Advertisement
ಪ್ರಮುಖ

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

Share

ಅಡಿಕೆ ಕೃಷಿಯ ಜೈವಿಕ ಅವಶೇಷಗಳನ್ನು ಸುಧಾರಿತ ತಂತ್ರಜ್ಞಾನದ ಮೂಲಕ ಹೆಚ್ಚಿನ ಮೌಲ್ಯದ ವಸ್ತುಗಳಾಗಿ ಪರಿವರ್ತಿಸಬಹುದೇ? ಅಡಿಕೆ ಸಿಪ್ಪೆ ಸೇರಿದಂತೆ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು (Carbon Nanospheres) ಅಭಿವೃದ್ಧಿಪಡಿಸುವ ಸಂಶೋಧನೆ ಈ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ನೀರಿನ ಶುದ್ಧೀಕರಣ, ವಿದ್ಯುತ್ಕಾಂತೀಯ ವ್ಯವಸ್ಥೆ ಮತ್ತು ಹಸಿರು ಹೈಡ್ರೋಜನ್ ತಂತ್ರಜ್ಞಾನ, ಲಿಥಿಯಂ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇವುಗಳನ್ನು ಬಳಸುವ ಸಾಧ್ಯತೆಯನ್ನು ಸಂಶೋಧನಾ ವರದಿ ವಿವರಿಸಿದೆ.

ದಯಾನಂದ ಸಾಗರ ವಿಶ್ವವಿದ್ಯಾಲಯದ ಸೆಂಟರ್ ಫಾರ್ ವೇಸ್ಟ್ ಟು ವೆಲ್ತ್ ಟೆಕ್ನಾಲಜಿ (CWaWe) ನಿರ್ದೇಶಕ ಡಾ. ಗುರುಮೂರ್ತಿ ಹೆಗ್ಡೆ ಅವರ ಸಂಶೋಧನಾ ವರದಿಯಾದ “Arecanut-Derived Carbon Nanospheres for Innovative Applications” ಅಡಿಕೆ ಜೈವಿಕ ಅವಶೇಷಗಳನ್ನು ಸುಧಾರಿತ ಕಾರ್ಬನ್ ವಸ್ತುಗಳಾಗಿ ಪರಿವರ್ತಿಸುವ ಪರಿಕಲ್ಪನೆಯನ್ನು ಮುಂದಿಟ್ಟಿದೆ.

ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಬೆಳೆಗಾರರ ಜೀವನೋಪಾಯಕ್ಕೆ ಈ ಬೆಳೆ ಮಹತ್ವದ ಆಧಾರವಾಗಿದ್ದರೂ, ಕೃಷಿ ಮತ್ತು ಸಂಸ್ಕರಣೆಯ ವೇಳೆ ಅಡಿಕೆ ಸಿಪ್ಪೆ, ಸೋಗೆ, ಅಡಿಕೆಯ ಹಾಳೆ ಸೇರಿದಂತೆ ಅಪಾರ ಪ್ರಮಾಣದ ಜೈವಿಕ ಅವಶೇಷಗಳು ಉತ್ಪತ್ತಿಯಾಗುತ್ತವೆ. ಈ ಅವಶೇಷಗಳನ್ನು ಕೇವಲ ತ್ಯಾಜ್ಯವೆಂದು ಪರಿಗಣಿಸುವ ಬದಲು, ಸುಧಾರಿತ ವಸ್ತುಗಳ ತಯಾರಿಕೆಗೆ ಕಚ್ಚಾ ವಸ್ತುವಾಗಿ ಬಳಸುವ ಸಾಧ್ಯತೆಯನ್ನು ಸಂಶೋಧನೆ ಪರಿಶೀಲಿಸುತ್ತದೆ.

ಅಡಿಕೆ ತ್ಯಾಜ್ಯವೇ ಸುಧಾರಿತ ಕಾರ್ಬನ್ ವಸ್ತುವಿನ ಮೂಲ :  ಅಡಿಕೆ ಜೈವಿಕ ಅವಶೇಷಗಳಲ್ಲಿ ಕಾರ್ಬನ್ ಸಮೃದ್ಧ ಲಿಗ್ನೋಸೆಲ್ಯುಲೋಸಿಕ್ ರಚನೆ ಇರುವುದರಿಂದ, ಅವು ಕಾರ್ಬನ್ ಆಧಾರಿತ ವಸ್ತುಗಳ ತಯಾರಿಕೆಗೆ ಸೂಕ್ತ ಕಚ್ಚಾ ವಸ್ತುವಾಗಬಹುದು. ನಿಯಂತ್ರಿತ ಉಷ್ಣ ಪರಿವರ್ತನೆ ಮತ್ತು ನಂತರದ ವಸ್ತು ಎಂಜಿನಿಯರಿಂಗ್ ಪ್ರಕ್ರಿಯೆಗಳ ಮೂಲಕ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸುವುದು ಈ ಪರಿಕಲ್ಪನೆಯ ಪ್ರಮುಖ ಅಂಶವಾಗಿದೆ.

ಸಂಸ್ಕರಣೆಯ ಪರಿಸ್ಥಿತಿಗಳನ್ನು ಹೊಂದಿಸುವ ಮೂಲಕ ಕಾರ್ಬನ್‌ನ ಮೇಲ್ಮೈ ಗುಣಲಕ್ಷಣ, ರಚನೆ, ಆಕಾರ ಮತ್ತು ರಂಧ್ರಯುಕ್ತತೆಯನ್ನು ನಿಯಂತ್ರಿಸಬಹುದು. ಸೂಕ್ತವಾಗಿ ಅಭಿವೃದ್ಧಿಪಡಿಸಿದ ವಸ್ತುಗಳಲ್ಲಿ ಹೆಚ್ಚಿನ ಮೇಲ್ಮೈ ವಿಸ್ತೀರ್ಣ, ರಾಸಾಯನಿಕ ಮತ್ತು ಉಷ್ಣ ಸ್ಥಿರತೆ, ವಿದ್ಯುತ್ ವಾಹಕತೆ ಹಾಗೂ ಇತರ ವಸ್ತುಗಳೊಂದಿಗೆ ಸಂಯೋಜಿಸುವ ಸಾಮರ್ಥ್ಯ ಇರಬಹುದು ಎಂದು ವರದಿ ವಿವರಿಸುತ್ತದೆ.

ಇದು ಸಾಮಾನ್ಯ ಆಕ್ಟಿವೇಟೆಡ್ ಕಾರ್ಬನ್ ಉತ್ಪಾದನೆಗೆ ಮಾತ್ರ ಸೀಮಿತವಾಗದೆ, ವಿವಿಧ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಬಹುದಾದ ಸುಧಾರಿತ ವಸ್ತುಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸುತ್ತದೆ.

ಎಲೆಕ್ಟ್ರಾನಿಕ್ಸ್‌ನಿಂದ ಹಸಿರು ಹೈಡ್ರೋಜನ್‌ವರೆಗೆ ಬಳಕೆಯ ಸಾಧ್ಯತೆ : 

