ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

August 14, 2026
7:14 AM
ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ ಪರ್ಯಾಯ ಮಾರುಕಟ್ಟೆ, ಬೆಲೆ ಸ್ಥಿರೀಕರಣ, ರಫ್ತು ಮತ್ತು ಸಂಶೋಧನೆಗೆ ಆದ್ಯತೆ ನೀಡಬೇಕು. ನಿಷೇಧದ ವಿರುದ್ಧದ ಹೋರಾಟಕ್ಕಿಂತ ಅಡಿಕೆ ಬೆಳೆಗಾರನ ಭವಿಷ್ಯವನ್ನು ಸುರಕ್ಷಿತಗೊಳಿಸುವ ಸಮಗ್ರ ನೀತಿಯ ಬೇಡಿಕೆ ಈಗ ಮುಖ್ಯವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಹಂತ ಹಂತವಾಗಿ ತನ್ನ ಯೋಜನೆಗಳನ್ನು ಜಾರಿ ಮಾಡುತ್ತಿದೆ. ನಾವು ಅಂದರೆ ಅಡಿಕೆ ಬೆಳೆಗಾರರು ಇಂದಿಗೂ “ಅದೆಲ್ಲಾ ಸುಳ್ಳು” ಎಂದು ವ್ಯಾಟ್ಸಪ್‌ನಲ್ಲಿ ಚರ್ಚೆ ಮಾಡಿ, ಯಾರು ಮಾತನಾಡುತ್ತಾರೆ ಅವರನ್ನೇ ಕುಗ್ಗಿಸುತ್ತೇವೆ. ಮತ್ತೂ ಮಾತನಾಡಿದರೆ, ” ಅವನಿಗೆ ವಿರೋಧ ಮಾಡುವುದೇ ಕೆಲಸ” ಎಂದೂ ಹೇಳುತ್ತೇವೆ. ಈಗ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಈಗ ಗುಟ್ಕಾ ಮತ್ತು ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನ ರಾಜ್ಯದಲ್ಲೂ ನಿಷೇಧವಾಗುತ್ತಿದೆ. ಇದೂ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಕಾರ್ಯಯೋಜನೆ.

ಕರ್ನಾಟಕ ಸರ್ಕಾರ ಗುಟ್ಕಾ ಮತ್ತು ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಾಟ, ವಿತರಣೆ ಮತ್ತು ಮಾರಾಟದ ಮೇಲೆ ಒಂದು ವರ್ಷದ ನಿಷೇಧ ಜಾರಿಗೊಳಿಸಿದೆ. ಆಗಸ್ಟ್‌ 10 ರಿಂದ ಈ ಆದೇಶ ಜಾರಿಗೆ ಬಂದಿದೆ. ಸಾರ್ವಜನಿಕ ಆರೋಗ್ಯದ ಕಾಳಜಿಯ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಇದು. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಅಡಿಕೆ ಬೆಳೆಗಾರರ ಜೊತೆ ಹೋಲಿಸುವ ಅಗತ್ಯವಿಲ್ಲ. ಒಂದು ಕಡೆ ಆರೋಗ್ಯ ನೀತಿ ರೂಪಿಸುವ ಸರ್ಕಾರವೇ ಮತ್ತೊಂದು ಕಡೆ ಆ ನೀತಿಯ ಪರಿಣಾಮ ಎದುರಿಸಬೇಕಾದ ಕೃಷಿಕರ ಭದ್ರತೆಯ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಇದೇ ಈಗ ಅಡಿಕೆ ಬೆಳೆಗಾರರ ಮುಂದಿರುವ ಮೂಲ ಪ್ರಶ್ನೆ. ಗುಟ್ಕಾ–ಪಾನ್‌ಮಸಾಲಾ ನಿಷೇಧವಾಗುತ್ತದೆಯೇ ಎಂಬುದು ಪ್ರಶ್ನೆಯಲ್ಲ. ನಿಷೇಧದ ನಂತರ ಅಡಿಕೆ ಮಾರುಕಟ್ಟೆಗೆ ಏನಾಗುತ್ತದೆ ಎಂಬುದೇ ಪ್ರಶ್ನೆ. ಅಡಿಕೆ ನಿಷೇಧದ ಬಗ್ಗೆ ಯಾವ ಕೃಷಿಕರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಸರ್ಕಾರಗಳೇ ಅಡಿಕೆ ಹಾನಿಕಾರಕ ಅಲ್ಲ ಎನ್ನುವ ಅಧ್ಯಯನ ವರದಿಯನ್ನು ಅಧಿವೇಶನದಲ್ಲಿಯೇ ನೀಡಿದೆ. ಇನ್ನಷ್ಟು ಅಧ್ಯಯನ ನಡೆಯುತ್ತಿರುವ ಬಗ್ಗೆಯೂ ಸರ್ಕಾರವೇ ಹೇಳಿದೆ, ಅನುದಾನ ಕೂಡಾ ನೀಡಿದೆ. ಈಗ ಅಡಿಕೆ ಮಾರುಕಟ್ಟೆಯ ಬಗ್ಗೆ , ಭವಿಷ್ಯದ ಬಗ್ಗೆ ಮಾತ್ರಾ ಇರುವ ಆತಂಕ ನಿವಾರಣೆಯಾಗಬೇಕಿದೆ.

ಅಡಿಕೆ ಬೆಳೆಗಾರರ ಹಕ್ಕಿನ ಬಗ್ಗೆ ಮಾತನಾಡುವುದು ಎಂದರೆ ಗುಟ್ಕಾ ಅಥವಾ ಪಾನ್‌ಮಸಾಲಾವನ್ನು ಬೆಂಬಲಿಸುವುದಲ್ಲ. ಸಾರ್ವಜನಿಕ ಆರೋಗ್ಯದ ನೀತಿಗೆ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ.  ಆದರೆ ಆ ನೀತಿಯ ಪರಿಣಾಮದಿಂದ ಉಂಟಾಗುವ ಆರ್ಥಿಕ ಅಪಾಯವನ್ನು ಎದುರಿಸಲು ರೈತನಿಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದು ಮಾತ್ರ ಪ್ರಶ್ನಾರ್ಹ. ಇಂದು ಭಾರತದಲ್ಲಿ ಅಡಿಕೆ ಉತ್ಪಾದನೆ ಸುಮಾರು 14 ಲಕ್ಷ ಟನ್‌ನಿಂದ 15.29 ಲಕ್ಷ ಟನ್‌ವರೆಗೆ ಏರಿದೆ. ಬೆಳೆ ಪ್ರದೇಶ 9.49 ಲಕ್ಷ ಹೆಕ್ಟೇರ್‌ನಿಂದ 11.06 ಲಕ್ಷ ಹೆಕ್ಟೇರ್‌ವರೆಗೆ ವಿಸ್ತರಿಸಿದೆ. ಸುಮಾರು 60 ಲಕ್ಷ ಜನರು ಈ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ದೇಶೀಯ ಮಾರುಕಟ್ಟೆಯ ಅಂದಾಜು ಮೌಲ್ಯ  ₹58,664 ಕೋಟಿ. ಸಾಕಷ್ಟು ತೆರಿಗೆಯೂ ಈ ಕ್ಷೇತ್ರದಲ್ಲಿ ಉತ್ಪಾದನೆಯಾಗುತ್ತಿದೆ. ಇಂತಹ ಕ್ಷೇತ್ರದ ಭವಿಷ್ಯವನ್ನು ಒಂದು ಮಾರುಕಟ್ಟೆ ನೀತಿಯ ಬದಲಾವಣೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ.

ಭಾರತದ ಅಡಿಕೆ ಕ್ಷೇತ್ರ ಇಂದು ಒಂದು ದೊಡ್ಡ ಕೃಷಿ–ವಾಣಿಜ್ಯ ವ್ಯವಸ್ಥೆಯಾಗಿದೆ. ರೈತ, ಕೃಷಿ ಕಾರ್ಮಿಕ, ವ್ಯಾಪಾರಿ, ಸಹಕಾರಿ ಸಂಸ್ಥೆ, ಸಾಗಾಟಗಾರ, ಸಂಸ್ಕರಣಾ ಘಟಕ ಮತ್ತು ಅಂತಿಮ ಮಾರುಕಟ್ಟೆ .. ಹೀಗೇ ಎಲ್ಲವೂ ಸೇರಿಕೊಂಡಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 11.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 14 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿದೆ. ಅದರಲ್ಲಿ ಕರ್ನಾಟಕದ ಪಾಲು 6.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10 ಲಕ್ಷ ಟನ್. ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಎಷ್ಟು ಮಹತ್ವದ್ದು ಎನ್ನುವುದನ್ನು ಈ ಅಂಕಿ ತೋರಿಸುತ್ತದೆ. ಇದೇ ಅವಧಿಯಲ್ಲಿ ಅಡಿಕೆಯ ಅಂದಾಜು ದೇಶೀಯ ಮಾರುಕಟ್ಟೆ ಮೌಲ್ಯ ₹58,664 ಕೋಟಿ ಎಂದು ನೀಡಲಾಗಿದೆ. ಅಡಿಕೆ ಕ್ಷೇತ್ರದ ಮೇಲೆ ನೇರ ಅಥವಾ ಪರೋಕ್ಷವಾಗಿ ಅವಲಂಬಿತರಾಗಿರುವವರ ಸಂಖ್ಯೆ ಸುಮಾರು 60 ಲಕ್ಷ ಎಂದು ಅಂದಾಜಿಸಲಾಗಿದೆ.

2025–26 ರ ಅಂದಾಜಿನ ಪ್ರಕಾರ ಅಡಿಕೆ ಬೆಳೆ ಪ್ರದೇಶ ದೇಶದಲ್ಲಿ 11.06 ಲಕ್ಷ ಹೆಕ್ಟೇರ್ ಮತ್ತು ಉತ್ಪಾದನೆ 14 ಲಕ್ಷ ಟನ್ ತಲುಪಿದೆ. ಅಂದರೆ ಅಡಿಕೆ ಕ್ಷೇತ್ರವು ಸಣ್ಣದಾಗುತ್ತಿಲ್ಲ, ಅದು ಇನ್ನಷ್ಟು ವಿಸ್ತರಿಸುತ್ತಿದೆ ಎನ್ನುವುದರ ಸಾಕ್ಷಿ ಇದು. ಇದಲ್ಲದೆ ಇನ್ನಷ್ಟು ವಿಸ್ತರಣೆಯಾಗಿರುವ ಸಾಧ್ಯತೆಯೇ ಹೆಚ್ಚಿದೆ.  ಹೀಗಿರುವಾಗ ಅಡಿಕೆಯ ಬಳಕೆ ಕ್ಷೇತ್ರವೊಂದರಲ್ಲಿ ನೀತಿ ಬದಲಾವಣೆಯಾದಾಗ ಅದರ ಪರಿಣಾಮವನ್ನು ಕೇವಲ ಒಂದು ಉದ್ಯಮದ ಸಮಸ್ಯೆ ಎಂದು ನೋಡುವುದು ಸಾಧ್ಯವಿಲ್ಲ. ಅದು ಕೃಷಿ ಮಾರುಕಟ್ಟೆಯ ಪ್ರಶ್ನೆಯೂ ಹೌದು, ಕೃಷಿಕನ ಆತಂಕವೂ ಹೌದು.

ಕರ್ನಾಟಕದಲ್ಲಿ ಗುಟ್ಕಾ ಮತ್ತು ತಂಬಾಕು–ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನಗಳ ಮೇಲೆ ಇದೇ ರೀತಿಯ ನಿಷೇಧ 2013ರಲ್ಲೂ ಜಾರಿಯಾಗಿತ್ತು. ಆಗ ನಿಷೇಧದ ನಂತರ ಅಡಿಕೆ ಮಾರುಕಟ್ಟೆಯಲ್ಲಿ ತಕ್ಷಣವೇ ಆತಂಕ ಉಂಟಾಗಿತ್ತು. 2013 ರ ಜೂನ್‌ 1 ರ ವರದಿಯ ಪ್ರಕಾರ, ಕೆಂಪಡಿಕೆ ಮಾರುಕಟ್ಟೆ ಇಳಿದಿತ್ತು. ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳು ನಿಷೇಧದ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಂಘಟನೆಗಳು ಮತ್ತು ಕ್ಯಾಂಪ್ಕೊ ಕೂಡ ಸರ್ಕಾರದ ಮಧ್ಯಪ್ರವೇಶದ ಅಗತ್ಯವನ್ನು ಒತ್ತಿಹೇಳಿತ್ತು. ಆಗ ಮಾರುಕಟ್ಟೆ ಪರಿಸ್ಥಿತಿ ಸಂಪೂರ್ಣ ಕುಸಿತಕ್ಕೆ ತಿರುಗಲಿಲ್ಲ. ಅಂದಿನ ಸರ್ಕಾರವೂ ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿ, ಬೆಲೆ ಕುಸಿದರೆ ತುರ್ತು ಆರ್ಥಿಕ ನೆರವು ನೀಡುವ ಭರವಸೆ ನೀಡಿತ್ತು. ಪರ್ಯಾಯ ಬೆಳೆ ಮತ್ತು ಅಂತರಬೆಳೆಗಳಿಗೂ ಉತ್ತೇಜನ ನೀಡುವ ಬಗ್ಗೆ ಸರ್ಕಾರ ಹೇಳಿತ್ತು.

ಈ ಬಾರಿ ಕೂಡ ಅದೇ ರೀತಿಯ ಪರಿಣಾಮ ಉಂಟಾಗುತ್ತದೆಯೇ ಎಂಬುದನ್ನು ಈಗಲೇ  ಹೇಳಲು ಸಾಧ್ಯವಿಲ್ಲ. ಆದರೆ ನಿಷೇಧದ ನಂತರ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತದ ಆತಂಕ ಈಗಾಗಲೇ ವ್ಯಕ್ತವಾಗಿದೆ. ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರು ನಿಷೇಧದ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ. ವಾಸ್ತವದಲ್ಲಿ ಏನಾಗಿದೆ, ಏನಾಗುತ್ತಿದೆ ಎಂಬುದಕ್ಕೆ ಅಧ್ಯಯನ ಬೇಕಾಗಿದೆ. ಈಗ ಅಡಿಕೆ ಬೆಳೆಗಾರರಿಗೆ ಬೇಕಾಗಿರುವುದು ಆತಂಕವಲ್ಲ. ಮಾರುಕಟ್ಟೆಯ ನಿಜವಾದ ಡಾಟಾಗಳು. ಅಡಿಕೆಯ ಬೇಡಿಕೆ ಎಲ್ಲಿ, ಯಾವುದಕ್ಕೆ ಎಷ್ಟಿದೆ ಎಂಬುದು. ಇದಿಷ್ಟೇ ಈಗ ಅಡಿಕೆ ಮಾರುಕಟ್ಟೆಯ ಭವಿಷ್ಯ ಮತ್ತು ದಿಕ್ಕನ್ನು ಭದ್ರವಾಗಿಸುತ್ತದೆ.
ಇಂದು ಅಡಿಕೆಯ ಎಲ್ಲಾ ಬಳಕೆಯೂ ಗುಟ್ಕಾ ಅಥವಾ ಪಾನ್‌ಮಸಾಲಾಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವುದು ಸರಿಯಾದ ವಿಶ್ಲೇಷಣೆಯಾಗುವುದಿಲ್ಲ.
ಅಡಿಕೆಗೆ ವಿವಿಧ ಬಳಕೆ ಮತ್ತು ಮಾರುಕಟ್ಟೆಗಳಿವೆ. ಆದರೆ ಪಾನ್‌ಮಸಾಲಾ ಮತ್ತು ಜಗಿಯುವ ಉತ್ಪನ್ನಗಳ ಉದ್ಯಮವು ಅಡಿಕೆಯ ದೊಡ್ಡ ವಾಣಿಜ್ಯ ಬಳಕೆ ಕ್ಷೇತ್ರಗಳಲ್ಲಿ ಒಂದಾಗಿರುವುದರಿಂದ, ಆ ಕ್ಷೇತ್ರದ ಮೇಲೆ ಸರ್ಕಾರದ ನಿರ್ಬಂಧವು ಬೇಡಿಕೆ ಮತ್ತು ಮಾರುಕಟ್ಟೆ  ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು. ಹೀಗಾಗಿ ಅಡಿಕೆ ಬೆಳೆಗಾರರು “ನಿಷೇಧದಿಂದ ಅಡಿಕೆಯ ಸಂಪೂರ್ಣ ಮಾರುಕಟ್ಟೆ ಮುಗಿಯುತ್ತದೆ” ಎಂಬ ಭೀತಿಯನ್ನೂ ನಂಬಬಾರದು.  ಹಾಗೆಂದು “ಯಾವುದೇ ಪರಿಣಾಮ ಆಗುವುದಿಲ್ಲ” ಎಂಬ ಅತಿಯಾದ ವಿಶ್ವಾಸವೂ ಸರಿಯಲ್ಲ. ಭವಿಷ್ಯದ ಮಾರುಕಟ್ಟೆಯ ಮೇಲೆ ಗಮನ ಅಗತ್ಯ ಇದೆ.
ಈಗ ಅಡಿಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಉತ್ಪಾದನೆಯ ಅಂಕಿ ಅಂಶಗಳು ಸರಿಯಾದ ರೀತಿಯಲ್ಲಿ ಲಭ್ಯವಾಗಬೇಕಿದೆ. ಕೃಷಿಕರು ಮಾಡಬೇಕಾದ ಮೊದಲ ಕೆಲಸ ಇದು. ನಿಷೇಧದ ನಂತರ ಪ್ರತಿಯೊಂದು ಪ್ರಮುಖ ಅಡಿಕೆ ಮಾರುಕಟ್ಟೆಯಲ್ಲಿ ಕೆಲವು ಮಾಹಿತಿಗಳನ್ನು ನಿರಂತರವಾಗಿ ದಾಖಲಿಸಬೇಕು. ಮಾರುಕಟ್ಟೆಗೆ ಎಷ್ಟು ಅಡಿಕೆ ಬರುತ್ತಿದೆ? ಖರೀದಿ ಎಷ್ಟು ನಡೆಯುತ್ತಿದೆ? ಯಾವ ಗುಣಮಟ್ಟದ ಅಡಿಕೆಗೆ ಬೇಡಿಕೆ ಕಡಿಮೆಯಾಗಿದೆ?  ಬೆಲೆ ಎಷ್ಟು ಬದಲಾಗಿದೆ?  ವ್ಯಾಪಾರಿಗಳ ದಾಸ್ತಾನು ಹೇಗಿದೆ? ಸಂಸ್ಕರಣಾ ಘಟಕಗಳ ಖರೀದಿ ಹೇಗಿದೆ? ರೈತರಿಂದ ನೇರ ಖರೀದಿ ಎಷ್ಟು ಕಡಿಮೆಯಾಗಿದೆ? ಈ ಮಾಹಿತಿಯಿಲ್ಲದೆ “ನಿಷೇಧದಿಂದ ಅಡಿಕೆ ಬೆಲೆ ಕುಸಿಯಿತು” ಅಥವಾ “ಯಾವುದೇ ಪರಿಣಾಮ ಆಗಿಲ್ಲ” ಎಂದು ಹೇಳುವುದು ಎರಡೂ ಅಪೂರ್ಣವಾಗುತ್ತದೆ. ಹಾಗಂತ ಅನಗತ್ಯವಾಗಿ “ಅಡಿಕೆ ಧಾರಣೆ ಏರಿಕೆಯ” ಸುಳ್ಳು ಸುದ್ದಿ ಇನ್ನಷ್ಟು ಅಪಾಯಕರವಾಗಿದೆ.
