ಕರಾವಳಿ ಭಾಗದ ಜನರ ಕಷ್ಟ–ಸುಖಗಳನ್ನು ಹತ್ತಿರದಿಂದ ಅರಿತು, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಉದ್ದೇಶದಿಂದ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಸೆಪ್ಟೆಂಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರು ಹಾಗೂ ಕೃಷಿಕರ ಹಿತದೃಷ್ಟಿಯಿಂದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.
ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಗ್ರಾಮೀಣ ಆರ್ಥಿಕತೆಯಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾಗಿದ್ದು, ರಾಜ್ಯದ ಲಕ್ಷಾಂತರ ಕೃಷಿಕ ಕುಟುಂಬಗಳು ಅಡಿಕೆ ಕೃಷಿಯನ್ನು ಅವಲಂಬಿಸಿವೆ. ಆದರೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಚರ್ಚೆಗಳು, ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿವಿಧ ರೋಗಗಳು, ವಿವಿಧ ರಾಜ್ಯಗಳಲ್ಲಿ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಮೇಲಿನ ನಿರ್ಬಂಧ, ಮಾರುಕಟ್ಟೆಯ ಅನಿಶ್ಚಿತತೆ, ಹೆಚ್ಚುತ್ತಿರುವ ಉತ್ಪಾದನಾ ಮತ್ತು ಕಾರ್ಮಿಕ ವೆಚ್ಚ ಸೇರಿದಂತೆ ಹಲವು ಸವಾಲುಗಳನ್ನು ಬೆಳೆಗಾರರು ಎದುರಿಸುತ್ತಿದ್ದಾರೆ.
ದಶಕಗಳಿಂದ ಅಡಿಕೆ ಕೃಷಿಯನ್ನೇ ಅವಲಂಬಿಸಿರುವ ರೈತರು ತಕ್ಷಣವೇ ಬೇರೆ ಕೃಷಿಗೆ ಬದಲಾಗುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಹೀಗಾಗಿ ಅಡಿಕೆ ಕೃಷಿಯ ರಕ್ಷಣೆಯ ಜೊತೆಗೆ ಅಡಿಕೆಯ ಪರ್ಯಾಯ ಬಳಕೆ, ಮೌಲ್ಯವರ್ಧನೆ, ವೈಜ್ಞಾನಿಕ ಸಂಶೋಧನೆ ಹಾಗೂ ಕೈಗಾರಿಕಾ ಬಳಕೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
₹5 ಲಕ್ಷ ಬಡ್ಡಿರಹಿತ ಬೆಳೆ ಸಾಲ ವಾಸ್ತವದಲ್ಲಿ ಸಿಗಲಿ : ರಾಜ್ಯ ಸರ್ಕಾರವು ಕೃಷಿಕರಿಗೆ ₹5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ ನೀಡುವುದಾಗಿ ಘೋಷಿಸಿದ್ದರೂ, ಹಲವು ಸಹಕಾರಿ ಸಂಘಗಳಲ್ಲಿ ಇನ್ನೂ ₹3 ಲಕ್ಷಕ್ಕಿಂತ ಹೆಚ್ಚಿನ ಬೆಳೆ ಸಾಲ ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರದ ಘೋಷಣೆಯಂತೆ ಅಡಿಕೆ ಸೇರಿದಂತೆ ಎಲ್ಲ ಅರ್ಹ ಕೃಷಿಕರಿಗೆ ₹5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ ದೊರೆಯುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.