  • ವಿದ್ಯುತ್ಕಾಂತೀಯ ಹಸ್ತಕ್ಷೇಪ ನಿಯಂತ್ರಣ :ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಎಪಾಕ್ಸಿ ಮತ್ತು ಪಿಡಿಎಂಎಸ್‌ನಂತಹ ಪಾಲಿಮರ್‌ಗಳಲ್ಲಿ ಸೇರಿಸಿ ಹಗುರವಾದ ವಿದ್ಯುತ್ ವಾಹಕ ಸಂಯುಕ್ತ ವಸ್ತುಗಳನ್ನು ತಯಾರಿಸಬಹುದು. ಎಲೆಕ್ಟ್ರಾನಿಕ್ಸ್, ಸಂವಹನ ವ್ಯವಸ್ಥೆಗಳು, ಏರೋಸ್ಪೇಸ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ ವಿದ್ಯುತ್ಕಾಂತೀಯ ಹಸ್ತಕ್ಷೇಪವನ್ನು ನಿಯಂತ್ರಿಸಲು ಇವು ಉಪಯುಕ್ತವಾಗುವ ಸಾಧ್ಯತೆಯಿದೆ.
  • ಶಕ್ತಿ ಸಂಗ್ರಹಣೆ: ರಂಧ್ರಯುಕ್ತ ರಚನೆ ಮತ್ತು ವಿದ್ಯುತ್ ವಾಹಕ ಗುಣಗಳಿಂದಾಗಿ ಸೂಪರ್‌ಕ್ಯಾಪಾಸಿಟರ್‌ಗಳು, ಬ್ಯಾಟರಿ ಎಲೆಕ್ಟ್ರೋಡ್‌ಗಳು ಹಾಗೂ ಇತರ ಎಲೆಕ್ಟ್ರೋಕೆಮಿಕಲ್ ಶಕ್ತಿ ಸಂಗ್ರಹಣಾ ವ್ಯವಸ್ಥೆಗಳಲ್ಲಿ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಬಳಸುವ ಸಾಧ್ಯತೆಯಿದೆ.
  • ವೇಗವರ್ಧಕಗಳು ಮತ್ತು ಹಸಿರು ಹೈಡ್ರೋಜನ್: ಹೈಡ್ರೋಜನ್ ಉತ್ಪಾದನೆಗೆ ಸಂಬಂಧಿಸಿದ ಹೈಡ್ರೋಜನ್ ಎವಲ್ಯೂಷನ್ ರಿಯಾಕ್ಷನ್ (HER), ಆಕ್ಸಿಜನ್ ಎವಲ್ಯೂಷನ್ ರಿಯಾಕ್ಷನ್ (OER), ನೀರಿನ ವಿಭಜನೆ ಮತ್ತು ಮಾಲಿನ್ಯಕಾರಕಗಳ ವಿಘಟನೆಯಂತಹ ಪ್ರಕ್ರಿಯೆಗಳಲ್ಲಿ ಈ ಕಾರ್ಬನ್ ವಸ್ತುಗಳ ಬಳಕೆಯನ್ನು ಪರಿಶೀಲಿಸಬಹುದು.
  • ನೀರಿನ ಶುದ್ಧೀಕರಣ: ಬಣ್ಣಗಳು, ಸಾವಯವ ಮಾಲಿನ್ಯಕಾರಕಗಳು, ಭಾರೀ ಲೋಹಗಳ ಅಯಾನುಗಳು ಹಾಗೂ ಔಷಧೀಯ ಅವಶೇಷಗಳನ್ನು ನೀರಿನಿಂದ ತೆಗೆದುಹಾಕುವ ಪ್ರಕ್ರಿಯೆಗಳಲ್ಲಿ ರಂಧ್ರಯುಕ್ತ ಕಾರ್ಬನ್ ವಸ್ತುಗಳನ್ನು ಬಳಸುವ ಸಾಧ್ಯತೆಯಿದೆ. ಗ್ರಾಮೀಣ ಮತ್ತು ಕೈಗಾರಿಕಾ ನೀರು ಸಂಸ್ಕರಣೆಗೆ ಇದು ಪರ್ಯಾಯ ತಂತ್ರಜ್ಞಾನವಾಗುವ ಅವಕಾಶವನ್ನೂ ವರದಿ ಗುರುತಿಸಿದೆ.

ಸದ್ಯ ಈ ಬಳಕೆಗಳ ಸಾಧ್ಯತೆಯನ್ನು ವಾಣಿಜ್ಯ ಮಟ್ಟದಲ್ಲಿ ಸಾಬೀತಾದ ತಂತ್ರಜ್ಞಾನವೆಂದು ಪರಿಗಣಿಸುವಂತಿಲ್ಲ. ಅವಕಾಶಗಳು ಇವೆ. ವಾಣಿಜ್ಯ ಬಳಕೆಗೆ ಅವಕಾಶ, ಸಾಧ್ಯತೆ ಎರಡೂ ಇದೆ. ನಿರ್ದಿಷ್ಟ ಬಳಕೆಗೆ ಅನುಗುಣವಾಗಿ ವಸ್ತುವಿನ ಕಾರ್ಯಕ್ಷಮತೆ, ಉತ್ಪಾದನಾ ವೆಚ್ಚ ಮತ್ತು ದೊಡ್ಡ ಪ್ರಮಾಣದ ಉತ್ಪಾದನೆಯ ಸಾಧ್ಯತೆಯನ್ನು ಮೌಲ್ಯಮಾಪನ ಮಾಡಬೇಕಿದೆ.

ಅಡಿಕೆ ಬೆಳೆಗಾರರಿಗೆ ಪೂರಕ ಆದಾಯದ ಅವಕಾಶ : ಈ ಸಂಶೋಧನೆಯ ಪ್ರಮುಖ ಸಾಧ್ಯತೆ ಅಡಿಕೆ ಬೆಳೆಗಾರರಿಗೂ ಸಂಬಂಧಿಸಿದೆ. ಕೃಷಿ ಅವಶೇಷಗಳಿಂದ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಉತ್ಪಾದಿಸುವ ವ್ಯವಸ್ಥೆ ಅಭಿವೃದ್ಧಿಯಾದರೆ, ರೈತರು ಕೇವಲ ಅಡಿಕೆ ಉತ್ಪಾದಕರಾಗಿ ಉಳಿಯದೆ, ಹೊಸ ಜೈವಿಕ ಆರ್ಥಿಕತೆಯ ಮೌಲ್ಯ ಸರಪಳಿಯ ಭಾಗವಾಗಬಹುದು.

ಅಡಿಕೆ ಅವಶೇಷಗಳ ಸಂಗ್ರಹಣೆ, ವಿಂಗಡಣೆ, ಒಣಗಿಸುವಿಕೆ ಮತ್ತು ಪೂರ್ವಸಂಸ್ಕರಣೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಅಡಿಕೆ ಬೆಳೆಯುವ ಪ್ರದೇಶಗಳಲ್ಲಿಯೇ ಸ್ಥಳೀಯ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಿದರೆ ಸಾಗಣೆ ವೆಚ್ಚವನ್ನು ಕಡಿಮೆ ಮಾಡುವ ಅವಕಾಶವೂ ಇರಬಹುದು.

ಈ ಪರಿಕಲ್ಪನೆಯಡಿ ರೈತರಿಂದ ಸಂಗ್ರಹಿಸಲಾದ ಜೈವಿಕ ಅವಶೇಷಗಳು ಸಂಸ್ಕರಣಾ ಕೇಂದ್ರಗಳನ್ನು ತಲುಪಿ, ಅಲ್ಲಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳಾಗಿ ಪರಿವರ್ತನೆಯಾಗಿ, ಅಂತಿಮವಾಗಿ ಕೈಗಾರಿಕಾ ಉತ್ಪನ್ನಗಳ ತಯಾರಿಕೆಗೆ ಬಳಕೆಯಾಗಬಹುದು.

ಜೈವಿಕ ಆರ್ಥಿಕತೆಗೆ ಹೊಸ ದಾರಿ : ಅಡಿಕೆ ತ್ಯಾಜ್ಯಗಳ ಮೌಲ್ಯವರ್ಧನೆಯ ಜೈವಿಕ ಆರ್ಥಿಕತೆ (Circular Bioeconomy) ಪರಿಕಲ್ಪನೆಗೆ ಹೊಂದಿಕೊಳ್ಳುತ್ತದೆ. ನವೀಕರಿಸಬಹುದಾದ ಜೈವಿಕ ಸಂಪನ್ಮೂಲಗಳನ್ನು ಮರುಬಳಕೆ ಮಾಡುವ ಮೂಲಕ ತ್ಯಾಜ್ಯವನ್ನು ಕಡಿಮೆ ಮಾಡುವುದು, ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ಸಂಶೋಧನೆಯ ಪರಿಕಲ್ಪನೆಯು ಶುದ್ಧ ನೀರು, ಕೈಗೆಟುಕುವ ಶುದ್ಧ ಇಂಧನ, ಉದ್ಯೋಗ ಸೃಷ್ಟಿ, ಕೈಗಾರಿಕಾ ನಾವೀನ್ಯತೆ, ಜವಾಬ್ದಾರಿಯುತ ಉತ್ಪಾದನೆ ಮತ್ತು ಹವಾಮಾನ ಕ್ರಮಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳಿಗೂ ಪೂರಕವಾಗುವ ಸಾಧ್ಯತೆಯಿದೆ.

ಪ್ರಯೋಗಾಲಯದಿಂದ ಕೈಗಾರಿಕೆಗೆ ಸಾಗಬೇಕಿದೆ :  ಅಡಿಕೆ ಜೈವಿಕ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸುವ ಪರಿಕಲ್ಪನೆಯನ್ನು ವಾಣಿಜ್ಯ ಮಟ್ಟಕ್ಕೆ ಕೊಂಡೊಯ್ಯಲು ಇನ್ನಷ್ಟು ಸಂಶೋಧನೆ ಮತ್ತು ತಂತ್ರಜ್ಞಾನ ಮೌಲ್ಯಮಾಪನ ಅಗತ್ಯವಿದೆ. ದೊಡ್ಡ ಪ್ರಮಾಣದ ಉತ್ಪಾದನೆ, ಉತ್ಪಾದನಾ ವೆಚ್ಚ, ಪರಿಸರದ ಮೇಲಿನ ಒಟ್ಟಾರೆ ಪರಿಣಾಮ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಪರಿಶೀಲಿಸಬೇಕಿದೆ.

ಒಟ್ಟಿನಲ್ಲಿ, ಅಡಿಕೆ ಕೃಷಿಯ ಜೈವಿಕ ಅವಶೇಷಗಳನ್ನು ಸುಧಾರಿತ ಕಾರ್ಬನ್ ವಸ್ತುಗಳಾಗಿ ಪರಿವರ್ತಿಸುವ ಸಂಶೋಧನೆಯು ಕೃಷಿ ತ್ಯಾಜ್ಯ ನಿರ್ವಹಣೆ ಮತ್ತು ನ್ಯಾನೋತಂತ್ರಜ್ಞಾನದ ನಡುವೆ ಹೊಸ ಸಂಪರ್ಕವನ್ನು ರೂಪಿಸುವ ಸಾಧ್ಯತೆಯನ್ನು ತೋರಿಸುತ್ತದೆ. ಈ ತಂತ್ರಜ್ಞಾನ ಯಶಸ್ವಿಯಾಗಿ ವಾಣಿಜ್ಯೀಕರಣಗೊಂಡರೆ, ಅಡಿಕೆ ಬೆಳೆಗಾರರಿಗೆ ಪೂರಕ ಆದಾಯದ ಅವಕಾಶಗಳ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಕೈಗಾರಿಕಾ ಚಟುವಟಿಕೆಗಳಿಗೂ ದಾರಿ ತೆರೆಯಬಹುದು.

A research report titled “Arecanut-Derived Carbon Nanospheres for Innovative Applications” by Dr. Gurumurthy Hegde, Director of the Centre for Waste to Wealth Technology (CWaWe), Dayananda Sagar University, Bengaluru, explores the potential of converting arecanut biomass residues into advanced carbon materials. These carbon nanospheres could have applications in electromagnetic interference shielding, energy storage, catalysis, green hydrogen technologies and water purification. The concept also offers potential opportunities for rural employment and value addition to agricultural residues. However, further research, techno-economic assessment and scale-up are required before these applications can be considered commercially established.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

2 hours ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

2 hours ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

3 hours ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago