿದ್ದಾರೆ. ಈ ಮೂಲಕ ತಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿದ್ದಾರೆ.
2026ರ ಆಗಸ್ಟ್‌ನಲ್ಲಿ ಹೋ ಚಿ ಮಿನ್ ನಗರದಲ್ಲಿ ನಡೆದ ‘ಫ್ಲೇವರ್ ಮಾಸ್ಟರ್ಸ್ 2026’ ಕಾಕ್‌ಟೇಲ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಲಾಮ್ ತಮ್ಮ ವಿಶಿಷ್ಟ ಪ್ರಯೋಗವನ್ನು ಪ್ರದರ್ಶಿಸಿದ್ದರು. ಕೇವಲ ಪಾನೀಯ ತಯಾರಿಸುವುದಷ್ಟೇ ಅಲ್ಲದೆ, ತಮ್ಮ ಊರಿನ ಸಾಂಸ್ಕೃತಿಕ ಪರಂಪರೆಯನ್ನೂ ಪ್ರದರ್ಶನದ ಭಾಗವಾಗಿಸಿದ್ದರು.
ಅಡಿಕೆ, ವೀಳ್ಯದೆಲೆ, ತೆಂಗಿನಕಾಯಿ ಮತ್ತು ಪೀಚ್ ಹಣ್ಣಿನ ಸಂಯೋಜನೆ : ಲಾಮ್ ಸಿದ್ಧಪಡಿಸಿದ ಕಾಕ್‌ಟೇಲ್‌ನಲ್ಲಿ ವೀಳ್ಯದೆಲೆಯ ಸಾರ ಮತ್ತು ಅದರ ಪರಿಮಳದೊಂದಿಗೆ ಅಡಿಕೆಯ ವಿಶಿಷ್ಟ ರುಚಿಯನ್ನು ಬಳಸಲಾಗಿದೆ. ಇದಕ್ಕೆ ತೆಂಗಿನಕಾಯಿಯ ತುರಿ ಮತ್ತು ತಾಜಾ ಪೀಚ್ ಹಣ್ಣನ್ನು ಸೇರಿಸಿ ರುಚಿಯ ಸಮತೋಲನ ಸಾಧಿಸಿದ್ದಾರೆ. ಇದು ಆಲ್ಕೋಹಾಲ್ ಹೊಂದಿರುವ ಪಾನೀಯವಾಗಿದೆ.
ವಿಯೆಟ್ನಾಂನಲ್ಲಿ ವೀಳ್ಯದೆಲೆ ಮತ್ತು ಅಡಿಕೆ ಸಂಭಾಷಣೆಯ ಆರಂಭ ಎಂಬ ಸಾಂಪ್ರದಾಯಿಕ ನಂಬಿಕೆಯಿದೆ. ಹಿಂದಿನ ಕಾಲದಲ್ಲಿ ಅತಿಥಿಗಳಿಗೆ ವೀಳ್ಯದೆಲೆ-ಅಡಿಕೆ ನೀಡುವ ಮೂಲಕ ಆತ್ಮೀಯವಾಗಿ ಮಾತುಕತೆ ಆರಂಭಿಸುವ ಪದ್ಧತಿಯಿತ್ತು. ಆ ಸಂಪ್ರದಾಯವನ್ನು ಇಂದಿನ ಯುವಜನರಿಗೆ ಹೊಸ ರೂಪದಲ್ಲಿ ಪರಿಚಯಿಸುವ ಉದ್ದೇಶದಿಂದ ಕಾಕ್‌ಟೇಲ್‌ನಲ್ಲಿ ಅಡಿಕೆಯ ರುಚಿಯನ್ನು ಬಳಸಿದ್ದಾಗಿ ಲಾಮ್ ತಿಳಿಸಿದ್ದಾರೆ.