ರೋಗಬಾಧಿತ ಅಡಿಕೆ ಬೆಳೆಗಾರರಿಗೆ ನೆರವು ನೀಡಲಿ : ಅಡಿಕೆ ಕೃಷಿಯಲ್ಲಿ ಎಲೆಚುಕ್ಕಿ ರೋಗದ ತೀವ್ರತೆ ಹೆಚ್ಚಿದ್ದು, ಸಂಪಾಜೆ ಸೇರಿದಂತೆ ಸುಮಾರು 10 ಗ್ರಾಮಗಳಲ್ಲಿ ಹಳದಿ ಎಲೆರೋಗದ ಬಾಧೆಯಿಂದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಹಲವು ತೋಟಗಳಲ್ಲಿ ತೀವ್ರ ಬೆಳೆ ಕುಸಿತ ಉಂಟಾಗಿದೆ. ರೋಗಬಾಧೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ನೆರವಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಒಂದು ಬಾರಿ ಬೆಳೆಸಾಲ ಮನ್ನಾ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ. ಅದೇ ರೀತಿ ರಾಜ್ಯ ಸರ್ಕಾರವು ಶೇ.3ರ ಬಡ್ಡಿದರದಲ್ಲಿ ನೀಡಿರುವ ದೀರ್ಘಾವಧಿ ಕೃಷಿ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದೆ.
ಕಾಡುಪ್ರಾಣಿ ಹಾವಳಿ: ಬೆಳೆ ರಕ್ಷಣೆಗೆ ಪರಿಹಾರ ಬೇಕು : ಅಡಿಕೆ ಮತ್ತು ತೆಂಗು ತೋಟಗಳಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಬೆಳೆ ರಕ್ಷಣೆಯ ದೃಷ್ಟಿಯಿಂದ ರೈತರಿಗೆ ಕಾನೂನುಬದ್ಧವಾಗಿ ಲಭ್ಯವಿರುವ ಮಾರ್ಗಗಳ ಕುರಿತು ಸ್ಪಷ್ಟತೆ ಹಾಗೂ ತಕ್ಷಣದ ಪರಿಹಾರ ಅಗತ್ಯವಿದೆ. ಕೋವಿ ಪರವಾನಗಿ ನವೀಕರಣ ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಪರಿಹಾರ ಮಾರ್ಗ ಕಂಡುಕೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ.
ಕಸ್ತೂರಿ ರಂಗನ್ ಆತಂಕ ನಿವಾರಿಸಲಿ : ಮಲೆನಾಡಿನ ತಪ್ಪಲು ಭಾಗದ ಕೃಷಿಕರಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಆತಂಕ ಮುಂದುವರಿದಿದೆ. ಕೃಷಿಕರ ಬದುಕು ಮತ್ತು ಕೃಷಿಭೂಮಿಯ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರಗಳ ಕುರಿತು ಸ್ಪಷ್ಟತೆ ನೀಡುವ ಮೂಲಕ ಈ ಆತಂಕವನ್ನು ನಿವಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.
ಅಡಿಕೆಯ ಪರ್ಯಾಯ ಬಳಕೆಗೆ ಸರ್ಕಾರದ ಅಧ್ಯಯನ ಅಗತ್ಯ : ಅಡಿಕೆಯ ಬಳಕೆಯ ಕುರಿತು ನಡೆಯುತ್ತಿರುವ ಆರೋಗ್ಯ ಸಂಬಂಧಿತ ಚರ್ಚೆಗಳು ಮತ್ತು ವಿವಿಧ ರಾಜ್ಯಗಳಲ್ಲಿನ ನಿರ್ಬಂಧಗಳಿಂದಾಗಿ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಡಿಕೆಯ ಆಹಾರೇತರ, ಕೈಗಾರಿಕಾ, ಜೈವಿಕ ಹಾಗೂ ಇತರ ಮೌಲ್ಯವರ್ಧಿತ ಬಳಕೆಗಳ ಕುರಿತು ಸರ್ಕಾರದ ವತಿಯಿಂದ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಸಂಘ ಆಗ್ರಹಿಸಿದೆ.
ಅಡಿಕೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಸರ್ಕಾರದ ವತಿಯಿಂದ ನಡೆದಿರುವ ಅಧ್ಯಯನಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ವಿಧಾನಮಂಡಲದ ಚರ್ಚೆಗಳಲ್ಲಿ ಉಲ್ಲೇಖವಾಗಿರುವ ಅಧ್ಯಯನದ ವೈಜ್ಞಾನಿಕ ವಿಧಾನ, ಫಲಿತಾಂಶ ಮತ್ತು ನಿರ್ಣಯಗಳನ್ನು ಬಹಿರಂಗಪಡಿಸಬೇಕು ಎಂದು ಸಂಘ ಮನವಿ ಮಾಡಿದೆ.
ಅಡಿಕೆಯ ಪ್ರತಿಯೊಂದು ಭಾಗಕ್ಕೂ ವೈಜ್ಞಾನಿಕ ಮೌಲ್ಯ ಸೃಷ್ಟಿಸಬೇಕು : ಅಡಿಕೆಯನ್ನು ಕೇವಲ ಕಚ್ಚಾ ಕೃಷಿ ಉತ್ಪನ್ನವಾಗಿ ನೋಡುವ ಬದಲು, ಅಡಿಕೆ, ಸಿಪ್ಪೆ, ಹಾಳೆ, ಸೋಗೆ ಹಾಗೂ ಇತರ ಜೈವಿಕ ಉಳಿಕೆಗಳನ್ನು ನವೀಕರಿಸಬಹುದಾದ ಜೈವಿಕ ಸಂಪನ್ಮೂಲವಾಗಿ ಪರಿಗಣಿಸಿ, ಅವುಗಳಿಗೆ ಹೊಸ ವೈಜ್ಞಾನಿಕ ಮತ್ತು ಕೈಗಾರಿಕಾ ಮೌಲ್ಯ ಸೃಷ್ಟಿಸುವ ನೀತಿ ರೂಪಿಸಬೇಕು ಎಂದು ಸಂಘ ಹೇಳಿದೆ.
ಈ ಉದ್ದೇಶಕ್ಕಾಗಿ ‘ಕರ್ನಾಟಕ ಅಡಿಕೆ ಜೈವಿಕ ಆರ್ಥಿಕತೆ, ಮೌಲ್ಯವರ್ಧನೆ ಮತ್ತು ಪರ್ಯಾಯ ಬಳಕೆ ಮಿಷನ್–2035’ ಸ್ಥಾಪಿಸಬೇಕು. ಮಂಗಳೂರಿನಲ್ಲಿ ಅಡಿಕೆ ಜೈವಿಕ ಆರ್ಥಿಕತೆ, ನ್ಯಾನೋ ತಂತ್ರಜ್ಞಾನ ಮತ್ತು ಸುಧಾರಿತ ವಸ್ತುಗಳ ಕುರಿತು ರಾಷ್ಟ್ರೀಯ ಮಟ್ಟದ ವಿಶೇಷ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.
ಅಡಿಕೆಯ ಜೈವಿಕ ಉಳಿಕೆಗಳಿಂದ ಸುಧಾರಿತ ಇಂಗಾಲ ಆಧಾರಿತ ವಸ್ತುಗಳು, ನ್ಯಾನೋ ಸೆಲ್ಯುಲೋಸ್, ಜೈವಿಕ ಇಂಧನ, ಜೈವಿಕ ಇದ್ದಿಲು, ಜೈವಿಕ ತೈಲ ಹಾಗೂ ಜೈವಿಕವಾಗಿ ಕರಗುವ ಉತ್ಪನ್ನಗಳ ಅಭಿವೃದ್ಧಿಗೆ ಸಂಶೋಧನೆ ನಡೆಸಬೇಕು. ಪ್ರಯೋಗಾಲಯದಲ್ಲಿ ಯಶಸ್ವಿಯಾಗುವ ತಂತ್ರಜ್ಞಾನಗಳನ್ನು ಕೈಗಾರಿಕಾ ಉತ್ಪಾದನೆಯ ಹಂತಕ್ಕೆ ಕೊಂಡೊಯ್ಯಲು ಅಡಿಕೆ ನವೋದ್ಯಮ ಮತ್ತು ತಂತ್ರಜ್ಞಾನ ವರ್ಗಾವಣೆ ನಿಧಿ ಸ್ಥಾಪಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಕರಾವಳಿಯಲ್ಲಿ ಅಡಿಕೆ ಆಧಾರಿತ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಆದ್ಯತೆ : ಅಡಿಕೆ ಹಾಳೆಯಿಂದ ತಟ್ಟೆ, ಬಟ್ಟಲು, ಪ್ಯಾಕೇಜಿಂಗ್ ಸೇರಿದಂತೆ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆ, ಅಡಿಕೆ ಮರದ ಸಲಾಕೆಯಿಂದ ಪೀಠೋಪಕರಣಗಳ ತಯಾರಿಕೆ ಹಾಗೂ ಇತರ ಮೌಲ್ಯವರ್ಧಿತ ಉತ್ಪನ್ನಗಳ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು.
ಸ್ವಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಗ್ರಾಮೀಣ ಯುವ ಉದ್ಯಮಿಗಳ ಮೂಲಕ ಅಡಿಕೆ ಹಾಳೆ ಆಧಾರಿತ ಗ್ರಾಮೀಣ ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸಬೇಕು. ಪ್ರಮುಖ ಅಡಿಕೆ ಪ್ರದೇಶಗಳಲ್ಲಿ ಜೈವಿಕ ಉಳಿಕೆಗಳ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿ, ಅವುಗಳಿಂದ ರೈತರಿಗೆ ನೇರ ಆದಾಯ ದೊರೆಯುವ ವ್ಯವಸ್ಥೆ ರೂಪಿಸಬೇಕು ಎಂದು ಸಂಘ ತಿಳಿಸಿದೆ.
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಕ್ಕೆ ಆಗ್ರಹ : ಅಡಿಕೆ ಬೆಳೆಗಾರರ ಭವಿಷ್ಯವನ್ನು ಕೇವಲ ಕಚ್ಚಾ ಅಡಿಕೆಯ ಮಾರುಕಟ್ಟೆ ಬೆಲೆ ಮತ್ತು ಬೇಡಿಕೆಯ ಮೇಲೆ ಅವಲಂಬಿಸದೆ, ಅಡಿಕೆಯ ಪ್ರತಿಯೊಂದು ಭಾಗಕ್ಕೂ ವೈಜ್ಞಾನಿಕ ಹಾಗೂ ಕೈಗಾರಿಕಾ ಮೌಲ್ಯ ಸೃಷ್ಟಿಸುವ ದೀರ್ಘಕಾಲೀನ ನೀತಿ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಬೇಡಿಕೆಗಳನ್ನು ಪರಿಗಣಿಸಿ, ‘ಕರ್ನಾಟಕ ಅಡಿಕೆ ಜೈವಿಕ ಆರ್ಥಿಕತೆ, ಮೌಲ್ಯವರ್ಧನೆ ಮತ್ತು ಪರ್ಯಾಯ ಬಳಕೆ ಮಿಷನ್–2035’ ಘೋಷಣೆ, ಸಂಶೋಧನಾ ಕೇಂದ್ರ ಸ್ಥಾಪನೆ, ಅಡಿಕೆ ನವೋದ್ಯಮ ಮತ್ತು ತಂತ್ರಜ್ಞಾನ ವರ್ಗಾವಣೆ ನಿಧಿ, ಮೊದಲ ಹಂತದ ಪ್ರಾಯೋಗಿಕ ಯೋಜನೆಗಳಿಗೆ ಅನುದಾನ, ₹5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ ಹಾಗೂ ರೋಗಬಾಧಿತ ರೈತರಿಗೆ ಪರಿಹಾರ ಕ್ರಮಗಳು ಸೇರಿದಂತೆ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿ ವೆಂಕಟಗಿರೀಶ್ ಸಿ ಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
The All India Arecanut Growers Association has urged the Karnataka government to take major decisions in favour of arecanut growers at the special Cabinet meeting scheduled in Mangaluru on September 18, including implementation of ₹5 lakh interest-free crop loans, one-time loan relief for disease-affected growers, support for farmers facing arecanut diseases and wildlife damage, scientific studies on alternative uses of arecanut, and disclosure of existing research findings. The association has also sought the launch of a Karnataka Arecanut Bioeconomy, Value Addition and Alternative Uses Mission–2035, a national-level research centre in Mangaluru, an innovation and technology transfer fund, and promotion of arecanut-based rural industries and circular bioeconomy initiatives.
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…