ಈಗ ಅಡಿಕೆಯನ್ನು ತಿಂದು ಉಗುಳುವುದಕ್ಕೆ ಮಾತ್ರವೇ ಬಳಕೆ ಮಾಡುತ್ತಿರುವ ಬಗ್ಗೆ ಸುದ್ದಿಗಳಷ್ಟೇ ಇವೆ.  ಈಗಿನ ಸಂದರ್ಭದಲ್ಲಿ ರೈತನಿಗೆ ಪರ್ಯಾಯ ಮಾರುಕಟ್ಟೆ ಎಲ್ಲಿದೆ? ಎನ್ನುವುದನ್ನು ಹುಡುಕಬೇಕಿದೆ. 2023–24ರಲ್ಲಿ ಭಾರತ ಸುಮಾರು 10,637 ಟನ್ ಅಡಿಕೆಯನ್ನು ₹400 ಕೋಟಿ ಮೌಲ್ಯದಲ್ಲಿ ರಫ್ತು ಮಾಡಿದೆ. ದೇಶದ ಒಟ್ಟು ಉತ್ಪಾದನೆಗೆ ಹೋಲಿಸಿದರೆ ರಫ್ತು ಪ್ರಮಾಣ  ಸಣ್ಣದು. ಇಲ್ಲಿಯೇ ಭಾರತದ ಅಡಿಕೆ ಕ್ಷೇತ್ರದ ಅವಕಾಶವೂ ಇದೆ. ಮುಂದಿನ ದಿನಗಳಲ್ಲಿ ಅಡಿಕೆಯ ಮಾರುಕಟ್ಟೆ ಒಂದು ನಿರ್ದಿಷ್ಟ ದೇಶೀಯ ಬಳಕೆಯ ಮೇಲೆ ಹೆಚ್ಚು ಅವಲಂಬಿತವಾಗಿರಬಾರದು. ರಫ್ತು ಮಾರುಕಟ್ಟೆ, ಗುಣಮಟ್ಟದ ಗ್ರೇಡಿಂಗ್, ಪ್ಯಾಕೇಜಿಂಗ್ ಮತ್ತು ಮೌಲ್ಯವರ್ಧಿತ ಉತ್ಪನ್ನಗಳತ್ತ ಸಾಗುವುದು ಅನಿವಾರ್ಯ. ಇದು ಒಂದು ವರ್ಷದ ನಿಷೇಧಕ್ಕೆ ಪ್ರತಿಕ್ರಿಯೆಯಾಗಿ ಮಾಡಬೇಕಾದ ತಾತ್ಕಾಲಿಕ ಕೆಲಸವಲ್ಲ. ಮುಂದಿನ 10–20 ವರ್ಷಗಳ ಅಡಿಕೆ ಕೃಷಿಯನ್ನು ಉಳಿಸಿಕೊಳ್ಳಲು ಮಾಡಬೇಕಾದ ದೀರ್ಘಾವಧಿಯ ಕೆಲಸ.
ಕೆಲವು ಸಮಯದ ಹಿಂದೆ ಅಡಿಕೆ ಬೆಳೆಗಾರರ ಸಂಘ ಹಾಗೂ ಇತರ ಸಂಘಟನೆಗಳು ಜೊತೆಯಾಗಿ ಪುತ್ತೂರಿನಲ್ಲಿಅಡಿಕೆ ಪರ್ಯಾಯ ಬಳಕೆಯ ಬಗ್ಗೆಯೇ ಒಂದು ಗೋಷ್ಟಿ ಆಯೋಜನೆ ಮಾಡಿತ್ತು. ಸುಮಾರು 15 ಕ್ಕೂ ಹೆಚ್ಚು ಅಡಿಕೆ ಉತ್ಪನ್ನಗಳು ತಯಾರಾಗಿದ್ದು ಬೆಳಕಿಗೆ ಬಂದಿದೆ. ಇಂತಹ ಉತ್ಪನ್ನಗಳ ತಯಾರಿಕೆಗೆ ಇನ್ನು ಮುಂದೆ ಆದ್ಯತೆ ಹೆಚ್ಚಾಗಬೇಕಿದೆ. ಅಡಿಕೆಯಲ್ಲಿರುವ ಅರೆಕೋಲಿನ್‌ “ಮರೆವು ಕಾಯಿಲೆಗೆ” ಅತ್ಯಂತ ಉಪಯುಕ್ತವಾದ ಔಷಧಿ. ಅಮೇರಿಕಾದಂತಹ ದೇಶದಲ್ಲಿ ಈ ಔಷಧಿಗೆ ಬೇಡಿಕೆ ಇದೆ. ಹೀಗಾಗಿ ಅಡಿಕೆಯಿಂದ ಅರೆಕೋಲಿನ್‌ ತೆಗೆಯುವ ಬಗ್ಗೆ ಮುಂದೆ ಹೆಚ್ಚು ಅಧ್ಯಯನ ನಡೆಯಬೇಕಿದೆ.
ಅಡಿಕೆ ಬೆಳೆಗಾರನ ದೊಡ್ಡ ಅಪಾಯ ಎಂದರೆ ಕೇವಲ ಬೆಲೆ ಕಡಿಮೆಯಾಗುವುದು ಅಲ್ಲ. ಬೆಲೆ ಕುಸಿಯುವ ಸಮಯದಲ್ಲಿ ರೈತನಿಗೆ ಮಾರಾಟ ಮಾಡದೆ ಕಾಯುವ ಸಾಮರ್ಥ್ಯ ಇಲ್ಲದಿರುವುದು. ತೋಟದ ನಿರ್ವಹಣೆ, ಕಾರ್ಮಿಕ ವೆಚ್ಚ, ಗೊಬ್ಬರ, ಸಸ್ಯ ಸಂರಕ್ಷಣೆ, ನೀರಾವರಿ, ಕೊಯ್ಲು ಮತ್ತು ಸಾಗಾಟ ಎಲ್ಲವೂ ಹಣ ಕೇಳುತ್ತವೆ. ಹೀಗಾಗಿ ಬೆಲೆ ಕುಸಿದಾಗ ರೈತ ತಕ್ಷಣ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ “ಬೆಲೆ ಏರಿಕೆ” ಎನ್ನುವ ಸುಳ್ಳು ಸುದ್ದಿಗಳು ಬಹಳ ಅಪಾಯಕಾರಿ.  ಇಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದೆ. ಸಹಕಾರಿ ಸಂಸ್ಥೆಗಳು ಕೇವಲ ಖರೀದಿ ಕೇಂದ್ರಗಳಾಗದೆ, ವೈಜ್ಞಾನಿಕ ಗೋದಾಮು , ಸ್ಟಾಕ್ ನಿರ್ವಹಣೆ , ಮಾರುಕಟ್ಟೆಯ ಮಾಹಿತಿ , ಬೆಲೆ ಸ್ಥಿರೀಕರಣ ಇತ್ಯಾದಿಗಳ ಬಗ್ಗೆ ಕೃಷಿಕರಿಗೂ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡಬೇಕು.ಮಾರುಕಟ್ಟೆಯ ಒಂದು ಭಾಗದಲ್ಲಿ ಬೇಡಿಕೆ ಕುಸಿದಿರುವ ಸಂದರ್ಭದಲ್ಲಿ ಅಗ್ಗದ ಆಮದು ಅಥವಾ ಅಕ್ರಮ ಅಡಿಕೆ ಮಾರುಕಟ್ಟೆಗೆ ಬಂದರೆ ಕೃಷಿಕನಿಗೆ  ಇನ್ನಷ್ಟು ಸಮಸ್ಯೆ ಉಂಟಾಗಬಹುದು. ದೇಶದಲ್ಲಿ ಅಡಿಕೆ ಆಮದಿಗೆ ಶೇ.100 ರಷ್ಟು ಆಮದು ಸುಂಕ ಮತ್ತು ₹351ರ ಕನಿಷ್ಠ ಆಮದು ಬೆಲೆ ಇರುವುದಾಗಿ ನೀಡಿರುವ ಅಂಕಿ-ಅಂಶಗಳಿವೆ. ಆದರೂ ಕಾನೂನು ಜಾರಿ ದುರ್ಬಲವಾದರೆ ನೀತಿಯ ಉದ್ದೇಶವೇ ವಿಫಲವಾಗುತ್ತದೆ. 2026 ರಲ್ಲಿ ಮಿಜೋರಾಂ ಮತ್ತು ಅಸ್ಸಾಂನಲ್ಲಿ ಡಿ.ಆರ್‌.ಐ. ಕಾರ್ಯಾಚರಣೆಯಲ್ಲಿ ಸುಮಾರು 60,000 ಕೆ.ಜಿ. ವಿದೇಶಿ ಮೂಲದ ಅಕ್ರಮ ಅಡಿಕೆ ವಶಪಡಿಸಿಕೊಳ್ಳಲಾಗಿದೆ ಎಂಬುದು ಅಕ್ರಮ ಸಾಗಾಟದ ಗಂಭೀರತೆಯನ್ನು ತೋರಿಸುತ್ತದೆ. ಹೀಗಾಗಿ ನಿಷೇಧದ ನಂತರದ ಮಾರುಕಟ್ಟೆಯಲ್ಲಿ  ಅಕ್ರಮ ಆಮದು ಆಗದಂತೆ ಸರ್ಕಾರ ನೋಡಿಕೊಳ್ಳಬೇಕು.

ಅಡಿಕೆ ಪ್ರದೇಶ ಈಗಾಗಲೇ ವೇಗವಾಗಿ ವಿಸ್ತರಿಸಿದೆ. ಉತ್ಪಾದನೆಯೂ ಹೆಚ್ಚಾಗಿದೆ. ಆದರೆ ಉತ್ಪಾದನಾ ವೆಚ್ಚ, ನೀರಿನ ಲಭ್ಯತೆ, ಹವಾಮಾನ ವೈಪರೀತ್ಯ, ರೋಗ–ಕೀಟ, ಕಾರ್ಮಿಕರ ಕೊರತೆ ಮತ್ತು ಉತ್ಪಾದಕತೆಯ ಸ್ಥಿರತೆ ಮುಂದಿನ ದೊಡ್ಡ ಸವಾಲುಗಳಾಗಿವೆ. ಸಿಪಿಸಿಆರ್‌ಐ ಮೂಲದ ಮಾಹಿತಿಯ ಪ್ರಕಾರ ಸರಾಸರಿ ಇಳುವರಿ ಸುಮಾರು 2,500–2,795 ಕೆ.ಜಿ./ಹೆಕ್ಟೇರ್, ಅಂದರೆ ಸುಮಾರು 1,012 ಕೆ.ಜಿ./ಎಕರೆ ಎಂದು ಪರಿಗಣಿಸಲಾಗಿದೆ.  ಹೀಗಾಗಿ ರೈತನ ಮುಂದಿನ ಪ್ರಶ್ನೆ ಕೇವಲ “ಕ್ವಿಂಟಲ್‌ಗೆ ಎಷ್ಟು ಬೆಲೆ?” ಎನ್ನುವುದಲ್ಲ. “ನನ್ನ ಒಂದು ಎಕರೆ ತೋಟದಿಂದ ಎಷ್ಟು ನಿವ್ವಳ ಆದಾಯ ಬರುತ್ತಿದೆ?” ಎನ್ನುವುದಾಗಬೇಕು.  ಅಡಿಕೆ ಬೆಳೆಗಾರರ ಭವಿಷ್ಯವನ್ನು ಉಳಿಸುವುದಾದರೆ ಉತ್ಪಾದಕತೆ, ವೆಚ್ಚ ಕಡಿತ ಮತ್ತು ಗುಣಮಟ್ಟದ ಮೇಲೂ  ಗಮನ ಕೊಡಬೇಕಾಗಿದೆ.

ಅಡಿಕೆ ಸೇವನೆಯ ಆರೋಗ್ಯ ಪರಿಣಾಮಗಳ ಕುರಿತು ವೈಜ್ಞಾನಿಕ ಚರ್ಚೆ ನಡೆಯುತ್ತಿದೆ. ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅದೇ ಸಮಯದಲ್ಲಿ, ಆರೋಗ್ಯದ ಹೆಸರಿನಲ್ಲಿ ರೂಪುಗೊಳ್ಳುವ ನೀತಿಯ ಆರ್ಥಿಕ ಪರಿಣಾಮವನ್ನು ಅಡಿಕೆ ಬೆಳೆಗಾರನ ಮೇಲೆ ಮಾತ್ರ ವರ್ಗಾಯಿಸುವುದೂ ಸರಿಯಲ್ಲ.  ಮಾಹಿತಿಯ ಪ್ರಕಾರ ₹9.99 ಕೋಟಿ ವೆಚ್ಚದಲ್ಲಿ ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ಅಡಿಕೆ ಮತ್ತು ಮಾನವ ಆರೋಗ್ಯದ ಕುರಿತು ಸಂಶೋಧನೆ ನಡೆಯುತ್ತಿದೆ. ಈ ಸಂಶೋಧನೆಯ ಫಲಿತಾಂಶಗಳು ಪಾರದರ್ಶಕವಾಗಿ ಸಾರ್ವಜನಿಕವಾಗಬೇಕು. ರಾಜ್ಯ ಸರ್ಕಾರವೂ ಅಡಿಕೆ ಹಾನಿಕಾರಕವಲ್ಲ ಎಂದೂ ಅಧಿವೇಶನದಲ್ಲಿಯೇ ವರದಿ ನೀಡಿದೆ. ಇನ್ನೊಂದು ಅಧ್ಯಯನದ ಬಗ್ಗೆಯೂ ಸರ್ಕಾರ ಹೇಳಿದೆ. ಹೀಗಾಗಿ ಅಡಿಕೆ ಹಾನಿಕಾಕರ ಅಲ್ಲ ಎನ್ನುವುದನ್ನು ಸರ್ಕಾರ ಕೂಡಾ ಹೇಳಿದೆ. ಹೀಗಾಗಿ ಅಡಿಕೆ ನಿಷೇಧವಾಗಲು ಸಾಧ್ಯವಿಲ್ಲ.

ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರರು ಆತಂಕದಿಂದ ತೋಟ ಕಡಿಯುವುದು, ಏಕಾಏಕಿ ಬೆಳೆ ಬದಲಿಸುವುದು ಅಥವಾ ಊಹಾಪೋಹದ ಆಧಾರದ ಮೇಲೆ ಅಡಿಕೆ ಮಾರಾಟ ಮಾಡುವುದು ಸರಿಯಲ್ಲ. ಅಡಿಕೆ ಬೆಳೆಗಾರರು ಮೊದಲು ಮಾರುಕಟ್ಟೆಯನ್ನು ಗಮನಿಸಬೇಕು. ಉತ್ಪಾದನಾ ವೆಚ್ಚ ದಾಖಲಿಸಬೇಕು. ಮಾರುಕಟ್ಟೆ ಬೆಲೆ ಮತ್ತು ಆಗಮನದ ದತ್ತಾಂಶ ಸಂಗ್ರಹಿಸಬೇಕು. ಸಹಕಾರಿ ಸಂಸ್ಥೆಗಳ ಮೂಲಕ ಸಾಧ್ಯವಾದಷ್ಟು ಸಂಘಟಿತ ಮಾರಾಟ ಮಾಡಬೇಕು. ತೋಟದಲ್ಲಿ ಮಣ್ಣು, ನೀರು, ಪೋಷಕಾಂಶ ಮತ್ತು ರೋಗ ನಿರ್ವಹಣೆಯನ್ನು ವೈಜ್ಞಾನಿಕಗೊಳಿಸಬೇಕು. ಅಡಿಕೆಯ ಜೊತೆಗೆ ಸೂಕ್ತ ಅಂತರಬೆಳೆ ಮತ್ತು ಪರ್ಯಾಯ ಆದಾಯದ ಅವಕಾಶಗಳನ್ನು ಪ್ರದೇಶಕ್ಕೆ ಅನುಗುಣವಾಗಿ ಪರಿಗಣಿಸಬೇಕು. ಎಲ್ಲರೂ ಒಮ್ಮೆಲೇ ಒಂದೇ ಬೆಳೆಯನ್ನೂ ಮಾಡುವುದು ಸರಿಯಲ್ಲ. ಕೃಷಿಕ ಇಂತಹ ಅಸಹಾಯಕ, ಅನಿವಾರ್ಯ ಅಥವಾ ಗೊಂದಲದ ಸಂದರ್ಭದಲ್ಲಿ  ಕೃಷಿ ಸಮಾವೇಶ, ಕೃಷಿ ಚಿಂತನೆಯ ಹೆಸರಿನಲ್ಲಿ ವ್ಯಾಪಾರೀ ಚಿಂತನೆ ಅಥವಾ ಗಿಡ ಮಾರಾಟದ ಉದ್ದೇಶಗಳು ಕಡಿಮೆಯಾಗಬೇಕು. ಮುಖ್ಯವಾಗಿ, ಸರ್ಕಾರದ ಮುಂದೆ ಭಾವನಾತ್ಮಕ ಬೇಡಿಕೆಗಳ ಬದಲು ಅಂಕಿ-ಅಂಶ ಆಧಾರಿತ ನೀತಿ ಬೇಡಿಕೆಗಳನ್ನು ಇಡಬೇಕು.

ಗುಟ್ಕಾ–ಪಾನ್‌ಮಸಾಲಾ ನಿಷೇಧದ ನಂತರ ಅಡಿಕೆ ಮಾರುಕಟ್ಟೆಯ ಮೇಲೆ ಸರ್ಕಾರ ಯಾವುದೇ ಅಧ್ಯಯನ ನಡೆಸಿದೆಯೇ? ಬೇಡಿಕೆ ಎಷ್ಟು ಕಡಿಮೆಯಾಗಬಹುದು ಎಂಬುದರ ಮೌಲ್ಯಮಾಪನ ಇದೆಯೇ? ಅಡಿಕೆ ಬೆಲೆ ಕುಸಿದರೆ ರೈತರಿಗೆ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ ಏನು? ಸಹಕಾರಿ ಸಂಸ್ಥೆಗಳ ಮೂಲಕ ಬೆಲೆ ಸ್ಥಿರೀಕರಣ ವ್ಯವಸ್ಥೆ ರೂಪಿಸಲಾಗುತ್ತದೆಯೇ? ಅಡಿಕೆ ರಫ್ತು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಯೋಜನೆ ರೂಪಿಸಿವೆ?
ಅಕ್ರಮ ಅಡಿಕೆ ಸಾಗಾಟ ತಡೆಯಲು ಗಡಿ ಮತ್ತು ಕಸ್ಟಮ್ಸ್ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ? ಅಡಿಕೆ ಆಧಾರಿತ ಪರ್ಯಾಯ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಂಶೋಧನೆಗೆ ಎಷ್ಟು ಹೂಡಿಕೆ ಮಾಡಲಾಗುತ್ತಿದೆ?
ಈ ಪ್ರಶ್ನೆಗಳಿಗೆ ಉತ್ತರ ಸರ್ಕಾರ ನೀಡಬೇಕು.

ಈಗ ಅಡಿಕೆ ಬೆಳೆಗಾರರ ಬೇಡಿಕೆ “ನಿಷೇಧ ಹಿಂಪಡೆಯಿರಿ” ಎಂಬ ಒಂದೇ ಸಾಲಿನ ಬೇಡಿಕೆಯಾಗಿರಬಾರದು. ಅದರ ಬದಲಿಗೆ, “ನಿಷೇಧದ ಪರಿಣಾಮ ಎದುರಿಸುವ ಅಡಿಕೆ ಬೆಳೆಗಾರನಿಗೆ ಪರ್ಯಾಯ ಮಾರುಕಟ್ಟೆ ನೀಡಿ. ಬೆಲೆ ಸ್ಥಿರೀಕರಣ ವ್ಯವಸ್ಥೆ ನೀಡಿ. ಅಕ್ರಮ ಆಮದು ತಡೆಯಿರಿ. ರಫ್ತು ವಿಸ್ತರಿಸಿ. ಸಂಶೋಧನೆಗೆ ಹೂಡಿಕೆ ಮಾಡಿ.  ರೈತನ ಆದಾಯವನ್ನು ರಕ್ಷಿಸಿ. ಒಂದು ಮಾರ್ಗಸೂಚಿ ಪ್ರಕಟಿಸಿ” ಎಂಬ ಸಮಗ್ರ ಬೇಡಿಕೆಯಾಗಬೇಕು. ಈಗ ಗುಟ್ಕಾ–ಪಾನ್‌ಮಸಾಲಾ ಇರಬೇಕೇ, ಬೇಡವೇ ಎಂಬುದರ ಬಗ್ಗೆ ಚರ್ಚೆಯಲ್ಲ.  ಮುಂದಿನ ತಲೆಮಾರಿನ ಅಡಿಕೆ ಬೆಳೆಗಾರನಿಗೆ ಈ ಕೃಷಿ ಬದುಕುಳಿಯುವಷ್ಟು ಆರ್ಥಿಕವಾಗಿ ಸುರಕ್ಷಿತವಾಗಿರುತ್ತದೆಯೇ ಎಂಬುದೇ ನಿಜವಾದ ಪ್ರಶ್ನೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Karnataka’s one-year ban on gutka and tobacco/nicotine-containing pan masala raises an important question for the arecanut sector: not whether the ban should exist, but how its possible market impact should be managed. Arecanut is a major agricultural economy, with Karnataka accounting for a large share of India’s production and around 60 lakh people estimated to depend on the sector. The WHO’s earlier study found that gutka bans reduced availability and consumption, indicating that regulatory measures can influence demand. Therefore, arecanut growers cannot depend on a single consumption segment. The priority now should be reliable market data, alternative markets, exports, value addition, scientific research, stronger cooperatives, prevention of illegal imports and a long-term income-security framework for growers.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ
August 13, 2026
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror