ಕರ್ನಾಟಕ ಸರ್ಕಾರ ಗುಟ್ಕಾ ಮತ್ತು ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಾಟ, ವಿತರಣೆ ಮತ್ತು ಮಾರಾಟದ ಮೇಲೆ ಒಂದು ವರ್ಷದ ನಿಷೇಧ ಜಾರಿಗೊಳಿಸಿದೆ. ಆಗಸ್ಟ್ 10 ರಿಂದ ಈ ಆದೇಶ ಜಾರಿಗೆ ಬಂದಿದೆ. ಸಾರ್ವಜನಿಕ ಆರೋಗ್ಯದ ಕಾಳಜಿಯ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಇದು. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಅಡಿಕೆ ಬೆಳೆಗಾರರ ಜೊತೆ ಹೋಲಿಸುವ ಅಗತ್ಯವಿಲ್ಲ. ಒಂದು ಕಡೆ ಆರೋಗ್ಯ ನೀತಿ ರೂಪಿಸುವ ಸರ್ಕಾರವೇ ಮತ್ತೊಂದು ಕಡೆ ಆ ನೀತಿಯ ಪರಿಣಾಮ ಎದುರಿಸಬೇಕಾದ ಕೃಷಿಕರ ಭದ್ರತೆಯ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಇದೇ ಈಗ ಅಡಿಕೆ ಬೆಳೆಗಾರರ ಮುಂದಿರುವ ಮೂಲ ಪ್ರಶ್ನೆ. ಗುಟ್ಕಾ–ಪಾನ್‌ಮಸಾಲಾ ನಿಷೇಧವಾಗುತ್ತದೆಯೇ ಎಂಬುದು ಪ್ರಶ್ನೆಯಲ್ಲ. ನಿಷೇಧದ ನಂತರ ಅಡಿಕೆ ಮಾರುಕಟ್ಟೆಗೆ ಏನಾಗುತ್ತದೆ ಎಂಬುದೇ ಪ್ರಶ್ನೆ. ಅಡಿಕೆ ನಿಷೇಧದ ಬಗ್ಗೆ ಯಾವ ಕೃಷಿಕರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಸರ್ಕಾರಗಳೇ ಅಡಿಕೆ ಹಾನಿಕಾರಕ ಅಲ್ಲ ಎನ್ನುವ ಅಧ್ಯಯನ ವರದಿಯನ್ನು ಅಧಿವೇಶನದಲ್ಲಿಯೇ ನೀಡಿದೆ. ಇನ್ನಷ್ಟು ಅಧ್ಯಯನ ನಡೆಯುತ್ತಿರುವ ಬಗ್ಗೆಯೂ ಸರ್ಕಾರವೇ ಹೇಳಿದೆ, ಅನುದಾನ ಕೂಡಾ ನೀಡಿದೆ. ಈಗ ಅಡಿಕೆ ಮಾರುಕಟ್ಟೆಯ ಬಗ್ಗೆ , ಭವಿಷ್ಯದ ಬಗ್ಗೆ ಮಾತ್ರಾ ಇರುವ ಆತಂಕ ನಿವಾರಣೆಯಾಗಬೇಕಿದೆ.
ಅಡಿಕೆ ಬೆಳೆಗಾರರ ಹಕ್ಕಿನ ಬಗ್ಗೆ ಮಾತನಾಡುವುದು ಎಂದರೆ ಗುಟ್ಕಾ ಅಥವಾ ಪಾನ್‌ಮಸಾಲಾವನ್ನು ಬೆಂಬಲಿಸುವುದಲ್ಲ. ಸಾರ್ವಜನಿಕ ಆರೋಗ್ಯದ ನೀತಿಗೆ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ. ಆದರೆ ಆ ನೀತಿಯ ಪರಿಣಾಮದಿಂದ ಉಂಟಾಗುವ ಆರ್ಥಿಕ ಅಪಾಯವನ್ನು ಎದುರಿಸಲು ರೈತನಿಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದು ಮಾತ್ರ ಪ್ರಶ್ನಾರ್ಹ. ಇಂದು ಭಾರತದಲ್ಲಿ ಅಡಿಕೆ ಉತ್ಪಾದನೆ ಸುಮಾರು 14 ಲಕ್ಷ ಟನ್‌ನಿಂದ 15.29 ಲಕ್ಷ ಟನ್‌ವರೆಗೆ ಏರಿದೆ. ಬೆಳೆ ಪ್ರದೇಶ 9.49 ಲಕ್ಷ ಹೆಕ್ಟೇರ್‌ನಿಂದ 11.06 ಲಕ್ಷ ಹೆಕ್ಟೇರ್‌ವರೆಗೆ ವಿಸ್ತರಿಸಿದೆ. ಸುಮಾರು 60 ಲಕ್ಷ ಜನರು ಈ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ದೇಶೀಯ ಮಾರುಕಟ್ಟೆಯ ಅಂದಾಜು ಮೌಲ್ಯ ₹58,664 ಕೋಟಿ. ಸಾಕಷ್ಟು ತೆರಿಗೆಯೂ ಈ ಕ್ಷೇತ್ರದಲ್ಲಿ ಉತ್ಪಾದನೆಯಾಗುತ್ತಿದೆ. ಇಂತಹ ಕ್ಷೇತ್ರದ ಭವಿಷ್ಯವನ್ನು ಒಂದು ಮಾರುಕಟ್ಟೆ ನೀತಿಯ ಬದಲಾವಣೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ.
ಭಾರತದ ಅಡಿಕೆ ಕ್ಷೇತ್ರ ಇಂದು ಒಂದು ದೊಡ್ಡ ಕೃಷಿ–ವಾಣಿಜ್ಯ ವ್ಯವಸ್ಥೆಯಾಗಿದೆ. ರೈತ, ಕೃಷಿ ಕಾರ್ಮಿಕ, ವ್ಯಾಪಾರಿ, ಸಹಕಾರಿ ಸಂಸ್ಥೆ, ಸಾಗಾಟಗಾರ, ಸಂಸ್ಕರಣಾ ಘಟಕ ಮತ್ತು ಅಂತಿಮ ಮಾರುಕಟ್ಟೆ .. ಹೀಗೇ ಎಲ್ಲವೂ ಸೇರಿಕೊಂಡಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 11.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 14 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿದೆ. ಅದರಲ್ಲಿ ಕರ್ನಾಟಕದ ಪಾಲು 6.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10 ಲಕ್ಷ ಟನ್. ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಎಷ್ಟು ಮಹತ್ವದ್ದು ಎನ್ನುವುದನ್ನು ಈ ಅಂಕಿ ತೋರಿಸುತ್ತದೆ. ಇದೇ ಅವಧಿಯಲ್ಲಿ ಅಡಿಕೆಯ ಅಂದಾಜು ದೇಶೀಯ ಮಾರುಕಟ್ಟೆ ಮೌಲ್ಯ ₹58,664 ಕೋಟಿ ಎಂದು ನೀಡಲಾಗಿದೆ. ಅಡಿಕೆ ಕ್ಷೇತ್ರದ ಮೇಲೆ ನೇರ ಅಥವಾ ಪರೋಕ್ಷವಾಗಿ ಅವಲಂಬಿತರಾಗಿರುವವರ ಸಂಖ್ಯೆ ಸುಮಾರು 60 ಲಕ್ಷ ಎಂದು ಅಂದಾಜಿಸಲಾಗಿದೆ.
2025–26 ರ ಅಂದಾಜಿನ ಪ್ರಕಾರ ಅಡಿಕೆ ಬೆಳೆ ಪ್ರದೇಶ ದೇಶದಲ್ಲಿ 11.06 ಲಕ್ಷ ಹೆಕ್ಟೇರ್ ಮತ್ತು ಉತ್ಪಾದನೆ 14 ಲಕ್ಷ ಟನ್ ತಲುಪಿದೆ. ಅಂದರೆ ಅಡಿಕೆ ಕ್ಷೇತ್ರವು ಸಣ್ಣದಾಗುತ್ತಿಲ್ಲ, ಅದು ಇನ್ನಷ್ಟು ವಿಸ್ತರಿಸುತ್ತಿದೆ ಎನ್ನುವುದರ ಸಾಕ್ಷಿ ಇದು. ಇದಲ್ಲದೆ ಇನ್ನಷ್ಟು ವಿಸ್ತರಣೆಯಾಗಿರುವ ಸಾಧ್ಯತೆಯೇ ಹೆಚ್ಚಿದೆ. ಹೀಗಿರುವಾಗ ಅಡಿಕೆಯ ಬಳಕೆ ಕ್ಷೇತ್ರವೊಂದರಲ್ಲಿ ನೀತಿ ಬದಲಾವಣೆಯಾದಾಗ ಅದರ ಪರಿಣಾಮವನ್ನು ಕೇವಲ ಒಂದು ಉದ್ಯಮದ ಸಮಸ್ಯೆ ಎಂದು ನೋಡುವುದು ಸಾಧ್ಯವಿಲ್ಲ. ಅದು ಕೃಷಿ ಮಾರುಕಟ್ಟೆಯ ಪ್ರಶ್ನೆಯೂ ಹೌದು, ಕೃಷಿಕನ ಆತಂಕವೂ ಹೌದು.
ಕರ್ನಾಟಕದಲ್ಲಿ ಗುಟ್ಕಾ ಮತ್ತು ತಂಬಾಕು–ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನಗಳ ಮೇಲೆ ಇದೇ ರೀತಿಯ ನಿಷೇಧ 2013ರಲ್ಲೂ ಜಾರಿಯಾಗಿತ್ತು. ಆಗ ನಿಷೇಧದ ನಂತರ ಅಡಿಕೆ ಮಾರುಕಟ್ಟೆಯಲ್ಲಿ ತಕ್ಷಣವೇ ಆತಂಕ ಉಂಟಾಗಿತ್ತು. 2013 ರ ಜೂನ್ 1 ರ ವರದಿಯ ಪ್ರಕಾರ, ಕೆಂಪಡಿಕೆ ಮಾರುಕಟ್ಟೆ ಇಳಿದಿತ್ತು. ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳು ನಿಷೇಧದ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಂಘಟನೆಗಳು ಮತ್ತು ಕ್ಯಾಂಪ್ಕೊ ಕೂಡ ಸರ್ಕಾರದ ಮಧ್ಯಪ್ರವೇಶದ ಅಗತ್ಯವನ್ನು ಒತ್ತಿಹೇಳಿತ್ತು. ಆಗ ಮಾರುಕಟ್ಟೆ ಪರಿಸ್ಥಿತಿ ಸಂಪೂರ್ಣ ಕುಸಿತಕ್ಕೆ ತಿರುಗಲಿಲ್ಲ. ಅಂದಿನ ಸರ್ಕಾರವೂ ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿ, ಬೆಲೆ ಕುಸಿದರೆ ತುರ್ತು ಆರ್ಥಿಕ ನೆರವು ನೀಡುವ ಭರವಸೆ ನೀಡಿತ್ತು. ಪರ್ಯಾಯ ಬೆಳೆ ಮತ್ತು ಅಂತರಬೆಳೆಗಳಿಗೂ ಉತ್ತೇಜನ ನೀಡುವ ಬಗ್ಗೆ ಸರ್ಕಾರ ಹೇಳಿತ್ತು.
ಅಡಿಕೆ ಪ್ರದೇಶ ಈಗಾಗಲೇ ವೇಗವಾಗಿ ವಿಸ್ತರಿಸಿದೆ. ಉತ್ಪಾದನೆಯೂ ಹೆಚ್ಚಾಗಿದೆ. ಆದರೆ ಉತ್ಪಾದನಾ ವೆಚ್ಚ, ನೀರಿನ ಲಭ್ಯತೆ, ಹವಾಮಾನ ವೈಪರೀತ್ಯ, ರೋಗ–ಕೀಟ, ಕಾರ್ಮಿಕರ ಕೊರತೆ ಮತ್ತು ಉತ್ಪಾದಕತೆಯ ಸ್ಥಿರತೆ ಮುಂದಿನ ದೊಡ್ಡ ಸವಾಲುಗಳಾಗಿವೆ. ಸಿಪಿಸಿಆರ್‌ಐ ಮೂಲದ ಮಾಹಿತಿಯ ಪ್ರಕಾರ ಸರಾಸರಿ ಇಳುವರಿ ಸುಮಾರು 2,500–2,795 ಕೆ.ಜಿ./ಹೆಕ್ಟೇರ್, ಅಂದರೆ ಸುಮಾರು 1,012 ಕೆ.ಜಿ./ಎಕರೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ರೈತನ ಮುಂದಿನ ಪ್ರಶ್ನೆ ಕೇವಲ “ಕ್ವಿಂಟಲ್‌ಗೆ ಎಷ್ಟು ಬೆಲೆ?” ಎನ್ನುವುದಲ್ಲ. “ನನ್ನ ಒಂದು ಎಕರೆ ತೋಟದಿಂದ ಎಷ್ಟು ನಿವ್ವಳ ಆದಾಯ ಬರುತ್ತಿದೆ?” ಎನ್ನುವುದಾಗಬೇಕು. ಅಡಿಕೆ ಬೆಳೆಗಾರರ ಭವಿಷ್ಯವನ್ನು ಉಳಿಸುವುದಾದರೆ ಉತ್ಪಾದಕತೆ, ವೆಚ್ಚ ಕಡಿತ ಮತ್ತು ಗುಣಮಟ್ಟದ ಮೇಲೂ ಗಮನ ಕೊಡಬೇಕಾಗಿದೆ.
ಅಡಿಕೆ ಸೇವನೆಯ ಆರೋಗ್ಯ ಪರಿಣಾಮಗಳ ಕುರಿತು ವೈಜ್ಞಾನಿಕ ಚರ್ಚೆ ನಡೆಯುತ್ತಿದೆ. ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅದೇ ಸಮಯದಲ್ಲಿ, ಆರೋಗ್ಯದ ಹೆಸರಿನಲ್ಲಿ ರೂಪುಗೊಳ್ಳುವ ನೀತಿಯ ಆರ್ಥಿಕ ಪರಿಣಾಮವನ್ನು ಅಡಿಕೆ ಬೆಳೆಗಾರನ ಮೇಲೆ ಮಾತ್ರ ವರ್ಗಾಯಿಸುವುದೂ ಸರಿಯಲ್ಲ. ಮಾಹಿತಿಯ ಪ್ರಕಾರ ₹9.99 ಕೋಟಿ ವೆಚ್ಚದಲ್ಲಿ ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ಅಡಿಕೆ ಮತ್ತು ಮಾನವ ಆರೋಗ್ಯದ ಕುರಿತು ಸಂಶೋಧನೆ ನಡೆಯುತ್ತಿದೆ. ಈ ಸಂಶೋಧನೆಯ ಫಲಿತಾಂಶಗಳು ಪಾರದರ್ಶಕವಾಗಿ ಸಾರ್ವಜನಿಕವಾಗಬೇಕು. ರಾಜ್ಯ ಸರ್ಕಾರವೂ ಅಡಿಕೆ ಹಾನಿಕಾರಕವಲ್ಲ ಎಂದೂ ಅಧಿವೇಶನದಲ್ಲಿಯೇ ವರದಿ ನೀಡಿದೆ. ಇನ್ನೊಂದು ಅಧ್ಯಯನದ ಬಗ್ಗೆಯೂ ಸರ್ಕಾರ ಹೇಳಿದೆ. ಹೀಗಾಗಿ ಅಡಿಕೆ ಹಾನಿಕಾಕರ ಅಲ್ಲ ಎನ್ನುವುದನ್ನು ಸರ್ಕಾರ ಕೂಡಾ ಹೇಳಿದೆ. ಹೀಗಾಗಿ ಅಡಿಕೆ ನಿಷೇಧವಾಗಲು ಸಾಧ್ಯವಿಲ್ಲ.
ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರರು ಆತಂಕದಿಂದ ತೋಟ ಕಡಿಯುವುದು, ಏಕಾಏಕಿ ಬೆಳೆ ಬದಲಿಸುವುದು ಅಥವಾ ಊಹಾಪೋಹದ ಆಧಾರದ ಮೇಲೆ ಅಡಿಕೆ ಮಾರಾಟ ಮಾಡುವುದು ಸರಿಯಲ್ಲ. ಅಡಿಕೆ ಬೆಳೆಗಾರರು ಮೊದಲು ಮಾರುಕಟ್ಟೆಯನ್ನು ಗಮನಿಸಬೇಕು. ಉತ್ಪಾದನಾ ವೆಚ್ಚ ದಾಖಲಿಸಬೇಕು. ಮಾರುಕಟ್ಟೆ ಬೆಲೆ ಮತ್ತು ಆಗಮನದ ದತ್ತಾಂಶ ಸಂಗ್ರಹಿಸಬೇಕು. ಸಹಕಾರಿ ಸಂಸ್ಥೆಗಳ ಮೂಲಕ ಸಾಧ್ಯವಾದಷ್ಟು ಸಂಘಟಿತ ಮಾರಾಟ ಮಾಡಬೇಕು. ತೋಟದಲ್ಲಿ ಮಣ್ಣು, ನೀರು, ಪೋಷಕಾಂಶ ಮತ್ತು ರೋಗ ನಿರ್ವಹಣೆಯನ್ನು ವೈಜ್ಞಾನಿಕಗೊಳಿಸಬೇಕು. ಅಡಿಕೆಯ ಜೊತೆಗೆ ಸೂಕ್ತ ಅಂತರಬೆಳೆ ಮತ್ತು ಪರ್ಯಾಯ ಆದಾಯದ ಅವಕಾಶಗಳನ್ನು ಪ್ರದೇಶಕ್ಕೆ ಅನುಗುಣವಾಗಿ ಪರಿಗಣಿಸಬೇಕು. ಎಲ್ಲರೂ ಒಮ್ಮೆಲೇ ಒಂದೇ ಬೆಳೆಯನ್ನೂ ಮಾಡುವುದು ಸರಿಯಲ್ಲ. ಕೃಷಿಕ ಇಂತಹ ಅಸಹಾಯಕ, ಅನಿವಾರ್ಯ ಅಥವಾ ಗೊಂದಲದ ಸಂದರ್ಭದಲ್ಲಿ ಕೃಷಿ ಸಮಾವೇಶ, ಕೃಷಿ ಚಿಂತನೆಯ ಹೆಸರಿನಲ್ಲಿ ವ್ಯಾಪಾರೀ ಚಿಂತನೆ ಅಥವಾ ಗಿಡ ಮಾರಾಟದ ಉದ್ದೇಶಗಳು ಕಡಿಮೆಯಾಗಬೇಕು. ಮುಖ್ಯವಾಗಿ, ಸರ್ಕಾರದ ಮುಂದೆ ಭಾವನಾತ್ಮಕ ಬೇಡಿಕೆಗಳ ಬದಲು ಅಂಕಿ-ಅಂಶ ಆಧಾರಿತ ನೀತಿ ಬೇಡಿಕೆಗಳನ್ನು ಇಡಬೇಕು.
ಗುಟ್ಕಾ–ಪಾನ್‌ಮಸಾಲಾ ನಿಷೇಧದ ನಂತರ ಅಡಿಕೆ ಮಾರುಕಟ್ಟೆಯ ಮೇಲೆ ಸರ್ಕಾರ ಯಾವುದೇ ಅಧ್ಯಯನ ನಡೆಸಿದೆಯೇ? ಬೇಡಿಕೆ ಎಷ್ಟು ಕಡಿಮೆಯಾಗಬಹುದು ಎಂಬುದರ ಮೌಲ್ಯಮಾಪನ ಇದೆಯೇ? ಅಡಿಕೆ ಬೆಲೆ ಕುಸಿದರೆ ರೈತರಿಗೆ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ ಏನು? ಸಹಕಾರಿ ಸಂಸ್ಥೆಗಳ ಮೂಲಕ ಬೆಲೆ ಸ್ಥಿರೀಕರಣ ವ್ಯವಸ್ಥೆ ರೂಪಿಸಲಾಗುತ್ತದೆಯೇ? ಅಡಿಕೆ ರಫ್ತು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಯೋಜನೆ ರೂಪಿಸಿವೆ?
ಅಕ್ರಮ ಅಡಿಕೆ ಸಾಗಾಟ ತಡೆಯಲು ಗಡಿ ಮತ್ತು ಕಸ್ಟಮ್ಸ್ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ? ಅಡಿಕೆ ಆಧಾರಿತ ಪರ್ಯಾಯ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಂಶೋಧನೆಗೆ ಎಷ್ಟು ಹೂಡಿಕೆ ಮಾಡಲಾಗುತ್ತಿದೆ?
ಈ ಪ್ರಶ್ನೆಗಳಿಗೆ ಉತ್ತರ ಸರ್ಕಾರ ನೀಡಬೇಕು.
ಈಗ ಅಡಿಕೆ ಬೆಳೆಗಾರರ ಬೇಡಿಕೆ “ನಿಷೇಧ ಹಿಂಪಡೆಯಿರಿ” ಎಂಬ ಒಂದೇ ಸಾಲಿನ ಬೇಡಿಕೆಯಾಗಿರಬಾರದು. ಅದರ ಬದಲಿಗೆ, “ನಿಷೇಧದ ಪರಿಣಾಮ ಎದುರಿಸುವ ಅಡಿಕೆ ಬೆಳೆಗಾರನಿಗೆ ಪರ್ಯಾಯ ಮಾರುಕಟ್ಟೆ ನೀಡಿ. ಬೆಲೆ ಸ್ಥಿರೀಕರಣ ವ್ಯವಸ್ಥೆ ನೀಡಿ. ಅಕ್ರಮ ಆಮದು ತಡೆಯಿರಿ. ರಫ್ತು ವಿಸ್ತರಿಸಿ. ಸಂಶೋಧನೆಗೆ ಹೂಡಿಕೆ ಮಾಡಿ. ರೈತನ ಆದಾಯವನ್ನು ರಕ್ಷಿಸಿ. ಒಂದು ಮಾರ್ಗಸೂಚಿ ಪ್ರಕಟಿಸಿ” ಎಂಬ ಸಮಗ್ರ ಬೇಡಿಕೆಯಾಗಬೇಕು. ಈಗ ಗುಟ್ಕಾ–ಪಾನ್‌ಮಸಾಲಾ ಇರಬೇಕೇ, ಬೇಡವೇ ಎಂಬುದರ ಬಗ್ಗೆ ಚರ್ಚೆಯಲ್ಲ. ಮುಂದಿನ ತಲೆಮಾರಿನ ಅಡಿಕೆ ಬೆಳೆಗಾರನಿಗೆ ಈ ಕೃಷಿ ಬದುಕುಳಿಯುವಷ್ಟು ಆರ್ಥಿಕವಾಗಿ ಸುರಕ್ಷಿತವಾಗಿರುತ್ತದೆಯೇ ಎಂಬುದೇ ನಿಜವಾದ ಪ್ರಶ್ನೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…
ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…