ಅಡಿಕೆಗೆ ಅರವತ್ತು ಸಾವಿರ ದಾಟಲಿ….! ಆದರೆ, ಈ ದರದ ಕಾರಣದಿಂದಲೇ ಅಡಿಕೆ ಬೆಳೆ ಮತ್ತಷ್ಟು ಮಗದಷ್ಟು ವಿಸ್ತರಣೆ ಆಗದಿರಲಿ. ಅಡಿಕೆ ವಿಸ್ತರಣೆ ಎಂಬ ಯೋಚನೆಗೊಂದು ನಿಯಂತ್ರಣವೆಂಬ ಕುಂಟೆ ಕಟ್ಟುವ ವ್ಯವಸ್ಥೆಯಾಗಲಿ. ಅಡಿಕೆ ಬೆಳೆ ಸುಲಭ ಬೆಳೆ ಮತ್ತು ವ್ಯವಸ್ಥಿತ ಮಾರುಕಟ್ಟೆಯ ಆಧಾರದಲ್ಲಿ ವಿಸ್ತರಣೆ ಆಗುತ್ತಲೇ ಇದೆ. ಇದು ಭವಿಷ್ಯಕ್ಕೂ ಅಪಾಯ. ಈ ನಡುವೆಯೇ “ಬ್ರಾಂಡ್ ಮಲೆನಾಡು ಅಡಿಕೆ” ಕೂಡಾ ಸಿದ್ಧವಾಗಬೇಕು.
ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿಗೆ ಬಯಲು ಸೀಮೆಯ ಪ್ರದೇಶದಲ್ಲಿ ಅಡಿಕೆ ವಿಸ್ತರಣೆ ಆಗುವುದು ಹೊಟ್ಟೆ ಕಿಚ್ಚಲ್ಲ. ಆದರೆ ಮಲೆನಾಡಿನ ಭಾಗದಲ್ಲಿ ಈ ಅಡಿಕೆ ಕೃಷಿಯೊಂದೇ ಸಕಲ ಲೂಟಿ ಸವಾಲುಗಳ ನಡುವೆ ಆಶಾದಾಯಕ ಬೆಳೆ. ಈ ವಿಸ್ತರಣೆ ನೆಪದಲ್ಲಿ ಅಡಿಕೆ ದರ ಇಪ್ಪತ್ತು ಮೂವತ್ತು ಸಾವಿರಕ್ಕೆ ಕುಸಿದರೆ ಐವತ್ತು ಸಾವಿರ ದರ ಸಿಗುತ್ತದೆ ಎಂಬ ರೇಂಜ್ ಗೆ ಕೂಲಿ ಕಾರ್ಮಿಕರ ಸಂಬಳ ಸಾರಿಗೆ ಸಂಸ್ಕರಣಾ ವೆಚ್ಚ ಎಲ್ಲವೂ ಫಿಕ್ಸ್ ಆಗಿದೆ.ಈಗ ಅಕಸ್ಮಾತ್ತಾಗಿ ಅಡಿಕೆ ದರ ಕುಸಿದರೆ ಮಲೆನಾಡಿನ ಅಡಿಕೆ ಬೆಳೆಗಾರರು ಪರ್ಯಾಯ ಏನು ಬೆಳೆ ಬೆಳೆಯಬೇಕು…?
ನಾವು ಮಲೆನಾಡಿಗರು ಪ್ರತಿ ವರ್ಷ ಆಗಷ್ಟ್ ಸೆಪ್ಟೆಂಬರ್ ತಿಂಗಳಲ್ಲಿ ನಮ್ಮ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ಬಂದು ಹಳದಿಯಾಗುವಾಗ ಅಡಿಕೆಗೆ ಪರ್ಯಾಯ ಏನು ಎಂದು ಚಿಂತನೆ ಮಾಡುತ್ತೇವೆ. ಆದರೆ ಅದು ಕಾರ್ಯ ರೂಪಕ್ಕೆ ಬರುವೊಷ್ಟೊತ್ತಿಗೆ ಅಡಿಕೆ ಕೊಯ್ಲು ಆರಂಭವಾಗಿ ಪರ್ಯಾಯ ಮುಂದಕ್ಕೆ ಹೋಗುತ್ತದೆ . ಈ ನಡುವೆ ಹಳದಿಯಾದ ಎಲೆಚುಕ್ಕಿ ರೋಗ ದ ಲಕ್ಷಣ ಹಸಿರಾಗಿ ಮತ್ತೆ ಪರ್ಯಾಯ ಮೂಲೆಗೆ ಸರಿಯುತ್ತದೆ..
ನಮ್ಮ ಮಲೆನಾಡಿಗರಿಗೆ ಎಲೆಚುಕ್ಕಿ ರೋಗದ ಜೊತೆಯಲ್ಲಿ ಅಡಿಕೆ ವಿಸ್ತರಣೆ ಯೂ ದೊಡ್ಡ ಬಾಧೆ. ಅಡಿಕೆ ಅರವತ್ತು ಸಾವಿರಕ್ಕೆ ಏರಿದರೆ ನಮ್ಮ ತೀರ್ಥಹಳ್ಳಿ ಅಡಿಕೆ ಬೆಳೆಗಾರ ಇನ್ನೊಂದು ಎಕರೆ ಅಡಿಕೆ ತೋಟ ವಿಸ್ತರಣೆ ಆದರೆ ಬಯಲು ಸೀಮೆಯ ಅಡಿಕೆ ಬೆಳೆಗಾರ ಹತ್ತು ಇಪ್ಪತ್ತು ಎಕರೆ ಅಡಿಕೆ ತೋಟ ಮುಲಾಜಿಲ್ಲದೇ ವಿಸ್ತರಣೆ ಮಾಡುತ್ತಾನೆ. ಈ ಅರವತ್ತು ಸಾವಿರ ಬೆಲೆ ಸಣ್ಣ ಪುಟ್ಟ ಬೆಳೆಗಾರರು ಅಥವಾ ಅಡಿಕೆಯನ್ನೇ ನಂಬಿಕೊಂಡ ಅಡಿಕೆ ಬೆಳೆಗಾರರ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಅಡಿಕೆ ದರ ಹಿತ ಮಿತವಾಗಿರಲಿ.., ಅಡಿಕೆ ವಿಸ್ತರಣೆ ಮಾಡದಂತೆ ಜಾಗೃತೆ ಇರಲಿ, ಮಿತಿಯಿಲ್ಲದ ಅಡಿಕೆ ತೋಟದ ವಿಸ್ತರಣೆ ಅಡಿಕೆ ದರ ಕುಸಿತಕ್ಕೆ ಕಾರಣವಾಗುತ್ತದೆ. ಇದಕ್ಕೇನು ಮಾಡಬಹುದು..?
“ಬ್ರಾಂಡ್ ಮಲೆನಾಡು ಅಡಿಕೆ” ಇದು ಆಗಬೇಕಾಗಿದೆ. ಇದು ನನ್ನ ಯಾವತ್ತಿನ ಕೋರಿಕೆ. ದೇಶಾವರಿ ಅಥವಾ ಸಾಂಪ್ರದಾಯಿಕ ಅಡಿಕೆಯ ಮೌಲ್ಯ ಹೆಚ್ಚಿಸುವ ಮೌಲ್ಯ ವರ್ಧನೆಯಾಗಬೇಕು. ಮಲೆನಾಡು ಕರಾವಳಿಯ ಅಡಿಕೆಗೆ ಗುಟ್ಕಾ ನೆಂಟಸ್ಥನ ಬೇಡ. ಒಣ ಕರ್ಜೂರ, ಒಣ ದ್ರಾಕ್ಷಿ, ಡ್ರೈ ಫ್ರೂಟ್ಸ್ ಗಳ ಸಾಲಿನಲ್ಲಿ ನಮ್ಮ ಮಲೆನಾಡಿನ ಅಡಿಕೆಗಳು ಇರಲಿ. ಯುವಕರು ಚಾಕೊಲೇಟ್ ಅಗೆದಂತೆ ಅಡಿಕೆಯನ್ನು ಸುಲಭವಾಗಿ ತಿನ್ನುವಂತಿರಲಿ.ನಮ್ಮೂರಿನ ಭಟ್ಟರೊಬ್ಬರು ಸಿಹಿ ಅಡಿಕೆ ತಯಾರಿಸುತ್ತಿದ್ದರು.
ಒಂದಷ್ಟು ingredients ಸೇರಿಸಿ ಎಲ್ಲರೂ ಇಷ್ಟ ಪಟ್ಟು ತಿನ್ನುವ ಅಡಿಕೆ ಯನ್ನು “ಬಣ್ಣ , ರುಚಿ ಮತ್ತು ಆರೋಗ್ಯ ವೃದ್ದಿ ಗಾಗಿ ತಿನ್ನುವಂತಾಗಲಿ.ಒಂದು ವೇಳೆ ಸಾಂಪ್ರದಾಯಿಕ ಅಡಿಕೆ (ಪ್ರಾದೇಶಿಕತೆ) ಗೆ ಗುಟ್ಕಾ ರಹಿತ ಉದ್ದೇಶ ಕ್ಕಾಗಿ ಬಳಸಿದರೆ ಮಲೆನಾಡು ಕರಾವಳಿಯ ಅಡಿಕೆ ಬಯಲು ಸೀಮೆಯಲ್ಲ , ಆಂದ್ರಾ ತಮಿಳುನಾಡು ಇರಲಿ ಇಡೀ ಪ್ರಪಂಚದಾದ್ಯಂತ ಅಡಿಕೆ ವಿಸ್ತರಣೆ ಆದರೂ ನಮ್ಮ ಊರಿನ ಅಡಿಕೆಗೆ ಮಾರುಕಟ್ಟೆ ಬಿದ್ದು ಹೋಗದು. ಮಲೆನಾಡಿನ ಹೊರಗಿನ ಅಡಿಕೆ ಬೆಳೆಗಾರರು ಗುಟ್ಕಾ ಕ್ಕೆ ಅಡಿಕೆ ಬೆಳೆದು ಕೊಡಬಹುದೇ ಹೊರತು ನೇರವಾಗಿ ಗ್ರಾಹಕರು ತಿನ್ನಲು ಬಳಸುವ ಆರೋಗ್ಯ ಕರ ರುಚಿಯ ಅಡಿಕೆ ಬೆಳೆದು ಕೊಡಲು ಸಾದ್ಯವಿಲ್ಲ. ಬಯಲು ಸೀಮೆಯ ಅಡಿಕೆ ಕೇವಲ Quantity ಗಾಗಿ ಬಳಕೆಯಾಗುತ್ತಿದೆ. ಒಂದು ವೇಳೆ Quality ಪರಿಗಣನೆಯಾಗಿದ್ದರೆ ನಮ್ಮ ತೀರ್ಥಹಳ್ಳಿ ಹಸ ಬೆಟ್ಟೆ, ಸಾಗರ ಹೊಸನಗರ ದ ಚಾಲಿ , ಪುತ್ತೂರು ಚಾಲಿ , ಶಿರಸಿಯ ತಟ್ಟಿ ಬೆಟ್ಟೆ ಮುಂತಾದ ಒಣ ಅಡಿಕೆ ಯನ್ನು ಗ್ರಾಹಕರು ಹುಡುಕಿಕೊಂಡು ಬಂದು ಉತ್ತಮ ಬೆಲೆ ಕೊಟ್ಟು ಖರೀದಿಸುತ್ತಿದ್ದರು. ಆ ನಿಟ್ಟಿನಲ್ಲಿ ಅಡಿಕೆ ಸಂಸ್ಕರಣೆ ಮಾಡಲಿ.
“ಪುತ್ತೂರು ಅಡಿಕೆ” ಬ್ರಾಂಡ್ ಮಾಡಿ ಮಾರಾಟ ಮಾಡಲು ಶುರು ಮಾಡಿದ್ದಾರೆ. ಮೊನ್ನೆ ನಮ್ಮ ಮಲೆನಾಡಿನ ಹೆಮ್ಮೆಯ ಅಡಿಕೆ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾದ ಮಹೇಶ್ ಹುಲ್ಕುಳಿ ಯವರು ನಾವೂ ನಮ್ಮ ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಅಡಿಕೆ ಬ್ರಾಂಡ್ ಗೆ ಪ್ರಯತ್ನ ಮಾಡುತ್ತಿದ್ದೇವೆ ಎಂಬ ಆಶಾದಾಯಕ ಸುದ್ದಿ ಹೇಳಿದರು. ಇದಾಗಲಿ ಎಂದು ಎಲ್ಲ ಮಲೆನಾಡಿನ ಅಡಿಕೆ ಬೆಳೆಗಾರರು ಬಯಸೋಣ. ಮಲೆನಾಡಿನ ಅಡಿಕೆ ಬ್ರಾಂಡ್ ಆಗಿ ಮಾರಾಟ ಆದರೆ ಮಾತ್ರ ನಮ್ಮೂರ ಅಡಿಕೆ ಮತ್ತು ಅಡಿಕೆ ಬೆಳೆಗಾರರಿಗೆ ಭವಿಷ್ಯ. ಅಲ್ಲದಿದ್ದರೆ ನಾವು ಮಲೆನಾಡಿನ ಅಡಿಕೆ ಬೆಳೆಗಾರರು ಬಯಲು ಸೀಮೆಯ ಅಡಿಕೆ ಬೆಳೆಗಾರರ ವಿಸ್ತರಣೆ ಪರ್ವದಲ್ಲಿ ಖಂಡಿತವಾಗಿಯೂ ಕಳೆದು ಹೋಗುತ್ತೇವೆ. ಅಡಿಕೆ ಯ ಘಮಲು ರುಚಿಗೆ ಮಲೆನಾಡಿನ ಮಣ್ಣು ವಾತಾವರಣ ಕಾರಣ… ಅದನ್ನು ಬಯಲು ಸೀಮೆ ಅಥವಾ ಹೊರ ರಾಜ್ಯದ ರೈತರು ಅದೇನೇ ಪ್ರಯತ್ನ ಮಾಡಿದರೂ ಮುಟ್ಟಲು ಸಾದ್ಯವಿಲ್ಲ… ಮಲೆನಾಡಿನ ಅಡಿಕೆ ಮತ್ತೆ ಗುಟ್ಕೋತ್ತರ ಕಾಲದ ವೈಭವವನ್ನು ಕಾಣಲಿ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…