ವೀಳ್ಯದೆಲೆಯನ್ನು ಫೀನಿಕ್ಸ್ ಪಕ್ಷಿಯ ರೆಕ್ಕೆಯ ಆಕಾರದಲ್ಲಿ ಸಿದ್ಧಪಡಿಸಿ ತೀರ್ಪುಗಾರರಿಗೆ ನೀಡಿದ್ದು ವಿಶೇಷ ಆಕರ್ಷಣೆಯಾಗಿತ್ತು. ಅಡಿಕೆ ಕಾಕ್‌ಟೇಲ್‌ನ ರುಚಿಯ ಜತೆಗೆ ಅದರ ಪ್ರಸ್ತುತಿಯೂ ತೀರ್ಪುಗಾರರ ಗಮನ ಸೆಳೆಯಿತು. ಸ್ಪರ್ಧೆಯ ತೀರ್ಪುಗಾರ ಮ್ಯಾಕ್ಸೆನ್ಸ್ ಪಿಯಾಟೆಲ್ಲಿ, ವಿಯೆಟ್ನಾಂನ ಆಹಾರ ಮತ್ತು ಪಾನೀಯಗಳ ಮೂಲಕ ಅಲ್ಲಿನ ಸಾಂಸ್ಕೃತಿಕ ಹಬ್ಬದ ಅನುಭವ ದೊರೆಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅತ್ಯಂತ ಪ್ರಭಾವಶಾಲಿ ಪಾನೀಯ ಪ್ರಸ್ತುತಿಗೆ ಪ್ರಶಸ್ತಿ : ಲಾಮ್ ಅವರ ಪ್ರದರ್ಶನವನ್ನು ಮೆಚ್ಚಿದ ಸ್ಪರ್ಧೆಯ ತೀರ್ಪುಗಾರರು ‘ಫ್ಲೇವರ್ ಮಾಸ್ಟರ್ಸ್ ವಿಯೆಟ್ನಾಂ 2026’ರಲ್ಲಿ ಅತ್ಯಂತ ಪ್ರಭಾವಶಾಲಿ ಪಾನೀಯ ಪ್ರಸ್ತುತಿಗಾಗಿ ಪ್ರಶಸ್ತಿ ನೀಡಿದ್ದಾರೆ.
ಲಾಮ್ ಅವರ ಪ್ರಕಾರ, 2022ರಲ್ಲಿ ಕೋವಿಡ್ ನಂತರದ ಅವಧಿಯಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಹೊಸದಾಗಿ ಯೋಚಿಸಲು ಆರಂಭಿಸಿದ್ದರು. ವಿದೇಶಿ ದೇಶಗಳು ತಮ್ಮದೇ ಆದ ಪಾನೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿರುವುದನ್ನು ಗಮನಿಸಿ, ತಮ್ಮ ನಾಡಿನ ಸಂಸ್ಕೃತಿಯನ್ನೇ ಪಾನೀಯಗಳ ಮೂಲಕ ಜಗತ್ತಿಗೆ ಪರಿಚಯಿಸುವ ಪ್ರಯತ್ನ ಆರಂಭಿಸಿದ್ದರು.
ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಪದವಿ ಪಡೆದಿದ್ದ ಲಾಮ್, ಕಾಲೇಜು ದಿನಗಳಲ್ಲಿಯೇ ಬಾರ್‌ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಾ ಈ ವೃತ್ತಿಯ ಅನುಭವ ಪಡೆದಿದ್ದರು. ಇದೀಗ ವಿಯೆಟ್ನಾಂನ ಸಾಂಸ್ಕೃತಿಕ ಪರಂಪರೆಯನ್ನು ಆಧರಿಸಿ ಇನ್ನಷ್ಟು ವಿಭಿನ್ನ ಪಾನೀಯಗಳ ಸಂಗ್ರಹ ಸಿದ್ಧಪಡಿಸುವ ಉದ್ದೇಶ ಹೊಂದಿದ್ದಾರೆ.
ಅಡಿಕೆ ಮತ್ತು ವೀಳ್ಯದೆಲೆ ಕೇವಲ ಸಾಂಪ್ರದಾಯಿಕ ಬಳಕೆಯ ವಸ್ತುಗಳಲ್ಲ. ಅವು ಒಂದು ಪ್ರದೇಶದ ಸಂಸ್ಕೃತಿ ಮತ್ತು ಆತಿಥ್ಯದ ಸಂಕೇತಗಳೂ ಆಗಿವೆ ಎಂಬುದನ್ನು ಈ ಪ್ರಯತ್ನ ಜಗತ್ತಿಗೆ ಪರಿಚಯಿಸಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ


